ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇಡೀ ಅಧಿಕಾರಾವಧಿಯಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನೆಗಳಿಗೆ ಉತ್ತರಿಸದಿರಲು ಕಾರಣವೇನು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಲಾಗದೆ ತಡಬಡಾಯಿಸಿದ ಸೂರ್ಯ, ಪ್ರಧಾನಿ ಮೋದಿ ಅವರು ಪತ್ರಿಕಾಗೋಷ್ಠಿ ನಡೆಸದೇ ಇರುವುದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪ್ರಶ್ನೋತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಸೂರ್ಯ ಅವರನ್ನು ಟ್ರೋಲ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್ ಸೇರಿದಂತೆ ಹಲವರು ‘ಎಕ್ಸ್’ ವೇದಿಕೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಕ್ಲಿಪ್‌ನಲ್ಲಿ; ಬೆಂಗಳೂರಿನ ವಿ.ವಿ. ಪುರಂನ ಜೈನ್ ಕಾಲೇಜಿನಲ್ಲಿ ಜೂನ್ 18ರಂದು ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸೂರ್ಯ ಉತ್ತರಿಸುತ್ತಿರುವುದು ಕಂಡುಬಂದಿದೆ.
ತೇಜಸ್ವಿ ಸೂರ್ಯ ಅವರನ್ನು ಪ್ರಶ್ನಿಸಿದ ವಿದ್ಯಾರ್ಥಿ; “ನನ್ನ ಪ್ರಶ್ನೆ ಏನೆಂದರೆ, ‘ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದರೂ, ಗೌರವಾನ್ವಿತ ಪ್ರಧಾನಮಂತ್ರಿಯವರು ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಒಂದೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಿರುವ ಬಗ್ಗೆ ನಿಮ್ಮ ನಿಲುವೇನು’” ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ತೇಜಸ್ವಿ ಸೂರ್ಯ, “ಚರ್ಚೆ ಪ್ರಾರಂಭಿಸಲು ಇದು ಒಂದು ಅದ್ಭುತವಾದ ಪ್ರಶ್ನೆ” ಎಂದು ಹೇಳಿದರಾದರೂ, ತಕ್ಷಣ ಉತ್ತರ ಕೊಡಲು ಪೇಚಾಡಿದರು. ಸ್ವಲ್ಪ ಹೊತ್ತು ತಡೆದು ಮಾತು ಮುಂದುವರೆಸಿದ ಅವರು, “ನಾನು ಮೊದಲೇ ಹೇಳಿದಂತೆ — ಭಾಷಣಗಳ ಕಾಲ ಈಗ ಮುಗಿದುಹೋಗಿದೆ ಎಂದು ನಿಮಗೆ ಅನಿಸುವುದಿಲ್ಲವೇ? ದಿನದ 24 ಗಂಟೆಯೂ ಸಕ್ರಿಯವಾಗಿರುವ ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ, ನಾನು ನನ್ನ ಮತದಾರರೊಂದಿಗೆ ನೇರವಾಗಿ ಮಾತನಾಡಬಹುದಾದಾಗ, ಪತ್ರಿಕಾಗೋಷ್ಠಿಯ ಉದ್ದೇಶವೇನಿದೆ? ಪತ್ರಿಕಾಗೋಷ್ಠಿ ಎಂಬುದು ನಾಯಕ ಮತ್ತು ಜನರ ನಡುವೆ ಒಂದು ರೀತಿಯ ತಡೆಗೋಡೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ ಇದು ಈಗ ಅನಗತ್ಯ” ಎಂದು ವಾದಿಸಿದ್ದಾರೆ.
Gen Z stumped cerelac baby Tejasvi Surya!
— Supriya Shrinate (@SupriyaShrinate) June 20, 2026
A simple question was asked: “Why is our Honorable PM not attending any Press conferences in over 10 years”
🤐🤐🤐🤐 pic.twitter.com/Dfx5FSC0lE
“ಪ್ರಧಾನಿಯವರು ಸಂವಹನ ನಡೆಸುತ್ತಿಲ್ಲ ಎಂದಲ್ಲ, ಅವರು ಪ್ರತಿದಿನವೂ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ,” ಎಂದು ಸಮರ್ಥನೆ ನೀಡಿದ್ದಾರೆ.
ಸೂರ್ಯ ಅವರನ್ನು ‘ಸೆರೆಲಾಕ್ ಬೇಬಿ’ (ಅಪ್ರಬುದ್ಧ) ವ್ಯಂಗ್ಯವಾಡಿ ಟ್ವೀಟ್ ಮಾಡಿರುವ ಸುಪ್ರಿಯಾ ಶ್ರಿನೇಟ್, “ಜೆನ್ ಜಿ ವಿದ್ಯಾರ್ಥಿಯು ಸಂಸದರನ್ನು ಅಪ್ರಬುದ್ಧರನ್ನಾಗಿ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಮೋದಿ ಪತ್ರಿಕಾಗೋಷ್ಠಿ ವಿವಾದ
ಪ್ರಧಾನಿ ಮೋದಿ ಅವರು 2014ರ ಮೇನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಪತ್ರಕರ್ತರಿಗೆ ಪ್ರತ್ಯೇಕ ಸಂದರ್ಶನಗಳನ್ನು ನೀಡಿದ್ದಾರಾದರೂ, ಮುಕ್ತ ಪತ್ರಿಕಾಗೋಷ್ಠಿಗಳಿಂದ ದೂರವೇ ಉಳಿದಿದ್ದಾರೆ. ಇದಕ್ಕೆ ಅಪವಾದವೆಂಬಂತೆ 2019ರಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ ಮೋದಿ ವೇದಿಕೆಯಲ್ಲಿದ್ದರಾದರೂ, ತಮಗೆ ಬಂದ ಎಲ್ಲ ಪ್ರಶ್ನೆಗಳನ್ನು ಆಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಡೆಗೆ ತಿರುಗಿಸಿ, ಅವರೇ ಉತ್ತರಿಸುವಂತೆ ಮಾಡಿದ್ದರು.
ಇನ್ನು, ಇತ್ತೀಚೆಗೆ, ಮೋದಿ ಅವರು ನಾರ್ವೆಯ ಓಸ್ಲೋಗೆ ಭೇಟಿ ನೀಡಿದ್ದಾಗ ಪ್ರತಿಕಾಗೋಷ್ಠಿ ಮತ್ತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಂತೆ ಪತ್ರಕರ್ತೆಯೊಬ್ಬರು ಮೋದಿ ಅವರನ್ನು ಕೇಳಿದ್ದರು. ಆದರೆ, ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ಮೌನವಾಗಿ ಅಲ್ಲಿಂದ ಹೊರ ನಡೆದರು.




