ಗುರುವಾರ ಅಸ್ಸಾಂ, ಕೇರಳ ಮತ್ತು ಪುದುಚೆರಿಯಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ನಡೆದಿದ್ದು, ಜನರು ಬಿರುಸಿನಿಂದ ಮತದಾನ ಮಾಡಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಸಂಜೆ 5 ಗಂಟೆಯ ವೇಳೆಗೆ ಪುದುಚೆರಿಯಲ್ಲಿ ಶೇ.89.08 ಮತದಾನವಾಗಿದೆ. ಅಸ್ಸಾಂನಲ್ಲಿ ಶೇ.85.04 ಮತ್ತು ಕೇರಳದಲ್ಲಿ ಶೇ.77.38 ಮತದಾನವಾಗಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ.
ಕೇರಳದ ಎಲ್ಲ 140 ವಿಧಾನಸಭೆ ಕ್ಷೇತ್ರಗಳಿಗೆ ಸಂಜೆ 6 ಗಂಟೆಗೆ ಮತದಾನ ಮುಕ್ತಯವಾಗಿದೆ. ಮತದಾರರು ಸಮಯ ಮುಗಿಯುವವರೆಗೂ ತಮ್ಮ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತ್ತು. ಅದಾಗಲೇ ಸರತಿ ಸಾಲಿನಲ್ಲಿ ನಿಂತವರಿಗೆ ಟೋಕನ್‌ಗಳನ್ನು ನೀಡಿ, ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಕೇರಳದಲ್ಲಿ, 2021 ರ ವಿಧಾನಸಭಾ ಚುನಾವಣೆಯ ಮತದಾನಕ್ಕಿಂತ ಸ್ವಲ್ಪ ಅಧಿಕ ಮತದಾನವಾಗಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | Gen Z ಮತದಾರರೇ ನಿರ್ಣಾಯಕ: ‘ಸ್ವಿಂಗ್ ವೋಟರ್’ಗಳು ನಿರ್ಧಾರಕ
ಅಸ್ಸಾಂನಲ್ಲಿ 126 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 2.5 ಕೋಟಿಗೂ ಹೆಚ್ಚು ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ. ಈ ಪೈಕಿ ಶೇ.85.04ರಷ್ಟು ಮಂದಿ ಮತದಾನ ಮಾಡಿದ್ದಾರೆ. ಇನ್ನು ಪುದುಚೆರಿಯಲ್ಲಿ 30 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು 10,14,070 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಈ ಪೈಕಿ ಶೇ.89.08 ಮಂದಿ ಮತದಾನ ಮಾಡಿದ್ದಾರೆ.
ಇನ್ನುಳಿದಂತೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೂ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆಯಲಿದ್ದು ಒಟ್ಟು 152 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದ ಮತದಾನವು ಏಪ್ರಿಲ್ 29ರಂದು ಉಳಿದ 142 ಕ್ಷೇತ್ರಗಳಿಗೆ ನಡೆಯಲಿದೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮೇ 4ರಂದು ಮತ ಎಣಿಕೆ ನಡೆಯಲಿದೆ.




