ಆಮ್ ಆದ್ಮಿ ಪಕ್ಷದ (AAP) 7 ರಾಜ್ಯಸಭಾ ಸಂಸದರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಬಿಜೆಪಿಯ ವಿರುದ್ಧ ‘ವಾಷಿಂಗ್ ಮಷಿನ್’ ಎಂಬ ಹಳೆಯ ರೂಪಕ ಬಳಸುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರತಿಕ್ರಿಯಿಸಿರುವ ರಮೇಶ್, “ಬಿಜೆಪಿಯ ವಾಷಿಂಗ್ ಮಷಿನ್ ಮತ್ತು ಮೋದಿಯವರ ವಾಷಿಂಗ್ ಪೌಡರ್ ಮತ್ತೆ ಮಾರುಕಟ್ಟೆಗೆ ಬಂದಿದೆ” ಎಂದು ವ್ಯಂಗ್ಯವಾಡಿದ್ದಾರೆ. ಇದುವರೆಗೆ ʼಸದ್ಗುಣ, ಸಮಗ್ರತೆ ಮತ್ತು ಸಿದ್ಧಾಂತದʼ ಸಂಕೇತಗಳಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದ ನಾಯಕರ ಬಣ್ಣ ಈಗ ಬಯಲಾಗಿದೆ. ವಿರೋಧ ಪಕ್ಷದ ನಾಯಕರನ್ನು ತನ್ನತ್ತ ಸೆಳೆದು ಅವರ ಮೇಲಿನ ಹಳೆಯ ಕಳಂಕಗಳನ್ನು ಬಿಜೆಪಿ ತೊಳೆದು ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಬಿಜೆಪಿಯನ್ನು ಟೀಕಿಸಿದ್ದು, ಇದು ʼಬೇಟೆಯ ರಾಜಕಾರಣʼ ಎಂದು ಕರೆದಿದ್ದಾರೆ. ವಿರೋಧ ಪಕ್ಷದ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ವ್ಯವಸ್ಥಿತವಾಗಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಕರಗತ ಮಾಡಿಕೊಂಡಿದೆ ಎಂದು ಅವರು ದೂರಿದ್ದಾರೆ.
ರಾಘವ್ ಚಡ್ಡಾ ನೇತೃತ್ವದಲ್ಲಿ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಸೇರಿದಂತೆ 7 ಮಂದಿ ರಾಜ್ಯಸಭಾ ಸಂಸದರು ಆಪ್ ತೊರೆದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮಜಿತ್ ಸಿಂಗ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಅವರ ಹೆಸರುಗಳೂ ಪಕ್ಷಾಂತರಗೊಂಡವರ ಪಟ್ಟಿಯಲ್ಲಿ ಕೇಳಿಬರುತ್ತಿವೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಘವ್ ಚಡ್ಡಾ, ಸಂಸದೀಯ ಕಾರ್ಯವಿಧಾನದಂತೆ ತಮ್ಮ ನಿರ್ಧಾರವನ್ನು ರಾಜ್ಯಸಭಾ ಸಭಾಪತಿಗಳಿಗೆ ಅಧಿಕೃತವಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:
ಪಕ್ಷದ ಸಂಸದರ ಈ ಬಂಡಾಯದಿಂದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ತುರ್ತು ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಆಪ್‌ನ ಮುಖ್ಯ ಸಚೇತಕ (Chief Whip) ಎನ್ ಡಿ ಗುಪ್ತಾ ಅವರು ರಾಜ್ಯಸಭಾ ಸಭಾಪತಿಗಳನ್ನು ಭೇಟಿ ಮಾಡಿ, ಪಕ್ಷಾಂತರ ವಿರೋಧಿ ಕಾಯ್ದೆಯಡಿ ಈ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದು ಕಾನೂನುಬಾಹಿರ ಪಕ್ಷಾಂತರ ಎಂದು ಆಪ್ ವಾದಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.




