ರಾಜಸ್ಥಾನದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಮೃತಪಟ್ಟು, 22ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರಯಾಣಿಕರ ಬಸ್ ಒಂದು ಟ್ರಕ್‌ಗೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರಂತ ಸಂಭವಿಸಿದೆ.
ಈ ಖಾಸಗಿ ಬಸ್ ಹರಿದ್ವಾರದಿಂದ ಇಂದೋರ್‌ಗೆ ಪ್ರಯಾಣ ಬೆಳೆಸುತ್ತಿತ್ತು. ಬುಧವಾರ ಮುಂಜಾನೆ ಸುಮಾರು 2.30ರ ವೇಳೆಗೆ ರಾಜಸ್ಥಾನದ ದೌಸಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬಸ್ಸು ಏಕಾಏಕಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ಗೆ ಕ್ಷಣಾರ್ಧದಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ. ಘಟನೆ ನಡೆಯುವ ವೇಳೆ ಬಸ್ಸಿನಲ್ಲಿ ಒಟ್ಟು 37 ಮಂದಿ ಪ್ರಯಾಣಿಕರಿದ್ದರು ಎಂದು ಪೊಲೀಸ್ ವರದಿಗಳು ತಿಳಿಸಿವೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ತುರ್ತು ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡವು. ಗಾಯಾಳುಗಳನ್ನು ರಕ್ಷಿಸಿ ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರ ಪೈಕಿ, ಆರು ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೌಸಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪಿಯೂಷ್ ದೀಕ್ಷಿತ್ ಅವರು ಖುದ್ದಾಗಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಸದ್ಯ ಅಪಘಾತಕ್ಕೆ ನಿಖರ ಕಾರಣವೇನೆಂದು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




