ಮತದಾರರ ಪಟ್ಟಿಯಲ್ಲಿನ ದೋಷಗಳು ಹಾಗೂ ಅಸಂಗತತೆಗಳನ್ನು ಪತ್ತೆಹಚ್ಚಲು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬಳಸಿದ ಸಾಫ್ಟ್‌ವೇರ್‌ನ ಹೆಸರು ಮತ್ತು ಆವೃತ್ತಿಯ ವಿವರಗಳನ್ನು ಬಹಿರಂಗಪಡಿಸಲು ಚುನಾವಣಾ ಆಯೋಗ ನಿರಾಕರಿಸಿದೆ. ಈ ಮಾಹಿತಿ ವಾಣಿಜ್ಯ ಗೌಪ್ಯತೆ, ವ್ಯಾಪಾರ ರಹಸ್ಯಗಳು ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳಿಗೆ (IPR) ಸಂಬಂಧಿಸಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಬಹಿರಂಗಪಡಿಸುವುದಕ್ಕೆ ವಿನಾಯಿತಿ ಇರುವುದರಿಂದ ಸಾಫ್ಟ್‌ವೇರ್ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿದೆ.
ಅಕ್ಟೋಬರ್ 16ರಂದು ನೀಡಿದ ಉತ್ತರದಲ್ಲಿ ಆಯೋಗ ಈ ಮಾಹಿತಿ ನೀಡಿದ್ದು, ತೆಲಂಗಾಣದ ಕರೀಂಪುರದ ಸಾಮಾಜಿಕ ಕಾರ್ಯಕರ್ತ ಎಂ.ಎ. ಮುಜೀಬ್ ಅಯೂಬ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಸ್ಪಷ್ಟನೆ ನೀಡಿದೆ.
ಜುಲೈ 27ರಂದು ಸಲ್ಲಿಸಿದ್ದ ಅರ್ಜಿಯಲ್ಲಿ, SIR ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿನ ತಪ್ಪುಗಳು, ಅಸಂಗತತೆಗಳು ಹಾಗೂ ಮಾಹಿತಿಯಲ್ಲಿನ ವ್ಯತ್ಯಾಸಗಳನ್ನು ಗುರುತಿಸಲು ಯಾವ ಸಾಫ್ಟ್‌ವೇರ್, ಅಪ್ಲಿಕೇಶನ್, ಅಲ್ಗಾರಿದಮ್ ಅಥವಾ ಕೃತಕ ಬುದ್ಧಿಮತ್ತೆ (AI) ವೇದಿಕೆಯನ್ನು ಬಳಸಲಾಗಿದೆ ಎಂದು ಅಯೂಬ್ ಪ್ರಶ್ನಿಸಿದ್ದರು.
ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಪರಿಶೀಲನೆ, ತಿದ್ದುಪಡಿ ಅಥವಾ ಹೆಸರುಗಳನ್ನು ಅಳಿಸುವ ಅಗತ್ಯವಿರುವ ದಾಖಲೆಗಳನ್ನು ಗುರುತಿಸುತ್ತದೆಯೇ? ಅಂತಹ ದಾಖಲೆಗಳನ್ನು ಗುರುತಿಸಿದ ಬಳಿಕ ಅನುಸರಿಸುವ ಕಾರ್ಯವಿಧಾನವೇನು? ಈ ಪ್ರಕ್ರಿಯೆಯಲ್ಲಿ ಎಐ, ಮಷಿನ್ ಲರ್ನಿಂಗ್, ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಅಥವಾ ಸ್ವಯಂಚಾಲಿತ ನಿರ್ಧಾರ ಬೆಂಬಲ ವ್ಯವಸ್ಥೆಗಳನ್ನು ಬಳಸಲಾಗಿದೆಯೇ ಎಂಬ ಬಗ್ಗೆಯೂ ಅವರು ಮಾಹಿತಿ ಕೋರಿದ್ದರು.
ಆರ್‌ಟಿಐ ಅರ್ಜಿಗೆ ಉತ್ತರಿಸಿದ ಚುನಾವಣಾ ಆಯೋಗ, SIR ಪ್ರಕ್ರಿಯೆಗಾಗಿ ಯಾವುದೇ ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿಲ್ಲ ಅಥವಾ ಖರೀದಿಸಿಲ್ಲ ಎಂದು ತಿಳಿಸಿದೆ. ಮತದಾರರ ಹೆಸರನ್ನು ಪಟ್ಟಿಗೆ ಸೇರಿಸುವುದು ಅಥವಾ ತೆಗೆದುಹಾಕುವ ನಿರ್ಧಾರವನ್ನು ಚುನಾವಣಾ ನೋಂದಣಿ ಅಧಿಕಾರಿಗಳು (ERO) ಲಭ್ಯವಿರುವ ದಾಖಲೆಗಳು ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದೆ. ಆದರೆ, ಸಾಫ್ಟ್‌ವೇರ್‌ನ ಹೆಸರು, ಆವೃತ್ತಿ ಹಾಗೂ ಅದರ ಕಾರ್ಯವಿಧಾನದ ಕುರಿತ ನಿರ್ದಿಷ್ಟ ವಿವರಗಳನ್ನು ಆಯೋಗ ಬಹಿರಂಗಪಡಿಸಿಲ್ಲ.
ಕೇಳಲಾದ ಕೆಲವು ಪ್ರಶ್ನೆಗಳು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2(f) ಅಡಿಯಲ್ಲಿ ಬರುವ ಮಾಹಿತಿ ಅಲ್ಲ, ಬದಲಾಗಿ ಸ್ಪಷ್ಟನೆ ಕೋರುವ ಪ್ರಶ್ನೆಗಳಾಗಿವೆ ಎಂದು ಆಯೋಗ ಉತ್ತರಿಸಿದೆ.
ಸಾಫ್ಟ್‌ವೇರ್ ಮತ್ತು ಅಲ್ಗಾರಿದಮ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ಆರ್‌ಟಿಐ ಅರ್ಜಿಗಳಿಗೆ ಉತ್ತರಿಸುವಾಗ ಸಾಮಾನ್ಯವಾಗಿ ಬಹಿರಂಗಪಡಿಸುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ತಯಾರಕರಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಕೂಡ ಆರ್‌ಟಿಐ ಅರ್ಜಿಗಳಿಗೆ ಉತ್ತರಿಸುವಾಗ ಇವಿಎಂಗಳ ಮೂಲ ಕೋಡ್‌ಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದವು.
RTI ಕಾಯ್ದೆಯ ಸೆಕ್ಷನ್ 2(f) ಪ್ರಕಾರ ದಾಖಲೆ, ಇಮೇಲ್, ಸಲಹೆ, ಅಭಿಪ್ರಾಯ ಮುಂತಾದ ಲಭ್ಯವಿರುವ ‘ದಾಖಲೆಗಳನ್ನು’ ಮಾತ್ರ ಕೇಳಬಹುದು. “ಏಕೆ ಹೀಗೆ ಮಾಡಿದ್ದೀರಿ?”, “ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ?” ಎಂಬಂತಹ ವಿವರಣೆ ಹಾಗೂ ಸ್ಪಷ್ಟನೆಗಳನ್ನು ಕೋರುವ ಪ್ರಶ್ನೆಗಳು ‘ಮಾಹಿತಿ’ಯ ವ್ಯಾಖ್ಯಾನಕ್ಕೆ ಬರುವುದಿಲ್ಲ ಎಂಬುದು ಆಯೋಗದ ನಿಲುವು.
ಇದನ್ನೂ ಓದಿ: SIR ಅಕ್ರಮಗಳ ಬಗ್ಗೆ ಉತ್ತರಿಸಲು ನಿರಾಕರಿಸಿದ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್
ಅರ್ಜಿದಾರರು ಅಥವಾ ಸಾರ್ವಜನಿಕ ಹಿತಾಸಕ್ತಿ ಹೊಂದಿರುವವರು ಆಯೋಗದ ಪ್ರಥಮ ಮೇಲ್ಮನವಿ ಅಧಿಕಾರಿಗೆ (FAA) ಅರ್ಜಿ ಸಲ್ಲಿಸಿ, ಸಾಫ್ಟ್‌ವೇರ್ ಮೂಲ ಕೋಡ್ ಬಿಟ್ಟು ಕೇವಲ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಪ್ರಕ್ರಿಯೆಯ ಸಾರಾಂಶ ವಿವರಗಳನ್ನು ನೀಡುವಂತೆ ಕೋರಬಹುದು. ಪ್ರಥಮ ಮೇಲ್ಮನವಿ ತಿರಸ್ಕೃತಗೊಂಡರೆ CIC ಗೆ ದ್ವಿತೀಯ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ AI ಅಥವಾ ಸಾಫ್ಟ್‌ವೇರ್ ಬಳಕೆಯ ಪಾರದರ್ಶಕತೆಗಾಗಿ ನ್ಯಾಯಾಲಯದ ಮೊರೆ ಹೋಗಬಹುದು.
SIR ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ, ಸ್ವಯಂಚಾಲಿತ ಪರಿಶೀಲನೆ ಹಾಗೂ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಗುರುತಿಸುವ ವಿಧಾನಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಲ್ಲಿಸಿದ್ದ ಅರ್ಜಿಗೆ ಚುನಾವಣಾ ಆಯೋಗ ನೀಡಿರುವ ಈ ಉತ್ತರ ಇದೀಗ ಗಮನ ಸೆಳೆದಿದೆ.





