ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಪತ್ರಕರ್ತರೊಬ್ಬರ ಮೇಲೆ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತೀವ್ರ ಸ್ವರೂಪದ ಅಮಾನುಷ ಹಲ್ಲೆ ನಡೆಸಿದ್ದಾರೆ ಎಂಬ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ರಾಜ್‌ಕೋಟ್ ಕ್ರೈಂ ಬ್ರಾಂಚ್‌ನ ಡಿಸಿಪಿ ಜಗದೀಶ್ ಬಂಗಾರ್ವಾಲೆ ಅವರು ಪತ್ರಕರ್ತ ಸುರೇಶ್ ವಾಡಿಚಾ ಎಂಬುವವರ ಕಾಲು ಮುರಿದು, ಅವರ ಗುದದ್ವಾರಕ್ಕೆ ಪೆಟ್ರೋಲ್ ಸುರಿದು ವಿಕೃತಿ ಮೆರೆದಿದ್ದಾರೆ ಎಂದು ಶಾಸಕ ಹಾಗೂ ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ ನಾಯಕ ಜಿಗ್ನೇಶ್ ಮೆವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಿಗ್ನೇಶ್ ಮೆವಾನಿ, ಸಂತ್ರಸ್ತ ಪತ್ರಕರ್ತ ಸುರೇಶ್ ವಾಡಿಚಾ ಅವರು ತಮ್ಮೊಂದಿಗೆ ತೋಡಿಕೊಂಡಿರುವ ಅಳಲನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ನನ್ನ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸದೆ ರಾಜ್‌ಕೋಟ್ ಕ್ರೈಂ ಬ್ರಾಂಚ್‌ನ ಡಿಸಿಪಿ ಜಗದೀಶ್ ಬಂಗಾರ್ವಾಲೆ ಅವರು ನನ್ನ ಕಾಲು ಮುರಿದಿದ್ದಾರೆ ಹಾಗೂ ಎರಡು ಬಾರಿ ನನ್ನ ಗುದದ್ವಾರಕ್ಕೆ ಪೆಟ್ರೋಲ್ ಸುರಿದು ಪೈಶಾಚಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ” ಎಂದು ಸಂತ್ರಸ್ತ ಪತ್ರಕರ್ತ ತಮಗೆ ತಿಳಿಸಿರುವುದಾಗಿ ಮೆವಾನಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ: ಬಿಎಲ್‌ಒ ಸೇರಿ ಒಂದೇ ಬೂತ್‌ನ 340 ಮುಸ್ಲಿಮರ ಹೆಸರು ನಾಪತ್ತೆ
ಪೊಲೀಸ್ ಠಾಣೆಯೊಳಗೆ ನಡೆದಿದೆ ಎನ್ನಲಾದ ಈ ಅಮಾನವೀಯ ದೌರ್ಜನ್ಯವು ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಗ್ನೇಶ್ ಮೆವಾನಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕಾನೂನು ರಕ್ಷಿಸಬೇಕಾದವರೇ ಈ ರೀತಿಯ ಅಮಾನವೀಯ ಕೃತ್ಯಕ್ಕೆ ಇಳಿದಿರುವುದು ಆತಂಕ ಮೂಡಿಸಿದೆ. ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.




