ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಸಕ್ತ ವರ್ಷದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ₹19.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ 10 ಪ್ರಕರಣಗಳ ಪೈಕಿ 21 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ₹74.55 ಲಕ್ಷ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ವಿಜಯಪುರ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ₹6.30 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ” ಎಂದು ಹೇಳಿದರು.
“ಕಳೆದ ವರ್ಷದ 17 ಪ್ರಕರಣಗಳಿಗೆ ಸಂಬಂಧಿಸಿದಂತೆ 28 ಮಂದಿ ಆರೋಪಿಗಳನ್ನು ಹಾಗೂ ಪ್ರಸ್ತುತ ವರ್ಷದ 13 ಪ್ರಕರಣಗಳಿಗೆ ಸಂಬಂಧಿಸಿದಂತೆ 15 ಮಂದಿ ಆರೋಪಿಗಳನ್ನು ಬಂಧಿಸಿ ಒಟ್ಟು ₹1.60 ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾಗಿರುವ ಸ್ವತ್ತುಗಳಲ್ಲಿ ಬಂಗಾರ-ಬೆಳ್ಳಿ ಆಭರಣ, ಕಾರು ಹಾಗೂ ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸೇರಿವೆ” ಎಂದರು.
“ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ 2026ನೇ ಸಾಲಿನಲ್ಲಿ ಏಳು ಪ್ರಕರಣಗಳನ್ನು ಬೇಧಿಸಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, 27.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.’ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಕಳೆದ ಸಾಲಿನಲ್ಲಿ 6 ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಮಂದಿ ಅರೋಪಿಗಳನ್ನು ಹಾಗೂ ಪ್ರಸಕ್ತ ವರ್ಷದಲ್ಲಿ 1 ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟಾರೆಯಾಗಿ ₹33.02 ಲಕ್ಷದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ” ಎಂದರು.
ಕೊಲೆ ಆರೋಪಿಗಳ ಬಂಧನ: “ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ರಾಜು ಬಾಪು ಖರೆ(42) ಅವರ ಕಾರಿಗೆ ಟಿಪ್ಪರ್ ಮೂಲಕ ಡಿಕ್ಕಿ ಹೊಡೆಯಿಸಿ ಪಿಸ್ತೂಲ್ ಮೂಲಕ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಯಾಬಾದ್ ಸಮೀಪದ ಪಾಂಗ್ರೂನ್ ದೊಡ್ಡಿಯ ಅಬುಶ್ಯಾ ಸೋಪಾನ್ ಕೊಡೇಕರ, ಅಬಶ್ಯಾ ಬಾಳು ಮಾನೆ, ವಾಗೀಶ ಶಂಕರ ಪೋಳ, ಜಾಲಿಂದರ್ ಉರ್ಫ್ ಪೋಪಟ್ ಹಕ್ಕೆ, ಖಂಡೂಬಾ ಉರ್ಫ್ ಅಜೀತ್ ತಾಂಬೆ, ಮರುಗು
ಹಕ್ಕೆ ಎಂಬುವವರನ್ನು ಬಂಧಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಾಧ್ಯಮ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು : ಗೃಹ ಸಚಿವ ಡಾ.ಜಿ.ಪರಮೇಶ್ವರ
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಂದ 2 ಕಂಟ್ರಿ ಪಿಸ್ತೂಲ್, 7 ಮೊಬೈಲ್, ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲ್‌ಗಳು, ಕೃತ್ಯಕ್ಕೆ ಬಳಸಿದ ಟಿಪ್ಪರ್ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ” ಎಂದರು.




