ಜಾರಿ ನಿರ್ದೇಶನಾಲಯ (ಇಡಿ) ಕೋರಿದೆ ಎಂದಮಾತ್ರಕ್ಕೆ ತಕ್ಷಣವೇ ಎಫ್‌ಐಆರ್ ನೋಂದಾಯಿಸಲು ಸಾಧ್ಯವಿಲ್ಲ. ಶಾಸನಬದ್ಧ ನಿಯಮಗಳು ಹಾಗೂ ಸುಪ್ರೀಂ ಕೋರ್ಟ್ ಮಾರ್ಗದರ್ಶನಗಳ ಪ್ರಕಾರವೇ ಮುಂದುವರಿಯಬೇಕಾಗುತ್ತದೆ ಎಂದು ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಸ್ಪಷ್ಟಪಡಿಸಿದ್ದಾರೆ.
ಬಹುಚರ್ಚಿತ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಅಕ್ರಮ ಹಣಕಾಸು ವರ್ಗಾವಣೆ ಹಾಗೂ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಮುಖ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಇದನ್ನೂ ಓದಿ: ಕೇರಳವನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ
ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. (ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಸಂಸ್ಥೆಯ ಮಾಲೀಕರು) ಹಾಗೂ ಅವರ ಅಳಿಯ ಪಿ.ಎ. ಮಹಮ್ಮದ್ ರಿಯಾಸ್ ಸೇರಿದಂತೆ 13 ಘಟಕಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಇಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿತ್ತು. ಈ ವರದಿಯನ್ನು ಗೃಹ ಸಚಿವಾಲಯವು ಪರಿಶೀಲನೆಗಾಗಿ ರಾಜ್ಯದ ಅಡ್ವೊಕೇಟ್ ಜನರಲ್‌ಗೆ (ಎಜಿ) ಕಳುಹಿಸಿಕೊಟ್ಟಿತ್ತು.
This video cannot be played in your browser. Open the video directly
ಅಡ್ವೊಕೇಟ್ ಜನರಲ್ ನೀಡಿರುವ ಕಾನೂನು ಸಲಹೆಯ ಪ್ರಕಾರ, ಪಿಎಮ್‌ಎಲ್‌ಎ ಕಾಯ್ದೆಯ ಸೆಕ್ಷನ್ 66(2) ಮತ್ತು ಸುಪ್ರೀಂ ಕೋರ್ಟ್‌ನ ಪ್ರಸಿದ್ಧ ‘ಲಲಿತಾ ಕುಮಾರಿ’ ತೀರ್ಪನ್ನು ಉಲ್ಲೇಖಿಸಲಾಗಿದೆ. ಯಾವುದೇ ದೂರಿನಲ್ಲಿ ತಕ್ಷಣವೇ ಸಂಜ್ಞೇಯ ಅಪರಾಧ ಸ್ಪಷ್ಟವಾಗದಿದ್ದಲ್ಲಿ, ನೇರ ಎಫ್‌ಐಆರ್ ಬದಲು ಪ್ರಾಥಮಿಕ ತನಿಖೆ ನಡೆಸುವುದು ಕಡ್ಡಾಯ. ಹೀಗಾಗಿ, ಇಡಿ ನೀಡಿದ ವರದಿಯನ್ನಾಧರಿಸಿ ಎಫ್‌ಐಆರ್ ನೋಂದಾಯಿಸುವ ಮುನ್ನ ಪ್ರಾಥಮಿಕ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ನಿರ್ದೇಶಿಸಲಾಗಿದೆ.
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ನಂತರ, ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ರಾಜ್ಯ ಪೊಲೀಸ್‌ನ ಕ್ರೈಮ್ ಬ್ರಾಂಚ್ ವಿಭಾಗಕ್ಕೆ ವಹಿಸಲು ನಿರ್ಧರಿಸಲಾಗಿದೆ. “ನಾವು ಯಾರನ್ನೂ ರಕ್ಷಿಸುವ ಅಥವಾ ತರಾತುರಿಯಲ್ಲಿ ಅಕ್ರಮ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿಲ್ಲ. ನ್ಯಾಯಾಂಗ ನಿಯಮಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿಯುವುದು ಸರ್ಕಾರದ ಕರ್ತವ್ಯ” ಎಂದು ಸಚಿವರು ಪ್ರತಿಪಾದಿಸಿದ್ದಾರೆ.
ಸಿಎಂಆರ್‌ಎಲ್ ಸಂಸ್ಥೆಯು ಯಾವುದೇ ಐಟಿ ಸೇವೆಗಳನ್ನು ಪಡೆಯದೆಯೇ ವೀಣಾ ಅವರ ಎಕ್ಸಾಲಾಜಿಕ್ ಸಂಸ್ಥೆಗೆ ₹2.78 ಕೋಟಿ ಹಣವನ್ನು ಅಕ್ರಮವಾಗಿ ಪಾವತಿಸಿದೆ ಎಂಬ ಆರೋಪವಿದೆ. ಇದಲ್ಲದೆ, ಒಟ್ಟು ₹3.28 ಕೋಟಿಗೂ ಅಧಿಕ ಲಂಚದ ಹಣ ಹವಾಲಾ ಮಾರ್ಗವಾಗಿ ವಿದೇಶಕ್ಕೆ ರವಾನೆಯಾಗಿದೆ ಎಂಬ ಗಂಭೀರ ಆರೋಪಗಳನ್ನು ಇಡಿ ಮಾಡಿದೆ. ಈ ಪ್ರಕರಣದ ಕುರಿತು ಗಂಭೀರ ವಂಚನೆಗಳ ತನಿಖಾ ಕಚೇರಿ (SFIO) ಹಾಗೂ ಆದಾಯ ತೆರಿಗೆ ಇಲಾಖೆಗಳು ಸಹ ತನಿಖೆ ನಡೆಸಿವೆ.





