ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದೆ.
“ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುವ ಉದ್ದೇಶದಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ” ಎಂದು ಆರೋಪಿಸಿದ ಸಿಐಟಿಯು ರಾಯಚೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ, ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಾವಳಿ ಅಧಿಸೂಚನೆ ಪ್ರತಿ ದಹಿಸಿ ಆಕ್ರೋಶ ಹೊರ ಹಾಕಿದರು.
“ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, 2025ರ ನವೆಂಬರ್ 21ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟಣೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಮಾಡಿದೆ. ಬಿಹಾರ ರಾಜ್ಯದಲ್ಲಿನ ವಿಧಾನಸಭಾ ಚುನಾವಣೆಗಳ ಗೆಲುವಿನ ಅಹಂಕಾರದೊಂದಿಗೆ ಈ ವಂಚನೆಯನ್ನು ಸರ್ಕಾರ ಮಾಡಿದೆ” ಎಂದು ದೂರಿದರು.
“ಈ ನಾಲ್ಕು ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರವು ನಿಯಮಾವಳಿಗಳನ್ನು ಅಂತಿಮ ಪ್ರಕಟಣೆ ಮಾಡದಿದ್ದ ಕಾರಣ ಈ ಸಂಹಿತೆಗಳು ಜಾರಿಗೆ ಬರಲಿಲ್ಲ. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸದೆ, ಮೇ 8ರಂದು ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ, ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ” ಎಂದು ಆರೋಪಿಸಿದರು.
“ಸರ್ಕಾರ ಹಟಮಾರಿ ಧೋರಣೆಯೊಂದಿಗೆ, ಕೇಂದ್ರ ಕಾರ್ಮಿಕ ಸಂಘಗಳ ಯಾವುದೇ ಮನವಿಗಳು, ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಲಕ್ಷಿಸದೆ, ಬಂಡವಾಳಶಾಹಿಗಳ ಬೇಡಿಕೆ ಪೂರೈಸಲು ಕಾರ್ಮಿಕ ಸಂಹಿತೆ ಜಾರಿಗೊಳಿಸಿದೆ. ಇದು ದೇಶದ್ರೋಹಿ ಕ್ರಮ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ ಎಸ್ ಶರಣಬಸವ, ಪದಾಧಿಕಾರಿಗಳಾದ ವರಲಕ್ಷ್ಮಿ, ಜಿಲಾನಿ ಪಾಷಾ, ಕೆ ಜಿ ವೀರೇಶ, ಸಂತೋಷ, ಶರಣು ಅರೋಲಿ, ದಿವಾಕರ್, ರಹಿಮತ್ ಬೇಗಂ, ವೀರನಗೌಡ, ಮಡಿವಾಳಪ್ಪ, ನಿರ್ಮಲಾ, ಚಂದ್ರಕಲಾ, ಸುರೇಶ, ಜಾನಪ್ಪ, ಪದ್ಮಾವತಿ, ಚಿಟ್ಟಿದೇವಿ ಕಸ್ತೂರಿ ಪಾಲ್ಗೊಂಡಿದ್ದರು.
ಸಿಐಟಿಯು ಕಲಬುರಗಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಾರ್ಮಿಕ ಸಂಹಿತೆಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದು, “ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಜಾವಿರೋಧಿ ಕಾರ್ಮಿಕ ಸಂಹಿತೆಗಳನ್ನು ತಕ್ಷಣ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

“ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವಂತಿವೆ. ಸರ್ಕಾರವು ಕಾರ್ಮಿಕರ ಭದ್ರತೆ, ಉದ್ಯೋಗ ಹಕ್ಕು ಹಾಗೂ ಸಾಮಾಜಿಕ ಭದ್ರತೆಯನ್ನು ದುರ್ಬಲಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ” ಎಂದು ದೂರಿದರು.
“ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕಾನೂನು ಜಾರಿಗೊಳಿಸಿರುವುದು ಖಂಡನೀಯ. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ಈ ಸಂಹಿತೆಗಳನ್ನು ಕೂಡಲೇ ರದ್ದುಪಡಿಸಿ, ಕಾರ್ಮಿಕ ಸ್ನೇಹಿ ನೀತಿಗಳನ್ನು ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಂ ಬಿ ಸಜ್ಜನ್, ಶಾಂತಾ ಘಂಟಿ, ಗೌರಮ್ಮ ಪಾಟೀಲ, ಶ್ರೀಮಂತ ಬಿರಾದಾರ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಮಿಕರು ಇದ್ದರು.

ಸಿಐಟಿಯು ದೊಡ್ಡಬಳ್ಳಾಪುರ ತಾಲೂಕು ಘಟಕದಿಂದ ನಗರದ ತಾಲೂಕು ಕಚೇರಿ ಸಮೀಪದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆ ಉದ್ದೇಶೆಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಎ ವೆಂಕಟೇಶ್ ಮಾತನಾಡಿ, “ಕೇಂದ್ರದ ಎನ್‌ಡಿಎ ಸರ್ಕಾರ 2025ರಲ್ಲೇ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟಣೆಯನ್ನು ಮಾಡಿತ್ತು. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸದೆ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿನ ಗೆಲುವು ನೀಡಿರುವ ಅಹಂಕಾರದೊಂದಿಗೆ ಕೇಂದ್ರ ಸರ್ಕಾರ ದೇಶದ ಕಾರ್ಮಿಕ ವರ್ಗದ ವಿರುದ್ಧ ಕಾಯ್ದೆಗಳನ್ನು ಜಾರಿಗೆ ತಂದಿದೆ” ಎಂದು ಆರೋಪಿಸಿದರು.
“ಸರ್ಕಾರವು ಹಠಮಾರಿ ದೋರಣೆಯೊಂದಿಗೆ, ಕೇಂದ್ರ ಕಾರ್ಮಿಕ ಸಂಘಗಳ ಯಾವುದೇ ಮನವಿ, ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಲಕ್ಷಿಸದೆ, ಬಂಡವಾಳಶಾಹಿಗಳ ಬೇಡಿಕೆಗಳನ್ನು ಪೂರೈಸಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಇದು ದೇಶದ್ರೋಹಿ ಕ್ರಮವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರದ ಈ ಪ್ರಜಾವಿರೋಧಿ ನಿರ್ಧಾರದ ವಿರುದ್ಧ, ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ದೇಶವ್ಯಾಪಿ ಪ್ರತಿಭಟನೆಗಳನ್ನು ಸಿಐಟಿಯು ನಡೆಸುತ್ತಿದೆ. ಇದಕ್ಕೆ ಎಲ್ಲ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ” ಎಂದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಎಲ್ ಸಿ ಸುಮಾ, ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ವರ್ಕರ್ಸ್ ಯೂನಿಯನ್ ಮುಖಂಡ ಮನೀಶ್‌ಶರ್ಮ, ಎಫ್‌ಎಫ್‌ಐ ಜೀನ್ಸ್ ನೀಟ್ ಕಾರ್ಮಿಕರ ಸಂಘದ ಮುಖಂಡ ಪಿ ಕೆ ವೆಂಕಟೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ಮುಖಂಡ ಬಿ ನರೇಶ್ ಕುಮಾರ್, ಆಟೊರಿಕ್ಷಾ ಡ್ರೈವರ್ಸ್ ಯೂನಿಯನ್ ಮುಖಂಡ ಏಜಾಜ್ ಪಾಷಾ ಇದ್ದರು.
ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ರಾಜ್ಯ ಸಮಿತಿ ಕರೆ ನೀಡಿದ ಹಿನ್ನೆಲೆ ಕಾರ್ಮಿಕ ಬಿಲ್‌ಗಳನ್ನು ದಹಿಸುವ ಮೂಲಕ ಕೂಡಲೇ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಕಾರ್ಮಿಕ ಮುಖಂಡ ಲಕ್ಷ್ಮಣ್ ಹಂದ್ರಾಳ ಮಾತನಾಡಿ, “ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರವು ನಿಯಮಾವಳಿಗಳನ್ನು ಅಂತಿಮ ಪ್ರಕಟಣೆ ಮಾಡದಿದ್ದ ಕಾರಣ ಈ ಸಂಹಿತೆಗಳು ಜಾರಿಗೆ ಬರಲಿಲ್ಲ. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸದೆ ಮೇ 8ರಂದು ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಈಗ ಐದು ರಾಜ್ಯಗಳ ಚುನಾವಣೆಗಳ ಪಲಿತಾಂಶ ಪ್ರಕಟವಾಗಿದೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿನ ಗೆಲುವು ನೀಡಿರುವ ಅಹಂಕಾರದೊಂದಿಗೆ ಕೇಂದ್ರ ಸರ್ಕಾರ ದೇಶದ ಕಾರ್ಮಿಕ ವರ್ಗಕ್ಕೆ ಕಪಟ ಹಾಗೂ ವಂಚನೆಯನ್ನು ಮಾಡಿದೆ” ಎಂದು ಟೀಕಿಸಿದರು.
2019ರಲ್ಲಿ ವೇತನ ಸಂಹಿತೆ ಜಾರಿಗೊಂಡ ನಂತರ, ತಕ್ಷಣದ ಪ್ರತಿಭಟನೆಗಳು ನಡೆದವು. ಜನವರಿ 2020ರಲ್ಲಿ ಯಶಸ್ವಿ ಅಖಿಲ ಭಾರತ ಮುಷ್ಕರದ ಮೂಲಕ ಪ್ರತಿಭಟನೆ ಮಾಡಲಾಗಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಉಳಿದ ಮೂರು ಕಾರ್ಮಿಕ ಸಂಹಿತೆಗಳು(ಕೈಗಾರಿಕಾ ಸಂಬಂಧ ಸಂಹಿತೆ. ಸಾಮಾಜಿಕ ಭದ್ರತಾ ಸಂಹಿತೆ, ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸ್ಥಿತಿಗತಿ ಸಂಹಿತೆ) ಜಾರಿಗೊಂಡ ತಕ್ಷಣ ಪ್ರತಿಭಟನೆಗಳು ನಡೆದವು. 2020ರ ನವೆಂಬರ್ 26ರಂದು ಐತಿಹಾಸಿಕ ಸಾರ್ವತ್ರಿಕ ಮುಷ್ಕರವು ನಡೆದಿತ್ತು. ಇದಲ್ಲದೆ, ಹಲವಾರು ಜಂಟಿ ಕಾರ್ಯಕ್ರಮಗಳು ನಡೆದವು. ಈ ಸಂಹಿತೆಗಳ ಜಾರಿಯ ವಿರುದ್ಧ 2025ರ ಜುಲೈ 6ರಂದು ನಡೆದ ಸಾರ್ವತ್ರಿಕ ಮುಷ್ಕರದಲ್ಲಿ 25 ಕೋಟಿಗೂ ಅಧಿಕ ಮಂದಿ ಕಾರ್ಮಿಕರು ಭಾಗವಹಿಸಿದ್ದರು. 2025ರ ನವೆಂಬರ್‌ನಲ್ಲಿ ನಾಲ್ಕು ಸಂಹಿತೆಗಳ ಜಾರಿಯ ಪ್ರಕಟಣೆಯ ನಂತರವೂ ಪ್ರತಿಭಟನೆಗಳು ವ್ಯಾಪಕವಾಗಿ ನಡೆದೆವು. 2026ರ ಫೆಬ್ರವರಿ 12ರಲ್ಲಿಯೂ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವು ಯಶಸ್ವಿಯಾಗಿ ನಡದೆದಿದೆ. ಈ ರೀತಿಯಲ್ಲಿ ದೇಶದ ಕಾರ್ಮಿಕ ವರ್ಗವು ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರೂ ಕೂಡ ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗೂ ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಕೂಡಲೇ ಕಾರ್ಮಿಕ ವಿರೋಧಿ ನೀತಿಯನ್ನು ಕೈ ಬಿಡಬೇಕು” ಎಂದು ಆಗ್ರಹಿಸಿದರು.
ಸಿಐಟಿಯು ಸಹ ಸಂಚಾಲಕ ಸುರೇಶ ಜೀಬಿ ಮಾತನಾಡಿ, “ಹಲವಾರು ದಶಕಗಳಿಂದ ಸಮರ ಧೀರ ಹೋರಾಟಗಳ ಮೂಲಕ ಗಳಿಸಲಾದ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗೂ ಸವಲತ್ತುಗಳನ್ನು ನಾಶಮಾಡುವ ಕ್ರಮ ಇದಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ಹಾಲಿ ಹಾಗೂ ಭಾವೀ ಕಾರ್ಮಿರನ್ನು ನವ ಗುಲಾಮಗಿರಿಗೆ ಒಳಪಡಿಸುವ ಕುತಂತ್ರವಾಗಿದೆ” ಎಂದು ಆರೋಪಿಸಿದರು.
“ಸಿಐಟಿಯು ಸಂಘಟನೆಯು ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತದೆ. ಈ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ, ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗೂ ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ. ನಮ್ಮ ದೇಶದ ಮುಂದಿನ ತಲೆಮಾರುಗಳ ಸಮಸ್ತ ಭರವಸೆ, ನಂಬಿಕೆ ಮತ್ತು ಆಕಾಂಕ್ಷೆಗಳನ್ನು ನಂದಿಸಿಬಿಡುತ್ತವೆ” ಎಂದು ಟೀಕಿಸಿದರು.
ಇದನ್ನೂ ಓದಿದ್ದೀರಾ? ಕಲಬುರಗಿ | ಆರ್‌ಬಿಐ ನಿಯಮ ಉಲ್ಲಂಘನೆ ಆರೋಪ: ಎಕ್ವಿಟಾಸ್ ಬ್ಯಾಂಕ್ ವಿರುದ್ಧ ಪ್ರತಿಭಟನೆ
“ಗಾಢವಾಗುತ್ತಿರುವ ನಿರುದ್ಯೋಗದ ಬಿಕ್ಕಟ್ಟು, ಏರುತ್ತಿರುವ ಹಣದುಬ್ಬರ, ಬೆಲೆ ಏರಿಕೆ ಹಾಗೂ ಜೀವನದ ಕಷ್ಟಗಳನ್ನು ದೇಶದ ಜನರು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಭುಗಿಲೆದ್ದ ಕಾರ್ಮಿಕರ ಸ್ವಯಂ ಪ್ರೇರಿತ ಹೋರಾಟದ ಅಲೆಗಳು ಶ್ರಮಜೀವಿಗಳ ಹೊರಹೊಮ್ಮಿದ ಭಾವನೆಗಳಾಗಿವೆ. ಇಂತಹ ಸನ್ನಿವೇಶದಲ್ಲಿ ಈ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳನ್ನು(ರೂಲ್ಸ್) ಅಂತಿಮ ಪ್ರಕಟಣೆ ಮಾಡಿರುವುದು, ಸರ್ಕಾರವು ತನ್ನ ಸ್ವಂತ ಪ್ರಜೆಗಳ ಮೇಲೆ ಸಾರಿರುವ ಅಮಾನವೀಯ ಯುದ್ಧ ಘೋಷಣೆಗೆ ಸಮನಾದ ಕ್ರಮವಾಗಿದೆ. ಕೇಂದ್ರ ಸರ್ಕಾರದ ಈ ಪ್ರಜಾವಿರೋಧಿ ನಿರ್ಧಾರದ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುನಂದಾ ನಾಯಕ, ಭಾರತಿ ವಾಲಿ, ಸುರೇಖಾ ವಾಗ್ಮೋರೆ, ಲಾಲಅಹಮ್ಮದ ಶೇಖ, ಗೀತಾ ನಾಯಕ, ರಿಜ್ವಾನಾ ಕುರೋಶಿ, ರೇಣುಕಾ ಗುಂಡಪ್ಪನವರ, ಶ್ರೀದೇವಿ ವಗ್ಯಾನವರ, ಮಾಯಪ್ಪ ಪಾಂಡಿಚೇರಿ, ಬಸವರಾಜ ಬಿರಾದಾರ, ರಾಜಕುಮಾರ ವಾಲೀಕಾರ ಸೇರಿದಂತೆ ಇತರರು ಇದ್ದರು.




