'ಉನ್ನತ ಶಿಕ್ಷಣ: ಒಳಗೂ ಹೊರಗೂ' ಕೃತಿ ನಿರ್ದಿಷ್ಟವಾಗಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ್ದು. ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಲ್ಲಿಯವರೆಗೂ ಬದಲಾದ ಶಿಕ್ಷಣ ನೀತಿಗಳು ಹಾಗೂ ಎದುರಾಗುವ ಸಾಧ್ಯತೆಗಳು, ಸವಾಲುಗಳನ್ನು ಸಮಗ್ರವಾಗಿ ವಿಶ್ಲೇಷಣೆಗೆ ಒಳಪಡಿಸುವಂಥದ್ದು. ಇಂದು ಈ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ...
ಉನ್ನತ ಶಿಕ್ಷಣದ ಮುಂದಿರುವ ಸವಾಲುಗಳು
ಇಂದು ಉನ್ನತ ಶಿಕ್ಷಣದಲ್ಲಿ ಒಟ್ಟಾರೆ ದಾಖಲಾತಿ(ಜಿಇಆರ್) ಶೇ. 27 ಪ್ರಮಾಣದಲ್ಲಿದೆ. ಇದು ತುಂಬ ಕಡಿಮೆ ಪ್ರಮಾಣದ ದಾಖಲಾತಿ. ಕಳೆದ ಇಪತ್ತೈದು ವರ್ಷಗಳಲ್ಲಿ ಉನ್ನತ ಶಿಕ್ಷಣದ ಕಾಲೇಜುಗಳು, ವಿವಿಗಳು ಸಂಖ್ಯೆಯಲ್ಲಿ ಸಾಕಷ್ಟು ವೃದ್ಧಿಯಾಗಿವೆ. ಆದರೆ ದಾಖಲಾತಿ ಪ್ರಮಾಣದಲ್ಲಿ ಅಪಾರ ಅಸಮಾನತೆ ಇದೆ.
ಸಾರ್ವಜನಿಕ ನೀತಿಗಳ ಕುರಿತು ಬೋಧಿಸುವ ಪ್ರೊ. ಟ್ರೌ ಮಾರ್ಟಿನ್ ಅವರು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಒಟ್ಟಾರೆ ದಾಖಲಾತಿಯ(ಜಿಇಆರ್) ಆಧಾರದ ಮೇಲೆ ವರ್ಗಿಕರಿಸುತ್ತಾರೆ.
- ಶೇಕಡ 15 ಪ್ರಮಾಣಕ್ಕಿಂತ ಕಡಿಮೆ ದಾಖಲಾತಿ ಇರುವ ದೇಶದ ಶಿಕ್ಷಣವು ‘ಕೇವಲ ಪ್ರತಿಷ್ಠರಿಗಾಗಿ’ ಹಂತದಲ್ಲಿದೆ.
- ಶೇಕಡ 15-50 ಪ್ರಮಾಣದ ದಾಖಲಾತಿ ಇರುವ ದೇಶದ ಶಿಕ್ಷಣವು ‘ಸಮೂಹ’ ಹಂತದಲ್ಲಿದೆ.
- ಶೇಕಡ 50 ಪ್ರಮಾಣಕ್ಕಿಂತಲೂ ಹೆಚ್ಚಿನ ದಾಖಲಾತಿ ಇರುವ ದೇಶದ ಶಿಕ್ಷಣವು ‘ಸಾರ್ವತ್ರೀಕರಣ’ ಹಂತದಲ್ಲಿದೆ ಎಂದು ವರ್ಗಿಕರಿಸುತ್ತಾರೆ.
ಈ ವಿಂಗಡನೆಯ ಆಧಾರದಲ್ಲಿ ನೋಡುವುದಾದರೆ, ಶೇ. 15ರಷ್ಟಿರುವ ಉನ್ನತ ಶಿಕ್ಷಣ, ಕೇವಲ ಸವಲತ್ತುಳ್ಳ ಪ್ರತಿಷ್ಠಿತ ವರ್ಗದವರಿಗೆ ಮಾತ್ರ ಹಲವು ಪದವಿಗಳನ್ನು ಪಡೆದುಕೊಂಡು ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉನ್ನತ ಹಂತಗಳಿಗೇರಲು ಅವಕಾಶ ಮಾಡಿಕೊಡುತ್ತದೆ. ಇದು ಸರಕಾರ ಮತ್ತು ವ್ಯವಸ್ಥೆಯಲ್ಲಿ ದೊಡ್ಡದಾದ ಪಾತ್ರ ವಹಿಸುತ್ತದೆ ಮತ್ತು ಅನೇಕ ನಿರ್ಣಯಗಳಿಗೆ ಪ್ರೇರಕವಾಗುತ್ತದೆ. ಒಂದು ವೇಳೆ ಅದು ‘ಸಮೂಹ ಹಂತ’ದಲ್ಲಿದ್ದರೆ, ಆ ವರ್ಗವು ಜ್ಞಾನವನ್ನು ಹರಡುತ್ತದೆ ಮತ್ತು ತಾಂತ್ರಿಕ ಹಾಗೂ ಆರ್ಥಿಕ ವಲಯಗಳಿಗೆ ಅನುವಾಗುವಂತೆ ವಿದ್ಯಾರ್ಥಿಗಳನ್ನು ರೂಪಿಸುತ್ತದೆ. ಅದೇನೇ ‘ಸಾರ್ವತ್ರೀಕರಣ ಹಂತ’ವು ಇಡೀ ಜನಸಂಖ್ಯೆಯನ್ನು ಸಾಮಾಜಿಕ, ತಾಂತ್ರಿಕ ಬದಲಾವಣೆಗೆ ಅನುವಾಗುವಂತೆ ರೂಪಿಸುತ್ತದೆ.
ಇದನ್ನು ಓದಿದ್ದೀರಾ?: ಉತ್ತರದ ಪ್ರಾದೇಶಿಕ ಭಾಷೆಗಳ ಅಸ್ತಿತ್ವ ನುಂಗಿದ ಪರಾವಲಂಬಿ ʼಹಿಂದಿʼ
- ಇಂಡಿಯಾದಲ್ಲಿ ಶೇ. 27 ಪ್ರಮಾಣದಲ್ಲಿರುವ ಇಂದಿನ ಜಿ.ಇ.ಆರ್ ಅನ್ನು ಟ್ರೌ ಆಧಾರದಲ್ಲಿ ವಿಶ್ಲೇಷಿಸಿದಾಗ ದೇಶವು ಸಮೂಹ ಶಿಕ್ಷಣದ ಆರಂಭಿಕ ಹಂತದಲ್ಲಿದೆ. ಭಾರತ ಸಾರ್ವತ್ರೀಕರಣ ಹಂತಕ್ಕೆ ತಲುಪಲು ಬಲು ದೂರ ಕ್ರಮಿಸಬೇಕಾಗಿದೆ.
- ಆದರೆ ವೈವಿಧ್ಯತೆ, ಬಹುಸಂಸ್ಕೃತಿ, ಜಾತಿ, ಆರ್ಥಿಕ ಅಸಮಾನತೆ ಇರುವ ಭಾರತದಂತಹ ದೇಶದಲ್ಲಿ ಈ ಮೇಲಿನ ರೀತಿಯ ವರ್ಗೀಕರಣದಲ್ಲಿ ಸಂಕೀರ್ಣತೆ ಇದೆ. ಉದಾಹರಣೆಗೆ ಜಾಗತೀಕರಣದ ನಂತರ ಇಲ್ಲಿ ಖಾಸಗಿ ಕಾಲೇಜುಗಳು, ವಿವಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅದೇ ಸಂದರ್ಭದಲ್ಲಿ ಉದ್ಯೋಗ ಅವಕಾಶಗಳಿಲ್ಲ ಎನ್ನುವ ಕಾರಣದಿಂದ ಮಾನವಿಕ ವಿಷಯಗಳಲ್ಲಿ ದಾಖಲಾತಿ ಕಡಿಮೆಯಾಗುತ್ತ ಬಹುಪಾಲು ಖಾಸಗೀಕರಣಗೊಂಡ ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ವಲಯಗಳಲ್ಲಿ ದಾಖಲಾತಿಯ ಏರಿಕೆ ಕಂಡಿತು. ಅಲ್ಲಿನ ಬೋಧನಾ ಶುಲ್ಕ, ವಸತಿ ಶುಲ್ಕವು ಜನಸಾಮಾನ್ಯರ ಪಾಲಿಗೆ ತುಂಬಾ ದುಬಾರಿಯಾಗಿತ್ತು. ಈ ವೃತ್ತಿಪರ ಕೋರ್ಸ್‌ಗಳಲ್ಲಿ ಉತ್ತಮ ಆರ್ಥಿಕ ಹಿನ್ನೆಲೆಯಿಂದ ಬಂದ, ನಗರ ಪಟ್ಟಣ ಪ್ರದೇಶದ ಮೇಲ್ವರ್ಗ, ಮಧ್ಯಮ ವರ್ಗದ, ಅನುಕೂಲವಂತ, ಪ್ರಬಲ ಜಾತಿಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರಾದರು. ಜಾಗತೀಕರಣದ ಕಾರಣಕ್ಕೆ ವೃತ್ತಿಪರ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚತೊಡಗಿದ ಹಿನ್ನೆಲೆಯಲ್ಲಿ ಅಲ್ಲಿನ ಎಂಜಿನಿಯರ್, ತಂತ್ರಜ್ಞಾನ ಪರಿಣತರ ಬೇಡಿಕೆ ಹೆಚ್ಚತೊಡಗಿತು. ನವ ಉದಾರೀಕರಣದ ಫಲವಾದ ಉದ್ಯೋಗಗಳನ್ನು ಗಳಿಸಿದ ಈ ವರ್ಗ ಅಂದಿನಿಂದ ಒಂದು ನಿರ್ದಿಷ್ಟ ಬಗೆಯ ಬಂಡವಾಳಶಾಹಿ ವ್ಯವಸ್ಥೆಯನ್ನು, ಖಾಸಗಿ ಕುಟುಂಬ ಒಡೆತನದ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಇನ್ನು ಸರಕಾರದ ಐಐಟಿ, ಐಐಎಂ ಸಂಸ್ಥೆಗಳು ಇಂದು ಪ್ರತಿಷ್ಠಿತ ಸಂಸ್ಥೆಗಳಾಗಿವೆ. ಅವಕಾಶವಂಚಿತ ವರ್ಗ, ಜಾತಿಗಳಿಂದ ಬಂದ ವಿದ್ಯಾರ್ಥಿಗಳಿಗೆ ಅಲ್ಲಿ ಪ್ರವೇಶ ದೊರಕುವ ಸಾಧ್ಯತೆಗಳು ಕುಂಠಿತಗೊಂಡಿದೆ.
- ಪ್ರಭುತ್ವದ ನವ ಉದಾರೀಕರಣ ನೀತಿಯು ಮುಂದುವರಿದ ಜಾತಿಗಳ ವಿದ್ಯಾರ್ಥಿಗಳು ಮತ್ತು ತಳಸಮುದಾಯದ ವಿದ್ಯಾರ್ಥಿಗಳ ದಾಖಲಾತಿಯ ನಡುವೆ ಅಜಗಜಾಂತರ ವ್ಯತ್ಯಾಸ ಸೃಷ್ಟಿಸಿದೆ. ವಾಸ್ತವದಲ್ಲಿ ದಲಿತ, ಮುಸ್ಲಿಂ ಸಮುದಾಯದ ಜನಸಂಖ್ಯೆಯ ಪ್ರಮಾಣಕ್ಕೂ ಅವರ ಉನ್ನತ ಶಿಕ್ಷಣದ ದಾಖಲಾತಿಗೂ ವ್ಯತ್ಯಾಸವಿದೆ. ಕಳೆದ ಕೆಲವು ವರ್ಷಗಳಿಂದ ಮೊದಲ ತಲೆಮಾರಿನ ದಲಿತರು ಸ್ನಾತಕೋತ್ತರ ಶಿಕ್ಷಣದಲ್ಲಿ ದಾಖಲಾಗುತ್ತಿದ್ದಾರೆ. ಆದರೆ ಅಲ್ಲಿಯೂ ವಿಷಯಗಳ ಆಯ್ಕೆಯಲ್ಲಿ ವ್ಯತ್ಯಾಸವಿದೆ. ಮಾನವಿಕ ವಿಷಯಗಳಲ್ಲಿ (ಭಾಷೆ, ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಶಾಸ ಇತ್ಯಾದಿ) ತಳಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ(ಎಂಜಿನಿಯರಿಂಗ್, ವೈದ್ಯಕೀಯ, ಮಾಹಿತಿ ತಂತ್ರಜ್ಞಾನ) ತುಂಬಾ ಕಡಿಮೆ ಪ್ರಮಾಣದ ದಾಖಲಾಗುತ್ತಿದ್ದಾರೆ. ಇದಕ್ಕೆ ನಾನಾ ಕಾರಣಗಳಿವೆ. ಜಾತಿ, ಧರ್ಮ, ಲಿಂಗ, ಬಡತನ ಮುಂತಾದ ಕಾರಣಗಳಿಂದ ದಲಿತ, ತಳಸಮುದಾಯ, ಮುಸ್ಲಿಂ ಸಮುದಾಯಗಳ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನೇ ಅರ್ಧದಲ್ಲಿ ಮೊಟಕುಗೊಳಿಸುತ್ತಾರೆ. ಅಲ್ಲಿನ ಜಾತಿತಾರತಮ್ಯ ಮತ್ತು ದೌರ್ಜನ್ಯದ ಕಾರಣಕ್ಕೆ ಕಲಿಕೆಯನ್ನು ಮುಂದುವರಿಸುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ.
- ಇನ್ನು ಸರಕಾರದ ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್ ಪರವಾದ ಜಾಗತೀಕರಣ ಆರ್ಥಿಕ ನೀತಿಯ ಕಾರಣದಿಂದ ಬಹುಪಾಲು ಸರಕಾರಿ ಕಾಲೇಜುಗಳು, ವಿವಿಗಳಲ್ಲಿ ಮಾನವಿಕ ವಿಷಯಗಳನ್ನು ವ್ಯಾಸಂಗ ಮಾಡಿದ ಪದವೀಧರರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಾ ಹೋಗಿದೆ. ಇದು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ಸೃಷ್ಟಿ ಮಾಡಿದೆ.
- ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವು ಇಂದು ಸಂಪೂರ್ಣ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಫಿಯಾದ ಹಿಡಿತದಲ್ಲಿದೆ. ಆರ್ಥಿಕ ಅನುಕೂಲವುಳ್ಳ ವಿದ್ಯಾರ್ಥಿಗಳು ಪ್ರೌಢಶಿಕ್ಷಣದಿಂದಲೇ ವೃತ್ತಿಪರ ಕೋರ್ಸ್‌ಗಳಿಗೆ ತರಬೇತು ಪಡೆಯುತ್ತಾರೆ. ರಾಷ್ಟ್ರ, ರಾಜ್ಯ ಮಟ್ಟದ ಪ್ರವೇಶಪರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು ಇವರಿಗೆ ತರಬೇತು ಕೊಡಲಾಗುತ್ತದೆ. ಆದರೆ ಬಡಕುಂಟುಂಬದ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳು ದೊರಕುವುದಿಲ್ಲ. ಪ್ರಾರಂಭ ಹಂತದ ಈ ಆರ್ಥಿಕ ಅಸಮಾನತೆಯ ಕಾರಣಕ್ಕೆ ಶೇ. 60ಕ್ಕೂ ಹೆಚ್ಚು ಪ್ರಮಾಣದ ದುರ್ಬಲ ವರ್ಗಗಳ ವಿದ್ಯಾರ್ಥಿಗಳು ಪದವಿ, ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ.
- ಮತ್ತೊಂದೆಡೆ ಪ್ರಭುತ್ವವೇ ಬಡಕುಟುಂಬದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಕಡಿತಗೊಳಿಸುತ್ತಿದೆ ಮತ್ತು ಅದರ ಬದಲು ಸಾಲ ನೀಡುವ, ಸಾಲ ಬಂಡವಾಳದ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಇದು ಬಡಕುಟುಂಬದ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ.
- ವಿಷಯಗಳಲ್ಲಿ ಜ್ಞಾನದ ಕುರಿತು ಭೇಧಭಾವ ಹೆಚ್ಚು ಕಡಿಮೆ ಇರುವುದಿಲ್ಲ. ಎಂಜಿನಿಯರಿಂಗ್, ವೈದ್ಯಕೀಯ, ಮಾಹಿತಿ ತಂತ್ರಜ್ಞಾನದಷ್ಟೇ ಇತಿಹಾಸ, ಭಾಷೆ, ಸಮಾಜವಿಜ್ಞಾನ, ರಾಜಕೀಯ ಶಾಸ್ತ್ರ, ಜನಪದ, ವಿಜ್ಞಾನ, ಸಂಗೀತ, ನಾಟಕ ತರಹದ ಮಾನವಿಕ ವಿಭಾಗಗಳು ಸಹ ಮುಖ್ಯವಾದ ಜ್ಞಾನ ಪ್ರಕಾರಗಳಾಗಿವೆ. ತಾಂತ್ರಿಕ ಶಿಕ್ಷಣ ಮತ್ತು ಮಾನವಿಕ ಶಿಕ್ಷಣದ ನಡುವೆ ತಾರತಮ್ಯ ಮಾಡುವುದು ಅಪರಾಧ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಸರಕಾರಗಳು ಮನಗಾಣಬೇಕು. ಎಲ್ಲಾ ವಿಷಯಗಳಿಗೂ ಸಮಾನ ಪ್ರಾಮುಖ್ಯತೆ ಕಲ್ಪಿಸುವ ಜವಾಬ್ದಾರಿ ಸರಕಾರದ ಮೇಲೆ ಇದೆ. ಅದು ತನ್ನ ಉತ್ತರದಾಯಿತ್ವದಿಂದ ನುಣಿಚಿಕೊಳ್ಳುವಂತಿಲ್ಲ. ಈಗಾಗಲೇ ನಡೆದ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ.
- ಒಂದೆಡೆ ಇಲ್ಲಿ ವ್ಯಕ್ತಿಯೊಬ್ಬರ/ಕುಟುಂಬದ ಸರಾಸರಿ ಆದಾಯ ಕಡಿಮೆಯಾಗುತ್ತಿದೆ. ಬಡತನರೇಖೆಗಿಂತ ಕೆಳಗಿರುವ ಕುಟುಂಬದ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದೆ. ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು 1:3 ಅನುಪಾತದಲ್ಲಿವೆ. ಈ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶಿಕ್ಷಣವೆಂದರೆ ಒಂದು ಉದ್ಯಮ, ಬಂಡವಾಳ ಹೂಡಿಕೆ. ಈ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಕೆಳವರ್ಗಗಳ, ಬಡಕುಟುಂಬದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹಂತಹಂತವಾಗಿ ಕುಸಿಯುತ್ತದೆ. ಈ ಅಸಮಾನತೆಯನ್ನು ಸರಿಪಡಿಸಲು ಸರಕಾರಗಳು ವಿಫಲವಾಗಿವೆ.
- ಖಾಸಗಿ ಸಂಸ್ಥೆಗಳ, ಕುಟುಂಬಗಳ ಒಡೆತನದ ಪದವಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹುಲುಸಾಗಿ ಬೆಳೆದು ಹೆಮ್ಮರವಾಗಿವೆ. ಇದನ್ನು ಆಧಾರವಾಗಿಟ್ಟುಕೊಂಡು ಉನ್ನತ ಶಿಕ್ಷಣ ಅಭಿವೃದ್ಧಿ ಪಥದಲ್ಲಿದೆ ಎಂದು ವಿಶ್ಲೇಷಿಸುವುದು ದೋಷಪೂರಿತವಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಸಂಖ್ಯೆಯ ಆದಾರದ ಮೇಲೆ ವಿಸ್ತರಿಸಲ್ಪಟ್ಟ ಉನ್ನತ ಶಿಕ್ಷಣವನ್ನು ಅದೇ ಮಾನದಂಡದ ಮೇಲೆ ಮೌಲ್ಯಮಾಪನ ಮಾಡಲಾಗುವುದಲ್ಲ. ಇಲ್ಲಿ ಉನ್ನತ ಶಿಕ್ಷಣದ ಕಾಲೇಜುಗಳು, ವಿವಿಗಳನ್ನು ಸಂಖ್ಯಾತ್ಮಕವಾಗಿ ವಿಸ್ತರಿಸುವುದರ ಬದಲು ಅದರ ಕಲಿಕೆಯ ಅವಕಾಶ, ದಾಖಲಾತಿಯನ್ನು ವಿಶ್ವವ್ಯಾಪಿ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ಸರಕಾರದ ಮೇಲಿದೆ. ಸಮಾಜದ ಎಲ್ಲ ಸ್ತರದ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ದೊರಕಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು.
- ಇಂದು ಉನ್ನತ ಶಿಕ್ಷಣದ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರದ ವ್ಯಾಪ್ತಿಯ ಅನುಸಾರ ಅದರ ಆಡಳಿತದ ಸ್ವರೂಪವನ್ನು ನಿರ್ಧರಿಸಲಾಗುತ್ತದೆ. ಇಂದು ಉನ್ನತ ಶಿಕ್ಷಣದ ಆಡಳಿತ ಮತ್ತು ನಿರ್ವಹಣೆ ದಿನೇ ದಿನೇ ಸಂಕೀರ್ಣಗೊಳ್ಳುತ್ತಿದೆ. ಜಾಗತೀಕರಣದ ಈ ದಿನಗಳಲ್ಲಿ ಇಲ್ಲಿ ರಾಜ್ಯ, ಶಿಕ್ಷಣ ಸಂಸ್ಥೆ ಮತ್ತು ಮಾರುಕಟ್ಟೆಗಳ ನಡುವಿನ ಸಂಬಂಧವನ್ನು ನಿಖರವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲ. ರಾಜ್ಯ ವಿ.ವಿಗಳಿಗೆ ಕೇಂದ್ರ ವಿ.ವಿಗಳಿಗೆ ಸ್ವಾಯತ್ತತೆ ಕೊಡಬೇಕು ಎನ್ನುವ ಸ್ವಾತಂತ್ರ್ಯ ನಂತರದ ಆರಂಭದ ವರ್ಷಗಳ ಆಶಯಗಳು ಸಂಪೂರ್ಣ ಬದಲಾಗಿ ಈಗ ಮಾರುಕಟ್ಟೆಯ ನಿಯಂತ್ರಣದಲ್ಲಿದೆ. ಇಂದಿನ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಸ್ವಾಯತ್ತತೆ ಒದಗಿಸಬೇಕು ಎಂದರೆ ಅದನ್ನು ಖಾಸಗೀಕರಣಗೊಳಿಸಬೇಕು ಎಂದು ಅರ್ಥೈಸಲಾಗುತ್ತಿದೆ. ಅದನ್ನೇ ಸರಕಾರದ ನೀತಿಯಾಗಿ ರೂಪಿಸಲಾಗುತ್ತಿದೆ. ಇದೇ ಇಂದಿನ ಬಿಕ್ಕಟ್ಟು.
- ಸ್ವಾಯತ್ತತೆ ಎಂದರೆ ಖಾಸಗೀಕರಣವಲ್ಲ ಎಂದು ಪ್ರಭುತ್ವವು ತುರ್ತಾಗಿ ಮನಗಾಣಬೇಕು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣವು ಸಾರ್ವಜನಿಕ ವ್ಯವಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಅವುಗಳ ನಿಯಂತ್ರಣ ಮತ್ತು ಆಡಳಿತ ವಿಧಾನವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಇತ್ತೀಚಿನವರೆಗೆ ಈ ಸಾರ್ವಜನಿಕ ಶಿಕ್ಷಣಕ್ಕೆ ಶೇಕಡ 90 ಪ್ರಮಾಣದಲ್ಲಿ ಸರಕಾರದಿಂದ ಹಣಕಾಸು ಅನುದಾನ ದೊರಕುತ್ತಿತ್ತು. ಈಗಲೂ ಉನ್ನತ ಶಿಕ್ಷಣಕ್ಕೆ ಸಾರ್ವಜನಿಕ ಶಿಕ್ಷಣದ ಅಡಿಯಲ್ಲಿ ಸಂಪೂರ್ಣ ಬೆಂಬಲ ನೀಡಬೇಕು.
- ಡಾ. ಪಿ.ಬಿ. ಗಜೇಂದ್ರಗಡ್ಕರ್ ಅಧ್ಯಕ್ಷರಾಗಿದ್ದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿಯಂತ್ರಣ(ಯುಜಿಸಿ 1971) ಕುರಿತು ರಚನೆಯಾದೆ ಸಮಿತಿಯು ‘ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಮೇಲಿನ ವೆಚ್ಚವನ್ನು ಕೇವಲ ಸಾಮಾಜಿಕ ಸೇವೆ ಮಾತ್ರವಲ್ಲ, ಭವಿಷ್ಯದ ಮೇಲಿನ ಹೂಡಿಕೆ ಎಂದು ಪರಿಗಣಿಸಬೇಕು. ಯುಜಿಸಿ ಅನುದಾನದ ನಿರ್ವಹಣೆ ಸಂಬಂಧ ರಾಜ್ಯ ಸರಕಾರಗಳಿಗೆ ಸಲಹೆ, ಸೂಚನೆ ನೀಡುತ್ತಿರಬೇಕು. ವಿಶ್ವವಿದ್ಯಾಲಯಗಳ ಘನತೆ ಮತ್ತು ಗೌರವ ಕಾಪಾಡಲು ಕಾಲಕಾಲಕ್ಕೆ ಸಂಬಂಧಿಸಿದ ವಿವಿಗಳಿಗೆ ಸಲಹೆ, ಸೂಚನೆ ಕೊಡುತ್ತಿರಬೇಕು ಮತ್ತು ಅದರ ಸ್ವಾಯತ್ತತೆಯನ್ನು ಕಾಪಾಡಲು ಶ್ರಮಿಸಬೇಕು. ಮೂರು ಪ್ರಧಾನ ಪ್ರಾಧಿಕಾರಗಳಾದ ನ್ಯಾಯಾಂಗ / ಸಂಸತ್ತು, ಕಾರ್ಯಾಂಗ / ಸಿಂಡಿಕೇಟ್, ಅಕಡೆಮಿಕ್ ಪರಿಷತ್‌ಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕು. ಇದರ ಜೊತೆಗೆ ವಿದ್ಯಾರ್ಥಿ ಪರಿಷತ್, ಬೋಧನಾ ವೃಂದ / ಶಾಲೆಗಳನ್ನು ಸೇರಿಸಬೇಕು’ ಎಂದು ಶಿಫಾರಸ್ಸು ಮಾಡಿತ್ತು. ಆಗ ಇನ್ನೂ ಖಾಸಗಿ ವಿಶ್ವವಿದ್ಯಾಲಯಗಳು ಪ್ರಾರಂಭವಾಗಿರಲಿಲ್ಲ. ಆದರೆ ಈಗ ಸಂಪೂರ್ಣ ಬದಲಾದ ಕಾಲಘಟ್ಟದಲ್ಲಿ ಮೇಲಿನ ಸಮಿತಿಯ ಶಿಫಾರಸ್ಸುಗಳನ್ನು ಸ್ವಾಯತ್ತತೆ ಮತ್ತು ಸಾರ್ವಜನಿಕ ಹಣಕಾಸು ಅನುದಾನದ ಆಶಯದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಜಾರಿಗೊಳಿಸಬೇಕು.
- ಯುಜಿಸಿಯ ನೀತಿ ನಿಯಮಾವಳಿಗಳಲ್ಲಿ, ಅದರ ಆಡಳಿತದಲ್ಲಿನ ಲೋಪದೋಷಗಳನ್ನು, ಮಿತಿಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಪರ್ಯಾಯವಾಗಿ ಭಾರತೀಯ ಉನ್ನತ ಶಿಕ್ಷಣ ಆಯೋಗದ ಸ್ಥಾಪನೆಯ ನಿರ್ಧಾರವನ್ನು ಕೈಬಿಡಬೇಕು.
- ಉನ್ನತ ಶಿಕ್ಷಣದಲ್ಲಿ ವ್ಯಾಪಕವಾಗುತ್ತಿರುವ ಖಾಸಗೀಕರಣವನ್ನು ತಡೆಗಟ್ಟಬೇಕು. ಆ ಮೂಲಕ ಶಿಕ್ಷಣದ ವ್ಯಾಪಾರೀಕರಣ ನಿಲ್ಲಬೇಕು.
- ಬೋಧನೆ-ಕಲಿಕೆಯ ವಿಧಾನಗಳು ಮತ್ತು ಸ್ವರೂಪ ಈಗಿರುವ ಸಾಮಾನ್ಯ ಮಟ್ಟಕ್ಕಿಂತ ಉತ್ತಮಗೊಳ್ಳಬೇಕು. ಈಗಿರುವ ಪಠ್ಯಕೇಂದ್ರಿತ ಬೋಧನಾ ವಿಧಾನದಲ್ಲಿ ಅನೇಕ ಮಿತಿಗಳಿವೆ. ಇದು ವಿದ್ಯಾರ್ಥಿಗಳ ಗ್ರಹಿಕೆಯ, ಅರಿವಿನ ಮಟ್ಟವನ್ನು ನಿಯಂತ್ರಿಸುತ್ತದೆ. ಪರೀಕ್ಷೆಗೆ ತರಬೇತುಗೊಳಿಸುವ ಉದ್ಯಮಗಳಾಗಿರುವ ಇಂದಿನ ಕಲಿಕೆಯ ವಿಧಾನ ಸಂಪೂರ್ಣ ಬದಲಾಗಬೇಕಾಗಿದೆ.
- ವಿಶ್ವವಿದ್ಯಾಲಯಗಳ ಗುಣಮಟ್ಟ ಉತ್ತಮಗೊಳ್ಳಬೇಕು.
- ಹಳತಾದ ವ್ಯಾಸಂಗಕ್ರಮವನ್ನು ಬದಲಾಯಿಸಿಕೊಳ್ಳಬೇಕು.
- ಉನ್ನತ ಶಿಕ್ಷಣದಲ್ಲಿ ಕೌಶಲ್ಯ ತರಬೇತಿ ಎನ್ನುವ ನೀತಿ ಸಮಗ್ರವಾಗಿರಬೇಕು, ಒಳಗೊಳ್ಳುವಿಕೆಯನ್ನು ಹೊಂದಿರಬೇಕು.
- ಮುಖ್ಯವಾಗಿ ಪ್ರಭುತ್ವದ ಹಸ್ತಕ್ಷೇಪ ಕೊನೆಗೊಳ್ಳಬೇಕು.
(ಅಂಕಿಸಂಖ್ಯೆ ಆಧಾರ: ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ, ಯುಜಿಸಿ, ಭಾರತದಲ್ಲಿ ಉನ್ನತ ಶಿಕ್ಷಣ: ಎಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ)
ಉಪಸಂಹಾರ
ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಮತ್ತಷ್ಟು ಬಲಗೊಳಿಸಿದ್ದು ಎಲ್‌ಪಿಜಿಯ ಸಾಧನೆಯಾಗಿದೆ. ಇದು ಚಾರಿತ್ರಿಕ ಮತ್ತು ಸಮಕಾಲೀನ. ಪಶ್ಚಿಮ ಮತ್ತು ಯುರೋಪಿಯನ್ ದೇಶಗಳಲ್ಲಿ ವರ್ಗಶ್ರೇಣೀಕರಣದ ಚೌಕಟ್ಟಿನಲ್ಲಿ ಎಲ್‌ಪಿಜಿಯ ಪರಿಣಾಮಗಳನ್ನು ವಿಶ್ಲೇಷಿಸಲಾಗುತ್ತದೆ. ಆದರೆ ಭಾರತದಲ್ಲಿ ಜಾತಿ ಶ್ರೇಣೀಕರಣ ವ್ಯವಸ್ಥೆಯ ಚೌಕಟ್ಟಿನಲ್ಲಿ ವಿಶ್ಲೇಷಿಸಬೇಕಿದೆ. ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕವಲುಹಾದಿಯಲ್ಲಿದೆ. ಅತ್ತ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ವಿಫಲಗೊಂಡಿದೆ. ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಎನ್ನುವುದು ಸದಾ ಚರ್ಚೆಯ ವಿಷಯವಾಗಿದೆ. ಇಲ್ಲಿ ಗುಣಮಟ್ಟದ ಮಾನದಂಡಗಳನ್ನು ನಿರ್ಧರಿಸಲು ವ್ಯಾಸಂಗಕ್ರಮ, ಬೋಧನೆ, ಕಲಿಕೆ ಮತ್ತು ಮೂಲಭೂತ ಸೌಕರ್ಯಗಳನ್ನು ಪರಿಗಣಿಸುತ್ತಾರೆ. ಜೊತೆಗೆ ಈ ಶಿಕ್ಷಣವು ಉದ್ಯೋಗ ಮಾರುಕಟ್ಟೆಯಲ್ಲಿ ಹೇಗೆ ಪ್ರಯೋಜನಕಾರಿಯಾಗುತ್ತದೆ ಎನ್ನುವುದು ಸಹ ಮುಖ್ಯ ವಿಚಾರವಾಗಿದೆ. ಇಂದಿನ ನವ ಉದಾರೀಕರಣದ ಸಂದರ್ಭದಲ್ಲಿ ವಿವಿಧ ಜ್ಞಾನಶಾಖೆಗಳ ಕಲಿಕೆ, ನಾಗರಿಕ ಪ್ರಜ್ಞೆ, ವ್ಯಕ್ತಿತ್ವ ವಿಕಸನಕ್ಕೆ ಎಷ್ಟು ಒತ್ತು ಕೊಡಬೇಕು ಮತ್ತು ಉದ್ಯೋಗಕ್ಕಾಗಿ ಶಿಕ್ಷಣಕ್ಕೆ ಎಷ್ಟು ಮಹತ್ವವಿರುತ್ತದೆ ಎನ್ನುವುದು ಸದಾ ವಾಗ್ವಾದದ ಸಂಗತಿಯಾಗಿದೆ. ಒಂದೆಡೆ ಕಲಿಕೆ ಮತ್ತು ಬೋಧನೆಯನ್ನು ಆಧರಿಸಿ ಗುಣಮಟ್ಟದ ಶಿಕ್ಷಣದ ಕೊರತೆ ಇದೆ ಎಂದು ASSOCHAM (Associated Chambers of Commerce and Industry of India) ಸಂಸ್ಥೆಯು ಶೇ. 93ರಷ್ಟು ಅಭ್ಯರ್ಥಿಗಳು ಉದ್ಯೋಗ ನೇಮಕಾತಿಗೆ ಅರ್ಹರಿಲ್ಲ ಎಂದು ಹೇಳುತ್ತದೆ. ಅತ್ತ ಗುಣಮಟ್ಟದ ವ್ಯಾಸಂಗಕ್ರಮದಲ್ಲಿ ಹಿನ್ನಡೆಯಾಗಿದೆ ಮತ್ತು ಶಿಕ್ಷಣವನ್ನು ಒಂದು ಸರಕಾಗಿ ಪರಿಗಣಿಸಲ್ಪಡುವ ಇಂದಿನ ದಿನಗಳಲ್ಲಿ ನೇಮಕಾತಿ ಸಂದರ್ಭದಲ್ಲಿ ಈ ಸರಕು ಸಂಬಂಧಪಟ್ಟ ಹುದ್ದೆಗೆ ಉಪಯೋಗವಿಲ್ಲ ಎಂದು ತಿರಸ್ಕರಿಸಲ್ಪಡುತ್ತದೆ.
ಇದನ್ನು ಓದಿದ್ದೀರಾ?: ಕಾರ್ಮಿಕರ ಕೊರತೆ | ಸಿಬ್ಬಂದಿ ತುಂಬಲು ಭಾರತದ ಕಡೆ ಮುಖ ಮಾಡಿದ ಜರ್ಮನಿ
ಶಿಕ್ಷಣದ ಅಗತ್ಯವಾಗಿರುವ ಓದು, ಮರು ಓದು, ಮರುಕಟ್ಟುವಿಕೆ, ವಿಮರ್ಶಾತ್ಮಕ ಶಿಕ್ಷಣ, ವಿಮರ್ಶಾತ್ಮಕ ವ್ಯಾಸಂಗಕ್ರಮ(ಪೆಡಗಾಜಿ), ಸಿದ್ಧಾಂತ ಮತ್ತು ವಾಸ್ತವದ ಪಾಯೋಗಿಕತೆಯನ್ನು ಚರ್ಚಿಸುವ, ಸಂವಾದ ನಡೆಸುವ ಶಿಕ್ಷಣದ ಕಲಿಕೆ, ಸಾಮಾಜಿಕತೆ/ ಸಾಮಾಜಿಕ ಬದಲಾವಣೆಯ ಕಲಿಕೆ, ವ್ಯಾಸಂಗ ಕ್ರಮ ರೂಪಿಸಲು ಬೀದಿಗಳನ್ನು ಅಲಿಸುವ ಶಿಕ್ಷಣ, ಫ್ರೈರೆ ಹೇಳಿದಂತೆ ವಿಮರ್ಶಾತ್ಮಕ ವ್ಯಾಸಂಗಕ್ರಮ- ವಿಮರ್ಶಾತ್ಮಕ ಪ್ರಜ್ಞೆ ಎಲ್ಲವೂ ಮರುರೂಪಿಸಬೇಕಿದೆ.
(ಉನ್ನತ ಶಿಕ್ಷಣ: ಒಳಗೂ ಹೊರಗೂ ಕೃತಿಯಿಂದ ಆಯ್ದ ಭಾಗ)





