ದೇಶಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಗಿಗ್ ಕಾರ್ಮಿಕರು ಶನಿವಾರ ತಾತ್ಕಾಲಿಕ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಅಧಿಕ ಅವಧಿ ದುಡಿದರೂ ಸಾಕಷ್ಟು ಗಳಿಸಲು ಕಷ್ಟವಾಗುತ್ತಿವೆ ಎಂದು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವೆಗಳ ಕಾರ್ಮಿಕರ ಒಕ್ಕೂಟ (GIPSWU) ಹೇಳಿದೆ. ಹಾಗೆಯೇ ಮುಷ್ಕರಕ್ಕೆ ಕರೆ ನೀಡಿದೆ.
ಇದನ್ನು ಓದಿದ್ದೀರಾ? ಇಂಧನ ಬೆಲೆ ಏರಿಕೆ: ‘ಮೋದಿನಾಮಿಕ್ಸ್’ ವಿಫಲ, ವಿಶ್ವ ಸಂಚಾರದಲ್ಲಿ ಪ್ರಧಾನಿ: ಪ್ರಿಯಾಂಕ್ ಖರ್ಗೆ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಒಕ್ಕೂಟವು, “ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಅಸಮರ್ಪಕ ಪಾವತಿ ದರಗಳನ್ನು ವಿರೋಧಿಸಿ ನಾಳೆ ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ ಅಪ್ಲಿಕೇಶನ್ ಆಧಾರಿತ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ದೇಶಾದ್ಯಂತ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ GIPSWU ಮನವಿ ಮಾಡುತ್ತದೆ” ಎಂದು ಹೇಳಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ಯಾಬ್ ಚಾಲಕ ಮೊಹಮ್ಮದ್ ಎಂಬವರು, “ಪ್ರತಿ ಬಾರಿ ಇಂಧನ ಬೆಲೆಗಳು ಹೆಚ್ಚಾದಾಗ, ನಮ್ಮ ವೆಚ್ಚಗಳೂ ಹೆಚ್ಚಾಗುತ್ತವೆ. ಆದರೆ ಗ್ರಾಹಕರ ದರಗಳು ಅದಕ್ಕೆ ತಕ್ಕಂತೆ ಹೆಚ್ಚಾಗುವುದಿಲ್ಲ. ಕಮಿಷನ್ ಮತ್ತು ಇಂಧನ ಶುಲ್ಕಗಳನ್ನು ಪಾವತಿಸಿದ ನಂತರ, ದಿನದ ಕೊನೆಯಲ್ಲಿ ಬಹಳ ಕಡಿಮೆ ಹಣ ನಮ್ಮ ಬಳಿ ಉಳಿಯುತ್ತದೆ. ಕೆಲವು ದಿನಗಳಲ್ಲಿ ಮನೆಯ ವೆಚ್ಚಗಳನ್ನು ಪೂರೈಸುವುದು ಸಹ ಕಷ್ಟಕರವಾಗುತ್ತದೆ” ಎಂದು ತಿಳಿಸಿದ್ದಾರೆ.
ಇನ್ನು ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು 3 ರೂಪಾಯಿ ಏರಿಕೆ ಮಾಡಲಾಗಿದ್ದು, ಸದ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ತಕ್ತವಾಗಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಇಂಧನ ಬಳಕೆ ಕಡಿಮೆ ಮಾಡುವಂತೆ ಕರೆ ನೀಡಿದರೆ, ಇನ್ನೊಂದೆಡೆ ಸಚಿವರುಗಳು ದೇಶದಲ್ಲಿ ಸಾಕಷ್ಟು ಇಂಧನವಿದೆ ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ತೀವ್ರ ಗೊಂದಲವನ್ನು ಸೃಷ್ಟಿಸಿದೆ. ಅದರಲ್ಲಿಯೂ ಚುನಾವಣೆ ಮುಗಿಯುವವರೆಗೂ ಕಾದು ನಂತರ ಇಂಧನ ಬೆಲೆ ಹೆಚ್ಚಿಸಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.




