ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ವಿರುದ್ಧ ಸಾರ್ವಜನಿಕವಾಗಿ ಅವಹೇಳನಕಾರಿ ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಸಚಿವ, ಡಿಎಂಕೆ ಶಾಸಕ ಅನಿತಾ ಆರ್. ರಾಧಾಕೃಷ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತೂತುಕುಡಿಯ ದಕ್ಷಿಣ ಜಿಲ್ಲಾ ಡಿಎಂಕೆ ಕಾರ್ಯದರ್ಶಿಯೂ ಆಗಿರುವ ರಾಧಾಕೃಷ್ಣನ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು. ಈ ಬೆನ್ನಲ್ಲೇ, ಅವರನ್ನು ತೂತುಕುಡಿ ಪೊಲೀಸರು ಬಂಧಿಸಿದ್ದಾರೆ.
ಜೂನ್ 20ರಂದು ಆತೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ಶಾಸಕ ಅನಿತಾ ರಾಧಾಕೃಷ್ಣನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು ಎನ್ನಲಾಗಿದೆ. ಅವರ ಹೇಳಿಕೆ ವಿರುದ್ಧ ಟಿವಿಕೆ ಆತೂರು ನಗರ ಕಾರ್ಯದರ್ಶಿ ಎಸ್. ಸೆಲ್ವಂ ಅವರು ಆತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಶುಕ್ರವಾರ, ಅನಿತಾ ರಾಧಾಕೃಷ್ಣನ್ ಅವರು ಆತೂರು ಪಟ್ಟಣ ಪಂಚಾಯತಿಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ, ಸ್ಥಳಕ್ಕೆ ಬಂದ ಪೊಲೀಸರು ರಾಧಾಕೃಷ್ಣನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ತದನಂತರ ತನಿಖೆಗಾಗಿ ಅವರನ್ನು ತೂತುಕುಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್‌ಪಿ) ಕಚೇರಿಗೆ ಕರೆದೊಯ್ಯಲಾಗಿದೆ. ಅಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಡಿಎಸ್‌ಪಿ) ಆರ್ಮುಗಂ ಅವರು ಶಾಸಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
ಮತ್ತೊಂದೆಡೆ, ಹಾಲಿ ಶಾಸಕರ ಬಂಧನವನ್ನು ಖಂಡಿಸಿ ತಮಿಳುನಾಡಿನಲ್ಲಿ ಡಿಎಂಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತೂತುಕುಡಿ ಪಾಲಿಕೆ ಮೇಯರ್ ಜಗನ್ ಪೆರಿಯಸಾಮಿ ನೇತೃತ್ವದಲ್ಲಿ ನೂರಾರು ಡಿಎಂಕೆ ಕಾರ್ಯಕರ್ತರು ಎಸ್‌ಪಿ ಕಚೇರಿ ಎದುರು ಜಮಾಯಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಆತೂರಿನಲ್ಲೂ ಡಿಎಂಕೆ ಕಾರ್ಯಕರ್ತರ ಗುಂಪು ರಸ್ತೆ ತಡೆ ನಡೆಸಿ, ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದೆ.



