ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಮಂಗಳವಾರ ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಸಿಎಂ ಅವರ ಕ್ಯಾಂಪ್ ಕಚೇರಿ ಹಾಗೂ ಅವರ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ (ಒಎಸ್‌ಡಿ) ರಾಜ್‌ಬೀರ್ ಸಿಂಗ್ ಘುಮಾನ್ ಅವರ ಚಂಡೀಗಢದ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಮಂಗಳವಾರ ಸಂಜೆ 6:15ರ ಸುಮಾರಿಗೆ ಘುಮಾನ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಆರಂಭವಾಯಿತು. ಒಎಸ್‌ಡಿ ರಾಜ್‌ಬೀರ್ ಘುಮಾನ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪದಡಿ ಸಿಬಿಐ ಎಫ್‌ಐಆರ್ (FIR) ಕೂಡ ದಾಖಲಿಸಿಕೊಂಡಿದೆ.
ಸಿಬಿಐ ದಾಳಿಗೆ ‘ಎಕ್ಸ್’ (X) ಖಾತೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಭಗವಂತ್ ಮಾನ್, “ಪಂಜಾಬ್ ಚುನಾವಣೆಗಾಗಿ ಬಿಜೆಪಿ ಈಗಲೇ ಸಿದ್ಧತೆ ಆರಂಭಿಸಿದೆ. ನನ್ನ ಕ್ಯಾಂಪ್ ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ. ಪಂಜಾಬ್ ಸರ್ಕಾರವನ್ನು ಮತ್ತು ನನ್ನನ್ನು ಬದನಾಮ್ ಮಾಡಲು ಇಡಿ (ED) ಮತ್ತು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರಿಂದ ನನಗೆ ಸಿಗುತ್ತಿರುವ ಪ್ರೀತಿ ಮತ್ತು ಬೆಂಬಲವನ್ನು ನೋಡಿ ಬಿಜೆಪಿ ಕಂಗೆಟ್ಟಿದೆ” ಎಂದು ಕಿಡಿಕಾರಿದ್ದಾರೆ.
ಪಂಜಾಬ್ ಸರ್ಕಾರದಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಜಾರಿ ನಿರ್ದೇಶನಾಲಯದ (ಇಡಿ) ಆರೋಪಗಳಿಗೆ ಈ ಪ್ರಕರಣ ಸಂಬಂಧಿಸಿದೆ. ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಆರೋಪಗಳ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ವಕೀಲ ನಿಖಿಲ್ ಸರಫ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇಡಿ ಒದಗಿಸಿದ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಗಂಭೀರ ಸ್ವರೂಪದ ಅಪರಾಧಗಳು ನಡೆದಿರುವುದು ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ತನಿಖೆಗೆ ಸಹಕರಿಸುವಂತೆ ಪಂಜಾಬ್ ಸರ್ಕಾರ ಮತ್ತು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಆದೇಶದ ವಿರುದ್ಧ ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇಡಿ ಮಾಡಿರುವ ಆರೋಪಗಳು ಇನ್ನೂ ತನಿಖಾ ಹಂತದಲ್ಲಿದ್ದು, ಅವು ಅಂತಿಮ ತೀರ್ಮಾನಗಳಲ್ಲ. ಈ ಪ್ರಕರಣದ ಮುಂದಿನ ವಿಚಾರಣೆ ಇದೇ ವಾರದಲ್ಲಿ ನಡೆಯಲಿದೆ.
ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಯಸುವ ವ್ಯಕ್ತಿಗಳು ಹಾಗೂ ಸಿಎಂ ಒಎಸ್‌ಡಿ ರಾಜ್‌ಬೀರ್ ಘುಮಾನ್ ನಡುವೆ ನಿತಿನ್ ಗೋಹಾಲ್ ಎಂಬಾತ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎಂದು ಇಡಿ ಆರೋಪಿಸಿದೆ. ವರ್ಗಾವಣೆಗಳು, ಗೌಪ್ಯ ಸರ್ಕಾರಿ ದಾಖಲೆಗಳ ಲಭ್ಯತೆ ಮತ್ತು ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ನೆರವು ನೀಡುವುದು ಮುಂತಾದ ಸೌಲಭ್ಯಗಳನ್ನು ಇವರು ಕಲ್ಪಿಸಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರೇಟರ್ ಮೊಹಾಲಿ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (GMADA) ಅಡಿಯಲ್ಲಿ ಬರುವ ಭೂ ಬಳಕೆಯ ಬದಲಾವಣೆ (CLU) ಅನುಮೋದನೆಗಳು ಮತ್ತು ಅನುಮಾನಾಸ್ಪದ ಮಾರಾಟ ವಹಿವಾಟುಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಿತಿನ್ ಗೋಹಾಲ್ ಅವರ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಬಳಿಕ, ತನಿಖೆಯ ವಿವರಗಳನ್ನು ಇಡಿ ಅಧಿಕಾರಿಗಳು ಪಂಜಾಬ್ ಡಿಜಿಪಿ ಜೊತೆ ಹಂಚಿಕೊಂಡಿದ್ದರು. ಆದರೆ, ಪೊಲೀಸರು ಯಾವುದೇ ಎಫ್‌ಐಆರ್ ದಾಖಲಿಸದಿದ್ದಾಗ, ವಕೀಲ ನಿಖಿಲ್ ಸರಫ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ರೋಹಿತ್ ಕಪೂರ್ ಅವರಿದ್ದ ಪೀಠವು, ಪೊಲೀಸರ ವಿಳಂಬ ಧೋರಣೆಯನ್ನು ಪ್ರಶ್ನಿಸಿತ್ತು. ಆಗಸ್ಟ್ 3ರಂದು ಇಡಿ ಮಾಹಿತಿಯನ್ನು ಹಂಚಿಕೊಂಡಿದ್ದರೂ, ಪೊಲೀಸರು ಕೇವಲ ಪ್ರಾಥಮಿಕ ವಿಚಾರಣೆಯನ್ನು ಮಾತ್ರ ನಡೆಸಿದ್ದರು. ಇಡಿ ದಾಖಲೆಗಳ ನಕಲು ಪ್ರತಿಗಳು ಸ್ಪಷ್ಟವಾಗಿರಲಿಲ್ಲ ಎಂಬ ಕಾರಣ ನೀಡಿ ಪೊಲೀಸರು ತನಿಖೆ ವಿಳಂಬ ಮಾಡಿದ್ದರು. ಇದಲ್ಲದೆ, ಇಡಿ ಸಲ್ಲಿಸಿದ ದಾಖಲೆಗಳಲ್ಲಿ ಪ್ರಮುಖವಾಗಿ ಹೆಸರಿಸಲಾಗಿದ್ದ ರಾಜ್‌ಬೀರ್ ಸಿಂಗ್ ಘುಮಾನ್ ಅವರನ್ನು ಪೊಲೀಸರು ಪ್ರಾಥಮಿಕ ವಿಚಾರಣೆಗೆ ಒಳಪಡಿಸದ ಬಗ್ಗೆಯೂ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಮಾಹಿತಿಗಳನ್ನು ಪರಿಶೀಲಿಸಿದ ನ್ಯಾಯಾಲಯ, ಇದು ಕೇವಲ ಪ್ರಾಥಮಿಕ ವಿಚಾರಣೆಗೆ ಸೀಮಿತವಾಗಬಾರದು, ಬದಲಾಗಿ ಎಫ್‌ಐಆರ್ ದಾಖಲಿಸಿ ಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂದು ತೀರ್ಮಾನಿಸಿತ್ತು




