ಆನ್ಲೈನ್ ಮೌಲ್ಯಮಾಪನ ಪೋರ್ಟಲ್ (OSM) ಹ್ಯಾಕ್ ಆಗಿರುವ ವಿಚಾರದಲ್ಲಿ ಸಿಬಿಎಸ್ಸಿ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದಿದ್ದು, ಪೋರ್ಟಲ್ನಲ್ಲಿ ಭದ್ರತಾ ಲೋಪಗಳಿರುವುದನ್ನು ಕೊನೆಗೂ ಒಪ್ಪಿಕೊಂಡಿದೆ. 19 ವರ್ಷದ ಎಥಿಕಲ್ ಹ್ಯಾಕರ್ ಒಬ್ಬರು ಸತತ ಎರಡು ಬಾರಿ ಪೋರ್ಟಲ್ ಅನ್ನು ಯಶಸ್ವಿಯಾಗಿ ಹ್ಯಾಕ್ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಂಡಳಿಯು, ಇದೀಗ ಸೈಬರ್ ಭದ್ರತಾ ತಜ್ಞರ ಮೊರೆಹೋಗಿದೆ.
ಕಳೆದ ವಾರವಷ್ಟೇ ಈ ಹ್ಯಾಕಿಂಗ್ ಆರೋಪಗಳನ್ನು ಸಿಬಿಎಸ್ಇ ಸಾರಾಸಗಟಾಗಿ ತಳ್ಳಿಹಾಕಿತ್ತು. ‘ಹ್ಯಾಕ್ ಆಗಿರುವ ಪೋರ್ಟಲ್ ಕೇವಲ ಪರೀಕ್ಷಾರ್ಥ (ಟೆಸ್ಟಿಂಗ್) ಸೈಟ್ ಆಗಿದ್ದು, ಅದರಲ್ಲಿ ಯಾವುದೇ ನೈಜ ಅಂಕಗಳು ಅಥವಾ ವಿದ್ಯಾರ್ಥಿಗಳ ಗೌಪ್ಯ ಮಾಹಿತಿಯಿಲ್ಲ’ ಎಂದು ಸ್ಪಷ್ಟನೆ ನೀಡಿತ್ತು. ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ತನ್ನ ಸೇವಾ ಪೂರೈಕೆದಾರರು ನಿರ್ವಹಿಸುತ್ತಿರುವ ‘ಆನ್ಮಾರ್ಕ್’ (OnMark) ಪೋರ್ಟಲ್ನಲ್ಲಿ ಲೋಪಗಳಿರುವುದನ್ನು ಭಾನುವಾರ ಮಂಡಳಿ ಬಹಿರಂಗವಾಗಿ ಒಪ್ಪಿಕೊಂಡಿದೆ.
ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು
ನಿಸರ್ಗ ಅಧಿಕಾರಿ ಎಂಬ 19 ವರ್ಷದ ಎಥಿಕಲ್ ಹ್ಯಾಕರ್ ಹಾಗೂ ವಿದ್ಯಾರ್ಥಿ, ಸಿಬಿಎಸ್ಇಯ ಆನ್-ಸ್ಕ್ರೀನ್ ಮೌಲ್ಯಮಾಪನ ವ್ಯವಸ್ಥೆಯಲ್ಲಿರುವ ಗಂಭೀರ ಭದ್ರತಾ ಲೋಪಗಳನ್ನು ಹೊರಹಾಕಿದ್ದರು. ಈ ಲೋಪಗಳನ್ನು ಬಳಸಿಕೊಂಡು ಮೌಲ್ಯಮಾಪಕರ ಖಾತೆಗಳನ್ನು ಅನಧಿಕೃತವಾಗಿ ಪ್ರವೇಶಿಸಲು ಮತ್ತು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಅಂಕಗಳನ್ನೇ ಬದಲಾಯಿಸಲು ಸಾಧ್ಯವಿದೆ ಎಂದು ಅವರು ಎಚ್ಚರಿಸಿದ್ದರು. ಇದಾದ ಬಳಿಕ ಮೌಲ್ಯಮಾಪನ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಸೈಬರ್ ಭದ್ರತೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಕಳವಳ ವ್ಯಕ್ತವಾಗಿತ್ತು.
ಈ ಬೆಳವಣಿಗೆಯ ನಂತರ ಎಚ್ಚೆತ್ತಿರುವ ಸಿಬಿಎಸ್ಇ, ಪ್ರಸ್ತುತ ಎದುರಾಗಿರುವ ಭದ್ರತಾ ಸವಾಲುಗಳನ್ನು ಸರಿಪಡಿಸಲು ವಿವಿಧ ಸರ್ಕಾರಿ ಏಜೆನ್ಸಿಗಳು ಮತ್ತು ಐಐಟಿಗಳ ಸೈಬರ್ ಭದ್ರತಾ ತಜ್ಞರ ತಂಡವನ್ನು ನಿಯೋಜಿಸಿದೆ. ಈ ತಜ್ಞರ ತಂಡವು ಮೌಲ್ಯಮಾಪನ ವ್ಯವಸ್ಥೆಯನ್ನು ಹೆಚ್ಚು ಸುಭದ್ರಗೊಳಿಸುವ ಹಾಗೂ ಸುರಕ್ಷಿತ ವೇದಿಕೆಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಮಂಡಳಿ ತಿಳಿಸಿದೆ. ಅಲ್ಲದೆ, ಇಂತಹ ಮಹತ್ವದ ಲೋಪಗಳನ್ನು ತಮ್ಮ ಗಮನಕ್ಕೆ ತಂದ ಎಥಿಕಲ್ ಹ್ಯಾಕರ್ಗಳು ಮತ್ತು ಜಾಗೃತ ನಾಗರಿಕರಿಗೆ ಮಂಡಳಿಯು ಇದೇ ವೇಳೆ ಕೃತಜ್ಞತೆ ಸಲ್ಲಿಸಿದೆ.




