ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಆತನ ಬೆಂಬಲಿಗರು ಹೂಮಾಲೆ ಹಾಕಿ, ಮೆರವಣಿಗೆಯ ಮೂಲಕ ಅದ್ದೂರಿ ಸ್ವಾಗತ ಕೋರಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಆರೋಪಿಯನ್ನು ಹೀರೋ ರೀತಿ ಸ್ವಾಗತಿಸಿರುವ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜೈಲಿನಿಂದ ಹೊರಬಂದ ಆರೋಪಿಯನ್ನು ಆತನ ಬೆಂಬಲಿಗರು ಹೆಗಲ ಮೇಲೆ ಹೊತ್ತುಕೊಂಡು ವಿಜಯೋತ್ಸವ ಆಚರಿಸಿದ್ದಾರೆ. ಈ ವೇಳೆ ಆತನ ಪರವಾಗಿ ಹರ್ಷೋದ್ಗಾರಗಳನ್ನು ಕೂಗುತ್ತಾ, ಹೂವಿನ ಹಾರಗಳನ್ನು ಹಾಕಿ ರಸ್ತೆಗಳಲ್ಲಿ ‘ರೋಡ್ ಶೋ’ ನಡೆಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯದಂತಹ ಗಂಭೀರ ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬನಿಗೆ ಈ ರೀತಿಯ ಸ್ವಾಗತ ನೀಡಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.
ಇದನ್ನು ಓದಿದ್ದೀರಾ? ಇದು 140 ಕೋಟಿ ಜನರ ‘ಟೀಮ್ ಇಂಡಿಯಾ’ನೋ – ‘ಬಿಸಿಸಿಐ ಪ್ರೈವೇಟ್ ಲಿಮಿಟೆಡ್’ ಕಂಪನಿಯೋ?
ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು, ಇದೊಂದು ಅಕ್ಷಮ್ಯ ಮತ್ತು ನಾಚಿಕೆಗೇಡಿನ ಕೃತ್ಯ ಎಂದು ಕಿಡಿಕಾರಿದ್ದಾರೆ. ಅಪರಾಧಿಗಳಿಗೆ ಈ ರೀತಿಯ ಪ್ರೋತ್ಸಾಹ ಸಿಗುತ್ತಿರುವುದು ಆಡಳಿತಾರೂಢ ಸರ್ಕಾರದ ದ್ವಂದ್ವ ನೀತಿ ಮತ್ತು ಕಾನೂನು ಸುವ್ಯವಸ್ಥೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಅಪರಾಧ ಕೃತ್ಯಗಳ ಆರೋಪಿಗಳನ್ನು ಸಮಾಜದಲ್ಲಿ ವೈಭವೀಕರಿಸುವ ಇಂತಹ ಪ್ರವೃತ್ತಿ ಅಪಾಯಕಾರಿ ಎಂಬ ಕಳವಳವನ್ನು ಈ ಘಟನೆ ಹುಟ್ಟುಹಾಕಿದೆ.




