ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೋಲ್ಕತ್ತದ ಎಸ್‌ಪ್ಲನೇಡ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬೀದಿಬದಿ ವ್ಯಾಪಾರಿಗಳಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಮತ್ತು ತೆರವು ಕಾರ್ಯಾಚರಣೆಯನ್ನು ಅನ್ಯಾಯವಾಗಿ ನಡೆಸಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗಂಭೀರವಾಗಿ ಆರೋಪಿಸಿದೆ. ಬಡವರ ಜೀವನೋಪಾಯವನ್ನು ಕಸಿದುಕೊಳ್ಳುವ ಈ ದಬ್ಬಾಳಿಕೆಯ ಕ್ರಮವನ್ನು ವಿರೋಧಿಸಲು ಹಾಗೂ ಜನಸಾಮಾನ್ಯರ ಬೆಂಬಲಕ್ಕೆ ನಿಲ್ಲಲು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಇದೊಂದು ಕೇವಲ ರಾಜಕೀಯ ವಿಚಾರವಲ್ಲ, ಬದಲಾಗಿ ಮಾನವೀಯತೆ ಹಾಗೂ ಜನಸಾಮಾನ್ಯರ ಬದುಕಿನ ಪ್ರಶ್ನೆಯಾಗಿದೆ ಎಂದು ಟಿಎಂಸಿ ಪ್ರತಿಪಾದಿಸಿದೆ. ನಗರದಲ್ಲಿ ಹಲವು ಕುಟುಂಬಗಳು ವರ್ಷಗಳಿಂದ ರಸ್ತೆಬದಿಯ ಸಣ್ಣ ವ್ಯಾಪಾರಗಳನ್ನೇ ನೆಚ್ಚಿಕೊಂಡು ಬದುಕುತ್ತಿವೆ. ಏಕಾಏಕಿ ನಡೆಸುತ್ತಿರುವ ಈ ಕಾರ್ಯಾಚರಣೆಯಿಂದ ನೇರ ಹಾಗೂ ವ್ಯಾಪಕವಾದ ಆರ್ಥಿಕ ಪರಿಣಾಮ ಬೀರಲಿದೆ ಎಂದು ಟಿಎಂಸಿ ನಾಯಕರು ಎಚ್ಚರಿಸಿದ್ದಾರೆ. ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುವವರಲ್ಲಿ ಈ ತೆರವು ಕಾರ್ಯಾಚರಣೆ ತೀವ್ರ ಆತಂಕ ಹಾಗೂ ಅನಿಶ್ಚಿತತೆಯನ್ನು ಸೃಷ್ಟಿಸಿದೆ.
ಇದನ್ನು ಓದಿದ್ದೀರಾ? ಪಂಜಾಬ್ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್‌ಗೆ ನುಂಗಲಾರದ ತುತ್ತು
ತೆರವು ಕಾರ್ಯಾಚರಣೆಯ ಕುರಿತು ಈ ಹಿಂದೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಮಮತಾ ಬ್ಯಾನರ್ಜಿ, “ಬಾಧಿತರಿಗೆ ತಮ್ಮ ಅಹವಾಲುಗಳನ್ನು ಮಂಡಿಸಲು ಅಥವಾ ಕಾನೂನಿನ ಮೊರೆ ಹೋಗಲು ಅವಕಾಶ ನೀಡದೆ, ಸರ್ವಾಧಿಕಾರಿ ಧೋರಣೆಯಿಂದ ಮಳಿಗೆಗಳನ್ನು ನೆಲಸಮಗೊಳಿಸಲಾಗುತ್ತಿದೆ. ಸಣ್ಣ-ಪುಟ್ಟ ನಿಯಮ ಉಲ್ಲಂಘನೆಗಳಾಗಿದ್ದರೆ ಕಾನೂನಿನ ಪ್ರಕಾರ ದಂಡ ಅಥವಾ ದಂಡನೆ ವಿಧಿಸಲು ಅವಕಾಶವಿದೆಯೇ ಹೊರತು, ಏಕಾಏಕಿ ನೆಲಸಮ ಮಾಡುವುದು ಸರಿಯಲ್ಲ. ಪ್ರಸ್ತುತ ಆಡಳಿತವು ಈ ನಿಯಮಗಳನ್ನು ಗಾಳಿಗೆ ತೂರಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ರಾಜ್ಯದ ವಿವಿಧ ಸಮಸ್ಯೆಗಳ ವಿರುದ್ಧ ಬೀದಿಗಿಳಿದು ಹೋರಾಡುವ ತಂತ್ರವನ್ನು ಟಿಎಂಸಿ ಅಳವಡಿಸಿಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದುರ್ಬಲ ವರ್ಗದವರ ಮೇಲಾಗುತ್ತಿರುವ ಈ ತೆರವು ಕಾರ್ಯಾಚರಣೆಯ ಸಾಮಾಜಿಕ ಮತ್ತು ರಾಜಕೀಯ ಆಯಾಮಗಳೆರಡನ್ನೂ ಈ ಪ್ರತಿಭಟನೆ ಬೆಳಕಿಗೆ ತರಲಿದೆ.




