ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿದ್ದ ಬಿಜೆಪಿಯ ಏಕೈಕ ಕ್ರಿಶ್ಚಿಯನ್ ನಾಯಕ ಜಾರ್ಜ್ ಕುರಿಯನ್ ಅವರು ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜ್ಯಸಭಾ ಅವಧಿಯು ಜೂನ್ 21ಕ್ಕೆ ಮುಕ್ತಾಯಗೊಂಡಿತ್ತು. ಆದರೆ, ಅವರನ್ನು ಬಿಜೆಪಿ ಮತ್ತೊಮ್ಮೆ ಮೇಲ್ಮನೆಗೆ ನಾಮನಿರ್ದೇಶನ ಮಾಡಲು ಇಚ್ಛೆ ತೋರದ ಕಾರಣ ಅವರು ಸಚಿವ ಸ್ಥಾನ ತೊರೆದಿದ್ದಾರೆ. ಕೇಂದ್ರ ಸಚಿವ ಸಂಪುಟ ಮತ್ತು ಬಿಜೆಪಿ ಸಂಘಟನಾ ಪುನಾರಚನೆಗಳ ಕುರಿತ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಮಂತ್ರಿ ಮಂಡಲದಿಂದ ಕುರಿಯನ್ ಹೊರಬಂದಿದ್ದಾರೆ.
ಆದರೆ, ಮೇಲ್ಮನೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಮುನ್ನ ಕುರಿಯನ್ ಅವರನ್ನು ಮತ್ತೊಂದು ಅವಧಿಗೆ ನಾಮನಿರ್ದೇಶನ ಮಾಡುವುದಿಲ್ಲ ಎಂಬ ಮಾಹಿತಿಯನ್ನೂ ಪಕ್ಷವು ಅವರಿಗೆ ತಿಳಿಸಿರಲಿಲ್ಲ. ಏಕ ಪಕ್ಷೀಯವಾಗಿ ಸರ್ವಾಧಿಕಾರಿ ಧೋರಣೆಯೊಂದಿಗೆ ಅವರನ್ನು ಹೊರಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ತಾವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಜಾರ್ಜ್ ಕುರಿಯನ್ (65), “ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸೋಮವಾರವೇ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ನಾನು ಕೇಂದ್ರ ಸಚಿವನಾಗುತ್ತೇನೆ ಎಂದು ಎಂದಿಗೂ ಕನಸಿನಲ್ಲೂ ಯೋಚಿಸಿರಲಿಲ್ಲ. ನನಗೆ ಈ ಜವಾಬ್ದಾರಿಯನ್ನು ನೀಡಿದ ಪ್ರಧಾನಿ ಮೋದಿಯವರಿಗೆ ಕೃತಜ್ಞತೆಗಳು” ಎಂದಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವೃತ್ತಿಯಿಂದ ವಕೀಲರಾಗಿರುವ ಜಾರ್ಜ್ ಕುರಿಯನ್ ಅವರು 1980ರಿಂದಲೂ ಸಂಘ ಪರಿವಾರದೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದರು. ಬಿಜೆಪಿ ಸ್ಥಾಪನೆಯಾದ ಮೊದಲ ದಿನದಿಂದಲೂ ಪಕ್ಷದ ಸಕ್ರಿಯ ಸದಸ್ಯರಾಗಿದ್ದಾರೆ. ಕೇರಳದ ಕೊಟ್ಟಾಯಂ ಮೂಲದವರಾದ ಇವರು ಬಿಜೆಪಿ ಯುವ ಮೋರ್ಚಾದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಕೇರಳ ಬಿಜೆಪಿಯ ವಕ್ತಾರರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಪಕ್ಷದ ಉಪಾಧ್ಯಕ್ಷರಾಗಿ ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಬಿಜೆಪಿಗೆ ಹೆಚ್ಚಿನ ಜನಬೆಂಬಲ ಮತ್ತು ಅಸ್ತಿತ್ವ ಇಲ್ಲದ ಕಾಲದಲ್ಲೂ ಅವರು ಪಕ್ಷ ನಿಷ್ಠರಾಗಿ ಕೆಲಸ ಮಾಡಿದ್ದಾರೆ.
ಜಾರ್ಜ್ ಕುರಿಯನ್ ಅವರು ಈ ಹಿಂದೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ ಕೇರಳದ ಕ್ರಿಶ್ಚಿಯನ್ ಸಮುದಾಯದ ಕೆಲವು ವರ್ಗಗಳು ಎತ್ತಿದ್ದ ‘ಲವ್ ಜಿಹಾದ್’ ವಿವಾದದ ಕುರಿತ ಕಳವಳಗಳಿಗೂ ಧ್ವನಿಗೂಡಿಸಿದ್ದರು. ಆದರೆ, ಚುನಾವಣಾ ರಾಜಕಾರಣದಲ್ಲಿ ಕುರಿಯನ್ ಅವರಿಗೆ ಕೇರಳದಲ್ಲಿ ದೊಡ್ಡ ಯಶಸ್ಸು ಸಿಗಲಿಲ್ಲ. 2016ರ ವಿಧಾನಸಭಾ ಚುನಾವಣೆಯಲ್ಲಿ ಪುತ್ತುಪಳ್ಳಿಯಿಂದ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಸೋತಿದ್ದ ಅವರು, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲೂ ಕಂಜಿರಪಳ್ಳಿಯಿಂದ ಪರಾಭವಗೊಂಡಿದ್ದರು.
ಆದಾಗ್ಯೂ, 2024ರ ಲೋಕಸಭಾ ಚುನಾವಣೆಯಲ್ಲಿ, ನಟ ಮತ್ತು ರಾಜಕಾರಣಿ ಸುರೇಶ್ ಗೋಪಿ ಅವರು ಕ್ರಿಶ್ಚಿಯನ್ ಮತದಾರರ ಭಾರಿ ಬೆಂಬಲದೊಂದಿಗೆ ಕೇರಳದಿಂದ ಬಿಜೆಪಿಯ ಮೊದಲ ಸಂಸದರಾಗಿ ಆಯ್ಕೆಯಾಗುವಲ್ಲಿ ಕುರಿಯನ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ನಂತರ, ಕುರಿಯನ್ ಅವರನ್ನು 2024ರ ಜೂನ್‌ನಲ್ಲಿ ಮೋದಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಸಿರೊ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ಗೆ ಸೇರಿದ ಕುರಿಯನ್ ಅವರನ್ನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ, ಮೋದಿ ಸರ್ಕಾರದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳು, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಗಳ ರಾಜ್ಯ ಸಚಿವರನ್ನಾಗಿ ನೇಮಿಸಿ, ಜವಾಬ್ದಾರಿ ನೀಡಲಾಗಿತ್ತು. ಇದು ಕೇರಳದ ಕ್ರಿಶ್ಚಿಯನ್ ಸಮುದಾಯವನ್ನು ತಲುಪಲು ಬಿಜೆಪಿ ನಡೆಸಿದ ದೊಡ್ಡ ರಾಜಕೀಯ ಪ್ರಯತ್ನದ ಭಾಗವಾಗಿತ್ತು.
ಕೇಂದ್ರ ಸಚಿವರಾಗಿ ಜಾರ್ಜ್ ಕುರಿಯನ್ ಅವರು ಕೇರಳದ ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸದಾ ಬಿಜೆಪಿಯ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. 2024ರ ಜುಲೈನಲ್ಲಿ ಕೇಂದ್ರ ಬಜೆಟ್‌ನಲ್ಲಿ ಕೇರಳವನ್ನು ನಿರ್ಲಕ್ಷಿಸಲಾಗಿದೆ ಎಂದು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಆರೋಪಿಸಿದಾಗ, ಕೇರಳಕ್ಕೆ ಹೆಚ್ಚಿನ ಕೇಂದ್ರ ನೆರವು ಬೇಕಿದ್ದರೆ ರಾಜ್ಯವು ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣದಲ್ಲಿ ತಾನು ಹಿಂದುಳಿದಿದೆ ಎಂದು ಘೋಷಿಸಿಕೊಳ್ಳಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದರು.
ಈ ಲೇಖನ ಓದಿದ್ದೀರಾ?: ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ
ಅದೇ ವರ್ಷ ಕೇರಳದ ಲೋಕ ಭವನದಲ್ಲಿ ಕೇಸರಿ ಧ್ವಜವಿರುವ ಭಾರತಾಂಬೆಯ ಭಾವಚಿತ್ರ ಪ್ರದರ್ಶನದ ವಿವಾದದ ಸಂದರ್ಭದಲ್ಲೂ ಅವರು ರಾಜ್ಯಪಾಲರ ನಿಲುವನ್ನು ಬೆಂಬಲಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಕೊಚ್ಚಿ-ಬೆಂಗಳೂರು ವಂದೇ ಭಾರತ್ ರೈಲು ಉದ್ಘಾಟನೆ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್ ಗೀತೆ ಹಾಡಿದ ವಿವಾದದಲ್ಲೂ ಅವರು ಬಿಜೆಪಿ-ಆರ್‌ಎಸ್‌ಎಸ್ ನಿಲುವನ್ನು ಬೆಂಬಲಿಸಿದ್ದರು.
ಆದರೆ, 2025ರಲ್ಲಿ ಛತ್ತೀಸ್‌ಗಢದಲ್ಲಿ ಮತಾಂತರದ ಆರೋಪದ ಮೇಲೆ ಕೇರಳ ಮೂಲದ ಇಬ್ಬರು ಸನ್ಯಾಸಿನಿಯರನ್ನು ಬಂಧಿಸಿದಾಗ, ತಾವು ಕೇಂದ್ರ ಸಚಿವರಾಗಿರುವುದರಿಂದ ಬಹಿರಂಗ ನಿಲುವು ತಳೆಯಲು ಕೆಲವು ಮಿತಿಗಳಿವೆ ಎಂದು ಹೇಳಿ ವಿವಾದದಿಂದ ದೂರ ಸರಿದಿದ್ದರು. ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಸನ್ಯಾಸಿನಿಯರು ಮತಾಂತರದಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಿದ ನಂತರವೂ ಕುರಿಯನ್ ಈ ಚರ್ಚೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ದೂರದರ್ಶನ ಚರ್ಚೆಗಳಲ್ಲಿ ಪರಿಚಿತ ಮುಖವಾಗಿದ್ದ ಕುರಿಯನ್ ಅವರು, ಕೇರಳದಲ್ಲಿ ನಡೆಯುತ್ತಿದ್ದ ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಭಾಷಣಗಳನ್ನು ಮಲಯಾಳಂಗೆ ಅನುವಾದಿಸುವ ಜವಾಬ್ದಾರಿಯನ್ನೂ ಹೆಚ್ಚಾಗಿ ನಿರ್ವಹಿಸುತ್ತಿದ್ದರು.



