ಡಾಲರ್ ಎದುರು ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿಯುತ್ತಿದೆ. ಈ ಕುಸಿತವನ್ನು ತಡೆಯುವುದು 2026-27ರ ಹಣಕಾಸು ವರ್ಷದ (FY27) ಕೇಂದ್ರೀಯ ಆರ್ಥಿಕ ಆದ್ಯತೆಗಳಲ್ಲಿ ಒಂದಾಗಬೇಕು ಎಂದು ಪ್ರಧಾನಮಂತ್ರಿಗಳ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 95.75ಗಳಷ್ಟಿದ್ದು, ದಾಖಲೆಯ ಕುಸಿತ ಕಂಡಿದೆ. ಏಷ್ಯಾದ ಅತಿ ಕಳಪೆ ಕರೆನ್ಸಿಯಾಗಿ ಗುರುತಿಸಿಕೊಂಡಿದೆ. ಈ ಕುರಿತು, ಮೇ 12ರಂದು ನಡೆದ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್‌ನ (CII) ವಾರ್ಷಿಕ ಸಮ್ಮೇಳನದಲ್ಲಿ ನಾಗೇಶ್ವರನ್ ಮಾತನಾಡಿದ್ದಾರೆ. “ರೂಪಾಯಿಯ ಕುಸಿತಕ್ಕೆ ಕಚ್ಚಾ ತೈಲ ಬೆಲೆಯ ಏರಿಕೆ, ವಿದೇಶಿ ಹೂಡಿಕೆದಾರರ ಹರಿವು ಕುಸಿತ ಹಾಗೂ ಬಲವಾದ ಡಾಲರ್‌ನ ಪ್ರಭಾವಗಳು ಮುಖ್ಯ ಕಾರಣವಾಗಿವೆ” ಎಂದಿದ್ದಾರೆ.
“ಪಶ್ಚಿಮ ಏಷ್ಯಾ ಸಂಘರ್ಷವು ತಾತ್ಕಾಲಿಕವಲ್ಲದೆ ರಚನಾತ್ಮಕ ಸಮಸ್ಯೆಯಾಗಿದೆ. ಇದು, ಭಾರತದ ‘ಬ್ಯಾಲೆನ್ಸ್ ಆಫ್ ಪೇಮೆಂಟ್ಸ್’ಗೆ ನೇರವಾದ ‘ಲೈವ್ ಸ್ಟ್ರೆಸ್ ಟೆಸ್ಟ್’ ಆಗಿದೆ. ಇದರಿಂದ ಹಣದುಬ್ಬರ ಮತ್ತು ವಿನಿಮಯ ದರದ ಮೇಲೆ ನೇರ ಪರಿಣಾಮ ಬೀಳುತ್ತದೆ. ಈ ಸನ್ನಿವೇಶದಲ್ಲಿ ಖಾತೆಯ ನಿರ್ವಹಣೆ, ಅದರ ಹಣಕಾಸು ಮತ್ತು ರೂಪಾಯಿಯ ಮುಂದುವರಿದ ಕುಸಿತವನ್ನು ತಡೆಗಟ್ಟುವುದು FY27ರ ಮುಖ್ಯ ಆರ್ಥಿಕ ಆದ್ಯತೆಗಳಾಗಿವೆ” ಎಂದು ವಿವರಿಸಿದ್ದಾರೆ.
“ಜಾಗತಿಕ ಆರ್ಥಿಕತೆಯಲ್ಲಿ ನಡೆಯುತ್ತಿರುವ ಜಿಯೋಎಕಾನಾಮಿಕ್ ಫ್ರ್ಯಾಗ್ಮೆಂಟೇಷನ್, ತಂತ್ರಜ್ಞಾನ ವಿಭಜನೆ, ಶಕ್ತಿ ಪರಿವರ್ತನೆ ಮತ್ತು ಜಿಯೋಪಾಲಿಟಿಕಲ್ ರೀತಿಯ ರಚನಾತ್ಮಕ ಬದಲಾವಣೆಗಳ ಅಪಾಯಗಳು ಮರಳಿ ಹಿಂದಿರುಗುವುದಿಲ್ಲ” ಎಂದು ಅವರು ಒತ್ತಿ ಹೇಳಿದ್ದಾರೆ.
“ಭಾರತದ ಮ್ಯಾಕ್ರೋ ಫೌಂಡೇಶನ್‌ಗಳು ಬಲವಾಗಿವೆ. ಆದರೂ, ಅವುಗಳು ಮಾತ್ರ ಸಮಸ್ಯೆಯನ್ನು ಪರಿಹರಿಸಲು ಸಾಕಾಗುವುದಿಲ್ಲ. ತಂತ್ರಾತ್ಮಕ ಸ್ಪಷ್ಟತೆ ಮತ್ತು ನೀತಿ ಹೊಂದಾಣಿಕೆಗಳ ಅಗತ್ಯವಿದೆ” ಎಂದಿದ್ದಾರೆ.
ಅವರ ಹೇಳಿಕೆಯು ಪ್ರಸ್ತುತ ಆರ್ಥಿಕ ಸವಾಲುಗಳ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ. ರೂಪಾಯಿ ಕುಸಿತವು ಆಮದುಗಳನ್ನು ದುಬಾರಿಯಾಗಿಸುತ್ತದೆ ಮತ್ತು ಹಣದುಬ್ಬರವನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ, ನಾಗೇಶ್ವರನ್ ಅವರು ರೂಪಾಯಿ ಮೌಲ್ಯ ಕುಸಿತವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು FY27ರ ಆದ್ಯತೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.



