ರಾಜ್ಯ ಸರ್ಕಾರದಿಂದ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವೃದ್ದಾಪ್ಯ, ವಿಧವೆ ಹಾಗೂ ಅಂಗವಿಕಲ ಪಿಂಚಣಿ ಹಣ ಕೆಲ ತಿಂಗಳುಗಳಿಂದ ಬಾರದಿರುವ ಕಾರಣ ವಯಸ್ಸಾದ ವೃದ್ಧರು, ಅಸಹಾಯಕ ಮಹಿಳೆಯರು, ವಿಕಲಚೇತನರು ನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಹಾಗೂ ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕ ಶಿವರಾಜ ತಡಪಳ್ಳಿ ಆರೋಪಿಸಿದರು.
ಈ ಕುರಿತು ಬುಧವಾರ ಬೀದರ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ವೃದ್ದಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಫಲಾನುಭವಿಗಳ ಬ್ಯಾಂಕ್ ಹಾಗೂ ಅಂಚೆ ಖಾತೆಗಳಿಗೆ ಸಕಾಲದಲ್ಲಿ ಸಕಾಲಕ್ಕೆ ಜಮೆಯಾಗುತ್ತಿಲ್ಲ. ಇದರಿಂದ ಫಲಾನುಭವಿಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ತಹಸೀಲ್ದಾರ್, ಬ್ಯಾಂಕ್ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ದೂರಿದರು.
ಸರ್ಕಾರದ ಈ ಯೋಜನೆಗಳ ಮೇಲೆ ಸಾವಿರಾರು ಬಡ, ನಿರ್ಗತಿಕ ಕುಟುಂಬಗಳು ಅವಲಂಬಿತವಾಗಿದ್ದು, ಪ್ರತಿ ತಿಂಗಳು ಜಮೆಯಾಗುವ ಪಿಂಚಣಿ ಹಣವೇ ತಮ್ಮ ಬದುಕಿಗೆ ಆಧಾರವಾಗಿದೆ. ಆದರೆ ನಿಗದಿತ ಸಮಯಕ್ಕೆ ಮಸಾಶನ ಹಣ ಜಮೆಯಾಗದೇ ವಿಳಂಬ ಆಗುಗುತ್ತಿರುವುದರಿಂದ ಅಸಹಾಯಕರಾದ ಪಿಂಚಣಿದಾರರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮ: ಸಚಿವ ಈಶ್ವರ ಖಂಡ್ರೆ
ಫಲಾನುಭವಿಗಳ ಖಾತೆಗಳಿಗೆ ಮಾಸಿಕ ಪಿಂಚಣಿ ಹಣವನ್ನು ನಿಯಮಿತವಾಗಿ ಸಕಾಲದಲ್ಲಿ ಜಮೆಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಬಾಕಿ ಇರುವ ಎಲ್ಲಾ ಪಿಂಚಣಿಯನ್ನು ಕೂಡಲೇ ಬಿಡುಗಡೆಗೊಳಿಸಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪಿಂಚಣಿ ಹಣ ಬಿಡುಗಡೆಗೆ ನಿರ್ಲಕ್ಷ್ಯ ತೋರಿದರೆ ತಹಸೀಲ್ದಾರ್ ಕಚೇರಿ ಎದುರು ತಮಟೆ ಚಳವಳಿ ನಡೆಸಲಾಗುವುದು ಎಂದು ಶಿವರಾಜ ತಡಪಳ್ಳಿ ಎಚ್ಚರಿಕೆ ನೀಡಿದರು.




