ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಹಾಗೂ ಸಂಚಾಲಕ ಅಭಿಜೀತ್ ದೀಪ್ಕೆ, ತಮ್ಮ ವಾಲುಜ್ ಎಂಐಡಿಸಿ ಪ್ರದೇಶದಲ್ಲಿರುವ ನಿವಾಸದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೋಲಿಸ್ ಸಬ್‌ಇನ್ಸ್‌ಪೆಕ್ಟರ್ (PSI) ಒಬ್ಬರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರತೆ ನೆಪದಲ್ಲಿ ನಿರ್ಬಂಧ ಹೇರಿದ ಸಿಬ್ಬಂದಿ ವಿರುದ್ಧ ತಿರುಗಿಬಿದ್ದ ಅಭಿಜೀತ್ ದೀಪ್ಕೆ “ನನ್ನ ಮನೆಗೆ ಬರುವವರ ಬಳಿ ದೆಹಲಿ ಪೊಲೀಸರಂತೆ ವರ್ತಿಸಬೇಡಿ” ಎಂದು ಖಾರವಾಗಿ ಉತ್ತರಿಸಿದ್ದಾರೆ. ಹಾಗೆಯೇ ಆ ಅಧಿಕಾರಿಯನ್ನು ತಮ್ಮ ಭದ್ರತಾ ಸಿಬ್ಬಂದಿಯಿಂದ ತಕ್ಷಣವೇ ತೆಗೆದುಹಾಕುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬೆದರಿಕೆ ಕರೆಗಳು ಹಾಗೂ ಮನೆ ಬಳಿ ಸಾರ್ವಜನಿಕರ ಜನಸಂದಣಿ ನಿಯಂತ್ರಿಸಲು ಪೊಲೀಸರು ದೀಪ್ಕೆ ಅವರಿಗೆ ಭದ್ರತೆ ಒದಗಿಸಿದ್ದರು. ಆದರೆ ಭದ್ರತೆಯ ನೆಪದಲ್ಲಿ ಪೊಲೀಸರೇ ಮನೆಗೆ ಬರುವವರನ್ನು ತಡೆಯುತ್ತಿದ್ದಾರೆ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ದೀಪ್ಕೆ ನಡೆಸಿದ ವಾಕ್ಸಮರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಪೊಲೀಸರೆದುರೇ ‘ಕಾಕ್ರೋಚ್’ಗಳನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು: ಅಭಿಜೀತ್ ದೀಪ್ಕೆ ಆರೋಪ
ಶುಕ್ರವಾರದಂದು (ಆಗಸ್ಟ್ 7) ದೀಪ್ಕೆ ಅವರ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ‘ಸುರೇಶ್’ ಎಂಬ ಹೆಸರಿನ ಸಬ್‌ಇನ್ಸ್‌ಪೆಕ್ಟರ್, ದೀಪ್ಕೆ ಅವರನ್ನು ಭೇಟಿಯಾಗಲು ಬರುತ್ತಿದ್ದ ಜನರನ್ನು ಪರಿಶೀಲನೆ ನೆಪದಲ್ಲಿ ತಡೆಯುತ್ತಿದ್ದರು ಮತ್ತು ವಾಪಸ್ ಕಳುಹಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ದೀಪ್ಕೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನಾನೇ ಬನ್ನಿ ಎಂದು ಕರೆಯುತ್ತಿರುವಾಗ ನನ್ನ ಮನೆಗೆ ಜನ ಬರುವುದಕ್ಕೆ ನಿಮಗೇನು ಸಮಸ್ಯೆ? ನೀವೇಕೆ ದೆಹಲಿ ಪೊಲೀಸರಂತೆ ವರ್ತಿಸುತ್ತಿದ್ದೀರಿ? ನಾನು ಯಾರನ್ನು ಭೇಟಿಯಾಗಬೇಕು, ಯಾರನ್ನು ಭೇಟಿಯಾಗಬಾರದು ಎಂದು ಹೇಳಲು ನೀವ್ಯಾರು? ದಯವಿಟ್ಟು ನನ್ನ ಮನೆಯಿಂದ ಹೊರಟುಹೋಗಿ, ನೀವು ನನಗೆ ಬೇಡ” ಎಂದು ಹೇಳಿದ್ದಾರೆ.
ಬಳಿಕ ಹಿರಿಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ ದೀಪ್ಕೆ, ಈ ಅಧಿಕಾರಿಯನ್ನು ತಕ್ಷಣವೇ ಭದ್ರತಾ ಪಡೆಯಿಂದ ತೆಗೆದುಹಾಕುವಂತೆ ಆಗ್ರಹಿಸಿದರು. ಇದಷ್ಟೇ ಅಲ್ಲದೆ, ತಮ್ಮ ಮನೆಯ ಸುತ್ತಮುತ್ತ ಸಿಐಡಿ ಸಿಬ್ಬಂದಿ ಬಿಳಿ ಉಡುಪಿನಲ್ಲಿ ಗೂಢಚರ್ಯೆ ನಡೆಸುತ್ತಿದ್ದು, ‘ಹಿಟ್ ಸ್ಪ್ರೇ’ (Hit Spray) ಎಂಬ ವಾಟ್ಸಾಪ್ ಗ್ರೂಪ್‌ಗೆ ನಿರಂತರ ಮಾಹಿತಿ ರವಾನಿಸುತ್ತಿದ್ದಾರೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.
ಅಭಿಜೀತ್ ದೀಪ್ಕೆ ಅವರು ‘ದೆಹಲಿ ಪೊಲೀಸ್’ ಉಲ್ಲೇಖ ಮಾಡಲು ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯೇ ಪ್ರಮುಖ ಕಾರಣ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಶೈಕ್ಷಣಿಕ ಅದ್ವಾನಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು (ಸದ್ಯ ರಾಜೀನಾಮೆ ನೀಡಿದ್ದಾರೆ) ಎಂದು ಇತ್ತೀಚೆಗೆ ಸಿಜೆಪಿ ವತಿಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆದಿತ್ತು.
ಜಂತರ್ ಮಂತರ್‌ನಲ್ಲಿ ಭಾರೀ ಮಳೆ ಬಂದಾಗ ಪ್ರತಿಭಟನಾಕಾರರು ಶೇಡ್ ಅಥವಾ ಪ್ಲಾಸ್ಟಿಕ್ ಶೀಟ್ ಹಾಕಿಕೊಳ್ಳಲು ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ಈ ವೇಳೆ ದೀಪ್ಕೆ ಪೊಲೀಸರ ಕಾಲಿಗೂ ಬಿದ್ದು ಮನವಿ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಜುಲೈ 20ರ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್ ಬಳಸಲಾಗಿತ್ತು. ಹಲವು ವಿದ್ಯಾರ್ಥಿಗಳ ಕಣ್ಣು, ಮುಖ ಹಾಗೂ ಕತ್ತಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದೆಹಲಿ ಪೊಲೀಸರು, ಕೇಂದ್ರ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.




