ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಹೊಸದಾಗಿ ಮರು ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆದೇಶಿಸಿದ್ದಾರೆ.
ಸಂತ್ರಸ್ತೆಯ ತಾಯಿ ರತ್ನಾ ದೇಬ್‌ನಾಥ್ ಅವರು ಪ್ರಸ್ತುತ ಬಿಜೆಪಿ ಶಾಸಕಿಯಾಗಿದ್ದಾರೆ. ಅವರ ಕೋರಿಕೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಪ್ರಕರಣ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ತಜ್ಞರ ತಂಡದೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ, 1952ರ ಸ್ಪೆಷಲ್ ಕಮಿಷನ್ ಕಾಯ್ದೆಯಡಿ ಹೊಸದಾಗಿ ತನಿಖೆ ಆರಂಭಿಸಲು ನಿರ್ಧರಿಸಲಾಗಿದೆ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಸುವೇಂದು, ಸಂತ್ರಸ್ತೆಯ ಶವಸಂಸ್ಕಾರದ ವೇಳೆ ನಡೆದಿದೆ ಎನ್ನಲಾದ ಲೋಪದೋಷಗಳ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
2024ರಲ್ಲಿ ನಡೆದಿದ್ದ ವೈದ್ಯಯ ಅತ್ಯಾಚಾರ ಮತ್ತು ಕೊಲೆ ಘಟನೆಯ ನೆನಪಿಗಾಗಿ ಭಾನುವಾರದಂದು ಪಶ್ಚಿಮ ಬಂಗಾಳದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಗಿದೆ. ಘಟನೆ ನಡೆದಾಗ ರಾಜ್ಯಾದ್ಯಂತ ನಡೆದಿದ್ದ ಬೃಹತ್ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ‘ವೆಸ್ಟ್ ಬೆಂಗಾಲ್ ಜೂನಿಯರ್ ಡಾಕ್ಟರ್ಸ್ ಫ್ರಂಟ್’ ಸಂಘಟನೆಯು ಉತ್ತರ ಕೋಲ್ಕತ್ತಾದ ಚಿತ್‌ಪುರದಲ್ಲಿ ಬಡಜನರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ನಡೆಸಿದೆ. ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ವೈದ್ಯೆಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಸಂಘಟನೆಯ ವೈದ್ಯರೊಬ್ಬರು ತಿಳಿಸಿದ್ದಾರೆ. ಅಪರಾಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.



