ದಾದಿಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ, ನರ್ಸ್‌ಗಳ ಆಕ್ರೋಶಕ್ಕೆ ಗುರಿಯಾಗಿದ್ದ ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಭಾಟಿಯಾ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆಗೆ ಅವರು ಯಾವುದೇ ನಿರ್ದಿಷ್ಟ ಕಾರಣವನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ.
ಬದಲಾಗಿ, “ನನ್ನ ಸರಿಸುಮಾರು ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನನ್ನ ಕರ್ತವ್ಯಗಳನ್ನು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಈ ಅವಕಾಶ ಕೊಟ್ಟ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಹಾಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಬರೆದಿದ್ದಾರೆ.
ಮುಂದುವರಿದು, “ಮಹಿಳೆಯರ ಹಕ್ಕುಗಳು ಮತ್ತು ಘನತೆಗಾಗಿ ನಾನು ಯಾವಾಗಲೂ ಹೋರಾಡುವುದನ್ನು ಮುಂದುವರಿಸುತ್ತೇನೆ. ಭವಿಷ್ಯದಲ್ಲಿ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಇದೇ ರೀತಿಯ ಸಮರ್ಪಣಾ ಭಾವ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ, ಹರಿಯಾಣದ ಕುರುಕ್ಷೇತ್ರದಲ್ಲಿರುವ ಲೋಕನಾಯಕ್ ಜೈಪ್ರಕಾಶ್ (LNJP) ಸಿವಿಲ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು 15 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಘಟನೆ ನಡೆಸಿತ್ತು. ಈ ಪ್ರಕರಣದ ಹಿನ್ನೆಲೆ ಭಾಟಿಯಾ ಅವರು ಆಸ್ಪತ್ರೆಗೆ ಭೇಟಿಸಿದ್ದರು. ದಾದಿಯರನ್ನು ನಿಂದಿಸಿದ್ದ ಭಾಟಿಯಾ, “ನಿಮಗೂ ಹೆಣ್ಣು ಮಕ್ಕಳಿದ್ದಾರಲ್ಲವೇ? ಯಾರಾದರೂ ಒಬ್ಬ ಪುರುಷನ ಜೊತೆ ನಿಮ್ಮ ಹೆಣ್ಣುಮಕ್ಕಳನ್ನು ಒಂದು ಕೋಣೆಯಲ್ಲಿ 15 ನಿಮಿಷಗಳ ಕಾಲ ಒಬ್ಬಂಟಿಯಾಗಿ ಬಿಡುತ್ತೀರಾ? ಹಾಗಿದ್ದಾಗ ಈ ಬಾಲಕಿಯನ್ನು ಆ ವೈದ್ಯನ ಜೊತೆ ಒಬ್ಬಂಟಿಯಾಗಿ ಹೇಗೆ ಬಿಟ್ಟಿರಿ?” ಎಂದು ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳಿದ್ದರು. ವೈದ್ಯ ಎಸಗಿದ ಕೃತ್ಯಕ್ಕೆ ಕೆಲವು ನರ್ಸಿಂಗ್ ಸಿಬ್ಬಂದಿಗಳು ಪರೋಕ್ಷವಾಗಿ ಸಹಕರಿಸಿರುವ ಅಥವಾ ಶಾಮೀಲಾಗಿರುವ ಸಧ್ಯತೆಯಿದೆ ಎಂದು ಆರೋಪಿಸಿದ್ದರು.
ಈ ಲೇಖನ ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್
ಭಾಟಿಯಾ ಅವರ ಹೇಳಿಕೆ ವಿರುದ್ಧ ಆಸ್ಪತ್ರೆಯ ನರ್ಸ್‌ಗಳು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆಯು ರಾಜ್ಯಾದ್ಯಂತ ವಿಸ್ತರಿಸಿತ್ತು. ಸೋಮವಾರ ನರ್ಸಿಂಗ್ ಸಿಬ್ಬಂದಿಗಳು ಎರಡು ಗಂಟೆಗಳ ಕಾಲ ‘ಪೆನ್-ಡೌನ್’ (ಕೆಲಸ ಸ್ಥಗಿತ) ಮುಷ್ಕರ ನಡೆಸಿದ್ದರು. “ರೇಣು ಭಾಟಿಯಾ ಅವರು ಘಟನೆಗೆ ನಮ್ಮ ಬೇಜವಾಬ್ದಾರಿತನವೇ ಕಾರಣ ಎಂದು ದೂಷಿಸಿದ್ದಾರೆ. ಈ ಕೃತ್ಯದಲ್ಲಿ ನರ್ಸಿಂಗ್ ಸಿಬ್ಬಂದಿಯ ಕೆಲವು ಸದಸ್ಯರು ಶಾಮೀಲಾಗಿರಬಹುದು ಎಂದು ಆರೋಪಿಸಿದ್ದಾರೆ. ಸೂಕ್ತ ತನಿಖೆ ಇಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡುವುದು ಅನ್ಯಾಯ. ಭಾಟಿಯಾ ಅವರು ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದ್ದರು.
ಪ್ರತಿಭಟನೆಗಳು ಭುಗಿಲೆದ್ದಿರುವ ಸಮಯದಲ್ಲೇ ಭಾಟಿಯಾ ರಾಜೀನಾಮೆ ನೀಡಿದ್ದಾರೆ.



