ಅರುಣಾಚಲ ಪ್ರದೇಶದ ಸಿಯಾಂಗ್ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರ ಪ್ರತಿಭಟನಾಕಾರರ ಜತೆಗೆ ಮಾತುಕತೆ ನಡೆಸಲು ಮುಂದಾಗಿದೆ. ಆದರೆ, ಪ್ರತಿಭಟನಾಕಾರರು ಮಾತುಕತೆಗೆ ನಿರಾಕರಿಸಿದ್ದಾರೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರು ಕರೆ ನೀಡಿದ್ದ ಸಭೆಗೆ ಪ್ರತಿಭಟನೆಯ ಮುಂಚೂಣಿಯಲ್ಲಿರುವ ‘ಸಿಯಾಂಗ್ ಮೂಲನಿವಾಸಿ ರೈತರ ವೇದಿಕೆ’ (SIFF) ತಿರಸ್ಕರಿಸಿದೆ.
“ರಾಜ್ಯದ ಬಿಜೆಪಿ ಸರ್ಕಾರವು ಆಣೆಕಟ್ಟು ವಿರೋಧಿ ಹೋರಾಟಗಾರರನ್ನು ನಿರಂತರವಾಗಿ ಬಂಧಿಸುತ್ತಾ ಜೈಲಿಗೆ ತಳ್ಳುತ್ತಿದೆ. ಸರ್ಕಾರವು ಒಂದೆಡೆ ಆಣೆಕಟ್ಟು ವಿರೋಧಿಸುವ ನಾಗರಿಕರು ಮತ್ತು ಕಾರ್ಯಕರ್ತರನ್ನು ಬಂಧಿಸುತ್ತಿರುವುದು, ಮತ್ತೊಂದೆಡೆ ಮಾತುಕತೆಗೆ ಕರೆಯುತ್ತಿರುವುದು ಸರ್ಕಾರದ ದ್ವಂದ್ವ ನೀತಿಯಾಗಿದೆ. ಇಂತಹ ಭಯದ ಮತ್ತು ಬಂಧನದ ವಾತಾವರಣದಲ್ಲಿ ಸರ್ಕಾರದೊಂದಿಗೆ ಯಾವುದೇ ರೀತಿಯ ಫಲಪ್ರದ ಚರ್ಚೆ ನಡೆಸಲು ಸಾಧ್ಯವಿಲ್ಲ” ಎಂದು ‘SIFF’ ವಕ್ತಾರ ತಾಗೋರಿ ಮಿಜೆ ಸ್ಪಷ್ಟಪಡಿಸಿದ್ದಾರೆ.
“ಸರ್ಕಾರದೊಂದಿಗೆ ಚರ್ಚೆ ಪ್ರಾರಂಭವಾಗಬೇಕಾದರೆ ಕೆಲವು ಪೂರ್ವಭಾವಿ ಷರತ್ತುಗಳನ್ನು ಈಡೇರಿಸಬೇಕು. ಬಂಧನಕ್ಕೊಳಗಾಗಿರುವ ಎಲ್ಲ ಆಣೆಕಟ್ಟು ವಿರೋಧಿ ಹೋರಾಟಗಾರರನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕು. ಅವರ ವಿರುದ್ಧ ದಾಖಲಿಸಲಾಗಿರುವ ಎಲ್ಲ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು. ಪ್ರತಿಭಟನಾಕಾರರ ವಿರುದ್ಧ ನಿಯೋಜಿಸಲಾಗಿರುವ ಕೇಂದ್ರ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಈ ಕ್ರಮಗಳನ್ನು ಕೈಗೊಂಡಾಗ ಮಾತ್ರ ಮಾತುಕತೆಗೆ ಸೂಕ್ತ ವಾತಾವರಣ ಸೃಷ್ಟಿಯಾಗುತ್ತದೆ” ಎಂದು SIFF ತಿಳಿಸಿದೆ.
ಈ ಹಿಂದೆ ರಾಜ್ಯ ರಾಜಧಾನಿ ಇಟಾನಗರದಲ್ಲಿ ಈ ಬಂಧನಗಳನ್ನು ಖಂಡಿಸಿ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಇದೆಲ್ಲದರ ನಡುವೆ, ಆಣೆಕಟ್ಟು ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪ್ರಮುಖ ಮೂಲನಿವಾಸಿ ಸಮುದಾಯವಾದ ‘ಆದಿ’ (Adi) ಸಮುದಾಯಕ್ಕೆ ಮುಖ್ಯಮಂತ್ರಿ ಪೇಮಾ ಖಂಡು ಅವರು ಪತ್ರ ಬರೆದಿದ್ದರು. “ಶಿಯಾಂಗ್ ಮತ್ತು ಅಪ್ಪರ್ ಶಿಯಾಂಗ್ ಜಿಲ್ಲೆಯ ನಿವಾಸಿಗಳು ಹಾಗೂ ಆದಿ ಸಮುದಾಯದ ಬಾಂಧವರು ಈ ಯೋಜನೆಯ ಕುರಿತು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಚರ್ಚಿಸಲು ಮುಂದೆ ಬರಬೇಕು. ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಜನರ ಪ್ರತಿಯೊಂದು ಆತಂಕಕ್ಕೂ ಉತ್ತರ ನೀಡಲು ಬದ್ಧರಾಗಿದ್ದಾರೆ” ಎಂದು ಅವರು ಭರವಸೆ ನೀಡಿದ್ದರು.
ಅಲ್ಲದೆ, ಈ ಯೋಜನೆಯ ಅಗತ್ಯತೆಯನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ, “ಗಡಿಭಾಗಕ್ಕೆ ಅತ್ಯಂತ ಸಮೀಪದಲ್ಲಿರುವ ಚೀನಾದ ಮೆಡಾಗ್ ಕೌಂಟಿಯಲ್ಲಿ ‘ಯಾರ್ಲುಂಗ್ ತ್ಸಾಂಗ್ಪೋ’ (ಸಿಯಾಂಗ್ ನದಿಗಿರುವ ಚೀನಾ ಹೆಸರು) ನದಿಗೆ ಅಡ್ಡಲಾಗಿ ಚೀನಾ ಸರ್ಕಾರವು ಈಗಾಗಲೇ ಬೃಹತ್ ಆಣೆಕಟ್ಟು ನಿರ್ಮಾಣ ಪ್ರಾರಂಭಿಸಿದೆ. ಭಾರತದೊಂದಿಗೆ ಯಾವುದೇ ಮಾಹಿತಿ ಹಂಚಿಕೊಳ್ಳದೆ ಚೀನಾ ಈ ಕೆಲಸ ಕೈಗೊಂಡಿದೆ. ಇದರಿಂದ, ಭಾರತದ ಗಡಿ ಭಾಗದಲ್ಲಿ ನೀರಿನ ಹರಿವಿನ ಅನಿಶ್ಚಿತತೆ ಸೃಷ್ಟಿಯಾಗಬಹುದು. ಮಳೆಗಾಲದಲ್ಲಿ ದಿಢೀರ್ ಪ್ರವಾಹ ಅಥವಾ ಚಳಿಗಾಲದಲ್ಲಿ ನೀರಿನ ಅಭಾವ ಎದುರಾಗುವ ಭೀತಿಯಿದೆ” ಎಂದು ವಾದಿಸಿದ್ದಾರೆ.
ಸಿಯಾಂಗ್ ನದಿಯ 65%ರಷ್ಟು ನೀರು ಚೀನಾದಿಂದಲೇ ಬರುವುದರಿಂದ, ಸಂಭವನೀಯ ಪ್ರವಾಹವನ್ನು ತಡೆಯಲು ನಮಗೆ ಸಾಧ್ಯವಿಲ್ಲದಿದ್ದರೂ, ನಮ್ಮ ಗಡಿಯೊಳಗೆ ಜಲ ಭದ್ರತೆಯನ್ನು ಕಾಯ್ದುಕೊಳ್ಳಲು ನಾವು ಸಿದ್ಧರಾಗಬೇಕಿದೆ. ಹೀಗಾಗಿ, ನದಿಯ ಪರಿಸರ ವ್ಯವಸ್ಥೆ ಮತ್ತು ನೀರಿನ ಹರಿವನ್ನು ಸಮತೋಲನದಲ್ಲಿಡಲು ಈ ಯೋಜನೆ ಅತ್ಯಗತ್ಯ” ಎಂದು ಸಮಜಾಯಷಿ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ ಮೂಲಭೂತ ಹಕ್ಕುಗಳ ಮೇಲೇಕೆ ತೂಗುಕತ್ತಿ?
ಮುಖ್ಯಮಂತ್ರಿಯ ಈ ಪತ್ರಕ್ಕೆ ಮತ್ತು ಸರ್ಕಾರದ ನಿಲುವಿಗೆ ಆಣೆಕಟ್ಟು ವಿರೋಧಿ ಹೋರಾಟಗಾರ ಮತ್ತು ಇಂಜಿನಿಯರ್ ಕ್ಯಾಟನ್ ಮೊಯೊಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಕ್ಯಾಟನ್ ಮೊಯೊಂಗ್, “ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸರ್ಕಾರವು ಆಣೆಕಟ್ಟು ನಿರ್ಮಾಣವನ್ನು ಸಮರ್ಥಿಸಿಕೊಳ್ಳುತ್ತಿರುವುದು ಸುಳ್ಳು ನಿರೂಪಣೆಯಾಗಿದೆ. ಅಬೋರ್ ಕಣಿವೆ ಅಥವಾ ಅರುಣಾಚಲ ಪ್ರದೇಶದಲ್ಲಿ ಯಾವುದೇ ಭದ್ರತಾ ಬಿಕ್ಕಟ್ಟಿಲ್ಲ; ಭಾರತ ಅಥವಾ ಚೀನಾ ದೇಶಗಳ ಕಲ್ಪನೆ ಮೂಡುವ ಮುನ್ನವೇ, ಸಾವಿರಾರು ವರ್ಷಗಳಿಂದ ಇಲ್ಲಿನ ಮೂಲನಿವಾಸಿಗಳು ಈ ಗಡಿ ಭಾಗವನ್ನು ರಕ್ಷಿಸಿಕೊಂಡು ಬಂದಿದ್ದಾರೆ” ಎಂದು ಪ್ರತಿಪಾದಿಸಿದರು.
ಮೊಯೊಂಗ್ ಅವರ ಪ್ರಕಾರ, “ಸಿಯಾಂಗ್ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟುವುದು ಹೊಸ ವಿಷಯವೇನಲ್ಲ. ಇದನ್ನು ಸ್ಥಳೀಯರು ‘ಆನೆ ಸಿಯಾಂಗ್’ (ಸಿಯಾಂಗ್ ತಾಯಿ) ಎಂದು ಪೂಜಿಸುತ್ತಾರೆ. ಮೂಲನಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿರುವ ಕಾರ್ಪೊರೇಟ್ ಸಂಸ್ಥೆಗಳು, ಬಂಡವಾಳಶಾಹಿಗಳು ಮತ್ತು ರಾಜಕೀಯ ಪಕ್ಷಗಳ ವಿರುದ್ಧ ಅಬೋರ್ ಮತ್ತು ಆದಿ ಸಮುದಾಯದ ಜನರು ಕಳೆದ 47 ವರ್ಷಗಳಿಂದ ಸುದೀರ್ಘ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಈ ಹಿಂದೆ ಕೂಡ ಸ್ಥಳೀಯ ಸಮುದಾಯಗಳು ಇಂತಹ ಆಣೆಕಟ್ಟು ನಿರ್ಮಾಣದ ಪ್ರಯತ್ನಗಳನ್ನು ಯಶಸ್ವಿಯಾಗಿ ತಡೆದಿವೆ” ಎಂದು ಅವರು ನೆನಪಿಸಿದ್ದಾರೆ.
ಬಿಜೆಪಿ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೂ, ಸರ್ಕಾರದ ನಡೆಗೆ ಸ್ವತಃ ಆಡಳಿತ ಪಕ್ಷದ ಒಳಗೆ ಮತ್ತು ಇತರ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಇಟಾನಗರದ ಸಮೀಪವಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಆಣೆಕಟ್ಟು ಯೋಜನೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ.



