ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕೊತ್ತಾಯ ಮಂಡಿಸಲು ಹೋದ ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರಳೇಕರ್ ಅವರು ಸತತ ಎರಡನೇ ದಿನವೂ ನಿರಾಸೆ ಮೂಡಿಸಿದ್ದಾರೆ. “ಬಹುಮತ ಸಾಬೀತುಪಡಿಸಲು ಅಗತ್ಯವಿರುವ 118 ಶಾಸಕರ ಸಹಿಗಳೊಂದಿಗೆ ಬನ್ನಿ” ಎಂದು ಸ್ಪಷ್ಟವಾಗಿ ಸೂಚಿಸಿ ರಾಜ್ಯಪಾಲರು ಜೋಸೆಫ್ ವಿಜಯ್ ಅವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ, ವಿಜಯ್ ಅವರು ಇಂದು(ಮೇ.7) ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದರು. ಆದರೆ, ರಾಜ್ಯಪಾಲರು ಮಾತ್ರ ನಿರ್ದಿಷ್ಟ ಅಂಕಿಅಂಶವಾದ ‘118’ ಶಾಸಕರ ಸಹಿಗಳುಳ್ಳ ಬೆಂಬಲ ಪತ್ರವನ್ನು ಹಾಜರುಪಡಿಸುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಮ್ಮ ಹಿಂದಿನ ಮಾತನ್ನೇ ತಿಳಿಸಿದ್ದಾರೆ. ರಾಜ್ಯಪಾಲರು ವಿಜಯ್ ಅವರ ಮನವಿಯನ್ನು ಈ ರೀತಿ ತಿರಸ್ಕರಿಸಿ ವಾಪಸ್ ಕಳುಹಿಸುತ್ತಿರುವುದು ಇದು ಸತತ ಎರಡನೇ ದಿನವಾಗಿದೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118. ರಾಜ್ಯ ರಾಜಕೀಯದಲ್ಲಿ ಇದು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ವಿಜಯ್ ಅವರ ರಾಜಕೀಯ ನಡೆ ಏನಿರಲಿದೆ ಎಂಬುದು ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ.




