ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಧ್ಯ ಪ್ರಾಚ್ಯ ಬಿಕ್ಕಟ್ಟಿನಿಂದ ದೇಶದಲ್ಲಿ ಸೃಷ್ಟಿಯಾದ ಎಲ್‌ಪಿಜಿ ಅನಿಲ ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ರೀತಿಗೆ ಸಂಬಂಧಿಸಿದಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋವಿಡ್-19 ಸೋಂಕು ಹಬ್ಬಿದ ಸಂದರ್ಭದಲ್ಲಿ ಕೇಂದ್ರ ಸರಕಾರದ ನಿರ್ವಹಣೆಗೆ ಈ ಎಲ್‌ಪಿಜಿ ಬಿಕ್ಕಟ್ಟನ್ನು ರಾಹುಲ್ ಹೋಲಿಸಿದ್ದು, ಈ ಬಿಕ್ಕಟ್ಟಿನ ಹೊರೆಯನ್ನು ಬಡವರ ಮೇಲೆ ಕೇಂದ್ರ ಸರ್ಕಾರ ಹೇರುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಅಸ್ಸಾಂನಲ್ಲಿ ದ್ವೇಷದ ರಾಜಕಾರಣದ ನಡುವೆ ಸೌಹಾರ್ದದ ಗಾಳಿ: ಕಾಂಗ್ರೆಸ್ ಗೆಲ್ಲಿಸುವರೇ ಗೌರವ್?
ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್ ‘ಎಕ್ಸ್’ ಖಾತೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಬಿಟ್ಟು ಮಾಡಿ ಟೀಕಿಸಿದ ರಾಹುಲ್, “ನಾವು ಎಲ್‌ಪಿಜಿ ಬಿಕ್ಕಟ್ಟನ್ನು ಕೋವಿಡ್ ಅನ್ನು ನಿಭಾಯಿಸಿದ ರೀತಿಯಲ್ಲಿ ನಿಭಾಯಿಸುತ್ತೇವೆ ಎಂದು ಮೋದಿ ಜಿ ಹೇಳಿದ್ದಾರೆ. ನಿಜಕ್ಕೂ ಅವರು ಮಾಡಿದ್ದು ಅದನ್ನೇ. ಇಲ್ಲಿ ಕೂಡ ಕೋವಿಡ್‌ನಂತೆ ಸ್ಪಷ್ಟ ನೀತಿ ಇಲ್ಲ. ಭಾರೀ ಘೋಷಣೆಗಳನ್ನು ಮಾತ್ರ ಮಾಡಲಾಗಿದೆ. ಸಂಪೂರ್ಣ ಹೊರೆಯನ್ನು ಬಡವರ ಮೇಲೆ ಹೊರಿಸಲಾಗಿದೆ” ಎಂದು ಹೇಳಿದ್ದಾರೆ.
ದಿನಗೂಲಿ ಕಾರ್ಮಿಕರ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಗಮನ ಸೆಳೆದ ರಾಗಾ, ಪ್ರತಿದಿನ 500-800 ರೂ. ಗಳಿಸುವ ವಲಸೆ ಕಾರ್ಮಿಕರಿಗೆ ಅಡುಗೆ ಅನಿಲ ಕೈಗೆಟುಕುವುದಿಲ್ಲ. ಕಾರ್ಮಿಕನೊಬ್ಬ ರಾತ್ರಿ ಮನೆಗೆ ಮರಳಿದಾಗ ಸ್ಟೌ ಹೊತ್ತಿಸಲು ಕೂಡ ಆತನಲ್ಲಿ ಹಣ ಇರುವುದಿಲ್ಲ” ಎಂದು ಹೇಳಿದ್ದಾರೆ.
“ಇದರ ಪರಿಣಾಮದಿಂದ ಜನರು ನಗರವನ್ನು ತೊರೆಯುತ್ತಿದ್ದಾರೆ. ಹಳ್ಳಿಗಳಿಗೆ ಹಿಂದಿರುಗುತ್ತಿದ್ದಾರೆ. ಜವಳಿ ಕಾರ್ಖಾನೆ ಹಾಗೂ ಇತರ ಕಾರ್ಖಾನೆಗಳ ಬೆನ್ನೆಲುಬಾಗಿರುವ ಈ ಕಾರ್ಮಿಕರು ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ” ಎಂದು ಅವರು ತಿಳಿಸಿದ್ದಾರೆ.
ವ್ಯಾಪಕ ಆರ್ಥಿಕ ಸಂಕಷ್ಟ ಎದುರಾಗುವ ಬಗ್ಗೆ ಎಚ್ಚರಿಕೆ ನೀಡಿದ ರಾಹುಲ್ ಗಾಂಧಿ, “ಜವಳಿ ವಲಯ ಈಗಾಗಲೆ ಐಸಿಯುನಲ್ಲಿದೆ. ಉತ್ಪಾದನಾ ವಲಯ ಉಸಿರಾಡಲು ಕಷ್ಟ ಪಡುತ್ತಿದೆ. ಈ ಬಿಕ್ಕಟ್ಟು ಎಲ್ಲಿಂದ ಹುಟ್ಟಿಕೊಂಡಿದ್ದು, ಮಾತುಕತೆಯ ಸಂದರ್ಭದ ರಾಜತಾಂತ್ರಿಕ ಪ್ರಮಾದದಿಂದ. ಇಂದಿಗೂ ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.




