ಮಳೆ ಕೊರತೆ ಮುಂದುವರಿದರೆ ಬೆಳಗಾವಿ ಜಿಲ್ಲೆಯ ಎರಡುಮೂರುರ ತಾಲೂಕುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ನಗರದ ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸತತ ಮೂರು ವಾರ ಶೇ.50ಕ್ಕಿಂತ ಕಡಿಮೆ ಮಳೆಯಾದರೆ ಅಂತಹ ಪ್ರದೇಶಗಳನ್ನು ಬರಪೀಡಿತವೆಂದು ಘೋಷಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಬೈಲಹೊಂಗಲ, ಬೆಳಗಾವಿ, ಸವದತ್ತಿ ಹಾಗೂ ಮೂಡಲಗಿ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಯರಗಟ್ಟಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಉದ್ದು ಮತ್ತು ಹೆಸರು ಬೆಳೆಗಳಿಗೆ ಆಗಿರುವ ಹಾನಿಗೆ ಎನ್ಡಿಆರ್ಎಫ್ ಮಾನದಂಡಗಳ ಪ್ರಕಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.



