2026ರ ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದಾಗಿನಿಂದ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮುಂದುವರೆದಿದೆ. ಕದನ ವಿರಾಮಗಳು ಜಾಲ್ತಿಯಲ್ಲಿದ್ದು, ಶಾಂತಿ ಒಪ್ಪಂದಗಳು ನಡೆಯುತ್ತಿವೆ. ಬಿಕ್ಕಟ್ಟನ್ನು ಶಮನಗೊಳಿಸಲು ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಸಂಧಾನ ಪ್ರಕ್ರಿಯೆಗಳು ಚುರುಕುಗೊಂಡಿವೆ.
ಇರಾನ್ ಮತ್ತು ಅಮೆರಿಕ ನಡುವೆ ನೇರ ರಾಜತಾಂತ್ರಿಕ ಬಾಂಧವ್ಯ ಇಲ್ಲದ ಕಾರಣ, ಈ ಎರಡೂ ದೇಶಗಳನ್ನು ಮಾತುಕತೆಯ ಮೇಜಿಗೆ ತರಲು ನೆರೆರಾಷ್ಟ್ರ ಪಾಕಿಸ್ತಾನ ಸಂಧಾನಕಾರನಾಗಿ ಕೆಲಸ ಮಾಡುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಮತ್ತು ಆಂತರಿಕ ವ್ಯವಹಾರಗಳ ಸಚಿವ ಮೊಹ್ಸಿನ್ ನಖ್ವಿ ಇತ್ತೀಚೆಗೆ ಇರಾನ್ ರಾಜಧಾನಿ ಟೆಹ್ರಾನ್‌ಗೆ ಭೇಟಿ ನೀಡಿ ಅಲ್ಲಿನ ಉನ್ನತ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವುದು ಅಂತಿಮ ಒಪ್ಪಂದವಲ್ಲ. ಬದಲಾಗಿ, ತಿಳುವಳಿಕೆ ಪತ್ರವಾಗಿದೆ. ಇದರಲ್ಲಿ, ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ಷರತ್ತನ್ನು ಹೊಂದಿಲ್ಲ. ಇದರ ಉದ್ದೇಶ’ ಯುದ್ಧವನ್ನು ಕೊನೆಗೊಳಿಸುವುದು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡುವ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸುವುದು, ಹಾರ್ಮುಜ್ ಜಲಸಂಧಿಯಲ್ಲಿನ ಸಂಚಾರವನ್ನು ಸುಗಮಗೊಳಿಸುವುದು ಹಾಗೂ ಇರಾನ್‌ನ ಸುತ್ತಮುತ್ತಲಿನಿಂದ ಯುಎಸ್ ನೌಕಾಪಡೆಯನ್ನು ಹಿಂತೆಗೆದುಕೊಳ್ಳುವುದಾಗಿದೆ ಎಂದು ವರದಿಯಾಗಿದೆ.
ಅಲ್ಲದೆ, ಇರಾನ್ ಮೇಲೆ ಅಮೆರಿಕವು ಹೇರಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ಭಾಗಶಃ ಹಿಂಪಡೆಯಬೇಕು, ಅಮೆರಿಕ-ಇಸ್ರೇಲ್ ದಾಳಿಯಿಂದಾಗಿ ಇರಾನ್‌ನಲ್ಲಿ ನಾಶವಾಗಿರುವ ಆಸ್ತಿಗಳಲ್ಲಿ ಅರ್ಧದಷ್ಟು, ಅಂದರೆ 12 ಬಿಲಿಯನ್ ಡಾಲರ್‌ಗಳ ಪರಿಹಾರ ಬಿಡುಗಡೆ ಹಾಗೂ ಅಮೆರಿಕ ನೌಕಾ ದಿಗ್ಬಂಧನವನ್ನು ಕೊನೆಗೊಳಿಸಬೇಕೆಂದು ಇರಾನ್ ಬೇಡಿಕೆ ಇಟ್ಟಿದೆ.
ಈ ತಿಳುವಳಿಕೆ ಪತ್ರಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದ ನಂತರ ಪರಮಾಣು ಒಪ್ಪಂದವನ್ನು ತಲುಪಲು 30 ದಿನಗಳ ಗಡುವನ್ನು ಸಹ ನಿಗದಿಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ | ಬಿಜೆಪಿ ಗೋರಕ್ಷಣೆ ನಾಟಕಕ್ಕೆ ಮುಸ್ಲಿಂ ಯುವಕರ ಪೆಟ್ಟು; ಸಂಕಷ್ಟದಲ್ಲಿ ಹಿಂದು ರೈತರು!
ಇನ್ನು, ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಇರಾನ್ ಶ್ಲಾಘಿಸಿದೆ. ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪಾಕ್‌ನಲ್ಲಿರುವ ಇರಾನ್ ರಾಯಭಾರಿ ರೆಜಾ ಅಮಿನಿ ಮೊಗದಮ್, “ಎದುರಾಳಿ ರಾಷ್ಟ್ರವು (ಅಮೆರಿಕ) ಸೂಕ್ತ ರೀತಿಯಲ್ಲಿ ಬದ್ಧತೆಯನ್ನು ಪ್ರದರ್ಶಿಸಿದರೆ, ಒಂದು ಸಕಾರಾತ್ಮಕ ಹೆಜ್ಜೆ ರೂಪುಗೊಳ್ಳಲಿದೆ ಎಂಬ ಭರವಸೆ ಇಟ್ಟುಕೊಳ್ಳಬಹುದು. ಇರಾನ್-ಅಮೆರಿಕ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನವು ನಡೆಸಿದ ಮಧ್ಯಸ್ಥಿಕೆ ಮತ್ತು ಸಮರ್ಪಿತ ಪ್ರಯತ್ನಗಳೂ ಸಹ ಇದಕ್ಕೆ ಪ್ರಮುಖ ಕಾರಣ. ಈ ಎಲ್ಲ ಪ್ರಯತ್ನಗಳು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಗೆ ಕಾರಣವಾಗಲಿ. ಈ ಪ್ರಾಮಾಣಿಕ ಪ್ರಯತ್ನಗಳಿಗಾಗಿ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದಿದ್ದಾರೆ.



