ವಿವಾಹವಾದ ಕೇವಲ ಒಂದೂವರೆ ತಿಂಗಳಲ್ಲೇ 26 ವರ್ಷದ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್‌ನಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪತ್ನಿಯ ಮೇಲೆ ನಿರಂತರ ಕಣ್ಗಾವಲು ಇರಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರ ದೂರಿನ ಮೇರೆಗೆ, ಆಕೆಯ ವೈದ್ಯ ಪತಿ ಹಾಗೂ ಅತ್ತೆ-ಮೈದುನನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು 26 ವರ್ಷದ ವಿಶಾಖಾ ಟಿಲ್ಕರ್ ಎಂದು ಗುರುತಿಸಲಾಗಿದೆ. ಅವರು ಕಳೆದ ಏಪ್ರಿಲ್ 30 ರಂದು ಡಾ. ನಿತಿನ್ ಟಿಲ್ಕರ್ ಅವರನ್ನು ವಿವಾಹವಾಗಿದ್ದರು. ಮಂಗಳವಾರದಂದು (ಜೂನ್ 16) ವಿಶಾಖಾ ಅವರು ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತಳ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಶಿವಾಜಿನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ಡಾ. ನಿತಿನ್ ಟಿಲ್ಕರ್, ಅತ್ತೆ ಛಾಯಾ ಟಿಲ್ಕರ್ ಹಾಗೂ ಮೈದುನ ನಿನಾದ್ ಟಿಲ್ಕರ್ ಅವರನ್ನು ಬುಧವಾರ ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್‌ಗೆ ನುಂಗಲಾರದ ತುತ್ತು
ಮದುವೆಗೆ ಮುಂಚೆ ಉತ್ತಮವಾಗಿದ್ದ ಇವರ ಸಂಬಂಧ, ಮದುವೆಯಾದ ಬಳಿಕ ಸಂಪೂರ್ಣವಾಗಿ ಹದಗೆಟ್ಟಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ. ಮದುವೆಯಲ್ಲಿ ನೀಡಿದ ಉಡುಗೊರೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಆರೋಪಿಗಳು, ತವರು ಮನೆಯಿಂದ ಇನ್ನಷ್ಟು ನಗದು ಹಾಗೂ ಚಿನ್ನಾಭರಣ ತರುವಂತೆ ಆಕೆಯನ್ನು ಪೀಡಿಸುತ್ತಿದ್ದರು. ಇದಲ್ಲದೆ, ಪತ್ನಿಯ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡಲು ಪತಿ ಡಾ. ನಿತಿನ್ ಮನೆಯ ಒಳಗೆ ಹಾಗೂ ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದನು. ದಿನನಿತ್ಯದ ಚಟುವಟಿಕೆಗಳ ಬಗ್ಗೆ ಆಕೆಯನ್ನು ಸತತವಾಗಿ ಪ್ರಶ್ನಿಸಲಾಗುತ್ತಿತ್ತು ಮತ್ತು ನೆರೆಹೊರೆಯವರೊಂದಿಗೆ ಮಾತನಾಡಿದರೆ ದೈಹಿಕವಾಗಿ ಥಳಿಸಲಾಗುತ್ತಿತ್ತು. ಆತ್ಮಹತ್ಯೆಗೂ ಎರಡು ದಿನಗಳ ಮೊದಲು, ನೆರೆಯ ಮಹಿಳೆಯೊಂದಿಗೆ ಮಾತನಾಡಿದ್ದಕ್ಕಾಗಿ ಪತಿಯು ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಮೇಲಾಗುತ್ತಿರುವ ನಿರಂತರ ದೌರ್ಜನ್ಯ ಹಾಗೂ ಕಿರುಕುಳದ ಬಗ್ಗೆ ವಿಶಾಖಾ ಅವರು ತಮ್ಮ ತಾಯಿಗೆ ಮಾಹಿತಿ ನೀಡಿದ್ದರು. ಮಗಳ ಸಂಕಷ್ಟದ ಪರಿಸ್ಥಿತಿಯನ್ನು ಅರಿತ ಪೋಷಕರು ಆಕೆಯನ್ನು ತವರಿಗೆ ಕರೆತರಲು ನಿರ್ಧರಿಸಿದ್ದರು. ಆದರೆ, ಅವರು ಬಂದು ಕರೆದೊಯ್ಯುವ ಮುನ್ನವೇ ಮಂಗಳವಾರ ಆಕೆಯ ಸಾವಿನ ಸುದ್ದಿ ಅವರಿಗೆ ತಲುಪಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಾಜಿನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ರಮೇಶ್ ಪಾಟೀಲ್, “ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಆರೋಪಿ ಪತಿಯು ಪತ್ನಿಯ ಚಲನವಲನಗಳ ಮೇಲೆ ಕಣ್ಗಾವಲು ಇರಿಸಿದ್ದ ಎಂಬುದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತಳ ಕುಟುಂಬ ನೀಡಿದ ದೂರಿನ ಮೇರೆಗೆ ಪತಿ, ಅತ್ತೆ ಮತ್ತು ಮೈದುನನ ವಿರುದ್ಧ ಕ್ರೌರ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಮೂವರನ್ನೂ ಬಂಧಿಸಲಾಗಿದೆ,” ಎಂದು ತಿಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




