ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ‘ಜೆನ್ ಝೀ’ ಪೀಳಿಗೆಯ ಪ್ರತಿನಿಧಿ ಹೋರಾಟ ಎಂದು ಬಿಂಬಿಸುವುದು ತಪ್ಪು ಎಂದು ರಾಜಕೀಯ ವಿಶ್ಲೇಷಕ ಹಾಗೂ ತುಘ್ಲಕ್ ಸಂಪಾದಕ ಎಸ್ ಗುರುಮೂರ್ತಿ ಹೇಳಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ಬಿಹಾರ ಚಳವಳಿ, ಆಸು (ASU) ಹೋರಾಟ ಮತ್ತು ಅಣ್ಣಾ ಹಜಾರೆ ಚಳವಳಿಯನ್ನು ನೋಡಿದ್ದೇನೆ. ಆ ಎಲ್ಲ ಹೋರಾಟಗಳು ಜವಾಬ್ದಾರಿಯುತ ನಾಯಕತ್ವ, ಶಿಸ್ತು ಮತ್ತು ಸ್ಪಷ್ಟ ಗುರಿಯನ್ನು ಹೊಂದಿದ್ದವು. ಆದರೆ ಸಿಜೆಪಿ ಪ್ರತಿಭಟನೆಗೆ ಯಾವುದೇ ಮುಖಂಡರಿರಲಿಲ್ಲ, ಸಾಮಾನ್ಯ ಸಿದ್ಧಾಂತವೂ ಇರಲಿಲ್ಲ” ಎಂದು ಟೀಕಿಸಿದ್ದಾರೆ.
ಪ್ರತಿಭಟನೆಯಲ್ಲಿ ಮೀಸಲಾತಿ ವಿರೋಧಿಗಳಿಂದ ಹಿಡಿದು ಮೀಸಲಾತಿ ಪರರು, ಎಲ್‌ಜಿಬಿಟಿಕ್ಯು ಹಕ್ಕುಗಳ ಬೆಂಬಲಿಗರು, ಆರ್ಟಿಕಲ್ 370, ರಾಮಮಂದಿರ ಸೇರಿದಂತೆ ವಿಭಿನ್ನ ಬೇಡಿಕೆಗಳನ್ನು ಹೊಂದಿದವರು ಭಾಗವಹಿಸಿದ್ದರು. “ಅವರು ಯಾವ ಉದ್ದೇಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆ ಎಂಬುದೇ ಸ್ಪಷ್ಟವಾಗಿರಲಿಲ್ಲ. ಇದು ಅರಾಜಕ ಮನೋಭಾವದ ಪ್ರತಿಭಟನೆಯಾಗಿದೆ” ಎಂದು ಹೇಳಿದ್ದಾರೆ.
ಜಂತರ್ ಮಂತರ್‌ನಲ್ಲಿ ಸಂಸತ್ ಭವನದ ಸಮೀಪ ಪ್ರತಿಭಟನೆ ನಡೆಸಲು ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟ ಅವರು, “ಸಂಸತ್ ಮೇಲೆ 2001ರಲ್ಲಿ ನಡೆದ ದಾಳಿಯ ನಂತರ ಸಂಸತ್ ಸುತ್ತಮುತ್ತ ಪ್ರತಿಭಟನೆಗಳಿಗೆ ಅವಕಾಶ ನೀಡದಂತೆ ಭದ್ರತಾ ಸಂಸ್ಥೆಗಳು ಶಿಫಾರಸು ಮಾಡಿದ್ದವು. ಇಂತಹ ಗುಂಪುಗಳಿಗೆ ಯಾರು ಬೇಕಾದರೂ ನುಸುಳುವ ಸಾಧ್ಯತೆ ಇರುತ್ತದೆ” ಎಂದು ಹೇಳಿದ್ದಾರೆ.
ದೇಶದ ಜೆನ್ ಝೀ ಎಂದರೆ ರೈತರು, ಕಾರ್ಮಿಕರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವಿಜ್ಞಾನಿಗಳು, ತಂತ್ರಜ್ಞರು. ಕೋಟ್ಯಂತರ ಯುವಕರು ಧಾರ್ಮಿಕ ಯಾತ್ರೆಗಳಲ್ಲಿ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸಿಜೆಪಿ ಪ್ರತಿಭಟನಾಕಾರರನ್ನು ಇಡೀ ಜೆನ್-ಝೀ ಪೀಳಿಗೆಯ ಪ್ರತಿನಿಧಿಗಳೆಂದು ಬಿಂಬಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನೆಕ್ಕಿದ್ದನ್ನು ಕಕ್ಕಿದ ಕೇಂದ್ರ ಸಚಿವ: ‘ಕೋಟಿ’ ರು ಸೌತೆಕಾಯಿ ಸಬ್ಸಿಡಿ ವಾಪಸ್, ‘ನಾನೂ ರೈತನೇ’ ಎಂದ ಭಂಡತನಕ್ಕೆ ವಿಪಕ್ಷಗಳ ಚಾಟಿ
ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ತನಿಖೆ ನಡೆಸಬಾರದು ಎಂಬ ಬೇಡಿಕೆಯನ್ನು ಪ್ರಶ್ನಿಸಿದ ಗುರುಮೂರ್ತಿ, “ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ತನಿಖೆಗೆ ಏಕೆ ಹೆದರಬೇಕು? ಕಾನೂನಿನ ಪ್ರಕಾರ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಆರೋಪಪಟ್ಟಿ ಸಲ್ಲಿಸಬೇಕು. ಬಳಿಕ ಪ್ರಕರಣ ಹಿಂಪಡೆಯುವ ಕುರಿತು ಸ್ವತಂತ್ರ ಅಭಿಯೋಜಕರು ಮತ್ತು ನ್ಯಾಯಾಲಯ ನಿರ್ಧರಿಸಬೇಕು. ಸರ್ಕಾರವು ಏಕಪಕ್ಷೀಯವಾಗಿ ‘ಪ್ರಾಸಿಕ್ಯೂಷನ್ ಆಗುವುದಿಲ್ಲ’ ಎಂದು ಭರವಸೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸಿಜೆಪಿ ಪ್ರತಿಭಟನೆ, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾರಣವಾಯಿತು ಎಂಬ ನಿರೂಪಕರ ಪ್ರಶ್ನೆಗೆ ಉತ್ತರಿಸಿದ ಗುರುಮೂರ್ತಿ, “ಕೊನೆಯ ದಿನ ಸುಮಾರು 50 ಸಾವಿರ ಜನ ಸೇರಿರಬಹುದು. ಆದರೆ ಸಂಖ್ಯೆಯಿಂದಲೇ ಯಾರೂ ಜೆನ್ ಝೀ ಪ್ರತಿನಿಧಿಗಳಾಗುವುದಿಲ್ಲ. ಪ್ರತಿಭಟನೆಯಲ್ಲಿ ವಿವಿಧ ಹಿನ್ನೆಲೆಯ ಜನರಿದ್ದರು. ಅವರಲ್ಲಿ ಕೆಲವರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ ಎಂಬ ಮಾಹಿತಿ ಸರ್ಕಾರದ ಬಳಿ ಇದೆ. ಆದ್ದರಿಂದ ಈ ಚಳವಳಿಯನ್ನು ಇಡೀ ಜೆನ್ ಝೀಯ ಧ್ವನಿ ಎಂದು ಕರೆಯುವುದು ಸರಿಯಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಹೊಸ ಪೀಳಿಗೆಯ ಹೊಸ ನಿಯಮಗಳ ಪ್ರಕಾರ ಚಾಕೋಲೇಟ್ ತಿನ್ನುತ್ತಾ, ಕಾಫಿ ಶಾಪ್‌ನಲ್ಲಿ ನಿರ್ಧರಿಸಿ ಪ್ರತಿಭಟನೆ ಮಾಡಿದ್ದೇವೆ, ಸಚಿವರ ರಾಜೀನಾಮೆಯನ್ನೂ ಪಡೆದಿದ್ದೇವೆ, ಹಿರಿಯರು ನಮಗೆ ಪಾಠ ಮಾಡಬೇಡಿ” ಎಂಬ ಯುವಕರ ವಾದಕ್ಕೆ ಪ್ರತಿಕ್ರಿಯಿಸಿರುವ ಗುರುಮೂರ್ತಿ, “ನಾನು ಯಾರಿಗೂ ಪಾಠ ಮಾಡುತ್ತಿಲ್ಲ, ಸತ್ಯಗಳನ್ನ ಹೇಳುತ್ತಿದ್ದೇನೆ. ಮೌಲ್ಯಗಳಿಲ್ಲದೆ ಇಷ್ಟು ದೊಡ್ಡ ದೇಶವನ್ನು ಯಾರೂ ಮುನ್ನಡೆಸಲು ಸಾಧ್ಯವಿಲ್ಲ. ಚಹಾ ಅಂಗಡಿಯಲ್ಲಿ ಯೋಜನೆ ರೂಪಿಸಿ ಇಡೀ ದೇಶದ ಪ್ರತಿನಿಧಿಗಳೆಂದು ಹೇಳಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದರು.
ಭಾರತದ ಜೆನ್ ಝೀ ಪೀಳಿಗೆಯನ್ನು ಸಿಜೆಪಿ ಪ್ರತಿಭಟನಾಕಾರರೊಂದಿಗೆ ಹೋಲಿಸುವುದು ತಪ್ಪು ಗುರುಮೂರ್ತಿ ಸರಣಿ ಟ್ವೀಟ್ ಮಾಡಿದ್ದರು. ಮಹಾತ್ಮ ಗಾಂಧಿ ಉಲ್ಲೇಖಿಸಿ, ದೇಶದ ಏಕತೆಯನ್ನು ತೀರ್ಥಯಾತ್ರೆಗಳು ಬಲಪಡಿಸಿವೆ ಎಂದು ಹೇಳಿರುವ ಅವರು, ಇಂದಿನ 17.5 ರಿಂದ 25 ಕೋಟಿ ಜೆನ್ ಝೀ ಯುವಕರು ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶದ ಆರ್ಥಿಕತೆ ಮತ್ತು ಸಾಮಾಜಿಕ ಜೀವನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಹಿಂದಿನ ತಲೆಮಾರಿಗೆ ಹೋಲಿಸಿದರೆ ಇಂದಿನ ಯುವಕರಲ್ಲಿ ಉದ್ಯಮಶೀಲತೆ ನಾಲ್ಕರಿಂದ ಐದು ಪಟ್ಟು ಹೆಚ್ಚಿದ್ದು, ಉದ್ಯೋಗ ಅರಸುವವರಿಗಿಂತ ಉದ್ಯೋಗ ಸೃಷ್ಟಿಸುವವರೇ ಹೆಚ್ಚು ಎಂದು ಅವರು ಪ್ರತಿಪಾದಿಸಿದ್ದರು.
ಇದೇ ವೇಳೆ, “ದೇಶದ ಏಕತೆ ಮತ್ತು ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ಕೋಟ್ಯಂತರ ನಾಗರಿಕ ಯುವಕರನ್ನೇ ನಿಜವಾದ ಜೆನ್ ಝೀ ಎಂದು ಕರೆಯಬೇಕೇ, ಅಥವಾ ಅಪರಾಧಿಗಳೊಂದಿಗೆ ಬೆರೆತು ಹಿಂಸಾಚಾರ ನಡೆಸಿದ ಸಿಜೆಪಿ ಪ್ರತಿಭಟನಾಕಾರರನ್ನು ಜೆನ್ ಝೀ ಎಂದು ಕರೆಯಬೇಕೇ?” ಎಂದು ಗುರುಮೂರ್ತಿ ಪ್ರಶ್ನಿಸಿದ್ದಾರೆ. ಸಿಜೆಪಿ ಪ್ರತಿಭಟನಾಕಾರರನ್ನು ಜೆನ್ ಝೀಯ ಪ್ರತಿನಿಧಿಗಳೆಂದು ಬಿಂಬಿಸುವುದು, ದೇಶದ ನಾಗರಿಕ ಮತ್ತು ಉತ್ಪಾದಕ ಯುವಜನತೆಯನ್ನು ಅವಮಾನಿಸುವಂತದ್ದು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದರು.





