ಕಳೆದ ಅಕ್ಟೋಬರ್ 23ರಿಂದ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರವು ಗುರುವಾರ (ನವೆಂಬರ್ 5) ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿ, ವಿಷಯವನ್ನು ಮೌಖಿಕವಾಗಿ ಪ್ರಸ್ತಾಪಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಬಿ. ಕರುಣಾಕರನ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದ್ದರೂ ಕರ್ನಾಟಕ ಅದನ್ನು ಪಾಲಿಸುತ್ತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
“ಕುಡಿಯಲು ಹಾಗೂ ಕೃಷಿಗೆ ನೀರಿಲ್ಲದೆ ತಮಿಳುನಾಡಿನ ಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆಗಳು ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ. ಕರ್ನಾಟಕ ನೀರು ಬಿಡುತ್ತಿಲ್ಲ, ನಾವು ಈಗ ಎಲ್ಲಿಗೆ ಹೋಗಬೇಕು?” ಎಂದು ವಕೀಲ ಕರುಣಾಕರನ್ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡರು.
ತಮಿಳುನಾಡು ಸರ್ಕಾರದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ಅರ್ಜಿಯ ತುರ್ತು ವಿಚಾರಣೆಗೆ ಶೀಘ್ರವೇ ದಿನಾಂಕ ನಿಗದಿಪಡಿಸಲು ಸಮ್ಮತಿಸಿದೆ.




