ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ

Date:

ಜೂನ್ 23, 1980ರಂದು ಸಂಜಯ್ ಗಾಂಧಿ ವಿಮಾನಾಪಘಾತದಲ್ಲಿ ತೀರಿಹೋದರು. ಜುಲೈ 6, 1980ರ 'ಲಂಕೇಶ್ ಪತ್ರಿಕೆ'ಯ ಮೊದಲ ಸಂಚಿಕೆಯಲ್ಲಿ ಪಿ. ಲಂಕೇಶರು ಸಂಜಯ್ ಸಾವು ಕುರಿತು ಬರೆದದ್ದು ಇಲ್ಲಿದೆ. ಒಂದು ಬರೆಹ 46 ವರ್ಷಗಳ ನಂತರ ಓದುಗರಿಗೆ ಹೇಗೆ ಕಾಣಬಹುದು ಎಂಬ ಸಣ್ಣ ಕುತೂಹಲ. ಹಾಗಾಗಿ ಆ ಬರೆಹವನ್ನು ಯಥಾವತ್ತಾಗಿ ಇಲ್ಲಿ ಮರುಪ್ರಕಟಿಸುತ್ತಿದ್ದೇವೆ...

ಸೋಮವಾರ ಬೆಳಗ್ಗೆ ಹತ್ತುಗಂಟೆಗೆ ಮಿತ್ರನೊಬ್ಬನಿಂದ ಫೋನ್ ಬಂತು: ‘ಕೇಳಿದಿರಾ? ಸಂಜಯ್ ಹೊರಟುಹೋದರು.’ ನಂಬಲಾರದೆ ನಮ್ಮ ಆಫೀಸು ಕೇಳಿತು, ‘ಯಾವ ಸಂಜಯ್? ಎಲ್ಲಿಗೆ ಹೊರಟುಹೋದರು?’ ಆತ ದೊಡ್ಡ ಸುದ್ದಿ ಹೇಳುವವನಂತೆ, ನಡುಕವನ್ನು ಹತ್ತಿಕ್ಕಲಾರದೆ, ‘ಸಂಜಯ್ ಗಾಂಧಿ! ವಿಮಾನಾಪಘಾತದಲ್ಲಿ ತೀರಿಕೊಂಡರು. ನಿಮಗೆ ಖುಷಿಯಾಗಿಲ್ಲವೇ?’ ಎಂದರು.

- Advertisement -

‘ಇಲ್ಲ, ಯಾಕೆ ಖುಷಿಯಾಗಬೇಕು? ಇದೊಂದು ದೊಡ್ಡ ದುರಂತದ ಸುದ್ದಿ. ಸುಮ್ಮನೆ ಗಾಳಿಮಾತು ಇರಬೇಕು. ಖಚಿತಪಡಿಸಿಕೊಂಡು ಮಾತಾಡಿ’ ಎಂದೆವು. ‘ಎಲ್ಲ ಖಚಿತವಾಗಿದೆ. ಈಗತಾನೆ ಟೆಲಿಪ್ರಿಂಟರಿನಲ್ಲಿ ಬಂತು. ಜನ ರಸ್ತೆಗಳಲ್ಲಿ ಸೇರಿ ಮಾತಾಡಿಕೊಳ್ತಿದಾರೆ. ಎಲ್ಲೆಲ್ಲೂ ಅಂಗಡಿಗಳನ್ನು, ಆಫೀಸುಗಳನ್ನು ಮುಚ್ಚಿದಾರೆ. ನಿಮ್ಮ ಆಫೀಸಿಗೆ ತುಂಬ ಕುತೂಹಲದ ಸುದ್ದಿಯೆಂದು ಮೊದಲು ಹೇಳಿದೆವು.’

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

‘ಎಂಥ ಸುದ್ದಿಯೋ ಗೊತ್ತಿಲ್ಲ. ಆದರೆ ಐತಿಹಾಸಿಕವಾಗಿ ತೀರಾ ಭಯಂಕರ ಸುದ್ದಿ ಇದು. ಕಳೆದ ಆರು ವರ್ಷಗಳ ನಮ್ಮ ಚರಿತ್ರೆ ಸಂಜಯ್‌ರವರ ಇರುವಿಕೆಯಿಂದ ರೂಪುಗೊಂಡಿದ್ದರೆ ಬರಲಿರುವ ಮೂರು ವರ್ಷಗಳ ಚರಿತ್ರೆ ಅವರ ಸಾವಿನಿಂದ ರೂಪುಗೊಳ್ಳುತ್ತೆ. ಈ ಬಗೆಯ ಮನುಷ್ಯನೊಬ್ಬ ಸತ್ತಾಗ ಅವರ ಸ್ನೇಹಿತರಿಗೆ ತೀವ್ರ ದುಃಖವಾಗುವ ಜೊತೆಗೆ ಅವರ ಶತ್ರುಗಳಿಗೆ ಒಂದು ಬಗೆಯ ಶೂನ್ಯತೆ ಆವರಿಸುತ್ತೆ. ಬದುಕು ಸದಾ ತಿಕ್ಕಾಟಗಳ ರಂಗ. ಒಂದೇ ಟೀಮ್ ಇಟ್ಟುಕೊಂಡು ಯಾವ ಆಟವಾಡಲು ಸಾಧ್ಯ?’

ಅವತ್ತೆಲ್ಲ ನಮ್ಮ ಪುಟ್ಟ ಆಫೀಸಿಗೆ ಸ್ನೇಹಿತರ ಲಗ್ಗೆ. ರೇಡಿಯೋ ಕೇಳಿದ್ದವರಿಂದ ವಾಜಪೇಯಿ ಸಂತಾಪ ಸೂಚಿಸುತ್ತ ಹೇಳಿದ ‘ನಡುಹಗಲಿನ ಕತ್ತಲೆ’ಯಿಂದ ಹಿಡಿದು ಮುರಾರ್ಜಿ ದೇಸಾಯಿ ತಮ್ಮ ವಿಶಿಷ್ಟ ಶೈಲಿಯಲ್ಲಿ ದುಃಖಿಸಿದ, ‘ಸತ್ತವರ ಸಂಸಾರಕ್ಕೂ ಸತ್ತವರ ತಾಯಿಗೂ ನನ್ನ ವಿಷಾದ ಸೂಚಿಸುತ್ತೇನೆ’ ಎಂಬ ಮಾತಿನವರೆಗೆ ಪ್ರಸ್ತಾಪ; ಬಿ.ವಿ. ರಾಮನ್ ತಮ್ಮ ಭವಿಷ್ಯದ ಪತ್ರಿಕೆಯಲ್ಲಿ ಹೇಳಿದ್ದ ‘ಜನವರಿಯಿಂದ ಆಗಸ್ಟ್‌ವರೆಗೆ ಸಂಜಯ್‌ಗೆ ವಿಮಾನದಲ್ಲಿ ಅಪಾಯವಿದೆ’ ಎಂಬ ಮಾತಿನ ಚರ್ಚೆ. ಮತ್ತೊಬ್ಬ ಭವಿಷ್ಯಕಾರ ಹೇಳಿದ್ದ ‘ಜೂನ್ ತಿಂಗಳಲ್ಲಿ ಭಾರತದ ಮುಖ್ಯ ವ್ಯಕ್ತಿಯೊಂದು ಕಣ್ಮರೆಯಾಗುವ ಸಾಧ್ಯತೆಯಿದೆ’ ಎಂಬುದರ ವಿಶ್ಲೇಷಣೆ. ಕಮ್ಯುನಿಸ್ಟ್ ಹುಡುಗನೊಬ್ಬ ಹೇಳಿದ್ದು, ‘ಈ ಸುದ್ದಿ ತುಂಬ ಬೇಸರ ತರುವಂಥದು.’ ಇದೆಲ್ಲಕ್ಕಿಂತ ಮುಖ್ಯವಾಗಿ ಅರಸು ಈಗ ಏನು ಮಾಡಬಹುದೆಂಬುದರ ವರ್ಣನೆ. ರಾಜಕೀಯದ ಬಗ್ಗೆ ಮತ್ತು ಅರಸು ಬಗ್ಗೆ ತಾತ್ಸಾರವುಳ್ಳ ಮನುಷ್ಯನೊಬ್ಬ ಅಂದ, ”ಅರಸು, ಹಾವನೂರು ಇವರಿಗೆ ತಮ್ಮ ರಾಜಕೀಯ ಬಂಡವಾಳ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನಾಳೆಯೇ ಅವರೆಲ್ಲ ‘ಈ ರಾಷ್ಟ್ರದ ಹಿತದೃಷ್ಟಿಯಿಂದ ನಾವೆಲ್ಲ ಇಂದಿರಾ ಅವರ ಕಾಲಿಗೆ ಬಿದ್ದು ಅವರ ಪಕ್ಷದಲ್ಲಿ ಒತ್ತೆಯಾಳುಗಳಾದರೂ ಆಗುತ್ತೇವೆ’ ಅಂದರೆ ಆಶ್ಚರ್ಯವಿಲ್ಲ” ಅಂದ.

ಇದನ್ನು ಓದಿದ್ದೀರಾ?: ಶೂದ್ರ ಶ್ರೀನಿವಾಸರ ‘ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ’

‘ಸರಿಯಪ್ಪ, ಗುಂಡೂರಾವ್ ಏನು ಮಾಡುತ್ತಾರೆ?’

“ಅದೊಂದು ದೊಡ್ಡ ಮಾತೇನಲ್ಲ. ಗುಂಡೂರಾವ್ ಅರಸು ಥರದ ಮನುಷ್ಯರೇ. ಎಚ್.ಎಂ.ಟಿ. ಕಾರ್ಖಾನೆ ತನ್ನ ಹತಾರಗಳನ್ನು ತಯಾರಿಸಿ ದೇಶದ ಮೇಲೆಲ್ಲ ಎಸೆಯುವಂತೆ ಈ ಕಾಂಗ್ರೆಸ್ ಪಕ್ಷ ಈ ಅರಸುಗಳನ್ನೂ, ಗುಂಡೂದಾದಾಗಳನ್ನೂ ತಯಾರಿಸುತ್ತಿದೆ. ಸಂಜಯ್ ಬೆಂಬಲದಿಂದ ಗುಂಡೂರಾವ್ ಯಾರಿಗೂ ಕೇರ್ ಮಾಡದೆ. ಯಾರನ್ನೂ ಕಮಿಷನ್, ಕಾರ್ಪೊರೇಷನ್‌ಗಳಿಗೆ ನೇಮಿಸದೆ ರಾಜ್ಯಭಾರ ಮಾಡುತ್ತಿದ್ದರು. ಈಗ ಕೊಂಚ ಶಾಸಕರ ತೆವಲುಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತೆ… ಅಷ್ಟೇ.”

ಅಂದಮೇಲೆ… ಸಂಜಯ್ ಹೇಗೆ ಜನರನ್ನು ಮತ್ತು ಘಟನೆಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದರು ಎಂಬುದು ಗೊತ್ತಾಗುತ್ತೆ. ಬೆಳ್ಳಿಯ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದ ಸಂಜಯ್ ಭಾರತದ ಹೊಸ ರಾಜಕೀಯದ ದಿಕ್ಕು ಮತ್ತು ಚಲನೆಯನ್ನು ನಿರ್ಧರಿಸಬಲ್ಲವರಾಗಿದ್ದರು. ಇದಕ್ಕೆ ವಿಶೇಷ ಕಾರಣಗಳೇನಿಲ್ಲ. ಸಂಜಯ್‌ಗೆ ಭಾರತೀಯ ಹುಡುಗನೊಬ್ಬ ಕಾಂಗ್ರೆಸ್ ಪಕ್ಷದಲ್ಲಿ ನಾಯಕನಾಗುವುದಕ್ಕೆ ಏನೇನು ಬೇಕೋ ಅದೆಲ್ಲ ಇತ್ತು. ಜವಾಹ‌ಲಾಲ್ ನೆಹರೂ ಅವರಿಗೆ ಮೊಮ್ಮಗನಾಗಿ ಹುಟ್ಟಿದ ಈತ ಡೂನ್ ಸ್ಕೂಲ್ ಮತ್ತು ಇಂಗ್ಲೆಂಡಿನಲ್ಲಿ ಕಲಿತದ್ದನ್ನು ಕುರಿತು ಹೆಚ್ಚು ಹೇಳಬೇಕಾದ್ದಿಲ್ಲ. ನೆಹರೂ ಮನೆ ರಾಜಕೀಯ ಚದುರಂಗದ ಸ್ಥಳವಾಗಿತ್ತು. ಚಪರಾಸಿಯಾಗಿದ್ದ ಮಥಾಯ್ ನೆಹರೂ ಅವರ ಖಾಸಗಿ ಕಾರ್ಯದರ್ಶಿಯಾಗುವವರೆಗೆ, ಅನಾಮಧೇಯರಾಗಿದ್ದ ಕೃಷ್ಣಮೆನನ್ ಭಾರತದ ರಕ್ಷಣಾ ಮಂತ್ರಿಯಾಗುವವರೆಗೆ ಅನೇಕ ನಾಟಕಗಳು ಇಲ್ಲಿ ನಡೆಯುತ್ತಿದ್ದವು. ಇಂದಿರಾಗಾಂಧಿಯವರ ಏಕಾಂಗಿತನ ಮತ್ತು ಸಂಜಯ್ ಅವರ ತಬ್ಬಲಿತನ ಅವರನ್ನು ಒಟ್ಟಿಗೆ ತಂದಿದ್ದವು. ಇಂದಿರಾ ಭಾರತದ ಆಕಾರವನ್ನೇ ಬದಲಿಸತಕ್ಕ ರಾಜಕೀಯ ಘರ್ಷಣೆಗಳಲ್ಲಿ, ಹೋರಾಟಗಳಲ್ಲಿ ಸಿಕ್ಕಿಕೊಂಡಿದ್ದರು. ಗಾಂಧೀಜಿ ಮಡಿದ ಬಳಿಕ ಕಾಂಗ್ರೆಸ್ ಪಕ್ಷ ಎಂದೂ ಸಾಮಾನ್ಯ ಜನರ ಮಟ್ಟದಲ್ಲಿ ಕೆಲಸ ಮಾಡಲಾಗಲಿಲ್ಲ. ಸಾಮಾನ್ಯರನ್ನು ಉದ್ದೇಶಿಸಿ ಭಾಷಣ ಮಾಡುತ್ತ ಅಸಾಮಾನ್ಯ ಶೋಷಕರಾದ ಟಾಟಾ, ಬಿರ್ಲಾ, ಮಫತ್‌ಲಾಲ್, ಜೈನ್, ಮಹೇಂದ್ರರ ಜೇಬಿನಲ್ಲಿ ಸ್ನೇಹದ ಹಸ್ತ ಇಳಿಬಿಟ್ಟು ರಾಜಕೀಯ ಮಾಡಿತು ಈ ಪಕ್ಷ. ಇದರಿಂದಾಗಿ ಒಂದು ಕಡೆ ಬಡತನ, ನಿರುದ್ಯೋಗ, ನೋವು ಬೆಳೆದಂತೆ ಇನ್ನೊಂದು ಕಡೆ ಇಂದಿರಾ ಅವರ ಆಶ್ವಾಸನೆಗಳು ಬೆಳೆದವು. ಇವು ತುರ್ತುಪರಿಸ್ಥಿತಿಯಲ್ಲಿ ಮತ್ತು ಆ ತರುವಾಯದ ರಾಜಕೀಯದಲ್ಲಿ ತಮ್ಮ ಕ್ಲೈಮ್ಯಾಕ್ಸ್‌ ಕಂಡವು.

Sanjay Indira
ಸಂಜಯ್ ಗಾಂಧಿ ಮತ್ತು ಇಂದಿರಾ ಗಾಂಧಿ

ಇಷ್ಟೆಲ್ಲ ಸಂಕೀರ್ಣತೆ ಸಂಜಯ್ ಅವರಿಗೆ ಬೇಕಿರಲಿಲ್ಲ. ದಿಲ್ಲಿಗೆ ಅಧಿಕಾರವಿದ್ದರೆ ಮತ್ತು ಅದನ್ನು ಚಲಾಯಿಸುವ ಶಕ್ತಿ ಇದ್ದರೆ ಎಲ್ಲ ಸರಿಹೋಗುತ್ತದೆಂದು ತಿಳಿದರು. ಟಾಟಾ, ಬಿರ್ಲಾಗಳಿಗೆ ಅರೆಮನಸ್ಸಿನಿಂದ ನೆರವು ನೀಡುವ ಬದಲು ಪೂರ್ತಿ ಬೆಂಬಲ ಕೊಟ್ಟರೆ ದೇಶದ ಆರ್ಥಿಕ ಕಷ್ಟಗಳೆಲ್ಲ ಹೋಗುತ್ತವೆ ಎಂದು ತಿಳಿದರು. ಅನಗತ್ಯ ಕಾನೂನುಗಳನ್ನು ಟೀಕಿಸಿದರು. ತಾವು ಅಂದುಕೊಂಡ ಪ್ರಗತಿಗೆ ಅಡ್ಡಿ ಬರುವಂಥ ನ್ಯಾಯಾಲಯಗಳು ಎಚ್ಚರ ವಹಿಸಬೇಕೆಂದು ಸೂಚಿಸಿದರು. ತಮ್ಮೊಂದಿಗೆ ಉತ್ಸಾಹಿಗಳಾದ ತರುಣರೂ ತಮ್ಮಂತೆ ಯೋಚಿಸಬಲ್ಲ ರಾಜಕಾರಣಿಗಳೂ ಇದ್ದರೆ ಈ ದೇಶಕ್ಕೆ ಒಳ್ಳೆಯದಾಗುತ್ತದೆಂದು ಊಹಿಸಿದರು. ಕಾಂಗ್ರೆಸ್ ಪಕ್ಷವನ್ನು ಈ ಜನರಿಂದ ತುಂಬಿದರು. ಮರ ನೆಡುವುದು, ವರದಕ್ಷಿಣೆಯ ವಿರುದ್ಧ ಹೋರಾಡುವುದು, ನಗರಗಳನ್ನು ಚೊಕ್ಕಟವಾಗಿಡುವುದು, ವಿದ್ಯಾರ್ಥಿಗಳಿಗೆ ನೆರವಾಗುವುದು, ಬಡವರಿಗೆ ಸಾಲ ಕೊಡುವುದು- ಇವೆಲ್ಲ ಅವರ ಸದುದ್ದೇಶದ ಅಭಿವ್ಯಕ್ತಿಗಳು.

ಸಂಜಯ್‌ಗೆ ಧೈರ್ಯವಿತ್ತು. ನಮ್ಮ ರಾಜಕಾರಣಿಗಳ ಗುಣ ಚೆನ್ನಾಗಿ ಗೊತ್ತಿತ್ತು. ಈ ರಾಜಕಾರಣಿಗಳು ತಮ್ಮ ಕನಸನ್ನು ನನಸು ಮಾಡಬಲ್ಲರೆಂದು ತಿಳಿದಿದ್ದರು. ಅಲ್ಲದೆ ಸಂಜಯ್ ತೀರ್ಮಾನಗಳು, ಯೋಚನೆಗಳು ಎಂಥ ಮೂರ್ಖರಿಗೂ ತಿಳಿಯುವಷ್ಟು ಸರಳವಾಗಿ ಸುಂದರವಾಗಿದ್ದವು. ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಸಿದ್ಧತೆ ನಡೆದಿತ್ತು. ಕಾಂಗ್ರೆಸ್ ಪಕ್ಷ ಸಂಜಯ್ ಶೈಲಿಗೆ ಹೊಂದಿಕೊಳ್ಳತೊಡಗಿತ್ತು. ಪತ್ರಿಕೆಗಳು ಆಗಲೇ ಸಂಜಯ್ ಅವರ ಅನಿವಾರ್ಯತೆಯನ್ನು ಕಂಡುಕೊಳ್ಳತೊಡಗಿದ್ದವು. ಕೇಂದ್ರದ ಮಂತ್ರಿಗಳು ತಮ್ಮ ಅಧಿಕಾರದ ಜಾಗ ಯಾವುದೆಂದು ತಿಳಿದುಕೊಂಡು ಎಲ್ಲದಕ್ಕೂ ಸಂಜಯ್ ಗಾಂಧಿ ಅವರನ್ನು ಕೇಳಿಕೊಳ್ಳತೊಡಗಿದ್ದರು. ಅವರ ಜೊತೆಗೆ ಚರ್ಚಿಸುವುದಿರಲಿ, ಅವರು ಹೇಳಿದ್ದನ್ನು ಮಾಡುವುದೇ ಆನಂದದ ಸಂಗತಿಯೆಂಬುದು ಕಾಂಗ್ರೆಸ್ ಕಾರ್ಯಕರ್ತರಿಗೆ ಅರ್ಥವಾಗತೊಡಗಿತ್ತು. ಭಾರತದ ಬಡವ ಹೊಸ ಕನಸುಗಳಿಗಾಗಿ ಸಿದ್ಧವಾಗತೊಡಗಿದ್ದ. ಶ್ರೀಮಂತ ತನ್ನ ಭವಿಷ್ಯದ ಥೈಲಿಗಳನ್ನು ಎಣಿಸಿಕೊಳ್ಳತೊಡಗಿದ್ದ.

ಸಂಜಯ್ ಎಂದರೆ ಬಣ್ಣವಿತ್ತು, ಕಳೆಯಿತ್ತು; ವಿಚಿತ್ರವೆಂದರೆ ಎಲ್ಲರಲ್ಲೂ ಬೇರೆ ಬೇರೆ ಬಗೆಯ ಆಶೆ ಇತ್ತು. ರಾಜಕೀಯದಲ್ಲಿ ಖದರಿತ್ತು, ಜೀವನದಲ್ಲಿ ಏರಿಳಿತಗಳಿದ್ದವು. ಈ ಮನುಷ್ಯ ಇಷ್ಟು ಬೇಗ ನಮ್ಮನ್ನೆಲ್ಲ ಬೇಸರದ ಬರೀ ಮುಳ್ಳುಗಳ ಈ ಕಾಡಿನಲ್ಲಿ ಬಿಟ್ಟು ಹೊರಟುಹೋಗಬಾರದಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ಕರಾಳ ಮುಖ: ಮುಂದಿನ ಹತ್ತು ವರ್ಷಗಳಲ್ಲಿ ನಾಗರಿಕತೆಗೆ ಆಪತ್ತೇ?

ಎಐ ಸೇರಿದಂತೆ ತಂತ್ರಜ್ಞಾನದ ಅಭಿವೃದ್ಧಿ ಮಾನವನ ಕಲ್ಯಾಣಕ್ಕಾಗಿರಬೇಕೇ ಹೊರತು, ಮಾನವ ಜನಾಂಗದ...

ವಿದ್ಯಾರ್ಥಿನಿ ಮೇಲೆ ಗೂಂಡಾಗಿರಿ; ಬಿಹಾರ ಸರ್ಕಾರದ ವಿರುದ್ಧ ರಾಹುಲ್ ಕಿಡಿ; ಪೋಕ್ಸೋ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ

ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಸಾರ್ವಜನಿಕ...

ಗಗನಕ್ಕೇರಿದ ದಿನಬಳಕೆ ವಸ್ತುಗಳ ದರ: ‘ಕ್ಯಾ ಹುವಾ ತೇರಾ ವಾದಾ’ – ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

ದೇಶದಲ್ಲಿ ಪ್ರಮುಖ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್...

ಹವಾಮಾನ | ಸೆ. 21, 22ರಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು...