ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಮರುಕಳಿಸಿದ್ದು, ಬಿಷ್ಣುಪುರ ಜಿಲ್ಲೆಯಲ್ಲಿ ಶಂಕಿತ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿಗೆ ಇಬ್ಬರು ಎಳೆಯ ಮಕ್ಕಳು ದಾರುಣವಾಗಿ ಬಲಿಯಾಗಿದ್ದಾರೆ. ಘಟನೆಯಲ್ಲಿ ಮಕ್ಕಳ ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಮಂಗಳವಾರ (ಏಪ್ರಿಲ್ 7) ಮುಂಜಾನೆ 1 ಗಂಟೆಯ ಸುಮಾರಿಗೆ ರಾಜಧಾನಿ ಇಂಫಾಲದಿಂದ ಸುಮಾರು 46 ಕಿಲೋಮೀಟರ್ ದೂರದಲ್ಲಿರುವ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೊಂಗ್ಲಾವೊಬಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಾಗರಿಕರ ಮನೆಯೊಂದನ್ನು ಗುರಿಯಾಗಿಸಿ ಗುಡ್ಡಗಾಡು ಪ್ರದೇಶದಿಂದ ಶಂಕಿತ ಉಗ್ರರು ಉಡಾಯಿಸಿದ ರಾಕೆಟ್ ಮಾದರಿಯ ಸ್ಫೋಟಕವು ನೇರವಾಗಿ ಮಲಗುವ ಕೋಣೆಗೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ, ಗಾಢ ನಿದ್ದೆಯಲ್ಲಿದ್ದ 5 ವರ್ಷದ ಬಾಲಕ ಮತ್ತು ಆತನ 5 ತಿಂಗಳ ತಂಗಿ ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ತಾಯಿಯನ್ನು ಇಂಫಾಲದ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಓದಿದ್ದೀರಾ? ಮೈಬಣ್ಣದ ತಾರತಮ್ಯಕ್ಕೆ ಆಟದ ಮೂಲಕವೇ ಉತ್ತರ: ಅಂದು ಬಿಳಿಯರನ್ನೇ ಬೆರಗುಗೊಳಿಸಿದ್ದ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್
ಬಾಂಬ್ ಸ್ಫೋಟದ ತೀವ್ರತೆಗೆ ಮನೆಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಸುಮಾರು 3 ಕಿಲೋಮೀಟರ್‌ಗೂ ಅಧಿಕ ದೂರದಲ್ಲಿರುವ ಗುಡ್ಡಗಾಡು ಪ್ರದೇಶದಿಂದ ಈ ಸ್ಫೋಟಕವನ್ನು ಉಡಾಯಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಟ್ರೊಂಗ್ಲಾವೊಬಿ ಗ್ರಾಮವು ಚುರಾಚಂದ್‌ಪುರ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳ ಗಡಿಗೆ ಹೊಂದಿಕೊಂಡಿದ್ದು, ಈ ಹಿಂದೆಯೂ ಇಲ್ಲಿ ಹಲವು ಬಾರಿ ಗುಂಡಿನ ಚಕಮಕಿಗಳು ನಡೆದಿದ್ದವು. ಈ ಅಮಾನವೀಯ ಕೃತ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜ್ಯದ ಗೃಹ ಸಚಿವರು ತೀವ್ರವಾಗಿ ಖಂಡಿಸಿದ್ದಾರೆ.
ದಾಳಿಯ ಬೆನ್ನಲ್ಲೇ ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶ ಮಡುಗಟ್ಟಿದೆ. ಭದ್ರತಾ ವೈಫಲ್ಯವನ್ನು ಖಂಡಿಸಿ ರೊಚ್ಚಿಗೆದ್ದ ಸ್ಥಳೀಯರು ಮೊಯಿರಾಂಗ್ ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ವಾಹನ ಹಾಗೂ ಪೊಲೀಸ್ ಚೌಕಿಗೆ ಬೆಂಕಿ ಹಚ್ಚಿದ ಘಟನೆಯೂ ವರದಿಯಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಗುಡ್ಡಗಾಡು ಪ್ರದೇಶಗಳ ಗಡಿಭಾಗದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ಉಗ್ರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.




