2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬರೆಂದು ಆರೋಪಿಸಲಾಗಿರುವ ಅಥರ್ ಖಾನ್‌ಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನಿರಾಕರಿಸಿದೆ. ಉಮರ್ ಖಾಲಿದ್ ಮತ್ತಿತರರೊಂದಿಗೆ ಸೇರಿ ಅಥರ್ ಖಾನ್ ಈ ಗಲಭೆಯ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಅಥರ್ ಖಾನ್ ವಿರುದ್ಧ ಹಲವರ ಸಾವು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಮತ್ತು ಮಧು ಜೈನ್ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.
“ವಾಟ್ಸಾಪ್ ಗುಂಪಿನಲ್ಲಿದ್ದ ಇತರರು ಅಹಿಂಸಾತ್ಮಕ ಪ್ರತಿಭಟನೆ ನಡೆಸುವಂತೆ ಸಲಹೆ ನೀಡಿದ್ದರೂ, ಅಥರ್ ಖಾನ್ ಮಾತ್ರ ಹಿಂಸಾತ್ಮಕ ಪ್ರತಿಭಟನೆಗೆ ಪಟ್ಟು ಹಿಡಿದಿದ್ದರು. ಅಂತಿಮವಾಗಿ ಇದು ಸಾವುನೋವಿಗೆ ಕಾರಣವಾಯಿತು. ಗಲಭೆಯ ಸಮಯದಲ್ಲಿ ಸಂಭವಿಸಿದ ಸಾವುಗಳು ಕಾಕತಾಳೀಯವಲ್ಲ. ತಂಡದ ಸದಸ್ಯರು ಪದೇ ಪದೇ ಬೇಡವೆಂದರೂ ಅಥರ್ ಖಾನ್ ಹಿಂಸಾಚಾರಕ್ಕೆ ಮುಂದಾದರು. ಹೀಗಾಗಿ, ಅವರನ್ನು ಕೇವಲ ಸ್ಥಳೀಯ ಮಟ್ಟದ ಕಾರ್ಯಕರ್ತ ಎಂದು ಪರಿಗಣಿಸಲು ಸಾಧ್ಯವಿಲ್ಲ; ಅವರು ಗಲಭೆಯ ಮುಖ್ಯ ಸಂಚುಕೋರರಲ್ಲಿ ಒಬ್ಬರು” ಎಂದಿದೆ ನ್ಯಾಯಪೀಠ.
ಇದನ್ನೂ ಓದಿ: ರಾಮಮಂದಿರ ಲೂಟಿ | ತನಿಖೆ-ಬಂಧನದಿಂದ RSSನ ತಿಮಿಂಗಿಲಗಳು ಪಾರು!
ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳನ್ನು ಪ್ರಭಾವಿಸುವ ಸಾಧ್ಯತೆಯಿದೆ ಮತ್ತು ಅವರು ತಲೆಮರೆಸಿಕೊಳ್ಳುವ ಅಪಾಯವಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಾಕ್ಷಿಗಳ ರಕ್ಷಣೆ ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಅಥರ್ ಖಾನ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಇದೇ ಪ್ರಕರಣದ ಪ್ರಮುಖ ರೂವಾರಿ ಎಂದು ಆರೋಪಿಸಿ, ಅಧೀನ ನ್ಯಾಯಾಲಯದಿಂದ ಹಿಡಿದು ದೆಹಲಿ ಹೈಕೋರ್ಟ್ ವರೆಗೆ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಸಲ್ಲಿಸಿದ್ದ ಹಲವು ಜಾಮೀನು ಅರ್ಜಿಗಳನ್ನು ನ್ಯಾಯಾಲಯಹಗಳು ತಿರಸ್ಕರಿಸುತ್ತಲೇ ಬಂದಿವೆ. ಗಲಭೆಯನ್ನು ಪ್ರಚೋದಿಸುವಂತಹ ಭಾಷಣ ಮಾಡುವುದು ಮತ್ತು ಸಂಚು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ ಆರೋಪ ಇವರ ಮೇಲಿದೆ. ಆದರೆ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರಗಳನ್ನು ಸರ್ಕಾರವಾಗಲೀ, ತನಿಖಾ ಸಂಸ್ಥೆಗಳಾಗಲೀ ಇದುವರೆಗೆ ಒದಗಿಸಿಲ್ಲ. ಆದರೂ ಅವರಿಗೆ ಮೇಲಿಂದ ಮೇಲೆ ಜಾಮೀನು ನಿರಾಕರಣೆ ಮಾಡುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ನಾಗರಿಕ ಹಕ್ಕುಗಳ ಹೋರಾಟಗಾರರು ಆರೋಪಿಸುತ್ತಿದ್ದಾರೆ.




