ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ 37 ದಿನಗಳ ಕಾಲ ದೇಶವ್ಯಾಪಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು. ಆದರೆ, ಅವರನ್ನು ಬಿಜೆಪಿ ಸಂಸದರು ಸಂಸತ್ ಆವರಣದಲ್ಲಿ ಹಾಕ-ತುರಾಯಿ ಹಾಕಿ ಸ್ವಾಗತಿಸಿತು. ಬಿಜೆಪಿಯ ಈ ಕೃತ್ಯವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ’21 ವಿದ್ಯಾರ್ಥಿಗಳು ಮೃತಪಟ್ಟರೆ, ಧರ್ಮೇಂದ್ರ ಪ್ರಧಾನ್‌ಗೆ ಬಿಜೆಪಿ ಹಾರ ಹಾಕಿ ಗೌರವಿಸುತ್ತಿದೆ’ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ತಿದ್ದುಪಡಿ ಮಸೂದೆ–2026’ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದ, ವಿಪಕ್ಷ ಉಪನಾಯಕ ಗೌರವ್ ಗೊಗೊಯ್ ಮಾತನಾಡಿದರು. ಧರ್ಮೇಂದ್ರ ಪ್ರಧಾನ್ ಅವರಿಗೆ ನೀಡಲಾದ ಸ್ವಾಗತವನ್ನು ತೀವ್ರವಾಗಿ ಟೀಕಿಸಿದರು.
“37 ದಿನಗಳ ಕಾಲ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳ ನಂತರ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆದರೆ, ಅವರು ಸಂಸತ್ ಆವರಣಕ್ಕೆ ಬಂದಾಗ, ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದು ಬಂದವರಂತೆ ಬಿಜೆಪಿ ಸಂಸದರು ಹಾರ ಹಾಕಿ ಸ್ವಾಗತಿಸಿದರು” ಎಂದು ಕಿಡಿಕಾರಿದ್ದಾರೆ.
“2024ರಲ್ಲಿಯೂ ಪರೀಕ್ಷಾ ಅಕ್ರಮಗಳ ವಿರುದ್ಧ ಕಾನೂನು ತರಲಾಯಿತು. ಆದರೂ, ಇಂದಿಗೂ ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ಪ್ರಧಾನಿ ಮೋದಿ ಅವರು ಇನ್‌ಸ್ಟಾಗ್ರಾಮ್ ಮೇಲೆ ಗಮನ ಹರಿಸಿದ್ದಾರೆಯೇ ಹೊರತು, ಪ್ರಶ್ನೆ ಪತ್ರಿಕೆ ಸೋರಿಕೆಗಳ ಮೇಲಲ್ಲ. ಪರೀಕ್ಷಾ ಅಕ್ರಮಗಳ ವಿರುದ್ಧ ಸರ್ಕಾರ ಗಂಭೀರವಾಗಿಲ್ಲ. ಕಣ್ಣೊರೆಸುವ ನಾಟಕವಾಡುತ್ತಿದೆ. ಬೀದಿಗಿಳಿದು ಹೋರಾಟ ನಡೆಸುಬೇಕಾಗಿರುವ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಇನ್ನು, ಪ್ರಧಾನ್ ಅವರಿಗೆ ಅದ್ದೂರಿ ಸ್ವಾಗತ ಕೋರಿದ ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ ಗಾಂಧಿ, “ಧರ್ಮೇಂದ್ರ ಪ್ರಧಾನ್ ಯಾವ ಸಂದರ್ಭಗಳಲ್ಲಿ ರಾಜೀನಾಮೆ ನೀಡಬೇಕಾಯಿತು ಎಂಬುದು ದೇಶದ ಎಲ್ಲರಿಗೂ ಗೊತ್ತಿದೆ. ಅಂತಹ ವ್ಯಕ್ತಿಯನ್ನು ಮರುದಿನವೇ ಸೂಪರ್‌ಸ್ಟಾರ್‌ನಂತೆ ಸಂಸತ್ ಆವರಣದಲ್ಲಿ ಸ್ವಾಗತಿಸಿರುವುದು ನಾಚಿಕೆಗೇಡಿನ ಸಂಗತಿ ಅಲ್ಲವೇ” ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ, ವಿಪಕ್ಷ ನಾಯಕ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿದ್ದು, “ಧರ್ಮೇಂದ್ರ ಪ್ರಧಾನ್ ಭ್ರಷ್ಟಾಚಾರ ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯ ವೈಫಲ್ಯದ ಸಂಕೇತ. ಇದೇ ಶಿಕ್ಷಣ ವ್ಯವಸ್ಥೆಯ ವೈಫಲ್ಯದಿಂದ 26 ಮಕ್ಕಳು ಜೀವ ಕಳೆದುಕೊಂಡರು ಮತ್ತು ಲಕ್ಷಾಂತರ ಯುವಜನರು ಬೀದಿಗಿಳಿಯಬೇಕಾಯಿತು. ಅವರು ನೈತಿಕ ಹೊಣೆಗಾರಿಕೆಯಿಂದ ರಾಜೀನಾಮೆ ನೀಡಲಿಲ್ಲ; ಯುವಜನರ ಆಕ್ರೋಶಕ್ಕೆ ಮಣಿದು ರಾಜೀನಾಮೆ ನೀಡಿದರು. ಈಗ ಅವರಿಗೇ ಹಾರ ಹಾಕಿ ಗೌರವಿಸುತ್ತಿರುವುದು ಲಕ್ಷಾಂತರ ಮಕ್ಕಳ ಹಾಳಾದ ಭವಿಷ್ಯವನ್ನು ಸಂಭ್ರಮಿಸುವುದರ ಸಂಕೇತ,” ಎಂದು ಟೀಕಿಸಿದ್ದರು.
ಮೇ ತಿಂಗಳಲ್ಲಿ ಪರೀಕ್ಷೆ ನಡೆದಾಗ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಪರಿಣಾಮ, ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಪರೀಕ್ಷೆಗಾಗಿ ವರ್ಷಾನುಗಟ್ಟಲೆ ಸಿದ್ದತೆ ನಡೆಸಿದ್ದ ವಿದ್ಯಾರ್ಥಿಗಳು ಮಾನಸಿಕವಾಗಿ ನೊಂದಿದ್ದರು. ನೋವಿನ ನಡುವೆಯೂ ಜೂನ್‌ನಲ್ಲಿ ನಡೆದ ಮರು ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಯಿತು. ಈ ಪರೀಕ್ಷಾ ಅಕ್ರಮ ಮತ್ತು ಮಾನಸಿಕ ಒತ್ತಡದಿಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಸರಣಿ ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ಬೃಹತ್ ಪ್ರತಿಭಟನೆ ಆರಂಭವಾಯಿತು. ವಿದ್ಯಾರ್ಥಿ-ಯುವಜನರ ಆಕ್ರೋಶದ ಮುಂದೆ ಸರ್ಕಾರ ಮಂಡಿಯೂರಿತು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು.




