ಉಚಿತ ಬಸ್ ಪ್ರಯಾಣ ಯೋಜನೆಗಳು ಮಹಿಳೆಯರ ಸಂಚಾರಕ್ಕೆ ಹೊಸ ವೇಗ ನೀಡಿವೆ. ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 2019ರಿಂದ 2024ರ ಅವಧಿಯಲ್ಲಿ ಮಹಿಳೆಯರ ಪ್ರಯಾಣದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಉದ್ಯೋಗ, ಶಿಕ್ಷಣ, ಆರೈಕೆ ಹಾಗೂ ಇತರ ದೈನಂದಿನ ಚಟುವಟಿಕೆಗಳಿಗಾಗಿ ಮನೆಯಿಂದ ಹೊರಬರುತ್ತಿರುವ ಸಂಖ್ಯೆ ಹಾಗೂ ಅವರಿಗೆ ಲಭ್ಯವಾಗುತ್ತಿರುವ ಅವಕಾಶಗಳ ಪ್ರಮಾಣವೂ ಹೆಚ್ಚಾಗಿದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ನಡೆಸಿದ 2019 ಮತ್ತು 2024ರ ಸಮಯ ಬಳಕೆ ಸಮೀಕ್ಷೆಗಳ ವಿಶ್ಲೇಷಣೆಯಲ್ಲಿ ಈ ಅಂಶಗಳು ಬಹಿರಂಗವಾಗಿವೆ. 2021ರಲ್ಲಿ ಪಂಜಾಬ್ ಮತ್ತು ತಮಿಳುನಾಡು ರಾಜ್ಯಗಳು ಈ ಉಚಿತ ಪ್ರಯಾಣ ಯೋಜನೆಯನ್ನು ಮೊದಲು ಜಾರಿಗೆ ತಂದವು. ತದನಂತರ 2023ರ ಜೂನ್ನಲ್ಲಿ ಕರ್ನಾಟಕ (ಶಕ್ತಿ ಯೋಜನೆ) ಹಾಗೂ 2023ರ ಡಿಸೆಂಬರ್ನಲ್ಲಿ ತೆಲಂಗಾಣ (ಮಹಾಲಕ್ಷ್ಮಿ ಯೋಜನೆ) ರಾಜ್ಯಗಳು ಮಹಿಳೆಯರಿಗೆ ಸಾಮಾನ್ಯ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಹಕ್ಕನ್ನು ನೀಡಿದವು. ಮಹಿಳೆಯರು ಉದ್ಯೋಗ, ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಲು ನೆರವಾಗುವ ಉದ್ದೇಶದಿಂದ ಜಾರಿಗೆ ತರಲಾದ ಈ ಯೋಜನೆಗಳು ಮಹಿಳೆಯರ ದೈನಂದಿನ ಜೀವನದ ಮೇಲೆ ಧನಾತ್ಮಕ ಪ್ರಭಾವ ಬೀರಿರುವುದನ್ನುʼದ ಹಿಂದೂʼ ಪ್ರಕಟಿಸಿರುವ ಈ ಸಮೀಕ್ಷೆ ವಿವರವಾಗಿ ವಿಶ್ಲೇಷಿಸಿದೆ.
NSO, 2019 ಮತ್ತು 2024ರಲ್ಲಿ ಎರಡು ಹಂತಗಳ ಆಲ್ ಇಂಡಿಯಾ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯ ಪ್ರತಿ ಹಂತದಲ್ಲೂ ದೇಶಾದ್ಯಂತ ಸುಮಾರು 4.5 ಲಕ್ಷ ಜನರನ್ನು ಸಂಪರ್ಕಿಸಿ, ಅವರು ದಿನದ ಪ್ರತಿ ಅರ್ಧ ಗಂಟೆಯ ಅವಧಿಯನ್ನು (every half hour) ಹೇಗೆ ಕಳೆಯುತ್ತಾರೆ ಎಂಬ ದತ್ತಾಂಶವನ್ನು ಕಲೆಹಾಕಲಾಗಿದೆ. ಈ ಎರಡು ವರ್ಷಗಳ ದತ್ತಾಂಶಗಳನ್ನು ಹೋಲಿಸಿ ನೋಡಿದಾಗ, ಉಚಿತ ಬಸ್ ಯೋಜನೆಗಳು ಜಾರಿಯಾದ ನಂತರ ಮಹಿಳೆಯರು ತಮ್ಮ ಮನೆಗಳಿಂದ ಹೊರಬಂದು ಪ್ರಯಾಣಿಸುವ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಾಗಿರುವುದು ಕಂಡುಬಂದಿದೆ.
ಉಚಿತ ಬಸ್ ಸೌಲಭ್ಯವಿರುವ ನಾಲ್ಕು ರಾಜ್ಯಗಳಲ್ಲಿ (ಪಂಜಾಬ್, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ) 15 ರಿಂದ 59 ವರ್ಷ ವಯೋಮಾನದ ಮಹಿಳೆಯರ ಪೈಕಿ, ಸಮೀಕ್ಷೆಯ ದಿನದಂದು ಕನಿಷ್ಠ ಒಂದು ಬಾರಿಯಾದರೂ ಪ್ರಯಾಣಿಸಿದವರ ಪ್ರಮಾಣವು 2019ರಲ್ಲಿದ್ದ ಶೇ. 38.7 ರಿಂದ 2024ರ ವೇಳೆಗೆ ಶೇ. 45.3 ಕ್ಕೆ ಏರಿಕೆಯಾಗಿದೆ. ಅಂದರೆ ಮಹಿಳೆಯರ ಪ್ರಯಾಣದಲ್ಲಿ ಶೇ. 6.6 ರಷ್ಟು ಪ್ರಯಾಣ ಪ್ರಮಾನ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಈ ರಾಜ್ಯಗಳಲ್ಲಿ ಪುರುಷರ ಪ್ರಯಾಣದ ಹೆಚ್ಚಳ ಕೇವಲ ಶೇ. 3.7 ರಷ್ಟಿದೆ. ಆದರೆ, ಉಚಿತ ಬಸ್ ಸೌಲಭ್ಯವಿಲ್ಲದ ಇತರ 12 ಪ್ರಮುಖ ರಾಜ್ಯಗಳಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಅಲ್ಲಿ ಮಹಿಳೆಯರ ಪ್ರಯಾಣದ ಪ್ರಮಾಣ ಶೇ. 4.4 ರಷ್ಟು ಮಾತ್ರ ಹೆಚ್ಚಾಗಿದ್ದರೆ, ಪುರುಷರ ಪ್ರಯಾಣದ ಪ್ರಮಾಣ ಶೇ. 7.6 ರಷ್ಟು ಏರಿಕೆಯಾಗಿತ್ತು. ಅಂದರೆ ಉಚಿತ ಬಸ್ ಇಲ್ಲದ ರಾಜ್ಯಗಳಲ್ಲಿ ಪುರುಷರೇ ಹೆಚ್ಚು ಹೊರಗಡೆ ಪ್ರಯಾಣಿಸುತ್ತಿದ್ದಾರೆ.
2014ರಲ್ಲಿ ವಿಭಜನೆಗೊಂಡ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಹೋಲಿಕೆಯು ಈ ಯೋಜನೆಯ ನೈಜ ಪ್ರಭಾವವನ್ನು ಅತ್ಯಂತ ಸ್ಪಷ್ಟವಾಗಿ ಎತ್ತಿಹಿಡಿದಿದೆ. ತೆಲಂಗಾಣದಲ್ಲಿ 2023ರ ಡಿಸೆಂಬರ್ನಲ್ಲೇ ‘ಮಹಾಲಕ್ಷ್ಮಿ’ ಯೋಜನೆ ಜಾರಿಗೆ ಬಂತು. ಆದರೆ ಆಂಧ್ರಪ್ರದೇಶದಲ್ಲಿ ‘ಸ್ತ್ರೀ ಶಕ್ತಿ’ ಯೋಜನೆಯು 2024ರ ಸಮೀಕ್ಷೆ ಪೂರ್ಣಗೊಂಡ ನಂತರ ಅಂದರೆ 2025ರ ಆಗಸ್ಟ್ನಲ್ಲಿ ಜಾರಿಯಾಯಿತು. 2019ರ ಸಮೀಕ್ಷೆಯಲ್ಲಿ ತೆಲಂಗಾಣದ ಶೇ. 43.7 ರಷ್ಟು ಹಾಗೂ ಆಂಧ್ರಪ್ರದೇಶದ ಶೇ. 40.8 ರಷ್ಟು ಮಹಿಳೆಯರು ದಿನನಿತ್ಯ ಪ್ರಯಾಣಿಸುತ್ತಿದ್ದರು. ಆದರೆ 2024ರ ವೇಳೆಗೆ ತೆಲಂಗಾಣದಲ್ಲಿ ಈ ಪ್ರಮಾಣ ಶೇ. 54.6ಕ್ಕೆ (ಸುಮಾರು ಶೇ. 11ರಷ್ಟು ಭಾರಿ ಜಿಗಿತ) ಏರಿಕೆಯಾದರೆ, ಆಂಧ್ರಪ್ರದೇಶದಲ್ಲಿ ಪ್ರಯಾಣದ ಪ್ರಮಾಣವು ಶೇ. 41.6 ರಷ್ಟಿದ್ದು ಬಹುತೇಕ ಬದಲಾಗದೆ ಉಳಿಯಿತು.
ಕೋವಿಡ್ ಸಾಂಕ್ರಾಮಿಕದ ನಂತರ ದೇಶದ ಎಲ್ಲಾ ರಾಜ್ಯಗಳಲ್ಲೂ ಜನರ ಪ್ರಯಾಣದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಒಂದೇ ರಾಜ್ಯದ ಒಳಗೆ ಪುರುಷರಿಗಿಂತ ಮಹಿಳೆಯರ ಪ್ರಯಾಣ ಎಷ್ಟು ವೇಗವಾಗಿ ಬೆಳೆದಿದೆ ಎಂಬುದನ್ನು ಪರಿಶೀಲಿಸುವುದು ಹೆಚ್ಚು ಉಪಯುಕ್ತ. ಉಚಿತ ಬಸ್ ಯೋಜನೆಯಿರುವ ನಾಲ್ಕೂ ರಾಜ್ಯಗಳಲ್ಲಿ ಪುರುಷರ ಪ್ರಯಾಣದ ವೇಗಕ್ಕಿಂತ ಮಹಿಳೆಯರ ಪ್ರಯಾಣದ ವೇಗವೇ ಹೆಚ್ಚಾಗಿತ್ತು. ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಉಚಿತ ಬಸ್ ಇಲ್ಲದ ಬಹುತೇಕ ರಾಜ್ಯಗಳಲ್ಲಿ ಮಹಿಳೆಯರ ಪ್ರಯಾಣದ ಬೆಳವಣಿಗೆ ಪುರುಷರಿಗಿಂತ ಮಂದಗತಿಯಲ್ಲಿತ್ತು. ಇಡೀ ದೇಶದಲ್ಲಿ ಬಿಹಾರ ಮಾತ್ರ ಇದಕ್ಕೆ ಏಕೈಕ ಅಪವಾದವಾಗಿತ್ತು. ಒಟ್ಟಾರೆ, ಉಚಿತ ಬಸ್ ಇಲ್ಲದ ರಾಜ್ಯಗಳಿಗೆ ಹೋಲಿಸಿದರೆ ಉಚಿತ ಬಸ್ ಇರುವ ರಾಜ್ಯಗಳಲ್ಲಿ ಮಹಿಳೆಯರ ಪ್ರಯಾಣದ ದರಲ್ಲಿ ಅತ್ಯಂತ ಹೆಚ್ಚಿನ ಮಟ್ಟದ ಬೆಳವಣಿಗೆಯಾಗಿದೆ.
ಈ ಸಮೀಕ್ಷೆಯು ಮಹಿಳೆಯರ ಪ್ರತಿ ಪ್ರಯಾಣದ ಉದ್ದೇಶವನ್ನೂ (purpose of trip) ದಾಖಲಿಸಿದೆ. ಉಚಿತ ಬಸ್ ರಾಜ್ಯಗಳಲ್ಲಿ ವೇತನಸಹಿತ ಉದ್ಯೋಗಕ್ಕಾಗಿ ಪ್ರಯಾಣಿಸುವ ಮಹಿಳೆಯರ ಪ್ರಮಾಣ ಶೇ. 2.3 ರಷ್ಟು ಹೆಚ್ಚಿದ್ದರೆ, ಇತರ ರಾಜ್ಯಗಳಲ್ಲಿ ಇದು ಶೇ. 1.2 ರಷ್ಟು ಮಾತ್ರ ಹೆಚ್ಚಾಗಿದೆ. ಅತ್ಯಂತ ದೊಡ್ಡ ಬದಲಾವಣೆ ಕಂಡುಬಂದಿರುವುದು ‘ಆರೈಕೆ ಸಂಬಂಧಿತ’ ಪ್ರಯಾಣಗಳಲ್ಲಿ. ಅಂದರೆ ಮಕ್ಕಳನ್ನು ಶಾಲೆಗೆ ಬಿಡುವುದು- ಕರೆತರುವುದು ಅಥವಾ ಕುಟುಂಬದ ಅನಾರೋಗ್ಯ ಪೀಡಿತರನ್ನು ಹಾಗೂ ಹಿರಿಯರನ್ನು ಆಸ್ಪತ್ರೆಗೆ ಕರೆದೊಯ್ಯುವಂತಹ ಪ್ರಯಾಣಗಳು ಉಚಿತ ಬಸ್ ರಾಜ್ಯಗಳಲ್ಲಿ ಮೂರು ಪಟ್ಟು ಹೆಚ್ಚಾಗಿವೆ. ಜತೆಗೆ ಸಾಮಾಜಿಕ, ಧಾರ್ಮಿಕ ಹಾಗೂ ವಿಹಾರ ಸಂಬಂಧಿತ ಪ್ರಯಾಣಗಳೂ ಈ 4 ರಾಜ್ಯಗಳಲ್ಲಿ ಹೆಚ್ಚಾಗಿವೆ, ಆದರೆ ಇತರ ರಾಜ್ಯಗಳಲ್ಲಿ ಇವು ಯಾವುದೇ ಬದಲಾವಣೆಯಿಲ್ಲದೆ ಯಥಾಸ್ಥಿತಿಯಲ್ಲೇ ಉಳಿದಿವೆ.
ಉಚಿತ ಬಸ್ ರಾಜ್ಯಗಳಲ್ಲಿ ಬೆಳಿಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆಯ ಸುಮಾರಿಗೆ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಗರಿಷ್ಠ ಮಟ್ಟದಲ್ಲಿರುತ್ತದೆ. ಆದರೆ ಇದರ ಜೊತೆಗೆ ತಡಬೆಳಿಗ್ಗೆ ಹಾಗೂ ಮಧ್ಯಾಹ್ನದ ವೇಳೆಯಲ್ಲೂ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮಧ್ಯಾಹ್ನದ ಸಮಯವು ಸಾಮಾನ್ಯವಾಗಿ ಕಚೇರಿ ಅಥವಾ ಉದ್ಯೋಗದ ಸಮಯವಲ್ಲದಿರುವುದರಿಂದ, ಈ ವೇಳೆಯಲ್ಲಿ ಮಹಿಳೆಯರು ತಮ್ಮ ಮನೆಯ ಆರೈಕೆ ಹಾಗೂ ದಿನನಿತ್ಯದ ಗೃಹ ಅಗತ್ಯಗಳಿಗಾಗಿ ಸ್ವತಂತ್ರವಾಗಿ ಹೊರಬರುತ್ತಿರುವುದನ್ನು ಈ ಸಮಯದ ದತ್ತಾಂಶಗಳು ಪುಷ್ಟೀಕರಿಸುತ್ತವೆ.
ಆದಾಗ್ಯೂ, ಸಮೀಕ್ಷೆಯ ದತ್ತಾಂಶಗಳು ಉಚಿತ ಬಸ್ ಯೋಜನೆಯಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ತೋರಿಸುತ್ತಿಲ್ಲ. ಉಚಿತ ಬಸ್ ರಾಜ್ಯಗಳಲ್ಲಿ 15 ರಿಂದ 59 ವರ್ಷ ವಯಸ್ಸಿನ ಪೈಕಿ ದಿನದಲ್ಲಿ ವೇತನಸಹಿತ ಕೆಲಸ ಮಾಡಿದ ಮಹಿಳೆಯರ ಪ್ರಮಾಣ ಶೇ. 30.5 ರಿಂದ ಶೇ. 34.4 ಕ್ಕೆ ಏರಿಕೆಯಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಈ ಪ್ರಮಾಣ ಶೇ. 18.4 ರಿಂದ ಶೇ. 22.9 ಕ್ಕೆ ಅಲ್ಪ ಹೆಚ್ಚಳ ಕಂಡಿದೆ.
ಇದರರ್ಥ, ಉಚಿತ ಬಸ್ ಸೌಲಭ್ಯವು ಮಹಿಳೆಯರು ಸಾಂಪ್ರದಾಯಿಕವಾಗಿ ಮನೆಯಿಂದ ಹೊರಬರಲು ಎದುರಿಸುತ್ತಿದ್ದ ದೊಡ್ಡ ಆರ್ಥಿಕ ತಡೆಯನ್ನು ನಿವಾರಿಸಿದೆ ಹಾಗೂ ಅವರ ಸ್ವತಂತ್ರ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಅವರಿಗೆ ನೇರವಾಗಿ ಉದ್ಯೋಗ ಲಭ್ಯವಾಗುವುದು ಕೇವಲ ಸಾರಿಗೆಯಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಅವರ ವಾಸಸ್ಥಳದ ಸಮೀಪದಲ್ಲೇ ಸೂಕ್ತ ಕೆಲಸಗಳು ಲಭ್ಯವಿರುವುದು, ಮಕ್ಕಳನ್ನು ನೋಡಿಕೊಳ್ಳಲು ಪೋಷಣಾ ಕೇಂದ್ರಗಳಿರುವುದು (childcare) ಹಾಗೂ ಸಂಚಾರದ ಹಾದಿಯಲ್ಲಿ ಭದ್ರತೆ ಮತ್ತು ಸುರಕ್ಷಿತ ವಾತಾವರಣವಿರುವುದು ಸೇರಿದಂತೆ ಇತರ ಸಾಮಾಜಿಕ-ಆರ್ಥಿಕ ಅಂಶಗಳು ಸಹ ಮುಖ್ಯವಾಗಿರುತ್ತವೆ.
ಸಾರ್ವಜನಿಕ ಉಚಿತ ಬಸ್ ಸಾರಿಗೆಯು ಮಹಿಳೆಯರ ಮೇಲೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಆಳವಾದ ಪರಿಣಾಮ ಬೀರಿರುವುದಂತೂ ಸತ್ಯ. ಮಹಿಳೆಯರ ಕೈಯಲ್ಲಿ ಹಣದ ಉಳಿಯುತ್ತಿದ್ದು, ಆ ಮೊತ್ತವು ಕುಟುಂಬದ ಪೋಷಣೆ, ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಮರುಬಳಕೆಯಾಗುತ್ತಿದೆ. ಉಚಿತ ಪ್ರಯಾಣವು ಮಹಿಳೆಯರ ‘ಸ್ವಯಂ-ನಿರ್ಣಯ ಹಕ್ಕು’ ಹಾಗೂ ಸಮಾಜದಲ್ಲಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣ, ಸರ್ಕಾರದಲ್ಲಿ ಚರ್ಚಿಸಿ ನಿರ್ಧಾರ: ಡಿ ಕೆ ಶಿವಕುಮಾರ್
ಆದಾಗ್ಯೂ, ಈ ಯೋಜನೆಯು ಕೆಲವು ಆಡಳಿತಾತ್ಮಕ ಮತ್ತು ಮೂಲಸೌಕರ್ಯ ಸವಾಲುಗಳನ್ನೂ ಎದುರಿಸುತ್ತಿದಿದೆ. ಉಚಿತ ಬಸ್ ಸೇವೆಗಳಿಂದಾಗಿ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರಗಳು ಸಬ್ಸಿಡಿ ಹಣವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು ಅತ್ಯಗತ್ಯವಾಗಿದೆ. ಜೊತೆಗೆ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಬಸ್ಗಳ ಕೊರತೆ ಮತ್ತು ಅತಿಯಾದ ಜನದಟ್ಟಣೆ ಎದುರಾಗಿದ್ದು, ಸಾರ್ವಜನಿಕ ಸಾರಿಗೆಯ ಮೂಲಸೌಕರ್ಯವನ್ನು ಬಲಪಡಿಸಬೇಕಾದ ಅಗತ್ಯತೆಯೂ ಇದೆ.
ಮಹಿಳೆಯರ ಉದ್ಯೋಗ ಪ್ರಮಾಣಕ್ಕೆ ಸಂಬಂಧಿಸಿದಂತೆ, ಬಸ್ ಪ್ರಯಾಣ ಉಚಿತವಾದರೂ ಸಹ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಸೂಕ್ತ ಉದ್ಯೋಗಾವಕಾಶಗಳ ಕೊರತೆ ಮತ್ತು ‘ಸಂಘಟಿತ ಆರೈಕೆ ಕೇಂದ್ರಗಳ’ ಅಭಾವವಿದೆ ಎಂಬುದನ್ನು ದತ್ತಾಂಶಗಳು ತೋರಿಸುತ್ತವೆ. ಕೇವಲ ಸಾರಿಗೆ ಸೌಲಭ್ಯ ಮಾತ್ರವೇ ಮಹಿಳೆಯರನ್ನು ಉದ್ಯೋಗಸ್ಥರನ್ನಾಗಿ ಮಾಡಲು ಸಾಲದು, ಜೊತೆಗೆ ಸುರಕ್ಷಿತ ವಾತಾವರಣ, ಕೌಶಲ್ಯ ತರಬೇತಿ ಹಾಗೂ ಪ್ರಾದೇಶಿಕ ಉದ್ಯೋಗ ಸೃಷ್ಟಿ ಒಟ್ಟಾಗಿ ನಡೆದಾಗ ಮಾತ್ರ ಈ ಯೋಜನೆಯ ಪೂರ್ಣ ಪ್ರಮಾಣದ ಆರ್ಥಿಕ ಲಾಭ ಮತ್ತೆ ದೇಶಕ್ಕೇ ಸಿಗಲಿದೆ.






