ನಕಲಿ ಗುರುತಿನ ಚೀಟಿಗಳನ್ನು ಬಳಸಿ ಪ್ರೀತಿ ಮತ್ತು ಮದುವೆಯ ಹೆಸರಲ್ಲಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ವಂಚಕನೊಬ್ಬನ ಕೃತ್ಯಗಳು ಈಗ ಬೆಳಕಿಗೆ ಬಂದಿವೆ. ಆ ವಂಚಕ ಬಿಜೆಪಿ ಶಾಸಕರ ಮಗಳಿಗೂ ವಂಚಿಸಿದ್ದಾನೆ. ಆರೋಪಿ ವಂಚಕನ ವಿರುದ್ಧ ಇದೀಗ ಬಿಜೆಪಿ ಶಾಸಕ ಪೊಲೀಸ್ ದೂರು ದಾಖಲಿಸಿದ್ದಾರೆ.
ವಂಚನೆಯ ಕೃತ್ಯ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಬಳಕಿಗೆ ಬಂದಿದೆ. ಪ್ರೀತಿಯ ನಾಟಕವಾಡಿ ಹೆಣ್ಣುಮಕ್ಕಳನ್ನು ವಂಚಿಸುತ್ತಿದ್ದ ಪ್ರಖರ್ ತ್ರಿವೇದಿ ಮತ್ತು ಆತನಿಗೆ ಸಾಥ್ ನೀಡಿದ್ದ ಆತನ ತಂದೆ ಅನುಜ್ ತ್ರಿವೇದಿ ವಿರುದ್ಧ ಸೀತಾಪುರದ ಸೇವತಾ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ್ ತಿವಾರಿ ದೂರು ದಾಖಲಿಸಿದ್ದಾರೆ. ಈ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ರೇವುಸಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, 2024ರಲ್ಲಿ ಶಾಸಕ ಜ್ಞಾನ್ ತಿವಾರಿ ಅವರು ತಮ್ಮ ಮಗಳು ಪ್ರಗ್ಯಾ ಅವರನ್ನು ಮಿಶ್ರಿಖ್‌ನ ಚಂದ್ರವಾಲ್ ನಿವಾಸಿ ಪ್ರಖರ್ ತ್ರಿವೇದಿಗೆ ಕೊಟ್ಟು ಮದುವೆ ಮಾಡಿಸಿದ್ದರು.
ಮದುವೆಗೂ ಮುನ್ನ ಪ್ರಖರ್ ತ್ರಿವೇದಿಯ ತಂದೆ ಅನುಜ್ ತ್ರಿವೇದಿ ತಮ್ಮನ್ನು ಮುಂಬೈನ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಬಿಂಬಿಸಿಕೊಂಡಿದ್ದರು. ತಮ್ಮ ಕುಟುಂಬದಲ್ಲಿದ್ದ ಅಪರಾಧ ಹಿನ್ನೆಲೆ ಮತ್ತು ಕೋರ್ಟ್ ಕೇಸ್‌ಗಳನ್ನು ಕಪಟತನದಿಂದ ಮುಚ್ಚಿಟ್ಟಿದ್ದರು. ಅವರ ಮಾತನ್ನು ನಂಬಿದ ಶಾಸಕರ ಕುಟುಂಬ, ತಮ್ಮ ಮಗಳನ್ನು ಪ್ರಖರ್ ತ್ರಿವೇದಿಗೆ ಕೊಟ್ಟು ವಿಜೃಂಭಣೆಯಿಂದ ಮದುವೆ ಮಾಡಿತ್ತು.
ಮದುವೆಯಾಗಿ ಎರಡೂವರೆ ವರ್ಷಗಳ ಕಾಲ ಸುಖವಾಗಿದ್ದ ಕುಟುಂಬಕ್ಕೆ ಪ್ರಖರ್ ತ್ರಿವೇದಿಯ ಚಹರೆ ಗೊತ್ತಾಗಿದೆ. ಈತ ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡು ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ರಾಜ್ಯಗಳ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಮದುವೆಯಾಗಿ ಕೋಟ್ಯಂತರ ರೂಪಾಯಿ ಹಣ ಹಾಗೂ ಆಸ್ತಿಯನ್ನು ವಂಚಿಸಿರುವುದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಜ್ಞಾನ್ ತಿವಾರಿ ಅವರು ಆರೋಪಿ ಕುಟುಂಬದೊಂದಿಗಿನ ಎಲ್ಲ ವೈಯಕ್ತಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಕಡಿದುಕೊಂಡು ತಮ್ಮ ಮಗಳನ್ನು ಮನೆಗೆ ಕರೆತಂದಿದ್ದಾರೆ. ಬಳಿಕ ಮಗಳೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಶಾಸಕರು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: FCRA ತಿದ್ದುಪಡಿ | ವಿದೇಶಿ ದೇಣಿಗೆ ನಿಯಂತ್ರಣವೋ, ಧಾರ್ಮಿಕ ಸಂಸ್ಥೆಗಳ ಮೇಲಿನ ಸರ್ಕಾರಿ ಹಿಡಿತವೋ?
“ನಮ್ಮ ಕುಟುಂಬಕ್ಕೆ ತೀವ್ರ ಆಘಾತವಾಗಿದೆ. ಸಾರ್ವಜನಿಕ ಪ್ರತಿನಿಧಿಯಾಗಿ ನನ್ನ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಿದೆ. ಇಂತಹ ವಂಚಕರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಾಗಬೇಕು, ಗಲ್ಲಿಗೇರಿಸಬೇಕು” ಎಂದು ಬಿಜೆಪಿ ಶಾಸಕ ಜ್ಞಾನ್ ತಿವಾರಿ ಒತ್ತಾಯಿಸಿದ್ದಾರೆ.
ಸದ್ಯ ಶಾಸಕರ ದೂರಿನನ್ವಯ ರೇವುಸಾ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ವಂಚಕ ತಂದೆ-ಮಗನನ್ನು ಬಂಧಿಸಿದ್ದಾರೆ.



