ಸಿಜೆಪಿ ಚಳವಳಿ: ಭಾರತೀಯ ಮುಸ್ಲಿಂ ಸಮಾಜ ಕಲಿಯಬೇಕಾದ ಪಾಠವೇನು?

Date:

‘ಕಾಕ್ರೋಚ್ ಜನತಾ ಪಾರ್ಟಿ’ (CJP), ಜೆನ್‌ ಝೀ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಮುಸ್ಲಿಂ ಸಮುದಾಯದ ನಾಯಕತ್ವ ಮತ್ತು ಯುವಜನತೆಯ ಕುರಿತಾದ ಚರ್ಚೆಗಳು ರಾಜಕೀಯ ವಲಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಜಾಪ್ರಭುತ್ವದ ರಕ್ಷಣೆ ಮತ್ತು ನಾಗರಿಕ ಹೋರಾಟಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಸ್ವರೂಪದ ಕುರಿತು ಪ್ರಮುಖ ವಿಶ್ಲೇಷಣೆಯೊಂದು ಹೊರಬಿದ್ದಿದೆ.

- Advertisement -

ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್ ಅಹ್ಮದ್ ಅವರು ‘ದಿ ಮಿಲ್ಲಿ ಗೆಜೆಟ್’ ಪತ್ರಿಕೆಯಲ್ಲಿ ಬರೆದ ಲೇಖನವನ್ನು Scroll.in (https://scroll.in/article/1094576/what-the-cockroach-janta-party-protests-reveal-about-indian-muslim-leadership) ಪ್ರಕಟಿಸಿದೆ. ಆ ಲೇಖನದ ಅನುವಾದ ಇಲ್ಲಿದೆ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಕೆಲವು ದಿನಗಳ ಹಿಂದೆ ʼದಿ ಮಿಲ್ಲಿ ಗೆಜೆಟ್ʼ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ, ಭಾರತೀಯ ಮುಸ್ಲಿಮರು ಪ್ರತಿಯೊಂದು ಹೊಸ ಚಳವಳಿಯನ್ನೂ ಕೇವಲ ತಮ್ಮ ತಕ್ಷಣದ ಹಿತಾಸಕ್ತಿಗಳ ದೃಷ್ಟಿಯಿಂದ ಮಾತ್ರ ಮೌಲ್ಯಮಾಪನ ಮಾಡಬಾರದು ಎಂದು ನಾನು ವಾದಿಸಿದ್ದೆ. ನಮ್ಮ ಹಕ್ಕುಗಳಿಗೆ ಧಕ್ಕೆಯಾದಾಗ ಮಾತ್ರ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕೆಂದಲ್ಲ; ಅಧಿಕಾರದಲ್ಲಿರುವವರು ಜನರಿಗೆ ಜವಾಬ್ದಾರಿಯುತವಾಗಿರಬೇಕು ಎಂದು ನಾಗರಿಕರು ಒತ್ತಾಯಿಸುವ ಪ್ರತಿಯೊಂದು ಸಂದರ್ಭದಲ್ಲೂ ಪ್ರಜಾಪ್ರಭುತ್ವದ ಪರವಾಗಿ ನಿಲ್ಲುವುದು ಅಗತ್ಯ.

ಕೆಲವು ವಾರಗಳಿಂದ ‘ಕಾಕ್ರೋಚ್ ಜನತಾ ಪಾರ್ಟಿ’ ಚಳವಳಿಯ ಬೆಳವಣಿಗೆಯನ್ನು ನಾನು ಗಮನಿಸುತ್ತಿದ್ದೇನೆ. ಅದಕ್ಕಿಂತ ಹೆಚ್ಚಾಗಿ, ಈ ಚಳವಳಿಯ ಬಗ್ಗೆ ಮುಸ್ಲಿಂ ಸಮುದಾಯದ ಪ್ರತಿಕ್ರಿಯೆಯನ್ನೂ ಗಮನಿಸಿದ್ದೇನೆ. ಇದು ಸಾಮಾನ್ಯ ಮುಸ್ಲಿಮರ ಪ್ರತಿಕ್ರಿಯೆಯಲ್ಲ, ಸಮುದಾಯದ ನಾಯಕರೆಂದು ಗುರುತಿಸಲ್ಪಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಲುವು ಕೂಡ ಇದರಲ್ಲಿ ಸೇರಿದೆ. ಸಾಮಾನ್ಯವಾಗಿ ಇಂತಹ ಸ್ವಯಂಸ್ಫೂರ್ತ ಚಳವಳಿಗಳ ಸಂದರ್ಭದಲ್ಲಿ ಸಾಮಾನ್ಯ ಮುಸ್ಲಿಮರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಆದರೆ ಅನೇಕ ಸ್ಥಾಪಿತ ಮುಸ್ಲಿಂ ಸಂಘಟನೆಗಳು ಮತ್ತು ನಾಯಕರು ಎಚ್ಚರಿಕೆಯ ಹೆಜ್ಜೆಯನ್ನೇ ಇಡುತ್ತಾರೆ. ಕೆಲವರು ಬೆಳವಣಿಗೆಯನ್ನು ಕಾದು ನೋಡುತ್ತಾರೆ. ಕೆಲವರು ಟೀಕಿಸುತ್ತಾರೆ. ಇನ್ನು ಕೆಲವರು ಅದರಲ್ಲಿರುವ ಲೋಪದೋಷಗಳನ್ನು ಹುಡುಕುತ್ತಾರೆ. ಮತ್ತೂ ಕೆಲವರು ಅದರ ಹಿಂದೆ ಗುಪ್ತ ಉದ್ದೇಶಗಳಿರಬಹುದೇ ಎಂದು ಶಂಕಿಸುತ್ತಾರೆ. ಇನ್ನೂ ಕೆಲವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸುತ್ತಾರೆ.

ಈ ಸಂದೇಹವನ್ನು ಸಂಪೂರ್ಣವಾಗಿ ಅಸಮಂಜಸ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ದಶಕಗಳ ಕಾಲದ ಸರ್ಕಾರಿ ಕಣ್ಗಾವಲು, ಆಯ್ದ ವ್ಯಕ್ತಿಗಳ ವಿರುದ್ಧದ ಕಾನೂನು ಕ್ರಮಗಳು, ಮಾಧ್ಯಮಗಳಲ್ಲಿನ ಧರ್ಮಾಧಾರಿತ ಅಪಪ್ರಚಾರ, ಕೋಮು ಹಿಂಸಾಚಾರ ಮತ್ತು ಆಡಳಿತ ವ್ಯವಸ್ಥೆಯ ದುರ್ಬಳಕೆಗಳೆಲ್ಲವೂ ಮುಸ್ಲಿಂ ಸಮುದಾಯದಲ್ಲಿ ಸಹಜವಾದ ಎಚ್ಚರಿಕೆಯ ಮನೋಭಾವವನ್ನು ಬೆಳೆಸಿವೆ. ಒಂದೆರಡು ಘಟನೆಗಳಿಂದಲ್ಲ, ವರ್ಷಗಳ ಕಾಲ ಎದುರಿಸಿದ ಅನುಭವಗಳಿಂದಲೇ ಈ ಅಪನಂಬಿಕೆ ರೂಪುಗೊಂಡಿದೆ.

ಆದರೆ ‘ಕಾಕ್ರೋಚ್ ಜನತಾ ಪಾರ್ಟಿ’ ಬಗ್ಗೆ ವ್ಯಕ್ತವಾಗಿರುವ ಅನುಮಾನ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿ ರಾಜಕೀಯ ವಲಯದ ಹೊರಗಿನ ಅನೇಕ ರಾಜಕೀಯ ಹಾಗೂ ವೈಚಾರಿಕ ವಲಯಗಳಲ್ಲೂ ಇದೇ ರೀತಿಯ ಸಂದೇಹ ವ್ಯಕ್ತವಾಗಿದೆ. ಹಿರಿಯ ರಾಜಕೀಯ ವಿಶ್ಲೇಷಕರು, ನಾಗರಿಕ ಸಮಾಜದ ಕಾರ್ಯಕರ್ತರು ಮತ್ತು ವೀಕ್ಷಕರು, ಈ ಚಳವಳಿಯು 2014ರ ರಾಜಕೀಯ ಬದಲಾವಣೆಗೆ ಹಿನ್ನೆಲೆ ಸೃಷ್ಟಿಸಿತು ಎಂದು ಪರಿಗಣಿಸಲಾಗುವ ‘ಅನ್ನಾ ಆಂದೋಲನ’ದ ಹಾದಿಯನ್ನೇ ಹಿಡಿಯಬಹುದೇ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಆರಂಭಿಕ ಹಂತದಲ್ಲೇ ಈ ಚಳವಳಿಯ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಅದು ಬೇರೆ ಶಕ್ತಿಗಳ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು.

image 2026 07 28T183450538 Picsart AiImageEnhancer

ಕೆಲವು ಅನುಭವಿ ರಾಜಕೀಯ ವಿಶ್ಲೇಷಕರಿಗೆ ಈ ಚಳವಳಿಯ ಬಗ್ಗೆ ಅನುಮಾನ ಮೂಡಿರುವುದು ಸಹಜವೇ ಆಗಿತ್ತು. ಸ್ಕ್ರೋಲ್ ಸೇರಿದಂತೆ ಕೆಲವು ಮಾಧ್ಯಮಗಳು ಆರಂಭಿಕ ಹಂತದಲ್ಲೇ, ಈ ಚಳವಳಿಗೆ ಸ್ಪಷ್ಟವಾದ ಸೈದ್ಧಾಂತಿಕ ನೆಲೆ ಇದೆಯೇ, ಮುಂದಿನ ದಿನಗಳಲ್ಲಿ ಅದು ಇತರ ರಾಜಕೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗಳನ್ನು ಎತ್ತಿದ್ದವು. ಇಂತಹ ಆತಂಕಗಳು ಅಸಮಂಜಸವಾಗಿರಲಿಲ್ಲ. ಆದರೆ, ಒಂದು ಚಳವಳಿಯನ್ನು ವಿಮರ್ಶಾತ್ಮಕವಾಗಿ ಗಮನಿಸುವುದಕ್ಕೂ, ಅದರಿಂದ ಸಂಪೂರ್ಣವಾಗಿ ದೂರ ಉಳಿಯುವುದಕ್ಕೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಟೀಕೆ ಮತ್ತು ಪ್ರಶ್ನೆಗಳು ಪ್ರಜಾಪ್ರಭುತ್ವದ ಭಾಗವಾಗಬಹುದು; ಆದರೆ ಕೇವಲ ಅನುಮಾನಗಳ ಕಾರಣಕ್ಕೆ ಯಾವುದೇ ಪಾಲ್ಗೊಳ್ಳುವಿಕೆಯಿಂದ ದೂರ ಉಳಿಯುವುದು ಮತ್ತೊಂದು ದೃಷ್ಟಿಯ ವಿಷಯವಾದೀತು.

ಸರ್ಕಾರದ ದಬ್ಬಾಳಿಕೆಯ ಭಯ

ಸಮಾಜದ ಹಲವು ವರ್ಗಗಳಲ್ಲಿ ಸಂದೇಹ ಮತ್ತು ಪಾಲ್ಗೊಳ್ಳುವಿಕೆ ಎರಡೂ ಜೊತೆಯಾಗಿ ಸಾಗುತ್ತವೆ. ಜನರು ಚಳವಳಿಗಳನ್ನು ಪ್ರಶ್ನಿಸುತ್ತಾರೆ, ಟೀಕಿಸುತ್ತಾರೆ, ಚರ್ಚಿಸುತ್ತಾರೆ. ಆದರೆ ಅದೇ ವೇಳೆ ಅದರ ಭಾಗವಾಗಲೂ ಹಿಂಜರಿಯುವುದಿಲ್ಲ. ಆದರೆ ಮುಸ್ಲಿಂ ಸಮುದಾಯದ ಕೆಲವು ವಲಯಗಳಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ. ಸರ್ಕಾರದ ದಬ್ಬಾಳಿಕೆಯ ಅಪಾಯ ಕಡಿಮೆಯಾಗುವವರೆಗೆ ಯಾವುದೇ ಚಳವಳಿಯಿಂದ ದೂರವೇ ಉಳಿಯುವುದು, ಸಂದೇಹವನ್ನೇ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಕಾರಣವನ್ನಾಗಿ ಬಳಸಿಕೊಳ್ಳುವುದು ಸಾಮಾನ್ಯ ಪ್ರವೃತ್ತಿಯಾಗಿದೆ.

ಆದರೆ, ಸಾಮಾನ್ಯ ಮುಸ್ಲಿಮರ ಪ್ರತಿಕ್ರಿಯೆ ಇದಕ್ಕಿಂತ ಭಿನ್ನವಾಗಿತ್ತು. ಜೂನ್‌ 6ರಿಂದ ಜಂತರ್‌ ಮಂತರ್‌ನಲ್ಲಿ ಪ್ರತಿಭಟನಾಕಾರರಿಗೆ ಕುಡಿಯುವ ನೀರು ವಿತರಿಸಲು ಆರಂಭಿಸಿ, ಬಳಿಕ ಆಹಾರ ಹಾಗೂ ಇತರ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಗಾಜಿಯಾಬಾದ್‌ನ ಮುಹಮ್ಮದ್‌ ಜುನೈದ್‌ ಅವರಂತಹ ಅನೇಕರು ಚಳವಳಿಗೆ ಕೈಜೋಡಿಸಿದರು. ಆದರೆ ಇಂತಹ ಬೆಂಬಲ ವೈಯಕ್ತಿಕ ಅಪಾಯಗಳಿಂದ ಮುಕ್ತವಾಗಿರಲಿಲ್ಲ. ತಮ್ಮನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು, ಉತ್ತರ ಪ್ರದೇಶದಲ್ಲಿದ್ದ ತಮ್ಮ ಕುಟುಂಬವನ್ನೂ ಪೊಲೀಸರು ಕಿರುಕುಳಕ್ಕೆ ಒಳಪಡಿಸಿದ್ದರು ಎಂದು ಜುನೈದ್‌ ಆರೋಪಿಸಿದ್ದಾರೆ. ಇಂತಹ ಅನುಭವಗಳು, ಪ್ರಜಾಪ್ರಭುತ್ವದ ಚಳವಳಿಗಳಲ್ಲಿ ಭಾಗವಹಿಸುವುದು ಕೆಲವೊಮ್ಮೆ ವೈಯಕ್ತಿಕ ಹಾಗೂ ಕುಟುಂಬದ ಮಟ್ಟದಲ್ಲಿಯೂ ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎಂಬುದನ್ನು ತೋರಿಸುತ್ತವೆ.

ಸಮುದಾಯದ ಪ್ರಮುಖ ಸಂಘಟನೆಗಳು ಮತ್ತು ನಾಯಕರು ಈ ಚಳವಳಿಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದಿರುವುದು ಒಂದು ರೀತಿಯಲ್ಲಿ ಲಾಭಕರವೂ ಆಗಿರಬಹುದು. ಏಕೆಂದರೆ, ಪ್ರತಿಭಟನೆಯ ಮೂಲ ಪ್ರಶ್ನೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಅದನ್ನು ಕ್ಷಣಾರ್ಧದಲ್ಲೇ ಮತ್ತೊಂದು ಹಿಂದೂ-ಮುಸ್ಲಿಂ ವಿವಾದವನ್ನಾಗಿ ಬಿಂಬಿಸಲು ಸರ್ಕಾರಕ್ಕೆ ಸಿಗಬಹುದಾದ ಸುಲಭದ ಅವಕಾಶವನ್ನು ಇದು ತಪ್ಪಿಸಿತು. ಆದರೆ, ಇದನ್ನೇ ಸಂಘಟನೆಗಳು ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು ಎಂಬ ತೀರ್ಮಾನಕ್ಕೆ ಆಧಾರವಾಗಿಸಿಕೊಳ್ಳುವುದು ಸರಿಯಲ್ಲ.

ಯಾವುದೇ ಅರ್ಥಪೂರ್ಣ ಚಳವಳಿಯ ಆರಂಭ ಸುಲಭವಾಗಿರುವುದಿಲ್ಲ. ಯಶಸ್ಸಿನ ಭರವಸೆ ಮೂಡುವ ಮುನ್ನವೇ ಮುಂದೆ ಬರುವವರೇ ಅತಿದೊಡ್ಡ ಅಪಾಯಗಳನ್ನು ಎದುರಿಸುತ್ತಾರೆ. ನಂತರ ಚಳವಳಿಗೆ ವೇಗ ಸಿಕ್ಕ ಮೇಲೆ ಸೇರುವವರೂ ಅದರ ಯಶಸ್ಸಿನಲ್ಲಿ ಪಾಲುದಾರರಾಗುತ್ತಾರೆ. ಆದರೆ ಇತಿಹಾಸದ ಪುಟಗಳಲ್ಲಿ ಗುರುತು ಮೂಡಿಸುವವರು ಸಾಮಾನ್ಯವಾಗಿ ಮೊದಲ ಹೆಜ್ಜೆ ಇಡಲು ಧೈರ್ಯ ಮಾಡಿದವರೇ ಆಗಿರುತ್ತಾರೆ. ಅವರು ಯಶಸ್ಸಿನ ನಿರೀಕ್ಷೆಯೊಂದಿಗೆ ಅಲ್ಲ, ಒಂದು ನಂಬಿಕೆಯೊಂದಿಗೆ ಹೋರಾಟವನ್ನು ಆರಂಭಿಸುತ್ತಾರೆ. ಅದಕ್ಕಾಗಿಯೇ ಯಾವುದೇ ಚಳವಳಿಯ ದಿಕ್ಕು ಮತ್ತು ಭವಿಷ್ಯವನ್ನು ನಿರ್ಧರಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.

ಸಮುದಾಯಗಳಿಗೂ ಇದೇ ಮಾತು ಅನ್ವಯಿಸುತ್ತದೆ. ಯಶಸ್ಸು ಅನಿಶ್ಚಿತವಾಗಿರುವ ಹಂತದಲ್ಲೇ ತಮ್ಮ ಸಮಯ, ವಿಶ್ವಾಸಾರ್ಹತೆ ಮತ್ತು ಸಂಪನ್ಮೂಲಗಳನ್ನು ಹೂಡುವವರು ಕೆಲವೊಮ್ಮೆ ನಿರಾಶೆ, ಟೀಕೆ ಅಥವಾ ಪ್ರತೀಕಾರವನ್ನು ಎದುರಿಸಬೇಕಾಗಬಹುದು. ಆದರೆ ಹೊಸ ಸಾಧ್ಯತೆಗಳಿಗೆ ದಾರಿ ತೆರೆದು, ಚಳವಳಿಯ ದಿಕ್ಕನ್ನು ರೂಪಿಸುವ ಕೆಲಸವೂ ಅವರಿಂದಲೇ ಆಗುತ್ತದೆ. ಮತ್ತೊಂದೆಡೆ, ಫಲಿತಾಂಶ ಏನಾಗುತ್ತದೆ ಎಂಬುದು ಸ್ಪಷ್ಟವಾದ ನಂತರ ಮಾತ್ರ ಹೆಜ್ಜೆ ಇಡುವವರು ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಆ ಚಳವಳಿಯ ಸ್ವರೂಪ ಮತ್ತು ಭವಿಷ್ಯವನ್ನು ರೂಪಿಸುವ ಅವಕಾಶವನ್ನೂ ಕೈಚೆಲ್ಲುತ್ತಾರೆ.

ಕೆಲವೊಮ್ಮೆ ನಮ್ಮ ಸಮುದಾಯವು ಎಚ್ಚರಿಕೆಯನ್ನೇ ತನ್ನ ಶಾಶ್ವತ ರಕ್ಷಣಾ ತಂತ್ರವಾಗಿ ಸ್ವೀಕರಿಸಿಕೊಂಡಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ವರ್ಷಗಳ ಕಾಲದ ಸರ್ಕಾರಿ ದಬ್ಬಾಳಿಕೆ, ಕಣ್ಗಾವಲು ಮತ್ತು ಕಿರುಕುಳದ ಅನುಭವಗಳು, ಬದುಕುಳಿಯಬೇಕಾದರೆ ಎಲ್ಲದರಿಂದಲೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂಬ ಮನೋಭಾವವನ್ನು ಅನೇಕ ಹಿರಿಯ ನಾಯಕರಲ್ಲಿ ಬೆಳೆಸಿವೆ. ಆ ಮನಸ್ಥಿತಿಗೆ ಇತಿಹಾಸವೇ ಕಾರಣ ಎಂಬುದನ್ನು ಒಪ್ಪಲೇಬೇಕು. ಆದರೆ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಒಂದು ವಿಷಯ; ಅದನ್ನೇ ಭವಿಷ್ಯದ ಮಿತಿಯನ್ನಾಗಿ ಒಪ್ಪಿಕೊಳ್ಳುವುದು ಮತ್ತೊಂದು ವಿಷಯ. ಕಳೆದ ಅನುಭವಗಳು ನಮ್ಮನ್ನು ಎಚ್ಚರಗೊಳಿಸಬಹುದು, ಆದರೆ ಮುಂದಿನ ಹೆಜ್ಜೆ ಇಡುವ ಧೈರ್ಯವನ್ನೇ ಕಸಿದುಕೊಳ್ಳಬಾರದು.

ಯುವ ಮುಸ್ಲಿಮರು ಈ ವ್ಯತ್ಯಾಸವನ್ನು ಈಗ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಿರುವಂತೆ ಕಾಣುತ್ತದೆ. ಪ್ರತಿಯೊಂದು ಚಳವಳಿಯನ್ನೂ ಕೇವಲ “ಇದು ಮುಸ್ಲಿಮರಿಗೆ ನೇರವಾಗಿ ಸಂಬಂಧಿಸಿದ ವಿಷಯವೇ?” ಎಂಬ ಪ್ರಶ್ನೆಯ ಮೂಲಕ ನೋಡುವ ಪ್ರವೃತ್ತಿ ಅವರಲ್ಲಿ ಕಡಿಮೆಯಾಗುತ್ತಿದೆ. ಬದಲಿಗೆ, ಅದು ನ್ಯಾಯ, ಪ್ರಜಾಪ್ರಭುತ್ವದ ಜವಾಬ್ದಾರಿ, ಸಾರ್ವಜನಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ನಾಗರಿಕ ಹಕ್ಕುಗಳ ವಿಸ್ತರಣೆಗೆ ಸಂಬಂಧಿಸಿದ ವಿಚಾರವೇ ಎಂಬುದನ್ನು ಅವರು ಮುಖ್ಯವಾಗಿ ಪರಿಗಣಿಸುತ್ತಿದ್ದಾರೆ. ವಾಸ್ತವವಾಗಿ, ಇದು ಹೆಚ್ಚು ಆರೋಗ್ಯಕರ ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ಪ್ರತಿಬಿಂಬಿಸುವ ಪ್ರಶ್ನೆಯಾಗಿದೆ.

214693 xqtemdnqwp 1784967481 Picsart AiImageEnhancer

ಹಾಗಂತ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಟೀಕಿಸಬಾರದು ಎಂದಲ್ಲ. ಅದು ಯಾವುದೇ ಸ್ಥಾಪಿತ ರಾಜಕೀಯ ಪಕ್ಷವೂ ಅಲ್ಲ. ಸ್ಪಷ್ಟ ಸೈದ್ಧಾಂತಿಕ ಚೌಕಟ್ಟನ್ನು ಹೊಂದಿರುವ ಚಳವಳಿಯೂ ಅಲ್ಲ. ವೇಗವಾಗಿ ಬೆಳೆಯುವ ಯಾವುದೇ ಜನಾಂದೋಲನದಂತೆ, ಇದೂ ತಪ್ಪುಗಳನ್ನು ಮಾಡಬಹುದು, ಬೇರೆ ಶಕ್ತಿಗಳ ಪ್ರಭಾವಕ್ಕೆ ಒಳಗಾಗಬಹುದು ಅಥವಾ ತನ್ನೊಳಗೇ ವಿರೋಧಾಭಾಸಗಳನ್ನು ಬೆಳೆಸಿಕೊಳ್ಳಬಹುದು. ಇಂತಹ ಪ್ರಶ್ನೆಗಳು ಮತ್ತು ವಿಮರ್ಶೆಗಳು ಪ್ರಜಾಪ್ರಭುತ್ವದಲ್ಲಿ ಸಹಜವೇ. ಆದರೆ ಟೀಕೆ ಮತ್ತು ಎಚ್ಚರಿಕೆಯು ಸಂಪೂರ್ಣ ದೂರ ಉಳಿಯಲು ಕಾರಣವಾಗಬಾರದು. ಯಾವುದೇ ಚಳವಳಿಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಒಂದು ವಿಷಯವಾದರೆ, ಅದರಿಂದ ಸಂಪೂರ್ಣವಾಗಿ ಪಕ್ಕಕ್ಕೆ ಸರಿಯುವುದು ಮತ್ತೊಂದು ವಿಷಯ.

ಒಂದು ಚಳವಳಿಯನ್ನು ವಿಮರ್ಶಾತ್ಮಕವಾಗಿ ನೋಡುವುದು ಮತ್ತು ಅದರಿಂದ ಸಂಪೂರ್ಣವಾಗಿ ದೂರ ಉಳಿಯುವುದು ಎರಡೂ ಒಂದೇ ಅಲ್ಲ. ಹಾಗೆಯೇ, ಪ್ರತಿಯೊಂದು ಚಳವಳಿಯೂ ನಮ್ಮ ಎಲ್ಲಾ ಸೈದ್ಧಾಂತಿಕ ನಿರೀಕ್ಷೆಗಳನ್ನು ಪರಿಪೂರ್ಣವಾಗಿ ಪೂರೈಸಿದ ನಂತರವೇ ಅದರೊಂದಿಗೆ ಒಗ್ಗಟ್ಟು ಪ್ರದರ್ಶಿಸಬೇಕು ಎಂಬ ಮನೋಭಾವವೂ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ. ಭಾರತೀಯ ಮುಸ್ಲಿಮರ ಮುಂದಿರುವ ನಿಜವಾದ ಪ್ರಶ್ನೆಯೆಂದರೆ, ಒಂದು ಚಳವಳಿಯ ಪ್ರತಿಯೊಂದು ಬೇಡಿಕೆಯೂ ನಮ್ಮ ಸಮುದಾಯದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆಯೇ ಎಂಬುದಲ್ಲ. ಬದಲಾಗಿ, ಭಾರತದ ಪ್ರಜಾಪ್ರಭುತ್ವದ ಭವಿಷ್ಯವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸುತ್ತೇವೆಯೇ, ಅಥವಾ ಯಾವಾಗಲೂ ಸುರಕ್ಷಿತ ಅಂತರದಲ್ಲಿ ನಿಂತು, ಎಂದಿಗೂ ಬಾರದ ಆಹ್ವಾನಕ್ಕಾಗಿ ಕಾಯುವ ಪ್ರೇಕ್ಷಕರಾಗಿಯೇ ಉಳಿಯುತ್ತೇವೆಯೇ ಎಂಬುದೇ ಮುಖ್ಯವಾದ ಪ್ರಶ್ನೆಯಾಗಿದೆ.

ಪ್ರಜಾಪ್ರಭುತ್ವದ ರಕ್ಷಣೆ

ಸಮುದಾಯಗಳು ಕೇವಲ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದರಿಂದ ಮಾತ್ರ ಸಮಾಜದಲ್ಲಿ ಪ್ರಭಾವ ಗಳಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೂಲ ಮೌಲ್ಯಗಳೇ ಸವಾಲಿನಲ್ಲಿದ್ದಾಗ ಅವುಗಳ ಪರವಾಗಿ ಧ್ವನಿ ಎತ್ತುವ ಮೂಲಕವೂ ತಮ್ಮ ಪಾತ್ರವನ್ನು ಸಾಬೀತುಪಡಿಸಬೇಕು. ಅದಕ್ಕೆ ವಿವೇಚನೆಯ ಜೊತೆಗೆ ಧೈರ್ಯವೂ ಬೇಕು. ಯಶಸ್ಸು ಖಚಿತವಾಗುವವರೆಗೂ ಕಾಯದೆ, ಸರಿಯಾದ ಸಮಯದಲ್ಲಿ ಸರಿಯಾದ ಕಾರಣಕ್ಕಾಗಿ ಮುಂದೆ ಬರುವ ಮನೋಭಾವವೂ ಅಗತ್ಯ.

ಇದನ್ನೂ ಓದಿ: ರಾಮಮಂದಿರದ ದೇಣಿಗೆಯನ್ನೇ ರಕ್ಷಿಸಲು ಆಗದವರು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆವರೇ?: ಅಖಿಲೇಶ್ ಯಾದವ್

ಭಾರತೀಯ ಮುಸ್ಲಿಮರು ಎದುರಿಸುತ್ತಿರುವ ಸವಾಲುಗಳು ಕಡಿಮೆಯಾಗಿವೆ ಎಂದು ನಾನು ಹೇಳುತ್ತಿಲ್ಲ. ಆದರೂ ನನಗೆ ಆಶಾವಾದವಿದೆ. ಏಕೆಂದರೆ ಹೊಸ ತಲೆಮಾರಿನ ಮುಸ್ಲಿಮರು ಚಳವಳಿಗಳ ಮೇಲೆ ತಮ್ಮ ಒಡೆತನ ಸ್ಥಾಪಿಸುವುದಕ್ಕಿಂತ, ಪ್ರಜಾಪ್ರಭುತ್ವವನ್ನು ಬಲಪಡಿಸುವುದರತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಹೋರಾಟದ ಶ್ರೇಯಸ್ಸು ಯಾರಿಗೆ ಸಿಗುತ್ತದೆ ಎಂಬುದಕ್ಕಿಂತ, ಸಮಾಜಕ್ಕೆ ಒಳಿತಾಗುವ ಒಂದು ಪ್ರಯತ್ನ ಯಶಸ್ವಿಯಾಗುತ್ತದೆಯೇ ಎಂಬುದರ ಬಗ್ಗೆ ಅವರ ಕಾಳಜಿ ಹೆಚ್ಚಾಗಿದೆ. ಇದೇ ದೃಷ್ಟಿಕೋನವೇ ಭವಿಷ್ಯದ ಭಾರತದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುವ ಭರವಸೆಯನ್ನು ಮೂಡಿಸುತ್ತದೆ.

ಈಗ ಸಮುದಾಯದ ಹಿರಿಯ ನಾಯಕತ್ವದ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯಿದೆ. ಅನುಭವ ಹೊಂದಿರುವುದಷ್ಟೇ ನಾಯಕತ್ವದ ಮಾನದಂಡವಾಗುವುದಿಲ್ಲ. ಬದಲಾಗುತ್ತಿರುವ ಕಾಲದ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವುದು, ಹೊಸ ತಲೆಮಾರಿಗೆ ಜವಾಬ್ದಾರಿಯುತವಾಗಿ ಅಪಾಯಗಳನ್ನು ಎದುರಿಸುವ ಧೈರ್ಯ ತುಂಬುವುದು ಮತ್ತು ಅವರು ಎದುರಿಸಲಿರುವ ಹೊಸ ಸವಾಲುಗಳಿಗೆ ಸಿದ್ಧಗೊಳಿಸುವುದೇ ನಿಜವಾದ ನಾಯಕತ್ವದ ಲಕ್ಷಣ. ಪ್ರತಿ ಪೀಳಿಗೆಯೂ ತನ್ನದೇ ಆದ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶಗಳನ್ನು ಎದುರಿಸುತ್ತದೆ. ಆದ್ದರಿಂದ ಹಳೆಯ ಅನುಭವಗಳು ಹೊಸ ಕಾಲಕ್ಕೆ ದಾರಿದೀಪವಾಗಬೇಕು, ಹೊರೆಯಾಗಿ ಪರಿಣಮಿಸಬಾರದು.

ಅನುಭವವು ಭವಿಷ್ಯಕ್ಕೆ ಸೇತುವೆಯಾಗಬೇಕೇ ಹೊರತು, ಮುಂದಿನ ಪೀಳಿಗೆಯು ಆತ್ಮವಿಶ್ವಾಸದಿಂದ ಮುಂದೆ ಸಾಗುವುದನ್ನು ತಡೆಯುವ ಗೋಡೆಯಾಗಬಾರದು.

ಬಹುಶಃ ಇದೇ ‘ಕಾಕ್ರೋಚ್ ಜನತಾ ಪಾರ್ಟಿ’ ಚಳವಳಿ ನಮಗೆ ಕಲಿಸಿದ ದೊಡ್ಡ ಪಾಠ. ಅದು ಕೇವಲ ಒಂದು ರಾಜಕೀಯ ಚಳವಳಿಯ ಪಾಠವಲ್ಲ; ಸಮುದಾಯವನ್ನು ಸುರಕ್ಷಿತವಾಗಿಡುವ ಎಚ್ಚರಿಕೆ ಮತ್ತು ಅದೇ ಎಚ್ಚರಿಕೆ ಕಾಲಕ್ರಮೇಣ ಸಮುದಾಯವನ್ನು ಸೀಮಿತಗೊಳಿಸುವ ಭಯವಾಗಿ ಹೇಗೆ ಬದಲಾಗಬಹುದು ಎಂಬುದರ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಈ ಚಳವಳಿ ನಮ್ಮ ಮುಂದಿಟ್ಟಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಮೆರಾ ಆಫ್ ಆಗಿದೆ ಎಂದುಕೊಂಡು ಇಸ್ರೇಲ್ ನೀತಿ ಟೀಕೆ; ಲೈವ್ ಪ್ರಸಾರ ತಿಳಿದು ದಂಗಾದ ನಟಿ!

ದೇಶದ ನೀತಿಗಳ ಬಗ್ಗೆ ಸ್ವತಃ ಇಸ್ರೇಲ್‌ನಲ್ಲೇ ವಿರೋಧಿ ಧ್ವನಿಗಳು ಕೇಳಿಬರುತ್ತಿರುವುದು ತಿಳಿದೇ...

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...