ಮುಸ್ಲಿಮರಿಗೆ ಕೆಟ್ಟ ಹೆಸರು ತರಲೆಂದು ಜೂನ್ 21ರ ಭಾನುವಾರದಂದು ಉತ್ತರ ಪ್ರದೇಶದ ಬರೇಲಿಯ ಹಫೀಜ್‌ಗಂಜ್ ಪ್ರದೇಶದಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿ, ಸಣ್ಣ ಮಗುವಿನಿಂದಲೂ ಘೋಷಣೆ ಕೂಗಿಸಿ ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಇಬ್ಬರು ಹಿಂದುತ್ವವಾದಿಗಳ ಬಂಧನವಾಗಿದೆ. ಬಂಧಿತರನ್ನು ಇಂದ್ರಪಾಲ್ ಮತ್ತು ಭುವನೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಖೈಖೇಡಾ ಗ್ರಾಮದಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ವಿವಾದ ಭುಗಿಲೆದ್ದಿತ್ತು. ಈ ವಿಡಿಯೋ ಸ್ಥಳೀಯ ಮುಸ್ಲಿಮರ ವಿರುದ್ಧ ದ್ವೇಷ ಅಭಿಯಾನಕ್ಕೆ ಕಾರಣವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲೇ ಈ ವಿಡಿಯೋ ನಕಲಿ ಎಂದು ಬಹಿರಂಗವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ | ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ; ಬಿಜೆಪಿ ಕಾರ್ಯಕರ್ತನ ಬಂಧನ
“ದುರುದ್ದೇಶದಿಂದಲೇ ಈ ಇಬ್ಬರು ಮಗುವಿನಿಂದ ಘೋಷಣೆಗಳನ್ನು ಕೂಗಿಸಿ ವಿಡಿಯೋವನ್ನು ಮಾಡಿ ಅದನ್ನು ವೈರಲ್ ಮಾಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿ ನೀಲೇಶ್ ಮಿಶ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಖೈಖೇಡ ಗ್ರಾಮದಲ್ಲಿ ನಡೆದ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ, ದುರುದ್ದೇಶಪೂರಿತ ಉದ್ದೇಶದಿಂದ ಇಬ್ಬರು ವ್ಯಕ್ತಿಗಳು ಮಗುವಿನಿಂದ ಆಕ್ಷೇಪಾರ್ಹ ಘೋಷಣೆ ಕೂಗುವಂತೆ ಮಾಡಿ ನಂತರ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಮಕ್ತೂಬ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಗ್ರಾಮದ ನಿವಾಸಿ ಮೊಹಮ್ಮದ್ ರಫೀಕ್, “ಮೊಹರಂ ಮೆರವಣಿಗೆಯ ಡ್ರಮ್‌ಗಳು ಮತ್ತು ಸಾಂಪ್ರದಾಯಿಕ ವಾದ್ಯಗಳ ಜೋರಾದ ಸದ್ದಿನ ನಡುವೆ ಈ ವೈರಲ್ ವಿಡಿಯೋ ಅನುಮಾನಾಸ್ಪದವಾಗಿ ಕಾಣುತ್ತಿದೆ. ಇಡೀ ಘಟನೆಯನ್ನು ಮುಸ್ಲಿಮರನ್ನು ಕೆಣಕಲು ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ” ಎಂದು ಹೇಳಿದ್ದಾರೆ.
“ಇಂದ್ರಪಾಲ್ ಮೊಹರಂ ಮೆರವಣಿಗೆಯಿಂದ ಸ್ವಲ್ಪ ದೂರದಲ್ಲಿ ಮಗುವಿನ ಬಳಿ ಘೋಷಣೆ ಕೂಗಿಸಿ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಿದ್ದಾರೆ. ನಂತರ ಅದನ್ನು ದುರುದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಸಿಲುಕಿಸುವ ಉದ್ದೇಶದಿಂದ ವೈರಲ್ ಮಾಡಲಾಗಿದೆ. ಇಂದ್ರಪಾಲ್ ಈ ಹಿಂದೆ ಗ್ರಾಮದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದ” ಎಂದು ದೂರಿದ್ದಾರೆ.
ಈ ಹಿಂದೆ ಈದ್ ಮಿಲಾದ್-ಉನ್-ನಬಿ ಮೆರವಣಿಗೆಗಳಲ್ಲಿಯೂ ಇದೇ ರೀತಿ ಇಂದ್ರಪಾಲ್ ಕೋಮು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ್ದ. ಮತ್ತೊಬ್ಬ ನಿವಾಸಿ ಮಕ್ತೂಬ್ ಮಾಧ್ಯಮದಕ್ಕೆ ಪ್ರತಿಕ್ರಿಯಿಸಿ, “ಇಂದ್ರಪಾಲ್ ಈ ಪ್ರದೇಶದ ಕೋಮು ಸಾಮರಸ್ಯವನ್ನು ಕದಡುವಲ್ಲಿ ಕುಖ್ಯಾತ. ಮೌಲಿದ್ ಮೆರವಣಿಗೆಗಳ ಸಮಯದಲ್ಲಿ, ಉದ್ದೇಶಪೂರ್ವಕವಾಗಿ ಕೇಸರಿ ಧ್ವಜಗಳನ್ನು ಹೊತ್ತ ಕೆಲವು ಮಕ್ಕಳನ್ನು ಮೆರವಣಿಗೆಗೆ ಕಳುಹಿಸಿದ್ದ. ಹಿಂದೂ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಮಾಡಿದ್ದ. ಆದರೂ ಯಾವುದೇ ಕೋಮು ಉದ್ವಿಗ್ನತೆ ಉಂಟಾಗದಂತೆ ನಾವು ನೋಡಿಕೊಂಡೆವು. ಅವನಂತವರ ವಿರುದ್ಧ ಬಲವಾದ ಕ್ರಮ ಅತ್ಯಗತ್ಯ” ಎಂದು ಒತ್ತಾಯಿಸಿದರು.
ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಘಟನೆ ನಡೆದಿದೆ. 2021ರಲ್ಲಿ ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರತಿಭಟನೆ ವೇಳೆ ‘ಅಂಬೇಡ್ಕರ್ ಜಿಂದಾಬಾದ್’ ಎಂದು ಕೂಗಿದ್ದರು. ಆದರೆ, ಈ ವಿಡಿಯೋವನ್ನು ಎಡಿಟ್ ಮಾಡಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಈ ವಿಡಿಯೋವನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದ ಸ್ಥಳೀಯ ಪತ್ರಕರ್ತ ಹರೀಶ್ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರಾದ ಗಿರೀಶ್ ಮತ್ತು ರಘು ಎಂಬವರನ್ನು ಪೊಲೀಸರು ಬಂಧಿಸಿದ್ದರು.




