ಮಂಡ್ಯ ನಗರದಲ್ಲಿನ ಮಿಮ್ಸ್ (ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸಲು ಎಲ್ಲಾ ಆಯಾಮಗಳಲ್ಲಿಯೂ ಕೆಲಸ ಮಾಡಿ. ಒತ್ತುವರಿದಾರರಿಗೆ ಬದಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಕಚೇರಿಯಲ್ಲಿ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಮಿಮ್ಸ್‌ಗೆ ಸೇರಿದ ಸುಮಾರು 9 ಎಕರೆ ಭೂಮಿಯನ್ನು ತಮಿಳು ಕಾಲೋನಿ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಮಿಮ್ಸ್‌ಗೆ ಸೇರಿದ ಜಾಗದ ಕ್ಯಾಂಪಸ್‌ನಲ್ಲಿ ಆರೋಗ್ಯ ಸೇವೆಗಳು ಮುಂದುವರಿಯಬೇಕು ಎಂದರು.
ಒಟ್ಟು 39.33 ಎಕರೆ ಭೂಮಿ ಮಿಮ್ಸ್ ಸಂಸ್ಥೆಗೆ ಸೇರಿದೆ. ಇದರಲ್ಲಿ ಸದ್ಯಕ್ಕೆ 25.08 ಎಕರೆಯಷ್ಟೇ ಮಿಮ್ಸ್ ಉಳಿಸಿಕೊಂಡಿದೆ. ಇನ್ನುಳಿದ 14.24 ಎಕರೆ ಭೂಮಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಒತ್ತುವರಿ ನಡುವೆ, ತಮಿಳು ಕಾಲೋನಿಯವರು 9.17 ಎಕರೆ ಒತ್ತುವರಿ ಮಾಡಿದ್ದಾರೆ.
1956ರಿಂದ ತಮಿಳು ಕಾಲೋನಿ ನಿವಾಸಿಗಳು ಇಲ್ಲೇ ವಾಸ ಮಾಡುತ್ತಿದ್ದಾರೆ. ಮಿಮ್ಸ್ ಜಾಗಕ್ಕೆ ಪರ್ಯಾಯವಾಗಿ ಚಿಕ್ಕಮಂಡ್ಯದ 6 ಎಕರೆ ಪ್ರದೇಶದಲ್ಲಿ ಸ್ಲಂ ಬೋರ್ಡ್‌ನಿಂದ 576 ಮನೆಗಳನ್ನು ನಿರ್ಮಿಸಿ 4 ವರ್ಷ ಕಳೆದರೂ, ಒತ್ತುವರಿ ನಿವಾಸಿಗಳು ವರ್ಗಾವಣೆಯಾಗುತ್ತಿಲ್ಲ. ಮೂಲಸೌಲಭ್ಯ ಕೊರತೆಯ ಜೊತೆಗೆ, ಮಂಡ್ಯ ನಗರದಿಂದ ದೂರದಲ್ಲಿ ಮನೆ ನಿರ್ಮಿಸಲಾಗಿದೆ ಎಂಬೆಲ್ಲಾ ಕಾರಣಗಳು ಸ್ಥಳಾಂತರಕ್ಕೆ ಸಮಸ್ಯೆಯಾಗುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಈಗಾಗಲೇ ನಿರ್ಮಿಸಿರುವ ಮನೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ‘ಪ್ಲ್ಯಾನ್ ಆಫ್ ಆಕ್ಷನ್’ ಸಿದ್ಧಪಡಿಸಿಕೊಳ್ಳಿ. ನಿವಾಸಿಗಳ ಮನವೊಲಿಸಿ, ಸ್ಥಳಾಂತರಕ್ಕೆ ಮುಂದಾದ ಕೂಡಲೇ ಮನೆಗಳ ನವೀಕರಣ ಕಾಮಗಾರಿ ಆರಂಭಿಸಿ. ತಮಿಳು ಕಾಲೋನಿಯವರ ಬೇಡಿಕೆಯಂತೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಹುಡುಕಿ, ಅವರಿಗೆ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಿ. ನಿವೇಶನ ಪಡೆದು ಮಿಮ್ಸ್‌ಗೆ ಸೇರಿದ ಜಾಗದಿಂದ ಸ್ಥಳಾಂತರಗೊಳ್ಳುವ ಬಗ್ಗೆ ಒಪ್ಪಿಗೆ ಪತ್ರ ಪಡೆದುಕೊಳ್ಳಿ. ಈಗಾಗಲೇ ಸ್ಲಂ ಬೋರ್ಡ್‌ನಿಂದ ನಿರ್ಮಿಸಿರುವ ಮನೆಗಳನ್ನು ನವೀಕರಿಸಿ, ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಡೆಯಾಜ್ಞೆ ತೆರವುಗೊಳಿಸಿ
ಸ್ಥಳಾಂತರ ನಡೆಸದಂತೆ ನ್ಯಾಯಾಲಯದಲ್ಲಿನ ತಡೆಯಾಜ್ಞೆ (ಸ್ಟೇ) ತೆರವುಗೊಳಿಸಲು ಒತ್ತಡ ಹೇರಿ. ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಒತ್ತುವರಿದಾರರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳುವ ಕೆಲಸ ಮಾಡಿ. ಅನೇಕ ವರ್ಷಗಳಿಂದ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಿಲ್ಲ. ಸಭೆಯಲ್ಲಿನ ಸೂಚನೆಗಳಂತೆ ಜಿಲ್ಲಾಧಿಕಾರಿಗಳು ಪರ್ಯಾಯ ಭೂಮಿ ಹುಡುಕಿ, ಅಭಿವೃದ್ಧಿಪಡಿಸುವ ಕೆಲಸದೊಂದಿಗೆ, ತಮಿಳು ಕಾಲೋನಿಯವರು ನಿವೇಶನ ಪಡೆದು ಸ್ಥಳಾಂತರಗೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದರು.
ಕ್ಯಾನ್ಸರ್ ಆಸ್ಪತ್ರೆ ಲೋಕಾರ್ಪಣೆ
ಟಿಸಿಸಿಸಿ (TCCC) ಯೋಜನೆ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಈಗಾಗಲೇ ಕ್ಯಾನ್ಸರ್ ಆಸ್ಪತ್ರೆಗೆ ಕಟ್ಟಡ ನಿರ್ಮಿಸಿ, ಅಗತ್ಯ ಸೌಲಭ್ಯ ನೀಡಲಾಗಿದೆ. ಮೊದಲು ಆಸ್ಪತ್ರೆ ತೆರೆಯಲು ನೂರು ಹಾಸಿಗೆಗಳಿಗೆ ಅವಕಾಶ ಪಡೆದು ಕೆಲಸ ಆರಂಭಿಸಿ. ಬಳಿಕ ಇನ್ನೂರು ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಬಹುದು. ಶೀಘ್ರದಲ್ಲೇ ಆಸ್ಪತ್ರೆ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿ, ತಿಂಗಳೊಳಗೆ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಗೊಳ್ಳಬೇಕು ಎಂದು ತಾಕೀತು ಮಾಡಿದರು.
ಮಿಮ್ಸ್ ಕ್ಯಾಂಪಸ್‌ನಲ್ಲಿನ ತುರ್ತು ಚಿಕಿತ್ಸಾ ವಿಭಾಗವನ್ನು ಮೇಲ್ದರ್ಜೆಗೇರಿಸಲು 7 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಇಲ್ಲಿನ ಪ್ಲೇ ಗ್ರೌಂಡ್‌ನಲ್ಲಿ ಟ್ರಾಮಾ ಸೆಂಟರ್ ಹಾಗೂ ಡಿಎಚ್‌ಒ (DHO) ಕಚೇರಿಯಲ್ಲಿನ ಖಾಲಿ ಜಾಗದಲ್ಲಿ ತರಗತಿ ನಡೆಸಲು ಕಟ್ಟಡ ನಿರ್ಮಾಣಕ್ಕೆ ಪ್ಲ್ಯಾನ್ ಸಿದ್ಧಗೊಳಿಸಿ ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದರು.
ಮೂಲಭೂತ ಸೌಕರ್ಯಗಳ ಸಮಗ್ರ ಯೋಜನೆಗೆ ಕೂಡಲೇ ಅಧಿಕಾರಿಗಳು ಪ್ರಸ್ತಾವನೆ (ಪ್ರಪೋಸಲ್) ಸಲ್ಲಿಸಬೇಕು. ಈ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ಎರಡು ತಿಂಗಳೊಳಗೆ ಪ್ರಾರಂಭಿಸಬೇಕು. ಮೆಡಿಕಲ್ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಭರ್ತಿ ಮಾಡಬೇಕು ಎಂದರು.
ಜಯದೇವ ಆಸ್ಪತ್ರೆಗೆ ಅಡಿಗಲ್ಲು
ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಿಸಲು ಮಂಡ್ಯ ನಗರದೊಳಗೆ ಅಗತ್ಯವಾದ ಐದು ಎಕರೆ ಜಾಗ ನೀಡುತ್ತೇವೆ. ಇದೇ ಬಜೆಟ್‌ನಲ್ಲಿ ಘೋಷಣೆಗೊಳ್ಳುವಷ್ಟರಲ್ಲಿ ಜಾಗ ನೀಡಲಾಗುವುದು. ಕಟ್ಟಡ ನಿರ್ಮಾಣಕ್ಕೂ ಮುನ್ನ ಒಪಿಡಿ (OPD) ಸೇವೆ ಆರಂಭಗೊಳಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಮನವಿ ಸಲ್ಲಿಸಿದರು.
ಸಚಿವರ ಮನವಿಯಂತೆ, ಆದಷ್ಟು ಶೀಘ್ರದಲ್ಲಿ ಜಾಗ ನೀಡಿದರೆ ಕಟ್ಟಡ ನಿರ್ಮಾಣ ಕಾಮಗಾರಿ ಶುರು ಮಾಡಲಾಗುವುದು. ಅಲ್ಲಿಯವರೆಗೂ ಮಿಮ್ಸ್ ಆವರಣದಲ್ಲಿ ಒಪಿಡಿ ಸೇವೆ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಘೋಷಿಸಿದರು.
ಸಭೆಯಲ್ಲಿ ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ. ಕುಮಾರ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳು ಉಪಸ್ಥಿತರಿದ್ದರು.




