ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿದ್ದ ನಾಡಬಾಂಬ್ ಪ್ರಕರಣವನ್ನು ಅಂಕೋಲಾ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಮೂರು ಜೀವಂತ ಕಚ್ಚಾ ನಾಡಬಾಂಬ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಜೂನ್ 30ರಂದು ಅಂಕೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ ಮಠಪತಿ ನೇತೃತ್ವದ ತಂಡ ಹಟ್ಟಿಕೇರಿ ಭಾಗದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ತಾಲೂಕಿನ ಹೊನ್ನಳ್ಳಿ ಗ್ರಾಮದ ನಾರಾಯಣ ಗೌಡ ಹಾಗೂ ನಾಗರಾಜ ಗೌಡ ಅಕ್ರಮವಾಗಿ ನಾಡಬಾಂಬ್‌ಗಳನ್ನು ಸಂಗ್ರಹಿಸಿ ಇಟ್ಟಿರುವ ಕುರಿತು ಖಚಿತ ಮಾಹಿತಿ ದೊರಕಿತು. ಮಾಹಿತಿಯ ಆಧಾರದಲ್ಲಿ ಪೊಲೀಸರು ತಕ್ಷಣ ಆ್ಯಂಟಿ ಸಬೋಟೇಜ್ ಚೆಕ್ (ASC) ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಪಂಚರ ಸಮ್ಮುಖದಲ್ಲಿ ನಾರಾಯಣ ಗೌಡ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಚುರುಕುಗೊಂಡ ಮಳೆ; ರೈತರ ಮೊಗದಲ್ಲಿ ಮಂದಹಾಸ, ಜಲಾಶಯಗಳ ನೀರಿನ ಮಟ್ಟ ಏರಿಕೆ
ಈ ವೇಳೆ ಆರೋಪಿಗಳು ಮೀನು ಹಿಡಿಯುವ ಉದ್ದೇಶದಿಂದ ನಾಡಬಾಂಬ್‌ಗಳನ್ನು ಇಟ್ಟುಕೊಂಡಿದ್ದಾಗಿ ಹೇಳಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ತುಮಕೂರು ಹೆದ್ದಾರಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸಂಬಂಧಿಕ ನಾಗೇಂದ್ರ ಗೌಡ ಮೃತಪಟ್ಟ ನಂತರ ತಮ್ಮ ಬಳಿ ಇದ್ದ ನಾಡಬಾಂಬ್‌ಗಳನ್ನು ಅಗಸೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದಾಗಿ ಆರೋಪಿಗಳು ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದಾಗ ಮೂರು ಜೀವಂತ ಕಚ್ಚಾ ನಾಡಬಾಂಬ್‌ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು.
ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಬಾಂಬ್‌ಗಳನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಸ್ಥಳಾಂತರಿಸಿದರು. ಧಾರವಾಡದಿಂದ ಆಗಮಿಸಿದ್ದ ತಜ್ಞರ ತಂಡವೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಾಥಮಿಕ ವಿಚಾರಣೆಯಲ್ಲಿ ಶಿರಗುಂಜಿ ಗ್ರಾಮದ ಸಂದೀಪ್ ಗೌಡ ಎಂಬಾತ ನಾಡಬಾಂಬ್‌ಗಳನ್ನು ನೀಡಿದ್ದಾನೆ ಎಂದು ಆರೋಪಿಗಳು ತಿಳಿಸಿದ್ದು, ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಹೊನ್ನಳ್ಳಿ ಗ್ರಾಮದ ನಾರಾಯಣ ಗೌಡ, ನಾಗರಾಜ ಗೌಡ ಹಾಗೂ ಶಿರಗುಂಜಿ ಗ್ರಾಮದ ಸಂದೀಪ್ ಗೌಡ ಅವರನ್ನು ಬಂಧಿಸಿದ್ದಾರೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆ-1908ರ ಕಲಂ 4 ಮತ್ತು 5 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 288ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇನ್ನೊಂದೆಡೆ, ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ನಾಗೇಂದ್ರ ಗೌಡ ಅವರ ಮೊಬೈಲ್ ಕರೆ ವಿವರ ಹಾಗೂ ಸಂಪರ್ಕಗಳ ಆಧಾರದ ಮೇಲೆ 35ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ತನಿಖೆ ಇನ್ನಷ್ಟು ವಿಸ್ತರಿಸಲಾಗಿದ್ದು, ನಾಡಬಾಂಬ್ ತಯಾರಿಕೆ ಮತ್ತು ಪೂರೈಕೆಯಲ್ಲಿ ಇತರರ ಪಾತ್ರವಿದೆಯೇ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಹೊನ್ನಾವರ ತಾಲೂಕಿನ ಚಂದಾವರ ಮೂಲದ ವ್ಯಕ್ತಿಯೊಬ್ಬನ ಹೆಸರೂ ಕೇಳಿಬಂದಿದ್ದು, ಈ ಸಂಬಂಧವೂ ಪರಿಶೀಲನೆ ನಡೆಯುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ನಾಡಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ನಡೆದಿರುವ ಈ ಕಾರ್ಯಾಚರಣೆ ಮಹತ್ವದ್ದಾಗಿದ್ದು, ಮುಂದಿನ ತನಿಖೆಯಲ್ಲಿ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.




