ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ಯುವ ಮತದಾರರ ಒಲವು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಜೆನ್ ಝೀಗಳು ಕೇವಲ 'ಮತದಾರರಲ್ಲ', ಅವರು 'ಕಿಂಗ್ ಮೇಕರ್ಸ್' ಆಗಲಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆಗೆ ಇನ್ನು ಎರಡೇ ದಿನಗಳು ಬಾಕಿ ಉಳಿದಿವೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಈ ಚುನಾವಣೆಯಲ್ಲಿ ‘ಜೆನ್ ಝೀ’ (Gen Z) ಅಥವಾ ಯುವ ಮತದಾರರು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ. ಕೇರಳದ ಒಟ್ಟು ಸರಿಸುಮಾರು 2.7 ಕೋಟಿ ಮತದಾರರಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವವರು ಮತ್ತು 25 ವರ್ಷದೊಳಗಿನ ಯುವಕರ ಸಂಖ್ಯೆ ಗಮನಾರ್ಹ. ಮೊದಲ ಬಾರಿಗೆ 4,66,408 ಯುವಕರು ಮತದಾನ ಮಾಡಲು ಮುಂದಾಗಿದ್ದಾರೆ.
ಕೇರಳದಲ್ಲಿ ಕ್ಯಾಂಪಸ್ ರಾಜಕೀಯವು ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಭಾಗ. ಆದರೂ, ಈ ಹೊಸ ಮತದಾರರು ಭಿನ್ನವಾದ ಮನೋಧರ್ಮವನ್ನು ಹೊಂದಿರುವವರು. ಆಡಳಿತದಲ್ಲಿರುವ ಪಕ್ಷ, ವಿಪಕ್ಷಗಳ ಬಗ್ಗೆ ಜೆನ್ ಝೀಗಳಿಗೆ ಹೆಚ್ಚಿನ ಅರಿವಿದೆ. ಆದರೆ ಅವರು ತಮ್ಮ ಆಯ್ಕೆಯನ್ನು ಮಾತ್ರ ಖಾಸಗಿಯಾಗಿಯೇ ಇಟ್ಟುಕೊಳ್ಳುವವರು. ತಲೆಮಾರುಗಳಿಂದ ಯಾವುದೋ ಒಂದು ಪಕ್ಷಕ್ಕೆ ತಮ್ಮ ಕುಟುಂಬ ಬೆಂಬಲ ನೀಡುತ್ತಾ ಬಂದಿದ್ದರೂ ಜೆನ್ ಝೀಗಳು ‘ಸ್ವಿಂಗ್ ವೋಟರ್’ಗಳು. ಅಂದರೆ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅಥವಾ ಸಿದ್ಧಾಂತಕ್ಕೆ ಸ್ಥಿರವಾಗಿ ಬದ್ಧರಾಗಿರದ ಮತದಾರರು. ಪ್ರತಿ ಚುನಾವಣೆಯಲ್ಲಿಯೂ ಅಭ್ಯರ್ಥಿಯನ್ನು ನೋಡಿ, ಆಯಾ ಪಕ್ಷಗಳು ನೀಡುವ ಭರವಸೆಗಳನ್ನು ನೋಡಿ ತಮ್ಮ ನಿಲುವು ಬದಲಾಯಿಸಿಕೊಳ್ಳುವವರು. ಆದ್ದರಿಂದ ಕೇರಳದಲ್ಲಿ ಈ ಬಾರಿ ‘ಜೆನ್ ಝೀ’ಗಳ ಮತವೇ ನಿರ್ಧಾರಕ.
ಇದನ್ನು ಓದಿದ್ದೀರಾ? ವಿವಾದಗಳ ಗೊಚ್ಚೆಯಲ್ಲಿ ಸಿಲುಕಿರುವ ಕೇರಳ ಬಿಜೆಪಿ: ಮತ ಬ್ಯಾಂಕ್‌ಗಾಗಿ ತೊಳಲಾಟ
‘ನವ ಕೇರಳ’ ಯೋಜನೆ: ಯುವಕರ ಆಕರ್ಷಣೆ
ಆಡಳಿತಾರೂಢ ಎಲ್‌ಡಿಎಫ್ ಸಾಂಪ್ರದಾಯಿಕ ರಾಜಕೀಯ ಭಾಷಣಗಳಿಗಿಂತ ಹೆಚ್ಚಾಗಿ ತಂತ್ರಜ್ಞಾನ, ಉದ್ಯೋಗ ಮತ್ತು ಆಧುನಿಕ ಜೀವನಶೈಲಿಯ ಆಧಾರದ ಮೇಲೆ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಕೇರಳವನ್ನು ಕೇವಲ ಕೃಷಿ ಅಥವಾ ಪ್ರವಾಸೋದ್ಯಮಕ್ಕೆ ಸೀಮಿತಗೊಳಿಸದೆ, ‘ನವ ಕೇರಳ’ ಯೋಜನೆಯಡಿ ಐಟಿ, ಸ್ಟಾರ್ಟ್‌ಅಪ್ ಮತ್ತು ಹೈ-ಟೆಕ್ ಉದ್ಯೋಗಗಳ ಹಬ್ ಮಾಡಲು ಒತ್ತು ನೀಡುತ್ತಿದೆ. ಇದನ್ನು ತನ್ನ ಸಾಧನೆಯಾಗಿ ಬಿಂಬಿಸುತ್ತಿದೆ. ಪಿಂಚಣಿ ಹೆಚ್ಚಳ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕೆಳಹಂತದ ಯುವ ಸಮೂಹವನ್ನು ತನ್ನತ್ತ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಎಲ್‌ಡಿಎಫ್ ಈ ಬಾರಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಿದೆ. ಯುಡಿಎಫ್ ಆಡಳಿತಾವಧಿಯ ವೈಫಲ್ಯಗಳನ್ನು ಒಳಗೊಂಡ ‘ಇರುಂಡ ಕಾಲಂ’ (ಕತ್ತಲೆಯ ಕಾಲ) ಎಂಬ AI ಆಧಾರಿತ ವಿಡಿಯೋ ಸರಣಿಯನ್ನು ಬಿಡುಗಡೆ ಮಾಡಿ ಯುವಜನತೆಯಲ್ಲಿ ಚರ್ಚೆ ಹುಟ್ಟುಹಾಕಿದೆ. ಹಾಗೆಯೇ ಯುವಕರಿಗೆ ಹತ್ತಿರವಾಗಲು ಜನಪ್ರಿಯ ರಾಪರ್ (Rapper) ‘ವೇದನ್’ ಮೂಲಕ ಪ್ರಚಾರ ಗೀತೆಗಳನ್ನು ಹಾಡಿಸಿದೆ. ಸದ್ಯ ಇವು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿವೆ. ಇಂಟರ್‌ನೆಟ್ ಅನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ, ಬಡ ಕುಟುಂಬಗಳಿಗೆ ಉಚಿತ ಇಂಟರ್ನೆಟ್ ನೀಡುವ K-FON ಯೋಜನೆ ತಂದಿದೆ. ಇಂದು ಖಂಡಿತವಾಗಿಯೂ ಡಿಜಿಟಲ್ ಲೋಕದಲ್ಲೇ ಮುಳುಗಿರುವ ಜೆನ್ ಝೀ ಪೀಳಿಗೆಗೆ ಹತ್ತಿರವಾಗುವ ಪ್ರಯತ್ನ. ಹಾಗೆಯೇ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ, ಯುವಜನ ಸಂಘಟನೆ ಡಿವೈಎಫ್‌ಐನಲ್ಲಿ ಸಕ್ರಿಯರಾಗಿರುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿರುವುದೂ ಜೆನ್ ಝೀಗಳನ್ನು ಸೆಳೆಯುವ ತಂತ್ರ.
‘ಜೆನ್ ಝೀ’ಗಳನ್ನು ಸೆಳೆಯಲು ಯುಡಿಎಫ್ ಯತ್ನ
ಇನ್ನೊಂದೆಡೆ ಕಾಂಗ್ರೆಸ್ ಈ ಬಾರಿ ರಾಹುಲ್ ಗಾಂಧಿ ಅವರ ಪ್ರಭಾವ ಮತ್ತು ಯುವ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ ನೀಡುವ ಮೂಲಕ ಜೆನ್ ಝೀ ಮತದಾರರನ್ನು ಸೆಳೆಯುವ ಯತ್ನದಲ್ಲಿದೆ. ಅದಕ್ಕಾಗಿ ಯುಡಿಎಫ್ ತನ್ನ ಪ್ರಣಾಳಿಕೆಯಲ್ಲಿ ಯುವ ಉದ್ಯಮಿಗಳಿಗೆ ಬಡ್ಡಿ ರಹಿತ ಸಾಲ ಮತ್ತು ‘ಮಿಷನ್ ಸಮುದ್ರ’ದಂತಹ ಹೊಸ ಯೋಜನೆಗಳನ್ನು ಘೋಷಿಸುವ ಮೂಲಕ ಉದ್ಯೋಗಾಕಾಂಕ್ಷಿ ಯುವಕರನ್ನು ಆಕರ್ಷಿಸುವ ಯತ್ನ ಮಾಡಿದೆ. ‘ಇಂದಿರಾ ಗ್ಯಾರಂಟಿ’ ಮತ್ತು ‘ಡ್ರೀಮ್ ಪ್ರಾಜೆಕ್ಟ್’ ಮೂಲಕ ಯುವಜನತೆಯ ಮನಗೆಲ್ಲಲು ಪ್ರಯತ್ನಿಸುತ್ತಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಹಾಗೆಯೇ ಯುಡಿಎಫ್ ಈ ಬಾರಿ ಕೇವಲ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಳ್ಳದೆ, ಸೋಶಿಯಲ್ ಮೀಡಿಯಾ ವಾರ್ ರೂಮ್‌ಗಳ ಮೂಲಕ ‘ಬದಲಾವಣೆಗಾಗಿ ಯುವಜನತೆ’ ಎಂಬ ಘೋಷವಾಕ್ಯದೊಂದಿಗೆ ಪ್ರಚಾರ ಮಾಡುತ್ತಿದೆ. ಎಲ್‌ಡಿಎಫ್‌ನ ‘ನವ ಕೇರಳ’ಕ್ಕೆ ಪ್ರತಿಯಾಗಿ ಯುಡಿಎಫ್ ‘ಸುಭದ್ರ ಮತ್ತು ಉದ್ಯೋಗದಾಯಕ ಕೇರಳ’ದ ಭರವಸೆ ನೀಡುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಯುಡಿಎಫ್, ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವ ಯುವಕರಿಗೆ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ ನೀಡುವುದಾಗಿ ಭರವಸೆ ನೀಡಿದೆ. ಇದು ಸ್ಟಾರ್ಟ್‌ಅಪ್ ಕನಸು ಕಾಣುತ್ತಿರುವ ಜೆನ್ ಝೀ ಪೀಳಿಗೆಗೆ ದೊಡ್ಡ ಆಕರ್ಷಣೆಯಾಗುವ ಸಾಧ್ಯತೆಯಿದೆ. ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು 1,000 ರೂಪಾಯಿ ಆರ್ಥಿಕ ಸಹಾಯಧನ, ಕರ್ನಾಟಕದಂತೆ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಗಳನ್ನು ಯುಡಿಎಫ್ ಘೋಷಿಸಿದೆ.
‘ವಿಕಸಿತ ಕೇರಳ’ ಎಂಬ ಎನ್‌ಡಿಎ ತಂತ್ರ
ಈ ಬಾರಿ ಕೇರಳದಲ್ಲಿ ಪ್ರಬಲ ಮೂರನೇ ಶಕ್ತಿಯಾಗಲು ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಯತ್ನಿಸುತ್ತಿದೆ. ಯುವ ಮತದಾರರನ್ನು ಸೆಳೆಯಲು ‘ವಿಕಸಿತ ಕೇರಳ’ ಎಂಬ ಅಭಿವೃದ್ಧಿ ಅಜೆಂಡಾವನ್ನು ಮುಂದಿಟ್ಟಿದೆ. ಕೈಗಾರಿಕಾ ಹಬ್, ಇನ್ನೋವೇಶನ್ ಹಬ್, ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ, ಜೆನ್ ಝೀಗಳನ್ನು ಸೆಳೆಯುವ ಪದಪ್ರಯೋಗಗಳನ್ನು ಮಾಡುತ್ತಿದೆ.
ಕೇಂದ್ರ ಸಚಿವ ಮತ್ತು ನಟ ಸುರೇಶ್ ಗೋಪಿ ಮೂಲಕ ಜೆನ್ ಝೀ ಮತದಾರರನ್ನು ಸೆಳೆಯುವ ಯತ್ನ ನಡೆಸುತ್ತಿದೆ. ಎಲ್‌ಡಿಎಫ್ ಮತ್ತು ಯುಡಿಎಫ್ ಎರಡೂ ಮೈತ್ರಿಕೂಟಗಳು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಟೀಕೆಗಳನ್ನು ಪದೇ ಪದೇ ಮಾಡುತ್ತಿದೆ. ‘ಪಾರದರ್ಶಕ ಆಡಳಿತ’ ನೀಡುತ್ತೇವೆ ಎಂದು ಭರವಸೆ ನೀಡುತ್ತಿದೆ. ಎರಡೂ ರಂಗಗಳಿಂದ ಬೇಸತ್ತ ಯುವಕರಿಗೆ ನಾವು ಪರ್ಯಾಯ ಎಂದು ಬಿಂಬಿಸಲು ಯತ್ನಿಸುತ್ತಿದೆ. ಜತೆಗೆ ಕೋಮುದ್ವೇಷದ ಅಸ್ತ್ರವನ್ನೂ ಯುವಜನರ ನಡುವೆ ಹರಡುತ್ತಿದೆ.
ಆದರೆ ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ಯುವ ಮತದಾರರ ಒಲವು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಜೆನ್ ಝೀಗಳು ಕೇವಲ ‘ಮತದಾರರಲ್ಲ’, ಅವರು ‘ಕಿಂಗ್ ಮೇಕರ್ಸ್’ ಆಗಲಿದ್ದಾರೆ. ಜೆನ್ ಝೀ ಮತಗಳು ಉದ್ಯೋಗ, ತಂತ್ರಜ್ಞಾನ ಮತ್ತು ಪಾರದರ್ಶಕ ಆಡಳಿತ ನೀಡುವ ಭರವಸೆಯ ಮೇಲೆ ಕೇಂದ್ರಿತವಾಗಿದೆ. ಯುವಕರ ಈ ‘ಸ್ವಿಂಗ್ ವೋಟ್’ ಕೇರಳದ ಅಧಿಕಾರದ ಗದ್ದುಗೆ ಯಾರಿಗೆ ಸಿಗಬೇಕು ಎಂಬುದನ್ನು ನಿರ್ಧರಿಸಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



