ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಹೊಸ ಸೈನಿಕ ಶಾಲೆಗಳ ಯೋಜನೆ’ಯಡಿ ಅನುಮೋದನೆಗೊಂಡಿರುವ 40 ಶಾಲೆಗಳ ಪೈಕಿ ಬಹುಪಾಲು ಶಾಲೆಗಳ ಆಡಳಿತ ಮತ್ತು ನಿರ್ವಹಣೆಯನ್ನು ಆರೆಸ್ಸೆಸ್ ಅಂಗಸಂಸ್ಥೆಗಳು, ಬಿಜೆಪಿ ನಾಯಕರು ಹಾಗೂ ಅದಾನಿ ಸಮೂಹಕ್ಕೆ ನೀಡಲಾಗಿದೆ ಎಂಬ ಆಘಾತಕಾರಿ ವಿಚಾರ ಆರ್‌ಟಿಐ ಮೂಲಕ ಬಹಿರಂಗವಾಗಿದೆ. ‘ರಿಪೋರ್ಟರ್ಸ್ ಕಲೆಕ್ಟಿವ್’ ಎಂಬ ತನಿಖಾ ಸಂಸ್ಥೆ ಕಲೆಹಾಕಿದ ಈ ಮಹತ್ವದ ಮಾಹಿತಿಯು ದೇಶದ ರಕ್ಷಣಾ ವಲಯ, ಭದ್ರತೆ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ರಕ್ಷಣಾ ಸಚಿವಾಲಯ ಹೊಂದಿದೆ. ಹಿಂದಿನ ವ್ಯವಸ್ಥೆಯಲ್ಲಿ ಸೈನಿಕ ಶಾಲೆಗಳನ್ನು ರಕ್ಷಣಾ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಡೆಸುತ್ತಿದ್ದವು. ಆದರೆ, ನೂತನ ಯೋಜನೆಯಡಿ ಖಾಸಗಿ ಶಾಲೆಗಳು, ಎನ್‌ಜಿಒಗಳು ಮತ್ತು ಟ್ರಸ್ಟ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಸೇನಾ ತರಬೇತಿಯ ಖಾಸಗೀಕರಣಕ್ಕೆ ಹಾಗೂ ಹೊಸ ವ್ಯವಸ್ಥೆಗೆ ಇದು ಅಧಿಕೃತ ಮುನ್ನುಡಿ ಬರೆದಿದೆ.
ಆರ್‌ಟಿಐ ಅಡಿ ಲಭ್ಯವಾದ ಅಂಕಿ-ಅಂಶಗಳ ಪ್ರಕಾರ, ಒಪ್ಪಂದ ಮಾಡಿಕೊಳ್ಳಲಾದ 40 ಶಾಲೆಗಳ ಪೈಕಿ ಶೇಕಡಾ 62ರಷ್ಟು (ಅಂದರೆ 24ಕ್ಕೂ ಹೆಚ್ಚು) ಶಾಲೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಬೆಂಬಲಿತ ಸಂಸ್ಥೆಗಳು ಮತ್ತು ಆಡಳಿತಾರೂಢ ಬಿಜೆಪಿ ನಾಯಕರಿಗೆ ಸೇರಿದ ಎನ್‌ಜಿಒಗಳ ಪಾಲಾಗಿವೆ. ವಿಶೇಷವಾಗಿ ಆರೆಸ್ಸೆಸ್‌ನ ಶೈಕ್ಷಣಿಕ ವಿಭಾಗವಾದ ‘ವಿದ್ಯಾಭಾರತಿ’ ನಡೆಸುತ್ತಿರುವ ಅನೇಕ ಶಾಲೆಗಳು ಹಾಗೂ ಹಿಂದುತ್ವ ಸಿದ್ಧಾಂತದ ಹಿನ್ನೆಲೆಯುಳ್ಳ ಸಂಸ್ಥೆಗಳು ಇದರಲ್ಲಿ ಅತಿ ಹೆಚ್ಚು ಪಾಲು ಪಡೆದಿರುವುದು ದಾಖಲೆಗಳಿಂದ ಸ್ಪಷ್ಟವಾಗಿ ದೃಢಪಟ್ಟಿದೆ.
ಇದನ್ನು ಓದಿದ್ದೀರಾ? ಮೋದಿ ಸರ್ಕಾರದ ಡಿಲಿಮಿಟೇಷನ್ ದುಸ್ಸಾಹಸ: ಮ್ಯಾಜಿಕ್ ನಂಬರ್‌ಗಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ!
ಕೇವಲ ರಾಜಕೀಯ ಹಾಗೂ ಸೈದ್ಧಾಂತಿಕ ಹಿನ್ನೆಲೆಯುಳ್ಳವರಿಗಷ್ಟೇ ಅಲ್ಲದೆ, ದೇಶದ ಪ್ರಭಾವಿ ಬಂಡವಾಳಶಾಹಿ ಹಾಗೂ ಕಾರ್ಪೊರೇಟ್ ವಲಯಕ್ಕೂ ಮಿಲಿಟರಿ ಶಾಲೆಗಳ ಹೊಣೆಗಾರಿಕೆ ಒಲಿದಿದೆ. ಪ್ರಮುಖವಾಗಿ, ಆಂಧ್ರಪ್ರದೇಶದಲ್ಲಿರುವ ಅದಾನಿ ಸಮೂಹದ ಫೌಂಡೇಶನ್ ನಡೆಸುತ್ತಿರುವ ಖಾಸಗಿ ಶಾಲೆಗೂ (ಅದಾನಿ ವರ್ಲ್ಡ್ ಸ್ಕೂಲ್) ಹೊಸ ಸೈನಿಕ ಶಾಲೆಯ ಅಧಿಕೃತ ಮಾನ್ಯತೆ ನೀಡಲಾಗಿದೆ. ಇದು ರಕ್ಷಣಾ ವಲಯದ ಶೈಕ್ಷಣಿಕ ವ್ಯವಸ್ಥೆಯು ಕಾರ್ಪೊರೇಟೀಕರಣದತ್ತ ವಾಲುತ್ತಿರುವುದನ್ನು ಮತ್ತು ಶಿಕ್ಷಣದಲ್ಲಿ ಬಂಡವಾಳಶಾಹಿಗಳ ಪ್ರಭಾವವನ್ನು ಸ್ಪಷ್ಟವಾಗಿ ಎತ್ತಿತೋರಿಸುತ್ತಿದೆ.
ಈ ನೂತನ ಮಾನ್ಯತೆ ಪಡೆದ ಶಾಲೆಗಳಿಗೆ ಸೈನಿಕ ಶಾಲಾ ಸೊಸೈಟಿಯ (ಎಸ್ಎಸ್ಎಸ್) ಅಧಿಕೃತ ಬ್ರ್ಯಾಂಡ್ ಮತ್ತು ತರಬೇತಿ ಬೆಂಬಲ ಲಭ್ಯವಾಗಲಿದೆ. ಜೊತೆಗೆ, ಕೇಂದ್ರ ಸರ್ಕಾರವು ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಶುಲ್ಕದ ಶೇ.50ರಷ್ಟು (ಗರಿಷ್ಠ 40 ಸಾವಿರ ರೂ.ವರೆಗೆ) ಆರ್ಥಿಕ ನೆರವು ನೀಡುತ್ತದೆ. ಇದರಿಂದಾಗಿ ಈ ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿಗಳ ಅನುದಾನ ಹರಿಯಲಿದ್ದು, ಜೊತೆಗೆ ಸೇನಾ ತರಬೇತಿಯ ಅಧಿಕೃತತೆಯೂ ಸುಲಭವಾಗಿ ಸಿಗಲಿದೆ.
ಸಶಸ್ತ್ರ ಪಡೆಗಳಿಗೆ ಸೇರುವ ಯುವಕರನ್ನು ರೂಪಿಸುವಂತಹ ಪ್ರತಿಷ್ಠಿತ ಸೈನಿಕ ಶಾಲೆಗಳ ಆಡಳಿತವನ್ನು ನಿರ್ದಿಷ್ಟ ಸಿದ್ಧಾಂತ ಹೊಂದಿರುವ ಸಂಸ್ಥೆಗಳಿಗೆ ನೀಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದು ಭವಿಷ್ಯದಲ್ಲಿ ಭಾರತೀಯ ಸೇನೆ ಮತ್ತು ಸಶಸ್ತ್ರ ಪಡೆಗಳ ‘ಕೇಸರೀಕರಣ’ಕ್ಕೆ ನಾಂದಿ ಹಾಡಬಹುದು ಹಾಗೂ ಸೇನೆಯ ಜಾತ್ಯತೀತ, ಅಪಕ್ಷಪಾತ ಮತ್ತು ವೃತ್ತಿಪರ ಸ್ವರೂಪಕ್ಕೆ ಭಾರಿ ಧಕ್ಕೆ ತರಬಹುದು ಎಂದು ವಿರೋಧ ಪಕ್ಷಗಳು, ಶಿಕ್ಷಣ ತಜ್ಞರು ಮತ್ತು ನಿವೃತ್ತ ಸೇನಾಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.




