ಕೇಂದ್ರ ಸರ್ಕಾರದ ರೈತ ವಿರೋಧಿ ನಿರ್ಧಾರಗಳು ಮತ್ತು ಕನಿಷ್ಠ ಬೆಂಬಲ ಬೆಲೆ (MSP) ಜಾರಿಯಲ್ಲಿನ ವಿಳಂಬವನ್ನು ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ‘ಸಂಯುಕ್ತ ಕಿಸಾನ್ ಮೋರ್ಚಾ’ (SKM) ಮತ್ತೊಮ್ಮೆ ಬೃಹತ್ ಹೋರಾಟಕ್ಕೆ ಕರೆ ನೀಡಿದೆ. ಮೇ 27 ರಿಂದ ದೇಶಾದ್ಯಂತ ಪ್ರತಿಭಟನೆಗಳನ್ನು ಆರಂಭಿಸುವುದಾಗಿ ಘೋಷಿಸಿದೆ.
ಪ್ರತಿಭಟನೆಗೆ ಕರೆ ನೀಡಿರುವ ಎಸ್‌ಕೆಎಂ ನಾಯಕರು, ಅಮೆರಿಕ, ಯುರೋಪ್ ಸೇರಿದಂತೆ ನಾನಾ ರಾಷ್ಟ್ರಗಳಿಂದ ಕೃಷಿ ಉತ್ಪನ್ನಗಳ ಆಮದು, ಜಮೀನನ್ನು ಆಧಾರ್‌ನೊಂದಿಗೆ ಕಡ್ಡಾಯ ಜೋಡಣೆ, ರಸಗೊಬ್ಬರ ಕಡಿತ, ಕೆಲವೇ ಬೆಳೆಗಳಿಗೆ ಮಾತ್ರ ಅಲ್ಪಾವಧಿಯ ಎಂಎಸ್‌ಪಿ ನಿಗದಿ, ಕೃಷಿ ಸೌಲಭ್ಯಕ್ಕೆ ಇ-ಕೆವೈಸಿಯಂತಹ ಆದೇಶಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಈ ಆದೇಶ ಮತ್ತು ನೀತಿಗಳು ಕೃಷಿ ವಲಯಕ್ಕೆ ಮಾರಕವಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದೇಶವ್ಯಾಪಿ ನಡೆಯುವ ಪ್ರತಿಭಟನೆಗಳಲ್ಲಿ ಕೇಂದ್ರ ಸರ್ಕಾರದ ಎಂಎಸ್‌ಪಿ ಆದೇಶದ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟುಹಾಕುವ ಮೂಲಕ ರೈತರು ತೀವ್ರ ವಿರೋಧವನ್ನು ದಾಖಲಿಸಲಿದ್ದಾರೆ” ಎಂದು ಎಸ್‌ಕೆಎಂ ತಿಳಿಸಿದೆ.
“ಕೇಂದ್ರ ಸರ್ಕಾರವು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನ್ವಯ ಎಲ್ಲ ಬೆಳೆಗಳಿಗೂ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆಯನ್ನು (C2+50 ಸೂತ್ರದಡಿ) ಖಾತ್ರಿಪಡಿಸಬೇಕು. ಆದರೆ, ಸರ್ಕಾರ ಜಾರಿಗೆ ತಂದಿರುವ ಆದೇಶಗಳು ರೈತರ ಕಣ್ಣಿಗೆ ಮಣ್ಣೆರಚುವಂತಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತಿವೆ” ಎಂದು ಎಸ್‌ಕೆಎಂ ಆಕ್ರೋಶ ವ್ಯಕ್ತಪಡಿಸಿದೆ.
ಮೇ 27ರಂದು ದೇಶದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ರೈತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಕೃಷಿ ವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಲಿದ್ದಾರೆ ಎಂದು ಎಸ್‌ಕೆಎಂ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ | ಬಿಜೆಪಿ ಗೋರಕ್ಷಣೆ ನಾಟಕಕ್ಕೆ ಮುಸ್ಲಿಂ ಯುವಕರ ಪೆಟ್ಟು; ಸಂಕಷ್ಟದಲ್ಲಿ ಹಿಂದು ರೈತರು!
2020ರಲ್ಲಿ, ದೆಹಲಿ ಗಡಿಯಲ್ಲಿ ಒಂದು ವರ್ಷಗಳ ಕಾಲ ನಡೆದ ಸುದೀರ್ಘ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಲಿಖಿತ ಭರವಸೆಗಳನ್ನು ಇದುವರೆಗೆ ಈಡೇರಿಸಿಲ್ಲ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರ ಮೇಲಿನ ಮೊಕದ್ದಮೆಗಳ ವಾಪಸಾತಿ, ಸಾಲ ಮನ್ನಾ ಮತ್ತು ಲಖಿಂಪುರ್ ಖೇರಿ ಘಟನೆಯ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದ್ದಾರೆ. ಮುಂಬರುವ ದಿನಗಳಲ್ಲಿ ಈ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಲು ಹಾಗೂ ರೈತರ ಹಕ್ಕುಗಳ ರಕ್ಷಣೆಗಾಗಿ ಸುದೀರ್ಘ ಹೋರಾಟಕ್ಕೆ ಸಿದ್ಧರಾಗಲು ದೇಶದ ಎಲ್ಲ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.



