ದೇಶದಲ್ಲಿ ಜಂಟಿ ಕುಟುಂಬ ವ್ಯವಸ್ಥೆ ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕೃತಿಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೃದ್ಧರ ಮೇಲಿನ ದೌರ್ಜನ್ಯ ಮತ್ತು ಅಪರಾಧಗಳು ಹೆಚ್ಚುತ್ತಿದೆ. ಅದರಲ್ಲೂ ಕುಟುಂಬದೊಂದಿಗೆ ವಾಸಿಸುವ ವೃದ್ಧರ ಮೇಲೆಯೇ ಅಧಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ‘ಕ್ರೈಮ್ ಇನ್ ಇಂಡಿಯಾ’ (Crime in India) ವರದಿ ಬಿಚ್ಚಿಟ್ಟಿದೆ.
ಎನ್‌ಸಿಆರ್‌ಬಿ ವರದಿಯ ಪ್ರಕಾರ, ದೇಶದಲ್ಲಿ ಹಿರಿಯ ನಾಗರಿಕರ (60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು) ವಿರುದ್ಧ ದಾಖಲಾಗುವ ಅಪರಾಧ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ವಾರ್ಷಿಕವಾಗಿ ಸುಮಾರು 28,500ಕ್ಕೂ ಅಧಿಕ ವೃದ್ಧರ ಮೇಲಿನ ದೌರ್ಜನ್ಯ/ಅಪರಾಧ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಮಾರು 9.3% ನಷ್ಟು ಹೆಚ್ಚಳ ಕಂಡುಬಂದಿದೆ.
ಇದನ್ನೂ ಓದಿ: ಅತ್ಯಾಚಾರಿಗಳಿಗೆ ರಾಜಕೀಯ ರಕ್ಷೆ: ಇದು ಯಾವ ಭಾರತ? ನಾಲಿಗೆ ಸತ್ತ ಭಾರತವೇ?
ಅದರಲ್ಲೂ ದೆಹಲಿ, ಮುಂಬೈನಂತಹ ದೊಡ್ಡ ನಗರಗಳಲ್ಲಿ ವೃದ್ಧರ ಮೇಲಿನ ಅಪರಾಧದ ಪ್ರಮಾಣ ದೇಶ ಸರಾಸರಿಗಿಂತಲೂ ಹೆಚ್ಚಾಗಿದೆ.
ದೈಹಿಕ ಹಲ್ಲೆ ಪ್ರಕರಣಗಳು ಶೇ.27.3ರಷ್ಟು ದಾಖಲಾಗಿದ್ದರೆ, ಆಸ್ತಿ ಮತ್ತು ಹಣಕಾಸು ವಂಚನೆ ಪ್ರಕರಣಗಳು ಶೇ.10-13ರಷ್ಟು ದಾಖಲಾಗಿವೆ. ಇನ್ನು ಮನೆಯಲ್ಲೇ ಇರುವಾಗ ಅಥವಾ ಒಂಟಿಯಾಗಿದ್ದಾಗ ನಡೆದಿದೆ ಎಂದು ವೃದ್ಧರು ದಾಖಲಿಸಿರುವ ಕಳ್ಳತನ ಪ್ರಕರಣಗಳು ಶೇ.13.8ರಷ್ಟಿದೆ. ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ಶೇ.4ರಷ್ಟು ದಾಖಲಾಗಿವೆ.
ಇನ್ನು ಎನ್‌ಸಿಆರ್‌ಬಿ ವರದಿಯು ಪೊಲೀಸರಲ್ಲಿ ದಾಖಲಾದ ‘ಅಪರಾಧಗಳನ್ನು’ ಮಾತ್ರ ಉಲ್ಲೇಖಿಸಿದೆ. ಆದರೆ ಸಮಾಜಶಾಸ್ತ್ರೀಯ ಅಧ್ಯಯನಗಳು ಮತ್ತು ಆರೋಗ್ಯ ಸಚಿವಾಲಯದ ‘ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಇನ್ ಇಂಡಿಯಾ’ (LASI) ವರದಿಯ ಪ್ರಕಾರ, ಬಹುತೇಕ ದೌರ್ಜನ್ಯಗಳು ಕುಟುಂಬದೊಳಗೇ ನಡೆಯುತ್ತಿವೆ.
ಅದರಲ್ಲೂ ದೇಶದಲ್ಲಿ ಹಿರಿಯರನ್ನು ಕೀಳಾಗಿ ಕಾಣುವುದು, ನಿರಂತರವಾಗಿ ಬೈಯುವುದು ಮತ್ತು ಮಾನಸಿಕ ಕಿರುಕುಳ ನೀಡುವುದು ಅತ್ಯಂತ ಸಾಮಾನ್ಯವಾಗಿದೆ. ಇಂತಹ ಪ್ರಕರಣಗಳು ಯಾವುದೇ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿಲ್ಲ. ವೃದ್ಧಾಪ್ಯದಲ್ಲಿ ಅಗತ್ಯವಿರುವ ಆಹಾರ, ವೈದ್ಯಕೀಯ ಸೌಲಭ್ಯ ಮತ್ತು ಪ್ರೀತಿಯನ್ನು ನೀಡದೆ ಅವರನ್ನು ಮನೆಯ ಒಂದು ಮೂಲೆಗೆ ತಳ್ಳುವುದೂ ಅಧಿಕವಾಗುತ್ತಿದೆ.
ಇನ್ನೂ ಮುಖ್ಯವಾಗಿ ವೃದ್ಧರ ಬಳಿ ಸ್ವಂತ ಆದಾಯ ಅಥವಾ ಪಿಂಚಣಿ ಇಲ್ಲದಿದ್ದರೆ ಅವರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿರುತ್ತಿದೆ. ಒಂದು ವೇಳೆ ಆಸ್ತಿ ಇದ್ದರೆ, ಅದನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವವರೆಗೂ ಮಕ್ಕಳಿಂದ ದೌರ್ಜನ್ಯಗಳು ಮುಂದುವರಿಯುತ್ತವೆ ಎಂದು ಹೇಳುತ್ತದೆ ಎನ್‌ಸಿಆರ್‌ಬಿ ವರದಿ.
ಇನ್ನು ತಜ್ಞರು ಹೇಳುವಂತೆ, “ಮಕ್ಕಳ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಸಮಾಜದಲ್ಲಿ ಗೌರವ ಹೋಗುತ್ತದೆ” ಎಂಬ ಭಯ ಮತ್ತು ಮಕ್ಕಳ ಮೇಲಿನ ಅತಿಯಾದ ಮಮಕಾರದಿಂದಾಗಿ ಶೇ. 90ಕ್ಕೂ ಅಧಿಕ ವೃದ್ಧರು ತಮಗಾಗುವ ದೌರ್ಜನ್ಯವನ್ನು ಯಾರಿಗೂ ಹೇಳದೆ, ನೋವನ್ನು ನುಂಗಿಕೊಂಡು ಬದುಕುತ್ತಿದ್ದಾರೆ. ಹೀಗಾಗಿ ಎನ್‌ಸಿಆರ್‌ಬಿ ಅಂಕಿ-ಅಂಶಗಳಿಗಿಂತಲೂ ನಿಜವಾದ ದೌರ್ಜನ್ಯದ ಪ್ರಮಾಣ ಸಮಾಜದಲ್ಲಿ ಹತ್ತು ಪಟ್ಟು ಹೆಚ್ಚಿರಬಹುದು.




