ಚಿಕ್ಕಮಗಳೂರಿನ ಆಣೂರಿನಲ್ಲಿ ಮುಚ್ಚಲೊರಟಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿ ಎಂದು ಶುಕ್ರವಾರ AIDSO ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

AIDSO ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದಕೊಪ್ಪರವರು ಮಾತನಾಡಿ, ” ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿ, ಬಡ ರೈತ, ಕೂಲಿ ಕಾರ್ಮಿಕರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ, ಶಿಕ್ಷಣವನ್ನು ವ್ಯಾಪಾರ ಮಾಡಲೊರಟಿದೆ. ಈ ಆಣೂರಿನ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪಕ್ಕದ ಹಳ್ಳಿಗಳಿಂದ ಬರುತ್ತಾರೆ. ಈಗಾಗಲೇ ಪ್ರತಿನಿತ್ಯ 3 ರಿಂದ 5 ಕಿಲೋಮಿಟರ್ ಗಳಿಂದ ನಡೆದು ಬರುತ್ತಾರೆ. ಪೋಷಕರು ಕಾಫಿ ತೋಟಕ್ಕೆ ಕೂಲಿ ಹಾಗೂ ಟಿಂಬರ್ ಕೆಲಸಕ್ಕೆ ಹೋಗುತ್ತಾರೆ. ಸಂದರ್ಭದಲ್ಲಿ ಆ ಶಾಲೆ ಮುಚ್ಚಿ ಹೋದರೆ ಆ ಮಕ್ಕಳ ಶಿಕ್ಷಣಕ್ಕೆ ಶಾಶ್ವತವಾಗಿ ಬಾಗಿಲು ಮುಚ್ಚಿದಂತೆ ಎಂದು ತಿಳಿಸಿದರು.
ಆಣೂರಿನ ಗ್ರಾಮಸ್ಥರಾದ ಚೇತನ್ ಗೌಡ ಮಾತನಾಡಿ, ” ಅಂದಾಜಿ 75 ವರ್ಷಗಳಿಂದ ನಮ್ಮೂರ ಶಾಲೆ ನಡೆಯುತ್ತಿದೆ ಹಾಗೆಯೇ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿಂದ ಶಿಕ್ಷಣ ಪಡೆದುಕೊಂಡು ಹೋಗಿದ್ದಾರೆ. ಈ ಶಾಲೆಯನ್ನು ಮುಚ್ಚುವುದಕ್ಕೆ ನಾವು ಎಂದಿಗೂ ಬಿಡುವುದಿಲ್ಲ. ನಮ್ಮೂರಿಗೆ ಇಂದಿಗೂ ಕೂಡ ಬಸ್ಸು ಬರುವುದಿಲ್ಲ. ಹಾಗಾಗಿ ಮಕ್ಕಳು ಇಂದಿಗೂ ನಡೆದುಕೊಂಡ ಶಾಲೆಗೆ ಹೋಗುತ್ತಾರೆ. ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಂತಹ ಶಾಲೆ ಮುಚ್ಚಿ ಹೋದರೆ, ಅವರ ಶಿಕ್ಷಣದ ಕನಸು ನುಚ್ಚುನೂರಾಗುತ್ತದೆ. ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು ವಿನಹ ಬಣ್ಣ ಬಣ್ಣದ ಮಾತುಗಳಿಂದ ನೀವು ಬಡವರಿಂದ ಶಿಕ್ಷಣವನ್ನು ಕಿತ್ತುಕೊಳ್ಳುತ್ತೀರ ಎಂದರೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ, ಎಂತಹ ಪರಿಸ್ಥಿತಿ ಬಂದರೂ ಕೂಡ ನಮ್ಮ ಶಾಲೆ ಉಳಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶಾಲೆ ಉಳಿವಿಗೆ ಹೋರಾಟಕ್ಕೆ ಸಿದ್ಧ; ಕೆಸರಿಕೆಹಳ್ಳಿ ಗ್ರಾಮಸ್ಥರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚೈತ್ರ, ಕಾರ್ಯದರ್ಶಿ ಸುಷ್ಮಾ,ಮತ್ತು ಗ್ರಾಮಸ್ಥರಾದ ಛಾಯ, ವೇದ, ಉಮೇಶ್, ಕೃಷ್ಣಮೂರ್ತಿ ಹಾಗೂ ಆ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಪೋಷಕರು ಮುಂತಾದವರು ಉಪಸ್ಥಿತರಿದ್ದರು.




