ಬೀದರ್‌ | ನಿಮ್ಕಡಿ ಸೋಯಾ ಕೊಯ್ಲಕ ಮಂದಿ ಸಿಗ್ತಾರೇನ್?

Date:

ಹೊಲ್ದಾಗ್‌ ಸೋಯಾ ಕೊಯ್ಲಕ್‌ ಬಂದುದ, ನಮ್ಮೂರಾಗ ಕೂಲಿ ಮಂದಿ ಒಬ್ರೂ ಸಿಗ್ಲಾತಿಲ, ಅದಕ್ಕೆ ಇವತ್ತು ತೆಲಂಗಾಣಿ ಕಡಿ ಹೋಗಿ ಅವರು ಕೇಳಿನೋಟ ಹ್ಹೂ ಅಂದಿ, ಆಟೋದಾಗ ಇಪತ್ತು ಮಂದಿಗಿ ಕರ್ಕೊಂಡಿ ಬಂದಿದಾ, ಎಕರಿಗಿ ಪಾಚ್‌ ಹಜಾರ್‌, ಮತ್‌ ಆಟೋ ಕಿರಾಯಿ ನಾವೇ ಕುಡ್ಬೇಕ. ಒಕ್ಕಲಿಗ್ಯಾಂದ ಜಿಂದಗಿ ಭಾಳ ಹೈರಾಣ ಅದಾ ನೋಡ್ರೀ, ಬೆಳೆದಿಂದ ಎಲ್ಲಾ ಮಂದಿ ಮನೀ ತುಂಬದೇ ಅದಾ ಅಂತ ಅನ್ಕೊತಾ ರೈತ ಮನೆಪ್ಪಾ ಸೋಯಾ ಬಣಬಿ ಮುಚ್ಲಾಕ ತಾಡಪಲ ತಕೊಂಡಿ ಹೊಲ್ಕಡಿ ಹೋದಾ!

- Advertisement -

ಕಳೆದ ವರ್ಷ ಅತಿವೃಷ್ಟಿಯಿಂದ ಕೈಗೆ ಬಂದ ಬಂಗಾರದ ಬೆಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಯಿತು. ಈ ವರ್ಷ ಮುಂಗಾರು ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆ ನಿರೀಕ್ಷಿತವಾಗಿ ಬೆಳೆಯಲಿಲ್ಲ. ಆಗಾಗ ಸುರಿದ ಮಳೆಯಿಂದ ಅಲ್ಪಸ್ವಲ್ಪ ಬೆಳೆ ಕೈಗೆ ಬಂದರೂ ಬಿಸಿಲಿನ ತಾಪಕ್ಕೆ ಸೊರಗಿತು. ಇಂತಹ ‘ದುಷ್ಕಾಳಿ’ ಪರಿಸ್ಥಿತಿಯಲ್ಲೂ ಬೆಳೆದಿರುವ ಸೋಯಾಬೀನ್‌ ಕಟಾವಿಗೆ ಇದೀಗ ಕೃಷಿ ಕಾರ್ಮಿಕರೇ ಸಿಗದೆ ರೈತರು ಪರದಾಡುವಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಪದೇಪದೇ ಕಾಡುತ್ತಿರುವ ಬರ ಮತ್ತು ಅತಿವೃಷ್ಟಿಯಿಂದ ಕೃಷಿಯಲ್ಲಿ ನಿರೀಕ್ಷಿತ ಆದಾಯ ಸಿಗದ ಹಿನ್ನೆಲೆಯಲ್ಲಿ ಅನೇಕ ಕೃಷಿ ಕಾರ್ಮಿಕರು ಹುಟ್ಟೂರು ತೊರೆದು ಹೈದರಾಬಾದ್‌, ಪುಣೆ, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗಿದ್ದಾರೆ. ಕುಟುಂಬದ ಬದುಕು ಕಟ್ಟಿಕೊಳ್ಳಲು ನಗರ ಪ್ರದೇಶಗಳಲ್ಲೇ ನೆಲೆಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ತೀವ್ರವಾಗಿದೆ. ಸ್ಥಳೀಯವಾಗಿ ಕಾರ್ಮಿಕರು ಸಿಗದ ಕಾರಣ ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತಂದು ಸೋಯಾಬೀನ್‌ ಕಟಾವು ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಈ ಬಾರಿ 2.17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾಬೀನ್‌ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಸೋಯಾಬೀನ್‌ ಅತ್ಯಧಿಕ ಪ್ರದೇಶದಲ್ಲಿ ಬೆಳೆಯಲಾಗಿದೆ. ಬಹುಶಃ ರಾಜ್ಯದಲ್ಲಿಯೇ ಹೆಚ್ಚು ಸೋಯಾಬೀನ್‌ ಬೆಳೆಯುವುದು ಬೀದರ್‌ ಜಿಲ್ಲೆಯಲ್ಲಿ ಎಂದರೂ ತಪ್ಪಾಗಲಾರದು. ಸೋಯಾ ಕಟಾವಿಗೆ ಬಂದಿದ್ದು, ಕಾರ್ಮಿಕರ ಕೊರತೆ ರೈತರ ಆತಂಕಕ್ಕೆ ಕಾರಣವಾಗಿದೆ.

ಸೆ.30ಕ್ಕೆ ಮುಂಗಾರು ಅವಧಿ ಮುಕ್ತಾಯಗೊಂಡಿದ್ದರೂ ಜಿಲ್ಲೆಯ ಬಹುತೇಕ ಕೆರೆ, ಕಟ್ಟೆ, ಬಾವಿಗಳು ಮೈದುಂಬಿಲ್ಲ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ ಶೇ.40ರಷ್ಟು ಮಳೆ ಕೊರತೆಯಾಗಿದೆ. ಕೆಲ ಗ್ರಾಮಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಅನೇಕ ಕಾರ್ಮಿಕರು ವಿಬಿ-ಜಿ ರಾಮ್‌ ಜಿ ಯೋಜನೆಯಡಿ ಕೆಲಸಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ಸ್ಥಳೀಯವಾಗಿ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ.

ರೈತರು ಅನಿವಾರ್ಯವಾಗಿ 20 ರಿಂದ 30 ಕಿ.ಮೀ. ದೂರದ ತೆಲಂಗಾಣದ ನಾರಾಯಣಖೇಡ, ಗಂಗಾವರ ಹಾಗೂ ಮಹಾರಾಷ್ಟ್ರದ ವಿವಿಧ ಗ್ರಾಮಗಳು ಮತ್ತು ತಾಂಡಾಗಳಿಂದ ಕೂಲಿ ಕಾರ್ಮಿಕರನ್ನು ಆಟೊ, ಟಂಟಂ, ಕ್ರೂಸರ್‌ ವಾಹನಗಳ ಮೂಲಕ ಕರೆತರುತ್ತಿದ್ದಾರೆ. ಕೆಲಸ ಮುಗಿದ ಬಳಿಕ ಅವರನ್ನು ಮತ್ತೆ ಅವರ ಊರುಗಳಿಗೆ ತಲುಪಿಸುವ ಜವಾಬ್ದಾರಿಯೂ ರೈತರದ್ದಾಗಿದೆ.

ಭೂಮಿ ಹದ ಮಾಡುವುದರಿಂದ ಹಿಡಿದು ಬಿತ್ತನೆ, ಔಷಧ ಸಿಂಪಡಣೆ ಹಾಗೂ ಕಟಾವಿನವರೆಗೆ ಕೃಷಿ ಚಟುವಟಿಕೆಗಳಲ್ಲಿ ಕಾರ್ಮಿಕರ ಕೊರತೆ ಮುಂದುವರಿದಿದೆ. ನೇಗಿಲು, ಬಿತ್ತನೆ ಹಾಗೂ ಔಷಧ ಸಿಂಪಡಣೆಗೆ ಟ್ರ್ಯಾಕ್ಟರ್‌ ಸೇರಿದಂತೆ ಯಂತ್ರೋಪಕರಣಗಳ ಬಳಕೆ ಹೆಚ್ಚಾದರೂ ಕಟಾವು ಮತ್ತಿತರ ಕೆಲಸಗಳಿಗೆ ಮಾನವಶ್ರಮ ಅನಿವಾರ್ಯವಾಗಿದೆ.

ಲಭ್ಯವಿರುವ ಕಾರ್ಮಿಕರು ತಾವು ಕೇಳಿದಷ್ಟು ಕೂಲಿ ನೀಡಿದರೆ ಮಾತ್ರ ಕೆಲಸಕ್ಕೆ ಬರುತ್ತಿದ್ದಾರೆ. ಸಮಸ್ಯೆ ತಪ್ಪಿಸಲು ಕೆಲ ರೈತರು ಕುಟುಂಬದ ಸದಸ್ಯರೇ ಸೇರಿಕೊಂಡು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅನಿವಾರ್ಯವಾದ ಸಂದರ್ಭದಲ್ಲಿ ದುಬಾರಿ ಕೂಲಿ ನೀಡಿ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದ್ದಾರೆ.

ಎಕರೆಗೆ ₹5-6 ಸಾವಿರ ಕೂಲಿ

ಒಂದು ಎಕರೆ ಸೋಯಾಬೀನ್‌ ಕಟಾವಿಗೆ ಪ್ರಸ್ತುತ ₹5 ಸಾವಿರದಿಂದ ₹6 ಸಾವಿರದವರೆಗೆ ಕೂಲಿ ನೀಡಬೇಕಾಗಿದೆ. ಹೊರ ಜಿಲ್ಲೆ ಅಥವಾ ರಾಜ್ಯದ ಗಡಿ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತರಲು ವಾಹನ ವ್ಯವಸ್ಥೆಗೆ ಹೆಚ್ಚುವರಿಯಾಗಿ ₹2 ಸಾವಿರದಿಂದ ₹3 ಸಾವಿರದವರೆಗೆ ಖರ್ಚಾಗುತ್ತಿದೆ. ಹೀಗಾಗಿ ಒಂದು ಎಕರೆ ಸೋಯಾಬೀನ್‌ ಕಟಾವಿಗೆ ರೈತರಿಗೆ ಒಟ್ಟಾರೆ ₹7ರಿಂದ ₹8 ಸಾವಿರದವರೆಗೆ ವೆಚ್ಚವಾಗುತ್ತಿದೆ.

ಈ ಹಿಂದೆ ದಿನಕ್ಕೆ ₹300-400 ಕೂಲಿ ಪಡೆದು ಕೃಷಿ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರ ಸಂಖ್ಯೆ ಈಗ ಗಣನೀಯವಾಗಿ ಕಡಿಮೆಯಾಗಿದೆ. ಕಾರ್ಮಿಕರ ಬೇಡಿಕೆ ಹೆಚ್ಚಿರುವುದರಿಂದ ‘ಹೆಚ್ಚು ಕೂಲಿ ಕೊಡುವವರ ಜಮೀನಿಗೆ ಮೊದಲು ಕೆಲಸ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

“ಪ್ರತಿಯೊಬ್ಬರೂ ಪ್ರತಿ ಎಕರೆಗೆ ಕನಿಷ್ಠ ₹20 ಸಾವಿರದವರೆಗೆ ಖರ್ಚು ಮಾಡಿದ್ದೇವೆ. ಉತ್ತಮ ಮಳೆಯಾಗಿದ್ದರೆ ಎಕರೆಗೆ 8ರಿಂದ 10 ಕ್ವಿಂಟಲ್‌ ಇಳುವರಿ ನಿರೀಕ್ಷೆ ಇತ್ತು. ಆದರೆ ಬಿತ್ತನೆಯಿಂದ ಇಲ್ಲಿಯವರೆಗೆ ಮಳೆ ಸರಿಯಾಗಿ ಬಂದಿಲ್ಲ. ಆಗಾಗ ಸುರಿದ ಮಳೆಯಿಂದ ಅಲ್ಪಸ್ವಲ್ಪ ಕಾಯಿ ಹಿಡಿದಿದ್ದರೂ ಈ ಬಾರಿ ಎಕರೆಗೆ 4ರಿಂದ 5 ಕ್ವಿಂಟಲ್‌ ಇಳುವರಿ ಬರುವುದು ಕಷ್ಟವಾಗಿದೆ. ಬೀಜ, ಗೊಬ್ಬರ, ಔಷಧಿಗೆ ಮಾಡಿದ ಖರ್ಚಿನ ಜೊತೆಗೆ ಈಗ ಕಟಾವಿಗೂ ದುಬಾರಿ ಹಣ ನೀಡಬೇಕಾಗಿದೆ. ರಾಶಿ ಯಂತ್ರದ ವೆಚ್ಚ ಮತ್ತು ಸಾಗಾಟ ಖರ್ಚು ಸೇರಿದರೆ ಬೆಳೆ ಮಾರಾಟ ಮಾಡಿದ ಬಳಿಕ ಕೈಯಲ್ಲಿ ಉಳಿಯುವುದು ಮತ್ತೆ ಸಾಲವೇ” ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

‘ಒಣ ಬರ’ದ ಆತಂಕ

ಬಾಹತ್ತಾರ್‌ ದುಷ್ಕಾಳಿ ನಾವರಾ ನೋಡಿಲ್ಲ ಖರೇ ನೋಡಿನೋರ ಹೇಳ್ತಾರ ಆಗ ಮಂದಿ ಭಾಳ ಹೈರಾಣಿ ಇತ್ತಂತೆ, ಉಳ್ಳಾಕ ಅನ್ನ, ನೀರ ಸಿಕ್ಕಿಲ್ಲ ಅಂತ. ಈಟು ಈಟು….ಮತಾ ಈಗ ಅಂತ್ಹದೇ ದುಷ್ಕಾಳಿ ಕಾಲ ಹೊಂಟುದ. ಹೋದ ವರ್ಷ ಹೆಚ್ಚಿಗಿ ಮಳಿ ಬಿದ್ದಿ ಬೆಳಿ ಎಲ್ಲ ಬರ್ಬಾದ್‌ ಆದುವ, ಈ ವರ್ಷ ಮಳಿ ಹೋಗಿ ಬೆಳಿ ಒಣಗಿ ಹೋದುವ. ಮಳಿ ಹೆಚ್ಚಿಗಿ ಬಿದ್ದೂರ ಕುಡಿಲಾಕ ನೀರು, ಮೇವು ಸಿಗ್ತುದ, ದನಕರು, ಮಂದಿಗಿ ತೋಲ್‌ ಹೈರಾಣ ಆಗಲ್ಲ. ಖರೇ ಮಳಿ ಬಿಳಲ್ದೆ ಬರಗಾಲ ಬಿದ್ದೂರ ಮಂದಿಗಿ ಅನ್ನ, ನೀರು ಸಿಗಲಾ ನೋಡ್ರೀ. ಈ ಹಸೀ ಬರ ಬೇಕು, ಖರೇ ಒಣ ಬರ ಬರಬಾರ್ದು. ಇಂತಹ ದುಷ್ಕಾಳಿದಾಗ ಗರೀಬ್ ಮಂದಿ ಜಿಂದಗಿ ಮಾಡದೇ ಭಾಳ‌ ಮಜ್ಬೂರ್‌ ಅದಾ ರೀ”…….ಎಂಬುದು ರೈತ ಸಮೂಹದ ಅಸಹಾಯಕತೆಯ ಮಾತುಗಳು.

2.83 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ಕಳೆದ ವರ್ಷ ಅಧಿಕ ಮಳೆಯಿಂದ ಪ್ರವಾಹ ಉಂಟಾಗಿ ಕೈಗೆ ಬಂದ ಬೆಳೆ ಹಾನಿಯಾಗಿತ್ತು. ಈ ವರ್ಷ ಮಳೆ ಕೊರತೆಯಿಂದ ಅನಾವೃಷ್ಟಿ ಎದುರಾಗಿದೆ. ಹೀಗಾಗಿ ‘ಹಸಿರು ಬರ–ಒಣ ಬರ’ದ ಹೊಡೆತದಿಂದ ರೈತರ ಕೃಷಿ ಆದಾಯವೇ ಬುಡಮೇಲಾಗಿದೆ.

ಕೃಷಿ ಇಲಾಖೆಯ ಪ್ರಕಾರ, ಈ ಬಾರಿ ಬೀದರ್‌ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 4.12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯ ನಡುವೆಯೂ 3.86 ಲಕ್ಷ ಹೆಕ್ಟೇರ್‌, ಅಂದರೆ ಶೇ.94ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ 2.17 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾಬೀನ್‌, 90,199 ಹೆಕ್ಟೇರ್‌ನಲ್ಲಿ ತೊಗರಿ, 11,127 ಹೆಕ್ಟೇರ್‌ನಲ್ಲಿ ಹೆಸರು ಹಾಗೂ 8,921 ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆಯಾಗಿದೆ.

ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಸೋಯಾಬೀನ್‌ 1.73 ಲಕ್ಷ ಹೆಕ್ಟೇರ್‌, ಉದ್ದು 8,921 ಹೆಕ್ಟೇರ್‌, ತೊಗರಿ 90,199 ಹೆಕ್ಟೇರ್‌, ಹೆಸರು 11,127 ಹೆಕ್ಟೇರ್‌ ಹಾಗೂ ತೋಟಗಾರಿಕೆ ಬೆಳೆ 195 ಹೆಕ್ಟೇರ್‌ ಸೇರಿದಂತೆ ಒಟ್ಟು 2,83,932 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

“ಮಳೆ ಅಭಾವದಿಂದ ಒಣ ಬರ ಸೃಷ್ಟಿಯಾಗಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಉದ್ದು, ಹೆಸರು, ತೊಗರಿ, ಸೋಯಾಬೀನ್‌ ಹಾಗೂ ತೋಟಗಾರಿಕೆ ಬೆಳೆ ಸೇರಿದಂತೆ ಒಟ್ಟು 2.83 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಗೀಡಾಗಿದೆ. ಸುಮಾರು ₹234 ಕೋಟಿ ಮೌಲ್ಯದ ಬೆಳೆ ಹಾನಿಯಾಗಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಬರ ಪಟ್ಟಿಗೆ ಸೇರಿವೆ, ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಬರುವುದಿಲ್ಲ” ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಅವರು ‘ಈದಿನ’ಕ್ಕೆ ತಿಳಿಸಿದ್ದಾರೆ.

ಕಟಾವು ಯಂತ್ರಗಳ ಬಳಕೆಗೆ ಒತ್ತು ಅಗತ್ಯ

ಸೋಯಾಬೀನ್‌ ಸೇರಿದಂತೆ ವಿವಿಧ ಬೆಳೆಗಳ ಕಟಾವಿಗೆ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳ ವ್ಯವಸ್ಥೆಯಿದೆ. ಆದರೆ ಯಂತ್ರಗಳ ಬಳಕೆಯಿಂದ ಇತರೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ರೈತರು ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿಲ್ಲ. ಸೋಯಾಬೀನ್‌ ಕಟಾವಿಗೆ ಕಾರ್ಮಿಕರ ಬಳಕೆಯೇ ಸೂಕ್ತ ಎಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಆಧುನಿಕ ಕೃಷಿ ಪದ್ಧತಿಗೆ ತಕ್ಕಂತೆ ಕಾರ್ಮಿಕರ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚವನ್ನು ತಗ್ಗಿಸಲು ಕಟಾವು ಯಂತ್ರೋಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ಹಾಗೂ ಸಬ್ಸಿಡಿ ದರದಲ್ಲಿ ರೈತರಿಗೆ ಒದಗಿಸಬೇಕಿದೆ. ಅಲ್ಲದೆ ವಿಬಿ-ಜಿ ರಾಮ್‌ ಜಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರನ್ನು ಕೃಷಿ ಚಟುವಟಿಕೆಗಳಿಗೂ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.

ಎಕರೆಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹ

ಮುಂಗಾರು ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಬೆಳೆಗಳ ಇಳುವರಿ ಕುಂಠಿತವಾಗಿದೆ. ಕೃಷಿಗಾಗಿ ಮಾಡಿದ ಖರ್ಚು ಕೂಡ ಮರಳುವುದು ಕಷ್ಟವಾಗಿದೆ. ಸಾಲ ಮಾಡಿ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

“ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿದೆ. ಆದರೆ ಸರ್ಕಾರ ನಿಗದಿಪಡಿಸಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಹಲವು ವರ್ಷಗಳ ಹಿಂದೆ ನಿಗದಿಪಡಿಸಿದ NDRF-SDRF ಮಾನದಂಡಗಳನ್ನು ಮರುಪರಿಷ್ಕರಿಸಬೇಕು. ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದರು.

ಇದನ್ನೂ ಓದಿ : ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಒಂದೆಡೆ ಇಳುವರಿ ಕುಂಠಿತವಾಗಿದ್ದರೆ, ಮತ್ತೊಂದೆಡೆ ಕಟಾವಿಗೂ ಕಾರ್ಮಿಕರು ಸಿಗದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಳೆ ಕೈಗೆ ಬಂದರೂ ಕಟಾವು ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ಜಿಲ್ಲೆಯ ಕೃಷಿ ವಲಯದ ಮುಂದಿರುವ ಹೊಸ ಸವಾಲಾಗಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...

ವಿಜಯಪುರ | ಮತದಾರರ ಹೆಸರಳಿಸಲು ನಕಲಿ ಮರಣ ಪ್ರಮಾಣಪತ್ರ ಬಳಕೆ; ತನಿಖೆಗೆ ಕಾಂಗ್ರೆಸ್ ಒತ್ತಾಯ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ...

2036ರ ಒಲಿಂಪಿಕ್ಸ್ ಆತಿಥ್ಯ: ಕಣದಲ್ಲಿರುವ 7 ರಾಷ್ಟ್ರಗಳಲ್ಲಿ ಭಾರತವೂ ಭಾಗಿ

2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಅಧಿಕೃತವಾಗಿ ಆಸಕ್ತಿ ತೋರಿರುವ ಏಳು...