ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು ಹೇಳಿವೆ? ಅವುಗಳಿಗೆ ವಿರೋಧ ಏಕೆ ಎದ್ದಿದೆ?
ಗುಜರಾತ್ ನಿಂದ ಆರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕನ್ಯಾಕುಮಾರಿಯವರೆಗೂ ಹಬ್ಬಿರುವ ಪಶ್ಚಿಮ ಘಟ್ಟ ಪರ್ವತಶ್ರೇಣಿಯು ಭಾರತವು ರಕ್ಷಿಸಿಕೊಳ್ಳಲೇಬೇಕಾದ ಪರಿಸರ ಸಂಪತ್ತು. ಪಶ್ಚಿಮ ಘಟ್ಟಗಳ ಹರಡಿರುವ ವ್ಯಾಪ್ತಿ 1,64, 280 ಚ.ಕಿ.ಮೀ. ಇಷ್ಟು ವಿಸ್ತಾರವಾದ ಪರಿಸರ ಪ್ರದೇಶವನ್ನು ಉಳಿಸಿಕೊಳ್ಳಬೇಕು ಎಂಬುದು ದಶಕಗಳ ಕೂಗು. ಅದರ ಭಾಗವಾಗಿ ಪರಿಸರ ತಜ್ಞ ಮಾದವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರೂಪಿಸಿತು. ಕ್ರಾಂತಿಕಾರಕ ಸುಧಾರಣೆಗಳನ್ನು ಶಿಫಾರಸ್ಸು ಮಾಡಿದ ಗಾಡ್ಗೀಳ್ ಅವರು, 31 ಆಗಸ್ಟ್ 2011ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದರು.
ಶೇ. 94-97% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ಅದು ಅಲ್ಲಿಯ ಪರಿಸರವನ್ನು, ಜೀವ ವೈವಿಧ್ಯತೆಯ ಕ್ರಮವನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೇಕೆಂದು ನಿಲುವು ತಾಳಿತ್ತು.
ಗಾಡ್ಗೀಳ್ ಸಮಿತಿ ಹೇಳಿದ್ದೇನು?
ಸುಮಾರು 522 ಪುಟಗಳಲ್ಲಿ ಹರಡಿಕೊಂಡಿರುವ ಮಾಧವ ಗಾಡ್ಗೀಳ್ ವರದಿಯು, ಪಶ್ಚಿಮ ಘಟ್ಟದ ಜನರಲ್ಲಿನ ಪರಿಸರ ಪ್ರಜ್ಞೆಯನ್ನು ವಿಶೇಷವಾಗಿ ಗಮನಿಸಿದೆ. ಇಲ್ಲಿನ ದೇವರ ಕಾಡುಗಳು, ನಾಗಬನಗಳು- ಅರಣ್ಯ ಸಂರಕ್ಷಣೆಯ ಪರಂಪರೆಯನ್ನು ಸೂಚಿಸುತ್ತವೆ ಎಂದಿತ್ತು ವರದಿ. ಒಂದೂವರೆ ವರ್ಷದ ಅವಧಿಯಲ್ಲಿ 112 ಸಭೆಗಳನ್ನು ವಿವಿಧ ಜನವರ್ಗದೊಂದಿಗೆ ನಡೆಸಿ ಹಾಗೂ 14 ಕ್ಷೇತ್ರಭೇಟಿಗಳನ್ನು ನೀಡಿ ತಯಾರಿಸಿದ ವರದಿ ಇದಾಗಿತ್ತು. ಗ್ರಾಮಸಭೆಗಳ ಅಭಿಪ್ರಾಯಕ್ಕೆ ಹೆಚ್ಚಿನ ಬೆಲೆ ಕೊಡಲಾಗಿತ್ತು. ಸ್ಥಳೀಯ ಜನರ ಸಹಭಾಗಿತ್ವವಿಲ್ಲದಿದ್ದರೆ ಸಂರಕ್ಷಣೆ ಅಸಾಧ್ಯ ಎಂದು ಒತ್ತಿ ಹೇಳಿತ್ತು. ಪಶ್ಚಿಮಘಟ್ಟಕ್ಕೆ ಪ್ರತ್ಯೇಕವಾಗಿ ಮಂಡಳಿಯೊಂದನ್ನು ಪ್ರಾರಂಭಿಸಬೇಕು ಎಂದಿತ್ತು.
ಕರ್ನಾಟಕದ ಸಹ್ಯಾದ್ರಿ, ಕೊಡಚಾದ್ರಿ, ಕೊಡಗು ಮತ್ತು ಈಗಿರುವ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶಗಳು ಪಾರಿಸಾರಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ (ಇಎಸ್‌ಎ)ಗಳಾಗಿವೆ ಎಂದು ಗಾಡ್ಗೀಳ್ ಸಮಿತಿ ಗುರುತುಮಾಡಿದೆ.

ಗಾಡ್ಗೀಳ್ ವರದಿಯು ಪಶ್ಚಿಮ ಘಟ್ಟವನ್ನು ಮೂರು ವಿಭಾಗ ಮಾಡಿತ್ತು. ಅವುಗಳೆಂದರೆ- ಪಾರಿಸಾರಿಕ ಸೂಕ್ಷ್ಮ ವಲಯ (ಒಂದು), ಪಾರಿಸಾರಿಕ ಸೂಕ್ಷ್ಮ ವಲಯ (ಎರಡು), ಪಾರಿಸಾರಿಕ ಸೂಕ್ಷ್ಮ ವಲಯ (ಮೂರು).
ಇದನ್ನೂ ಓದಿರಿ: ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!
ಎರಡು ಮತ್ತು ಮೂರನೇ ವರ್ಗದ ಸೂಕ್ಷ್ಮ ವಲಯಗಳಿಗೆ ಸಂಬಂಧಿಸಿದಂತೆ ಕೆಲವು ವಿನಾಯಿತಿಗಳನ್ನು ನೀಡಿದ್ದರೂ ಒಂದನೇ ವರ್ಗದ ಸೂಕ್ಷ್ಮ ವಲಯದ ವಿಚಾರದಲ್ಲಿ ಕಠಿಣ ನಿಲುವುಗಳನ್ನು ಗಾಡ್ಗೀಳ್ ಸಮಿತಿ ತಾಳಿತ್ತು.
ಸೂಕ್ಷ್ಮ ವಲಯಗಳ ರಕ್ಷಣೆಗೆ (ಮುಖ್ಯವಾಗಿ ಒಂದನೇ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ) ಗಾಡ್ಗೀಳ್ ಸಮಿತಿಯ ಶಿಫಾರಸ್ಸುಗಳೇನು?
- ಕುಲಾಂತರಿ ಸಸ್ಯಗಳಿಗೆ ಅವಕಾಶವಿಲ್ಲ. ಪ್ಲಾಸ್ಟಿಕ್ ಬ್ಯಾಗ್ ಬಳಕೆ ಆದಷ್ಟು ಬೇಗ ನಿಲ್ಲಿಸಬೇಕು.
- ಅರಣ್ಯ ಪ್ರದೇಶವವನ್ನು ಅರಣ್ಯೇತರ ಬಳಕೆಗೆ ಉಪಯೋಗಿಸಬಾರದು. ಕೃಷಿ ಭೂಮಿಯನ್ನು ಇತರೆ ಉದ್ದೇಶಕ್ಕೆ ಬಳಸಬಾರದು. ಕೃಷಿ ಭೂಮಿಯನ್ನು ‘ಮರ ಬೆಳೆ’ಗಳನ್ನು ಬಳಸಲು ಉಪಯೋಗಿಸಬಾರದು. ಆದರೆ ಸ್ಥಳೀಯ ಜನಸಂಖ್ಯೆ ಜಾಸ್ತಿಯಾದಾಗ ಈ ಎಲ್ಲಾ ಜಾಗವನ್ನು ಹಳ್ಳಿಯನ್ನಾಗಿ ವಿಸ್ತರಿಸಲು ಬಳಸಬಹುದು. ಈಗಾಗಲೇ ಇರುವ ಕಟ್ಟಡಗಳು, ಹೋಟೆಲ್ ಗಳು, ರೆಸಾರ್ಟ್ ಗಳು- ಇವೆಲ್ಲವಕ್ಕೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪರಿಸರ ನೀತಿಯನ್ನು ಬಳಸಬೇಕು.
- ಪಶ್ಚಿಮಘಟ್ಟ ಪಾರಿಸಾರಿಕ ಮಂಡಳಿಯು ಒಂದು ಮಾರ್ಗಸೂಚಿಯನ್ನು ತರಬೇಕು. *ಜೌಗು ಪ್ರದೇಶ/ನೀರಿನ ಪ್ರದೇಶ ಮುಚ್ಚುವುದು. ಸ್ಥಳೀಯ ಯೋಜನಾಧಿಕಾರಿಗಳು ಆಸ್ಪತ್ರೆ ತ್ಯಾಜ್ಯ ವಸ್ತು ಮತ್ತು ಅಪಾಯಕಾರಿ ವಸ್ತುಗಳ ನಿರ್ವಹಣೆಗೆ ಹಾಗೂ ಮರುಬಳಕೆ ಮಾಡಬಹುದಾದ ವಸ್ತುಗಳಿಗೆ ಸಂಬಂಧಪಟ್ಟಂತೆ ವಲಯಕ್ಕೆ ಸೂಕ್ತವಾದ ಪದ್ಧತಿಗಳನ್ನು ಅಭಿವೃದ್ಧಿಪಡಿಸಬೇಕು. ವಿಷಕಾರಿ ಹಾಗೂ ಅಪಾಯಕಾರಿ ವಸ್ತುಗಳ ನಿರ್ವಹಣೆ ಘಟಕಗಳು ಇರಬಾರದು.
- ಜಲವಿದ್ಯುತ್ ಹಾಗೂ ಭಾರೀ ನೀರಾವರಿ ಯೋಜನೆಗಳ ಜಲಾಯನ ಪ್ರದೇಶಗಳನ್ನು ಸಂರಕ್ಷಿಸಿ ಯೋಜನೆಗಳ ಆಯುಷ್ಯವನ್ನು ಹೆಚ್ಚಿಸಬೇಕು. ನದಿ ನೀರಿನ ಸರಾಗ ಚಲನೆ, ಗುಣಮಟ್ಟ ಮತ್ತು ನದಿ ದಡಗಳ ವೈಜ್ಞಾನಿಕ ನಿರ್ವಹಣೆಯನ್ನು ಸ್ಥಳೀಯ ಸಹಭಾಗಿತ್ವದಲ್ಲಿ ಮಾಡಬೇಕು.
- ಜಲಸಂರಕ್ಷಣಾ ಕ್ರಮಗಳನ್ನು ಸೂಕ್ತ ತಾಂತ್ರಿಕತೆಯ ಬಳಕೆ ಹಾಗೂ ಜನರಲ್ಲಿ ಅರಿವು ಮೂಡಿಸುವುದರ ಮೂಲಕ ಮಾಡಬೇಕು. ನದೀಪಾತ್ರವನ್ನು ಬದಲಾಯಿಸುವುದು ಹಾಗೂ ನದಿಗಳನ್ನು ತಿರುಗಿಸುವುದನ್ನು ನಿಷೇಧಿಸಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ಶೇ.30ಕ್ಕಿಂತ ಇಳಿಜಾರು ಜಾಸ್ತಿ ಇರುವಲ್ಲಿ ಬಹುವಾರ್ಷಿಕ ಬೆಳೆಗಳನ್ನು ಬೆಳೆಯಬೇಕು. ವಾರ್ಷಿಕ ಬೆಳೆಗಳನ್ನು ಬೆಳೆಸಬಾರದು. ಮಣ್ಣಿನಲ್ಲಿ ಇಂಗಾಲದ ಅಂಶ ಹೆಚ್ಚುವಂತೆ ಧನಸಹಾಯ ನೀಡುವುದು. ಸ್ಥಳೀಯ ತಳಿಗಳ ಸಂರಕ್ಷಣೆಗೆ ಧನಸಹಾಯ, ರೈತಸಹಭಾಗಿತ್ವದಲ್ಲಿ ಸ್ಥಳೀಯ ಸಾಂಪ್ರದಾಯಿಕ ತಳಿಗಳ ಅಭಿವೃದ್ಧಿ ಹಾಗೂ ನಿಖರ ಕೃಷಿಕ್ರಮಗಳನ್ನು ಉತ್ತೇಜಿಸಬೇಕು.
- ಸ್ಥಳೀಯ ಜಾನುವಾರುಗಳ ತಳಿ ಉಳಿಸಲು ಪ್ರೋತ್ಸಾಹ ಧನ ಕೊಡುವುದು. ರಾಸಾಯನಿಕ ಗೊಬ್ಬರಗಳಿಗೆ ಕೊಡುತ್ತಿರುವ ಸಬ್ಸಿಡಿಯನ್ನು ಪಶುಪಾಲನೆಗೆ, ಬಯೋಗ್ಯಾಸ್ ಉತ್ಪಾದನೆಗೆ ಹಾಗೂ ಸಾವಯವ ಗೊಬ್ಬರ ಉತ್ಪಾದನೆಗೆ ಕೊಡುವುದು. ಹುಲ್ಲುಗಾವಲು ಮತ್ತು ಗೋಮಾಳವನ್ನು ಪುನರುಜ್ಜೀವನಗೊಳಿಸುವುದು. ಆಯಾ ಪ್ರದೇಶಕ್ಕೆ ಸೂಕ್ತವಾದ ಸಹಿಷ್ಣು ತಳಿಗಳ ಸಾಕಣೆಗೆ ಪ್ರೋತ್ಸಾಹ. ವಾಣಿಜ್ಯಿಕ ಬೆಳೆಗಳಲ್ಲಿ ಹಾಗೂ ದಾರಿಯ ಇಕ್ಕೆಲಗಳಲ್ಲಿ ಕಳೆ ನಾಶಕ ಸಿಂಪರಣೆಯ ನಿಷೇಧ. *ಡೈನಾಮೈಟ್ ಮತ್ತಿತ್ತರ ಸಿಡಿಮದ್ದುಗಳನ್ನು ಬಳಸಿ ಮೀನುಗಳನ್ನು ಕೊಲ್ಲುವಂತಿಲ್ಲ.
- ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿ ಮಾಡುವಾಗ ಸಮುದಾಯದ ಸಹಭಾಗಿತ್ವ ಅತಿಮುಖ್ಯ. ಈಗಿರುವ ಎಲ್ಲ ಜಂಟಿ ಅರಣ್ಯ ನಿರ್ವಹಣಾ ಕಾರ್ಯಕ್ರಮಗಳ ಬದಲು ಸಮುದಾಯ ಅರಣ್ಯ ಸಂಪನ್ಮೂಲ ನಿರ್ವಹಣೆಯನ್ನು ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿ ಸೇರಿಸಬೇಕು.
- ಸಣ್ಣ ಮತ್ತು ಸಾಂಪ್ರದಾಯಿಕ ಖಾಸಗೀ ಒಡೆತನದವರ ಎಲ್ಲ ಹಕ್ಕುಗಳನ್ನು ಅರಣ್ಯ ಹಕ್ಕು ಕಾಯ್ದೆಯಲ್ಲಿ ಗುರುತಿಸುವುದು. ಸಣ್ಣ ಹಿಡುವಳಿದಾರರಿಗೆ ಸಹಜಾರಣ್ಯ ಉಳಿಸಲು, ಹಾಗೂ ಇಳಿಜಾರುಗಳಲ್ಲಿ ವಾರ್ಷಿಕ ಬೆಳೆಯಿಂದ ಬಹುವಾರ್ಷಿಕ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಧನ. ತೆರಿಗೆ ರಿಯಾಯಿತಿ ಅಥವಾ ಭೋಗ್ಯದ ಹಕ್ಕನ್ನು ನವೀಕರಿಸುವಂತಹ ಉಪಕ್ರಮಗಳನ್ನು ಸಣ್ಣ ಹಿಡುವಳಿದಾರರ ಭೂಮಿಯಲ್ಲಿ ಬೆಳೆದ ಸಹಜಾರಣ್ಯವನ್ನು ಉಳಿಸಲು ಕೊಡುವುದು.
- ದೇವರಕಾಡುಗಳ ಸಂರಕ್ಷಣೆ, ಖಾಸಗೀ ಜಾಗ, ಜೈವವೈವಿಧ್ಯ ನಿರ್ವಹಣೆ ಮಂಡಳಿಗಳ ನಿಯಂತ್ರಣದಲ್ಲಿರುವ ಜಾಗ, ಜಂಟಿ ಅರಣ್ಯ ನಿರ್ವಹಣೆಯ ಜಾಗಗಳಲ್ಲಿ ಜೀವವೈವಿಧ್ಯವನ್ನು ಸಂರಕ್ಷಿಸಲು ಸಮುದಾಯ ಅರಣ್ಯಗಳನ್ನು ಉಳಿಸಲು ಪ್ರೋತ್ಸಾಹಧನ. * ಕಾಡುಪ್ರಾಣಿಗಳಿಂದಾಗುವ ನಾಶಕ್ಕೆ ಸಂತ್ರಸ್ತರಿಗೆ ಕೊಡಲು ಜೀವವೈವಿಧ್ಯ ನಿರ್ವಹಣಾ ಮಂಡಳಿಗಳಿಗೆ ವಿಶೇಷ ಧನ ಸಹಾಯ.
- ಹೊಸ ಗಣಿಗಾರಿಕೆಗೆ ಲೈಸನ್ಸ್ ಇಲ್ಲ. ಎಲ್ಲಿ ಗಣಿಗಾರಿಕೆ ನಡೆಯುತ್ತಿದೆಯೋ ಅಲ್ಲಿ ಹಂತಹಂತವಾಗಿ ಐದು ವರ್ಷಗಳಲ್ಲಿ ನಿಲ್ಲಿಸುವುದು. ಮುಚ್ಚಲ್ಪಡುವ ಗಣಿಗಳ ಪರಿಸರ ಮತ್ತು ಸಾಮಾಜಿಕ ಪುನರ್ವಸತಿಗೆ ಯೋಜನೆ ಇರಬೇಕು.
- ಈಗ ಎಲ್ಲೆಲ್ಲಿ ಕಲ್ಲು ಕ್ವಾರಿ ಮತ್ತು ಮರಳು ತೆಗೆಯುವುದು ನಡೆಯುತ್ತಿದೆಯೋ ಅಲ್ಲಿ ಸಾಮಾಜಿಕ ಹಿತ ಹಾಗೂ ಪರಿಸರದ ದೃಷ್ಟಿಯಿಂದ ಸಮರ್ಪಕವಾಗಿ ನಿಯಂತ್ರಣ ಮಾಡಬೇಕು. ಹೊಸ ಪರವಾನಗಿ ಕೊಡಬಾರದು.
- ಮಾಲಿನ್ಯ ಉಂಟು ಮಾಡುವ ಹೊಸ ಕೈಗಾರಿಕೆಗಳಿಗೆ ನಿಷೇಧ ತರಬೇಕು. ಈಗಾಗಲೇ ಇರುವ ಕೈಗಾರಿಕೆಗಳು ಮಾಲಿನ್ಯ ರಹಿತ ಸ್ಥಿತಿಗೆ ಐದು ವರ್ಷಗಳಲ್ಲಿ ಬರಬೇಕು. ಕಠಿಣ ನಿಯಂತ್ರಣ ಮತ್ತು ಸಾಮಾಜಿಕ ಪರಿಶೀಲನೆ ಇರಬೇಕು. ಮಾಲಿನ್ಯ ಉಂಟು ಮಾಡದ ಕೈಗಾರಿಕೆಗಳ ಮೇಲೆ ಕಠಿಣ ನಿಯಂತ್ರಣ ಮತ್ತು ಸಾಮಾಜಿಕ ಪರಿಶೀಲನೆ ಇರಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸುವ ಕೈಗಾರಿಕೆಗಳಿಗೆ ಪ್ರೋತ್ಸಾಹ.
- ಇಂಧನ ಉತ್ಪಾದನೆಯ ಸಾಮಾಜಿಕ ಮತ್ತು ಪಾರಿಸಾರಿಕ ಪರಿಣಾಮಗಳ ಬಗ್ಗೆ ಬಳಕೆದಾರರಲ್ಲಿ ಅರಿವು ಮೂಡಿಸಬೇಕು. ಇಂಧನದ ದುಂದುವೆಚ್ಚನ್ನು ಕಡಿತ ಮಾಡಬೇಕು. ಹರಿಯುವ ತೊರೆಗಳಿಂದ ವಿದ್ಯುತ್ ಉತ್ಪಾದನೆ ಮಾಡುವ ಗರಿಷ್ಠ ಮೂರು ಮೀಟರ್ ಎತ್ತರದ ಚಿಕ್ಕ ಅಣೆಕಟ್ಟುಗಳನ್ನು ಕಟ್ಟಲು ಅವಕಾಶವಿದೆ. ಇದು ಸ್ಥಳೀಯ ಹಾಗೂ ಬುಡಕಟ್ಟು ಜನಾಂಗಗಳಿಗೆ ಉಪಯೋಗ ಆಗಬೇಕು. ಇದನ್ನು ಮಾಡುವಾಗ ಗ್ರಾಮಸಭೆಯ ಅನುಮತಿ ಮತ್ತು ಪಶ್ಚಿಮ ಘಟ್ಟ ಪಾರಿಸಾರಿಕ ಮಂಡಳಿಯ ರಾಜ್ಯ ಮತ್ತು ಜಿಲ್ಲೆಯ ಶಾಖೆಗಳ ಅನುಮತಿ ಪಡೆದಿರಬೇಕು. ಈ ರೀತಿಯ ಅಣೆಕಟ್ಟುಗಳನ್ನು ದೊಡ್ಡ ಅಥವಾ ಮಧ್ಯಮ ಗಾತ್ರದ ತೊರೆಗಳಿಗೆ ಕಟ್ಟುವ ಹಾಗಿಲ್ಲ.
- ಅರಣ್ಯ ನಾಶ ಅಥವಾ ತೊರೆಗಳನ್ನು ತಿರುಗಿಸುವುದಕ್ಕೆ ನಿಷೇಧ. ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಜಲವಿದ್ಯುತ್ ಯೋಜನೆಗಳಿಗೆ ಪ್ರೋತ್ಸಾಹ. ಇದು ಜನರಿಂದ ನಡೆಯಬೇಕು ಮತ್ತು ಮುಖ್ಯ ಗ್ರಿಡ್ ಗಳಿಂದ ಹೊರತಾಗಿರಬೇಕು.
- ಶಾಖೋತ್ಪನ್ನ ಸ್ಥಾವರಗಳಿಗೆ ನಿಷೇಧ. ಈಗಿರುವ ಶಾಖೋತ್ಪನ್ನ ಸ್ಥಾವರಗಳಿಗೆ ಕಠಿಣ ಪಾರಿಸಾರಿಕ ನಿಯಂತ್ರಣ. ಈಗಿರುವ ಶಾಖೋತ್ಪನ್ನ ಸ್ಥಾವರಗಳಿಂದ ಬರುವ ಹಾರುಬೂದಿಯ ಸಮರ್ಪಕ ಬಳಕೆ- ರಸ್ತೆಗೆ ಅಥವಾ ಇಟ್ಟಿಗೆ ಮಾಡುವುದಕ್ಕೆ ಮಾಡಬೇಕು. ಭಾರೀ ಗಾತ್ರದ ಗಾಳಿಯಂತ್ರಗಳಿಗೆ ನಿಷೇಧ.
- ಯಾವ ಯೋಜನೆಗೂ ನದಿ/ ತೊರೆಗಳನ್ನು ತಿರುಗಿಸುವಂತಿಲ್ಲ. ಯಾವುದಾದರೂ ಈ ರೀತಿಯ ಯೋಜನೆ ಈಗ ಇದ್ದರೆ ಅದನ್ನು ತಕ್ಷಣ ನಿಲ್ಲಿಸಬೇಕು. *ಹೊಸ ರೈಲ್ವೇ ಲೈನುಗಳಿಗೆ ಮತ್ತು ಭಾರೀ ರಸ್ತೆಗಳಿಗೆ ನಿಷೇಧ. ಅತ್ಯಗತ್ಯ ಸ್ಥಳದಲ್ಲಿ (ಉದಾ: ಗೋವಾ), ಬೇಕಾದರೆ ಮಾಡಬಹುದು. ಆದರೆ ಕಠಿಣ ನಿಯಂತ್ರಣ ಹಾಗೂ ಪರಿಸರದ ಮೇಲಿನ ಪರಿಣಾಮದ ಪರೀಕ್ಷೆಗೆ ಒಳಪಟ್ಟಿರಬೇಕು. ಸಾಮಾಜಿಕ ಪರಿಶೀಲನೆಯಾಗಿರಬೇಕು. ಹೆದ್ದಾರಿಗಳು ಹಾಗೂ ಇನ್ನಿತರ ಅತಿವೇಗದ ರಸ್ತೆಗಳನ್ನು ಮಾಡದಿರುವುದು ಉತ್ತಮ.
ವರದಿಯ ಬಗ್ಗೆ ತಕರಾರೇಕೆ?
ಮಾಧವ ಗಾಡ್ಗೀಳ್ ವರದಿಯು ಬಂಡವಾಳಿಶಾಹಿಗಳ ಹಿತಾಸಕ್ತಿಗಳಿಗೆ ಭಾರೀ ಪೆಟ್ಟನ್ನೇ ನೀಡಿತ್ತು. ಅದರ ಜೊತೆಗೆ ಆದಿವಾಸಿ ಮತ್ತು ಸಣ್ಣ ರೈತರ ಆತಂಕಗಳೂ ಇದ್ದಿವು. ಈ ಅಸಹಾಯಕ ಜನರ ಹೆಗಲ ಮೇಲೆ ಕೋವಿಯನ್ನಿಟ್ಟು, ಬಂಡವಾಳಶಾಹಿಗಳು ತಮ್ಮ ಹಿತಾಸಕ್ತಿಗಳನ್ನು ಪೋಷಿಸಿಕೊಳ್ಳುವ ಪ್ರಯತ್ನಗಳನ್ನುಮಾಡಿದರು.
ಇದನ್ನೂ ಓದಿರಿ: ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ: ಸೆ.22 ವಿಶ್ವ ಗುಲಾಬಿ ದಿನ
“ಈ ಭಾಗದಲ್ಲಿ ಬಹಳಷ್ಟು ತೋಟಗಳೂ, ವಸತಿ ಪ್ರದೇಶಗಳೂ, ಕೃಷಿ ಪ್ರದೇಶವೂ ಸೇರಿತ್ತು. ಗಾಡ್ಗೀಳ್ ವರದಿಯು ಆ ಪ್ರದೇಶದ ಮುಕ್ಕಾಲು ಭಾಗವನ್ನು ನಿರ್ಬಂಧಿತ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿತ್ತು. ಗಾಡ್ಗೀಳ್ ಸಮಿತಿ ವರದಿಯು ತೀವ್ರ ಟೀಕೆಗೆ ಒಳಗಾಯಿತು. ಈ ವರದಿಯು ವಾಸತ್ವಸ್ಥಿತಿಗಳ ಬಗ್ಗೆ ಗಮನ ಹರಿಸದೆ ಹೆಚ್ಚು ಪರಿಸರಸ್ನೇಹಿ ಮತ್ತು ಕಾಳಜಿ ಹೊಂದಿದೆ ಎಂದು ಆಕ್ಷೇಪ ಬಂದಿತು. ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಗಾಡ್ಗೀಳ್ ವರದಿಯನ್ನು ಮೂಲೆಗೊತ್ತಿ, ಮತ್ತೊಂದು ವರದಿಯನ್ನು ರೂಪಿಸಲು ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರೂಪಿಸಲಾಯಿತು.

ಕಸ್ತೂರಿ ರಂಗನ್ ವರದಿ
ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು , 2013 ರ ಏಪ್ರಿಲ್ 15 ರಂದು ಸಲ್ಲಿಸಿತು. ಕಸ್ತೂರಿ ರಂಗನ್‍ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಸಾವಿರ ಚ,ಕಿ.ವ್ಯಾಪ್ತಿಯ ಪ್ರದೇಶ (36.49%) ಪಾರಿಸಾರಿಕ ಸೂಕ್ಷ್ಮ ಪ್ರದೇಶ (ಇಎಸ್ ಎ)ಕ್ಕೆ ಒಳಪಟ್ಟಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕಸ್ತೂರಿ ರಂಗನ್ ವರದಿಯಲ್ಲಿ ಏನಿದೆ? ಶಿಫಾರಸ್ಸುಗಳೇನು?
- ಇಲ್ಲಿ ನಡೆಯಬೇಕೆಂದಿರುವ ಎಲ್ಲ ಅಭಿವೃದ್ಧಿ ಚಟುವಟಿಕೆಗಳನ್ನು ಸಾದ್ಯಂತವಾಗಿ ಅವುಗಳ ಒಟ್ಟು ಪರಿಣಾಮಗಳನ್ನು ಪರಿಶೀಲನೆಗೆ ಒಳಪಡಿಸಿಯೇ ಅನುಮತಿ ಕೊಡಬೇಕು.
- ಗಣಿಗಾರಿಕೆ, ಕಲ್ಲು ಕ್ವಾರಿ ಮತ್ತು ಮರಳು ತೆಗೆಯುವುದನ್ನು ಸಂಪೂರ್ಣ ನಿಷೇಧಿಸಬೇಕು. ಈಗಿರುವ ಗಣಿಗಾರಿಕೆಯನ್ನು ಐದು ವರ್ಷಗಳ ಅವಧಿಯಲ್ಲಿ ಹಂತ-ಹಂತವಾಗಿ/ ಅಥವಾ ಅದರ ಲೈಸನ್ಸ್ ಅವಧಿ ಮುಗಿದಿದ್ದರೆ ನಿಷೇಧಿಸಬೇಕು.
- ಶಾಖೋತ್ಪನ್ನ ಸ್ಥಾವರಗಳಿಗೆ ಸಂಪೂರ್ಣ ನಿಷೇಧ. ಜಲವಿದ್ಯುತ್ ಯೋಜನೆಗಳನ್ನು ನಿಬಂಧನೆಗೊಳಪಟ್ಟಂತೆ ಮಾಡಬಹುದು. ಬೇಸಿಗೆಯಲ್ಲಿ ನದಿಗಳು ಹರಿಯುವ 30 ಶೇಕಡಾದಷ್ಟು ಅಣೆಕಟ್ಟಿನ ಕೆಳಗಿನ ಭಾಗದಲ್ಲಿ ಹರಿಯಬೇಕು. ಇದು ಪ್ರತಿಯೊಂದು ನದಿ ಪಾತ್ರದ ಸಮರ್ಪಕ ಅಧ್ಯಯನವಾಗುವ ತನಕ ಆಗಬೇಕು.
- ಒಂದು ಯೋಜನೆಯಿಂದ ಇನ್ನೊಂದು ಯೋಜನೆಗೆ ಮೂರು ಕಿಮೀ ಅಂತರವಿರಬೇಕು ಮತ್ತು ಶೇಕಡಾ 50ರಷ್ಟು ನದಿ ಪಾತ್ರಕ್ಕೆ ಯಾವತ್ತಿಗೂ ಧಕ್ಕೆಯಾಗಬಾರದು.
- ಪವನಯಂತ್ರಗಳ ಸ್ಥಾಪನೆ ಕುರಿತ ಪರೀಕ್ಷೆ ಮತ್ತು ಅನುಮತಿ ನೀಡುವುದನ್ನು ‘ಪರಿಸರದ ಮೇಲೆ ಪರಿಣಾಮ ಪರೀಕ್ಷೆ’ಯಡಿಯಲ್ಲಿ ತರಬೇಕು. *ಎಲ್ಲಾ ‘ಕೆಂಪು’ ಬಣ್ಣದ ಕೈಗಾರಿಕೆಗಳಿಗೆ ಕಡ್ಡಾಯ ನಿಷೇಧ. ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಬೇಕು.
- 20,000 ಚದರ ಮೀಟರ್ ಮತ್ತು ಅದಕ್ಕೆ ಮೇಲ್ಪಟ್ಟ ಕಟ್ಟಡ ಕಾಮಗಾರಿಗಳಿಗೆ ಅವಕಾಶವಿಲ್ಲ. ನಗರಪ್ರದೇಶ ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಅವಕಾಶವಿಲ್ಲ.* ಉಳಿದ ಎಲ್ಲಾ ಮೂಲಸೌಕರ್ಯ ಅಭಿವೃದ್ಧಿ ಮತ್ತಿತರ ಯೋಜನೆಗಳಿಗೆ 2006ರ ‘ಪರಿಸರದ ಮೇಲಿನ ಪರಿಣಾಮ ಪರೀಕ್ಷೆ’ ನೋಟಿಫಿಕೇಶನ್ ಲಾಗೂ ಆಗುತ್ತದೆ.
- ಅರಣ್ಯವನ್ನು ಇನ್ನಿತರ ಉದ್ದೇಶಗಳಿಗೆ ಬಳಸುವುದನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದಾದರೂ ಯೋಜನೆಗಳಿಗೆ ಈ ಅನುಮತಿ ಬೇಕಾದಲ್ಲಿ ಅದರ ಸಂಪೂರ್ಣ ವಿವರಗಳನ್ನು (ಶುರುವಿನಿಂದ ಕೊನೆಯವರೆಗೆ) ಅಂತರ್ಜಾಲದಲ್ಲಿ ಸಿಗುವಂತೆ ಮತ್ತು ಕೇಂದ್ರ ಪರಿಸರ-ಅರಣ್ಯ ಸಚಿವಾಲಯದ ಜಾಲತಾಣದಲ್ಲಿ ಹಾಗೂ ಆಯಾ ರಾಜ್ಯದ ಅರಣ್ಯ ಇಲಾಖೆಯ ಜಾಲತಾಣದಲ್ಲಿ ಹಾಕಬೇಕು.
- ಪಾರಿಸಾರಿಕ ಸೂಕ್ಷ್ಮಪ್ರದೇಶಗಳಿಂದ 10 ಕಿಮೀಯ ಒಳಗೆ ಇರುವ ‘ಪರಿಸರ ಪ್ರಮಾಣ ಪತ್ರ’ ಬೇಕಾಗುವ ಎಲ್ಲಾ ಯೋಜನೆಗಳನ್ನೂ 2006ರ ‘ಪರಿಸರದ ಮೇಲಿನ ಪರಿಣಾಮ ಪರೀಕ್ಷೆ’ ನೋಟಿಫಿಕೇಶನ್ ಮೂಲಕ ನಿಯಂತ್ರಣ ಮಾಡಬೇಕು.
- ಈಗಿರುವ ಅರಣ್ಯ ಮತ್ತು ಪರಿಸರ ಸಂಬಂಧೀ ಅನುಮತಿ ಕೊಡುವ ನಿಯಂತ್ರಣ ಸಂಸ್ಥೆ ಹಾಗೂ ಕಾರ್ಯಗಳನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ. ಮತ್ತು ಅವನ್ನು ಸರಿಯಾಗಿ ಕಾರ್ಯಗತಗೊಳಿಸುವ ಅಗತ್ಯವಿದೆ.
- ಪಾರಿಸಾರಿಕ ಸೂಕ್ಷ್ಮಪ್ರದೇಶಗಳಲ್ಲಿರುವ ಗ್ರಾಮಗಳು ಅಲ್ಲಿ ಕಾರ್ಯಗತವಾಗುವ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಭಾಗವಹಿಸಬೇಕು. ಎಲ್ಲಾ ಯೋಜನೆಗಳು ಮೊದಲೇ ಅಲ್ಲಿನ ಗ್ರಾಮಸಭೆಗೆ ತಿಳಿಸಿ ಅನುಮತಿ ಪಡೆದಿರಬೇಕು. ‘ಅರಣ್ಯ ಹಕ್ಕುಗಳ ಕಾಯಿದೆ’ಯಲ್ಲಿರುವ ಈ ರೀತಿಯ ಗ್ರಾಮಸಭೆಗೆ ಪೂರ್ವಾನ್ವಯ ಮಾಹಿತಿ ಮತ್ತು ಅದರಿಂದ ‘ಅನುಮತಿ’ ಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.
- ರಾಜ್ಯ ಸರ್ಕಾರಗಳು ‘ವನ್ಯಜೀವಿ ಕಾರಿಡಾರ್’ ಗಳನ್ನು ಯೋಜಿಸುವಾಗ ಸ್ಥಳೀಯ ಜನರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು.
- ರಾಜ್ಯ ಸರ್ಕಾರಗಳು ತಕ್ಷಣ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ನಿಯಂತ್ರಣ ಹಾಗೂ ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು
- ಈ ಸಮಿತಿಯು ಪಶ್ಚಿಮಘಟ್ಟಗಳು ಬರೀ ಅರಣ್ಯ ಪ್ರದೇಶವಲ್ಲ. ಅಲ್ಲಿನ ಸಹಜಾರಣ್ಯಗಳಲ್ಲಿ ಜನರೂ ವಾಸಿಸುತ್ತಾರೆ.ಅಲ್ಲಿನ ಸಾಂಸ್ಕೃತಿಕ ವೈವಿಧ್ಯವೂ ಇದೆ. ಇಲ್ಲಿನ ಆರ್ಥಿಕ ಅಭಿವೃದ್ಧಿ ಬರುವುದು ಇಲ್ಲಿನ ನಿಸರ್ಗದತ್ತ ಕೊಡುಗೆಗಳಾದ ನೀರು, ಅರಣ್ಯ ಮತ್ತು ಪರಿಸರಸ್ನೇಹಿ ಅಭಿವೃದ್ಧಿಯಿಂದ ಎಂದು ಗುರುತಿಸುತ್ತದೆ.
- ಎಲ್ಲ ಪಶ್ಚಿಮಘಟ್ಟದ ರಾಜ್ಯಗಳು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ಯತ್ನಿಸಬೇಕು. ಇದು ನೈಸರ್ಗಿಕ ಸಂಪನ್ಮೂಲಗಳಿಗೆ ಬದಲಾಗಿ ಪಡೆಯುವ ಸಾಲದ ರೀತಿ ಇರಬೇಕು. ಹಾಗೆ ಪಡೆದ ಸಾಲವನ್ನು, ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಒಳ್ಳೆಯ ಕಾರ್ಯಗಳಿಗೆ ಬಳಸಬೇಕು. ಇದರಲ್ಲಿ ಒಂದಿಷ್ಟು ಹಣವನ್ನು ರಾಜ್ಯ ಇಟ್ಟುಕೊಂಡು ಮತ್ತೊಂದಿಷ್ಟನ್ನು ಸ್ಥಳೀಯ ಪರಿಸರ ನಿಧಿಗೆ ಕೊಡಬೇಕು (ಬೇರೆ ರಾಷ್ಟ್ರಗಳಲ್ಲಿ ಇರುವಂತೆ). ಈ ನಿಧಿ ಪಾರಿಸಾರಿಕ ಸೂಕ್ಷ್ಮ ಪ್ರದೇಶದ ಅರಣ್ಯದ ಉತ್ಪಾದನೆಗೆ ಹಾಗೂ ಅರಣ್ಯಾಧಾರಿತ ಜೀವನೋಪಾಯಗಳಿಗೆ ವಿನಿಯೋಗವಾಗಬೇಕು. ಇದರ ಜೊತೆ 14ನೇ ಹಣಕಾಸು ಆಯೋಗ ರಾಜ್ಯಗಳಿಗೆ ಅರಣ್ಯ ಮತ್ತು ಪರಿಸರ ಉಳಿಸುವ ಸಲುವಾಗಿ 13ನೇ ಹಣಕಾಸು ಆಯೋಗ ಕೊಟ್ಟದ್ದಕ್ಕಿಂತ ಜಾಸ್ತಿ ಅನುದಾನವನ್ನು ಕೊಡಲು ಗಮನ ಕೊಡಬೇಕು.
- ಪಶ್ಚಿಮಘಟ್ಟದ ಪಾರಿಸಾರಿಕ ಸೂಕ್ಷ್ಮ ಮತ್ತು ಇತರ ಪ್ರದೇಶಗಳಲ್ಲಿ “ಪರಿಸರದಿಂದ ಪಡೆಯುವ ಪ್ರಯೋಜನಗಳಿಗೆ ಹಣಸಂದಾಯ” ವ್ಯವಸ್ಥೆಯನ್ನು ರೂಪಿಸಬೇಕು. ಆಯಾ ರಾಜ್ಯಗಳು ಈ ರೀತಿಯ ಉಪಕ್ರಮಗಳನ್ನು ಮಾಡಲು ಮುಂದಾದರೆ ಮುನಿಸಿಪಾಲಿಟಿ ಮತ್ತು ಗ್ರಾಮಪಂಚಾಯತ್ ಗಳ ಜೊತೆ ಸಂವಾದ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.
- ಯೋಜನಾ ಆಯೋಗವು ‘ಪಶ್ಚಿಮ ಘಟ್ಟ ಸುಸ್ಥಿರ ಅಭಿವೃದ್ಧಿಗಾಗಿ ವಿಶೇಷ ನಿಧಿಯೊಂದನ್ನು ಸ್ಥಾಪಿಸಬೇಕು. ಈ ನಿಧಿ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳ ನಿರ್ವಹಣೆಗೆ ಹಾಗೂ ಪರಿಸರಸ್ನೇಹಿ ಅಭಿವೃದ್ಧಿಗೆ ಬಳಸಲ್ಪಡಬೇಕು
- 14ನೇ ಹಣಕಾಸು ಆಯೋಗವು ‘ಪಾರಿಸಾರಿಕ ಸೇವೆಗಳಿಗೆ ಹಣಸಂದಾಯ’ವನ್ನು ಪಶ್ಚಿಮಘಟ್ಟಗಳಿಗೆ ಕೊಡುವಂತೆ ಗಮನ ಹರಿಸಬೇಕು ಮತ್ತು ಪಾರಿಸಾರಿಕ ಸೂಕ್ಷ್ಮಪ್ರದೇಶಗಳಿಗೆ ಧನ ಸಹಾಯವನ್ನು ನೀಡಬೇಕು. ಇದು ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಹೇಗೆ ನೇರವಾಗಿ ತಲುಪುತ್ತದೆಯೆಂದು ಗಮನ ಹರಿಸಬೇಕು.
- ಯೋಜನಾ ಆಯೋಗವು ಪ್ರಸ್ತುತ ಪರಿಸರದ ಕುರಿತಾದ ಕೆಲಸಗಳನ್ನಾಧರಿಸಿ ರಾಜ್ಯಗಳನ್ನು ವರ್ಗೀಕರಿಸಲು ಸೂಚ್ಯಂಕವೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಆಧಾರದ ಮೇಲೆ ರಾಜ್ಯಗಳಿಗೆ ಧನಸಹಾಯವನ್ನು ಮಾಡಬೇಕು. ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳು ‘ಧನಾತ್ಮಕ ಹಣಸಹಾಯ’ವನ್ನು ಪಡೆಯಬೇಕು ಮತ್ತು ಇದು ನೇರವಾಗಿ ಗ್ರಾಮೀಣ ಸಮುದಾಯಗಳಿಗೆ ತಲುಪಬೇಕು.
- ಪಶ್ಚಿಮಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮವನ್ನು 1000 ಕೋಟಿ ಅನುದಾನದೊಂದಿಗೆ ಮುಂದುವರಿಸಬೇಕು. * ಈ ಕಾರ್ಯಕ್ರಮಕ್ಕೆ ವಿಶೇಷ ಮಾನ್ಯತೆ ಕೊಡಬೇಕು. ಕೇಂದ್ರ ಮತ್ತು ರಾಜ್ಯಗಳು 90:10 ಅನುಪಾತದಲ್ಲಿ ವೆಚ್ಚವನ್ನು ಹಂಚಿಕೊಳ್ಳಬೇಕು. ಈ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಲು ಮತ್ತು ನಿಗಾ ಇಡಲು ಆರು ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಉನ್ನತ ಸಮಿತಿಯನ್ನು ಪುನರಚನೆ ಮಾಡಬೇಕು. ಕಾಲಕಾಲಕ್ಕೆ ಇದನ್ನು ವಿಮರ್ಶಿಸಲು ಮತ್ತು ಆಯಾ ಪ್ರದೇಶಕ್ಕೆ ಸಂಬಂಧಪಟ್ಟ ನಿರ್ಣಯಗಳನ್ನು ತೆಗೆದುಕೊಳ್ಳಲು ಅನುವಾಗಬೇಕು.
- ರಾಜ್ಯಮಟ್ಟದಲ್ಲಿ ಪಶ್ಚಿಮಘಟ್ಟಕ್ಕೆ ಸಂಬಂಧಿಸಿದ ಸೆಲ್ ಒಂದನ್ನು ತೆಗೆಯಬೇಕು. ಈಗಾಗಲೇ ಇದ್ದರೆ ಅದನ್ನು ಬಲಪಡಿಸಬೇಕು. ಈ ಸೆಲ್ ರಾಜ್ಯ ಅರಣ್ಯ ಇಲಾಖೆ, ಪರಿಸರ ಪರಿಣಾಮ ಪರೀಕ್ಷಾ ಸಮಿತಿ, ಜೀವವೈವಿಧ್ಯ ಮಂಡಳಿ ಮತ್ತು ಕೇಂದ್ರ ಪರಿಸರ- ಅರಣ್ಯ ಇಲಾಖೆಯ ವಲಯ ಕಚೇರಿಗಳ ಜೊತೆಗೂಡಿ ಕೆಲಸ ಮಾಡಬೇಕು.
- ಪಶ್ಚಿಮಘಟ್ಟದಲ್ಲಿ ಕೃಷಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಬೆಳೆಗಾರರಿಗೆ ಸಾವಯವ ಕೃಷಿ ಮಾಡಲು ಪ್ರೋತ್ಸಾಹಧನ ಕೊಡಬೇಕು. ಅಂತಹ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ನಿರ್ದಿಷ್ಟ “ಬ್ರಾಂಡ್” ನಡಿಯಲ್ಲಿ ಮಾರಾಟ ಮಾಡುವುದಕ್ಕೆ ಸಹಾಯ ಮಾಡಬೇಕು.
- ಪ್ರವಾಸದಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಪರೀಕ್ಷಿಸಲು ಈಗಾಗಲೇ ಇರುವ ಕಾನೂನುಗಳನ್ನು ಬಲಪಡಿಸಬೇಕು. ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಸೋದ್ಯಮ ನೀತಿ ಸ್ಥಳೀಯರಿಗೆ ಮಾಲೀಕತ್ವ ಮತ್ತು ಅನುಕೂಲಗಳನ್ನು ಕೊಡಬೇಕು. ಪಾರಿಸಾರಿಕ ಸೂಕ್ಷ್ಮಪ್ರದೇಶಗಳಲ್ಲಿರುವ ಎಲ್ಲಾ ಪ್ರವಾಸೀಕೇಂದ್ರಗಳನ್ನು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಿಂದ ಉಸ್ತುವಾರಿ ಮಾಡಬೇಕು. ಜೊತೆಗೆ ಪರಿಸರದ ಮೇಲೆ ಪರಿಣಾಮವನ್ನು ಪರೀಕ್ಷಿಸಬೇಕು.
ಇದನ್ನೂ ಓದಿರಿ: ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಭೂಮಿ ಹಕ್ಕು ವೇದಿಕೆ ಹೇಳುವುದೇನು?
ಕಸ್ತೂರಿ ರಂಗನ್ ವರದಿಗೆ ವಿರೋಧ ಏಕೆ?
“ಕಸ್ತೂರಿ ರಂಗನ್ ಸಮಿತಿಯ ಸದಸ್ಯರು ಪಶ್ಚಿಮ ಘಟ್ಟದ ಹಳ್ಳಿಗಳಿಗೆ ಬೇಟಿ ನೀಡದೇ ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಯ ಪ್ರದೇಶವನ್ನು ಸಹಿತ ನೈಸರ್ಗಿಕ ಅರಣ್ಯ ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ” ಎಂಬುದು ಪಶ್ಚಿಮ ಘಟ್ಟ ನಿವಾಸಿಗಳ ಗಂಭೀರ ಆಕ್ಷೇಪ.
“ಪರಿಸರ ಸಂರಕ್ಷಣಾ ವಲಯಗಳ ಸುತ್ತಲಿನ 10 ಕಿ.ಮೀ. ಪ್ರದೇಶಗಳನ್ನು ಬಫರ್ ವಲಯವೆಂದು ಗುರುತಿಸಿರುವುದು, ವರದಿ ತಯಾರಿಸುವಾಗ ಜನಪ್ರತಿನಿಧಿಗಳನ್ನು, ಗ್ರಾಮ ಸಭೆಗಳನ್ನು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಅವೈಜ್ಞಾನಿಕ ವರದಿಗೆ ಕಾರಣ” ಎಂದು ಅಭಿಪ್ರಾಯಪಡಲಾಗಿದೆ.
“2015ರಲ್ಲಿ ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡ ನಿರ್ಣಯದ ಪ್ರಕಾರ ರಾಜ್ಯದಲ್ಲಿ 20,668 ಚದರ ಕಿಲೋಮೀಟರ್ ಸೂಕ್ಷ್ಮ ಪ್ರದೇಶವಿದ್ದು, ಅದರಲ್ಲಿ 16,632 ಚದರ ಕಿ.ಮೀ. ಪ್ರದೇಶವನ್ನು ಸಂರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ. ಹೀಗಿರುವಾಗ ಹೆಚ್ಚಿನ ನಿರ್ಬಂಧ ಅಗತ್ಯ ಇಲ್ಲ ಎಂದು ರಾಜ್ಯ ಸರ್ಕಾರ ನಿಲುವು ಪ್ರಕಟಿಸಿದೆ. ಅದನ್ನು ಮೀರಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಬಾರದು” ಎಂದು ಆಗ್ರಹಿಸಲಾಗುತ್ತಿದೆ.
ಇದನ್ನೂ ಓದಿರಿ: ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು ಸಾಕಣೆದಾರರಿಗೂ ಸಂಕಷ್ಟ
“ಕಸ್ತೂರಿ ರಂಗನ್ ವರದಿಯಲ್ಲಿ ಸಾಂಸ್ಕೃತಿಕ ಮತ್ತು ನೈಸರ್ಗಿಕ ಭೂಪ್ರದೇಶಗಳನ್ನು ತಪ್ಪಾಗಿ ವಿಂಗಡಿಸಲಾಗಿದೆ. ಶತಮಾನಗಳಿಂದ ಜನರು ವಾಸಿಸುತ್ತಿರುವ ಜನವಸತಿ ಪ್ರದೇಶಗಳು, ಕೃಷಿ ಭೂಮಿ ಮತ್ತು ಗ್ರಾಮೀಣ ಮೂಲಸೌಕರ್ಯಗಳನ್ನು ESA ವಲಯದೊಳಗೆ ಸೇರಿಸಲಾಗಿದೆ. ಏಲಕ್ಕಿ, ಕರಿಮೆಣಸು, ರಬ್ಬರ್, ಕಾಫಿ ಮತ್ತು ಗಾರ್ಸಿನಿಯಾ ತೋಟಗಳನ್ನು ಕಾಡುಗಳೆಂದು ತಪ್ಪಾಗಿ ಗ್ರಹಿಸಲಾಗಿದೆ. 100 ಕ್ಕಿಂತ ಕಡಿಮೆ ಜನಸಂಖ್ಯೆ ಸಾಂದ್ರತೆ ಹೊಂದಿರುವ ಪ್ರದೇಶಗಳನ್ನು ESA ಎಂದು ಪರಿಗಣಿಸಿರುವುದು ಅವೈಜ್ಞಾನಿಕ” ಎಂದು ಹೋರಾಟಗಾರರು ಹೇಳುತ್ತಿದ್ದಾರೆ.
“ರಾಜ್ಯದ 10 ಜಿಲ್ಲೆಗಳ 33 ತಾಲೂಕುಗಳ ಅಭಿಪ್ರಾಯ ಸಂಗ್ರಹಿಸಿ, ಅರಣ್ಯ ಹಾಗೂ ವನ್ಯಜೀವಿಧಾಮಗಳಂತಹ ಪ್ರದೇಶಗಳು ಈಗಾಗಲೇ ಇರುವುದರಿಂದ ಜನಜೀವನ, ಖಾಸಗಿ ಪ್ರದೇಶಗಳನ್ನು ಸೂಕ್ಷ್ಮ ವಲಯದಿಂದ ದೂರವಿಡಲು ಸೂಚಿಸಲಾಗಿತ್ತು. ಒಟ್ಟು ಸೂಕ್ಷ್ಮ ಪ್ರದೇಶ 20,668 ಚ.ಕಿ.ಮೀ. ಪೈಕಿ ಈಗಾಗಲೇ 16,632 ಚ.ಕಿ.ಮೀ. ಸಂರಕ್ಷಿತ ಅರಣ್ಯವೆಂದು ಘೋಷಿಸಲ್ಪಟ್ಟಿದೆ. ಈ ಹಂತದಲ್ಲಿ ಹೆಚ್ಚಿನ ನಿರ್ಬಂಧದ ಅವಶ್ಯಕತೆಯಿಲ್ಲ” ಎಂದು ಅಭಿಪ್ರಾಯಪಡಲಾಗಿದೆ.



