ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ಮತ್ತು ಅವರ ಪತ್ನಿ ಇವಾಂಕಾ ಟ್ರಂಪ್ ಹೂಡಿಕೆ ಮಾಡಲು ಯೋಜಿಸಿರುವ ಐಷಾರಾಮಿ ರೆಸಾರ್ಟ್ ಪ್ರಾಜೆಕ್ಟ್ ವಿರುದ್ಧ ಅಲ್ಬೇನಿಯಾದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗಳು ನಡೆದಿದೆ. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಸದ್ಯಕ್ಕೆ ಇದರ ಪ್ರಾಥಮಿಕ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ಪರಿಸರ ನಾಶಕ್ಕೆ ಕಾರಣವಾಗುವ ಈ ಯೋಜನೆಯ ವಿರುದ್ಧವಾಗಿ ‘ಫ್ಲೆಮಿಂಗೋ ರೆವಲ್ಯೂಷನ್’ ಎಂದೇ ಕರೆಯಲಾಗುವ ಪ್ರತಿಭಟನೆ ಹೆಚ್ಚಾಗಿದೆ. ಅಲ್ಬೇನಿಯಾದ ರಾಜಧಾನಿ ತಿರಾನಾದಲ್ಲಿ “ಅಲ್ಬೇನಿಯಾ ಮಾರಾಟಕ್ಕಿಲ್ಲ”, “ಇವಾಂಕಾ, ಗೋ ಬ್ಯಾಕ್” ಎಂಬ ಘೋಷಣೆಗಳೊಂದಿಗೆ ಸಾವಿರಾರು ಜನರು ಬೀದಿಗಿಳಿದು ಸರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ತೀವ್ರ ಪ್ರತಿಭಟನೆ ಹಾಗೂ ಯುರೋಪಿಯನ್ ಯೂನಿಯನ್ (EU) ವ್ಯಕ್ತಪಡಿಸಿದ ಕಳಕಳಿಯ ಹಿನ್ನೆಲೆಯಲ್ಲಿ, ಅಲ್ಬೇನಿಯಾದ ಪರಿಸರ ಸಚಿವಾಲಯವು ಸದ್ಯಕ್ಕೆ ಈ ಯೋಜನೆಯ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಪರಿಸರ ಉಳಿಸಿದರೆ ಭವಿಷ್ಯ ಉಳಿಯುತ್ತದೆ: ದರ್ಶನ್ ಹೆಚ್.ವಿ
ಏನಿದು ಯೋಜನೆ?
ಟ್ರಂಪ್ ಅಳಿಯ ಜಾರೆಡ್ ಕುಶ್ನರ್ ಅವರ ಖಾಸಗಿ ಇಕ್ವಿಟಿ ಸಂಸ್ಥೆಯಾದ ‘ಅಫಿನಿಟಿ ಪಾರ್ಟ್ನರ್ಸ್’ (Affinity Partners) ಅಲ್ಬೇನಿಯಾದ ಕರಾವಳಿ ತೀರದಲ್ಲಿ ಸುಮಾರು ಬಿಲಿಯನ್ ಡಾಲರ್‌ಗಳಿಗಿಂತಲೂ ಅಧಿಕ ವೆಚ್ಚದ ಐಷಾರಾಮಿ ಪ್ರವಾಸೋದ್ಯಮ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ ಕಾರ್ಯಾಚರಣೆಯನ್ನು ಸಜಾನ್ ದ್ವೀಪ (Sazan Island) ಮತ್ತು ವಜೋಸಾ-ನಾರ್ಟಾ (Vjosa-Narta) ಪ್ರದೇಶದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಪ್ರಮುಖವಾಗಿ ಸಜಾನ್ ದ್ವೀಪ ಇದು ಅಲ್ಬೇನಿಯಾದ ಕರಾವಳಿಯಲ್ಲಿರುವ, ಕಮ್ಯುನಿಸ್ಟ್ ಆಡಳಿತದ ಕಾಲದ ರಹಸ್ಯ ಮಿಲಿಟರಿ ನೆಲೆಯಾಗಿದ್ದ ಒಂದು ನಿರ್ಜನ ದ್ವೀಪ. ಇನ್ನು ವಜೋಸಾ-ನಾರ್ಟಾ ಕರಾವಳಿಯ ನೈಸರ್ಗಿಕ ಜೌಗು ಪ್ರದೇಶ (Wetlands) ಮತ್ತು ಸಂರಕ್ಷಿತ ವನ್ಯಜೀವಿ ವಲಯವಾಗಿದೆ. ಈ ಪ್ರದೇಶದಲ್ಲಿ ಅತ್ಯಾಧುನಿಕ ಪರಿಸರ-ಐಷಾರಾಮಿ ಹೊಟೇಲ್‌ಗಳು, ಸಾವಿರಾರು ವಿಲ್ಲಾಗಳು, ರೆಸಾರ್ಟ್‌ಗಳು ಮತ್ತು ಐಷಾರಾಮಿ ಯಾಚ್ ನಿಲುಗಡೆ ತಾಣಗಳನ್ನು ನಿರ್ಮಿಸಲು ಟ್ರಂಪ್ ಅಳಿಯ ಮುಂದಾಗಿದ್ದಾರೆ.
ಈ ಯೋಜನೆಗೆ ವಿರೋಧವೇಕೆ?
ಯೋಜನೆಯ ವಿರುದ್ಧ ಜನ ಮತ್ತು ಪರಿಸರವಾದಿಗಳು ಧ್ವನಿ ಎತ್ತಲು ಮುಖ್ಯ ಕಾರಣ ಪರಿಸರ ನಾಶದ ಭೀತಿ. ಈ ಪ್ರಾಜೆಕ್ಟ್‌ಗೆ ಅಲ್ಬೇನಿಯಾ ಸರ್ಕಾರವು “ವಿಶೇಷ ಹೂಡಿಕೆದಾರ” ಸ್ಥಾನಮಾನ ನೀಡಿ ಸುಲಭವಾಗಿ ಅನುಮತಿಗಳನ್ನು ನೀಡತೊಡಗಿತ್ತು.
ಯೋಜನೆ ರೂಪಿಸುತ್ತಿರುವ ವಜೋಸಾ-ನಾರ್ಟಾ ಜೌಗು ಪ್ರದೇಶವು ಯುರೋಪ್‌ನ ಅತ್ಯಂತ ಅಪರೂಪದ ಜೀವವೈವಿಧ್ಯ ವಲಯಗಳಲ್ಲಿ ಒಂದು. ಈ ವಲಯದಲ್ಲಿ ಸಾವಿರಾರು ಅಪರೂಪದ ಪಿಂಕ್ ಫ್ಲೆಮಿಂಗೋ (ಬೆನ್ನಕ್ಕಿ) ಹಕ್ಕಿಗಳು, ಸಮುದ್ರ ಆಮೆಗಳು ಮತ್ತು ಅಳಿವಿನಂಚಿನಲ್ಲಿರುವ ಸೀಲ್‌ಗಳ ಆವಾಸಸ್ಥಾನ. ಇಲ್ಲಿ ಬುಲ್ಡೋಜರ್‌ಗಳು ಕಾಮಗಾರಿ ಆರಂಭಿಸುತ್ತಿದ್ದಂತೆ, ಪ್ರಕೃತಿಯ ಸಮತೋಲನ ಸಂಪೂರ್ಣವಾಗಿ ನಾಶವಾಗುವುದು ಖಚಿತ.
ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಕೋಲಾಹಲವೆಬ್ಬಿಸಿದ ಎಪ್‌ಸ್ಟೀನ್ ಫೈಲ್ಸ್, ಇಕ್ಕಟ್ಟಿನಲ್ಲಿ ಡೊನಾಲ್ಡ್ ಟ್ರಂಪ್
ಇಷ್ಟು ಮಾತ್ರವಲ್ಲದೆ ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ನೇತೃತ್ವದ ಸರ್ಕಾರವು ಈ ಪ್ರಾಜೆಕ್ಟ್‌ಗೆ ಅನುಕೂಲ ಮಾಡಿಕೊಡಲು ದೇಶದ ಪರಿಸರ ಸಂರಕ್ಷಣಾ ಕಾಯ್ದೆಗಳನ್ನೇ ಬದಲಾಯಿಸಿದೆ ಎಂಬ ಗಂಭೀರ ಆರೋಪವೂ ಇದೆ. ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯ ರಾಜಕೀಯ ಪ್ರಭಾವ ಬಳಸಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಲ್ಲಿನ ಭ್ರಷ್ಟಾಚಾರ ನಿರೋಧಕ ಸಂಸ್ಥೆ (SPAK) ಕೂಡ ಈಗ ತನಿಖೆ ಆರಂಭಿಸಿದೆ.
ಇನ್ನು ಈ ದ್ವೀಪದಲ್ಲಿ ಸ್ಥಳೀಯ ಮೀನುಗಾರರು ಮತ್ತು ತಲೆಮಾರುಗಳಿಂದ ಜನರು ವಾಸಿಸುತ್ತಿದ್ದಾರೆ. ಇದೀಗ ಈ ಯೋಜನೆ ಹೆಸರಲ್ಲಿ ಈ ಸ್ಥಳೀಯರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಸಾರ್ವಜನಿಕ ಬೀಚ್‌ಗಳಿಗೆ ತಂತಿ ಬೇಲಿ ಹಾಕಿ ಜನಸಾಮಾನ್ಯರ ಪ್ರವೇಶ ನಿಷೇಧಿಸಲಾಗುತ್ತಿದೆ. ಪ್ರತಿಭಟನಾ ನಿರತರ ಮೇಲೆ ಖಾಸಗಿ ಸೆಕ್ಯೂರಿಟಿಗಳು ದೌರ್ಜನ್ಯ ನಡೆಸಿದ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವೆಲ್ಲವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈಗ ಯೋಜನೆಗೆ ತಡೆ ನೀಡಲಾಗಿದೆ. ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ಮತ್ತು ಪಾರದರ್ಶಕವಾದ ವರದಿ ಬಂದ ಬಳಿಕವೇ ಮುಂದಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಘೋಷಿಸಿದೆ.





