ಮದುವೆಯಾಗದೆ ಗರ್ಭಿಣಿಯಾಗಿದ್ದಾಳೆ ಎಂಬ ಕಾರಣಕ್ಕೆ ಸಾಮಾಜಿಕ ಅವಮಾನ ಭೀತಿಯಿಂದ ತಂದೆಯೇ ತನ್ನ 18 ವರ್ಷದ ಮಗಳನ್ನು ಚಂಬಲ್ ನದಿಗೆ ತಳ್ಳಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ದೆಹಲಿಯ ದಕ್ಷಿಣ ಭಾಗದಲ್ಲಿ ಘಟನೆ ನಡೆದಿದ್ದು, ತೀವ್ರ ಆಘಾತಕ್ಕೆ ಕಾರಣವಾಗಿದೆ.
ಪ್ರಕರಣ ಸಂಬಂಧ ಯುವತಿಯ ತಂದೆ ಹಾಗೂ ಆತನ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಯುವತಿಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ಹಾಗೂ ರಕ್ಷಣಾ ತಂಡಗಳು ಆಗ್ರಾದ ಬಳಿಯ ಚಂಬಲ್ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿವೆ.
ಪೊಲೀಸರ ಪ್ರಕಾರ, ಯುವತಿ ಸುಮಾರು 3 ತಿಂಗಳ ಗರ್ಭಿಣಿಯಾಗಿದ್ದಳು. ಮದುವೆಯಾಗದೆ ಗರ್ಭ ಧರಿಸಿದ್ದಾಳೆ ಎಂಬ ವಿಚಾರ ತಿಳಿದ ಬಳಿಕ ಕುಟುಂಬದ ಮಾನಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಭೀತಿಯಿಂದ ತಂದೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ದಕ್ಷಿಣ ದೆಹಲಿ ಡಿಸಿಪಿ ಅನಂತ್ ಮಿತ್ತಲ್ ಮಾಹಿತಿ ನೀಡಿದ್ದು, ಜುಲೈ 31ರಂದು ಸ್ಥಳೀಯ ಪೊಲೀಸ್ ಠಾಣೆಗೆ ಬಂದ ಪಿಸಿಆರ್ ಕರೆ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ಮಗಳನ್ನು ಹತ್ಯೆ ಮಾಡಿರುವುದಾಗಿ ಕರೆ ಮಾಡಿ ತಿಳಿಸಲಾಗಿತ್ತು.
ತನಿಖೆಯಲ್ಲಿ, ಆರೋಪಿ ತಂದೆ ತನ್ನ ಸಂಬಂಧಿಯೊಂದಿಗೆ ಸೇರಿಕೊಂಡು ಮಗಳನ್ನು ಆಗ್ರಾ ಜಿಲ್ಲೆಯ ಬಾಸೋನಿ ಪ್ರದೇಶದ ಚಂಬಲ್ ನದಿ ತೀರಕ್ಕೆ ಕರೆದೊಯ್ದು ಉದ್ದೇಶಪೂರ್ವಕವಾಗಿ ನದಿಗೆ ತಳ್ಳಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಆರೋಪಿ ತಂದೆ ಹಾಗೂ ಆತನ ಸಂಬಂಧಿ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಜುಲೈ 28ರಂದು ಯುವತಿಗೆ ಔಷಧಿ ಕೊಡಿಸುವ ನೆಪದಲ್ಲಿ ಆಕೆಯನ್ನು ಆಗ್ರಾಕ್ಕೆ ಕರೆದುಕೊಂಡು ಹೋಗಿದ್ದರು. ಮೊದಲು ಸಂಬಂಧಿಕರ ಮನೆಯಲ್ಲಿ ರಾತ್ರಿ ಕಳೆದ ಬಳಿಕ, ಮರುದಿನ ಆಕೆಯನ್ನು ಚಂಬಲ್ ನದಿ ತೀರಕ್ಕೆ ಕರೆದೊಯ್ದಿದ್ದರು. ಅಲ್ಲಿ ಇಬ್ಬರೂ ಯುವತಿಗೆ ನದಿಗೆ ಹಾರುವಂತೆ ಒತ್ತಾಯಿಸಿದ್ದರು. ಆದರೆ ಆಕೆ ನಿರಾಕರಿಸಿದಾಗ, ಇಬ್ಬರೂ ಸೇರಿ ಆಕೆಯನ್ನು ನದಿಗೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿಗಳು ದೆಹಲಿಗೆ ವಾಪಸ್ ಆಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ರಾಜೀನಾಮೆ
ಯುವತಿಯನ್ನು ನದಿಗೆ ತಳ್ಳುವ ಮುನ್ನ ತಂದೆ ಆಕೆಯ ಕಾಲಿಗೆ ಬಿದ್ದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ಭಾಗವಾಗಿ ಪೊಲೀಸರು ಯುವತಿ ಹಾಗೂ ಆರೋಪಿಗಳ ಮೊಬೈಲ್ ಫೋನ್‌ಗಳ ಲೊಕೇಷನ್ ಪರಿಶೀಲಿಸಿದ್ದು, ಮೂವರೂ ದೆಹಲಿಯಿಂದ ಆಗ್ರಾಕ್ಕೆ ಪ್ರಯಾಣಿಸಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಯುವತಿಯ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ಘಟನೆ ಕಳೆದ ವರ್ಷ ಕರ್ನಾಟಕದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಹತ್ಯೆಯನ್ನು ನೆನಪಿಸುತ್ತದೆ. ತಂದೆಯೊಬ್ಬ ತನ್ನ ಗರ್ಭಿಣಿ ಮಗಳನ್ನು ಬರ್ಬರವಾಗಿ ಕೊಂದುಹಾಕಿದ್ದ. ಕಾರಣ ಇದೇ ʼಮರ್ಯಾದೆʼ. ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿ ತಮ್ಮ ಘನತೆಗೆ ಧಕ್ಕೆ ತಂದಿದ್ದಾಳೆಂದು ಬಗೆದು ತಂದೆ ಜೊತೆಗೆ ಸಂಬಂಧಿಕರು ಸೇರಿ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದರು.
ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಸಾಮಾಜಿಕ ಒತ್ತಡ, ಕುಟುಂಬದ ಒತ್ತಾಯ, ಪೊಲೀಸರಿಗೆ ದೂರು ನೀಡಲು ಹಿಂಜರಿಕೆ ಹಾಗೂ ಘಟನೆಗಳನ್ನು ಮುಚ್ಚಿಹಾಕುವ ಪ್ರಯತ್ನಗಳಿಂದ ಅನೇಕ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಗೌರವ, ಕೌಟುಂಬಿಕ ಪ್ರತಿಷ್ಠೆ ಹೆಸರಿನಲ್ಲಿ ನಡೆಯುವ ಇಂತಹ ಹಿಂಸೆ, ಮಾನವೀಯತೆ ಮತ್ತು ಹೆಣ್ಣಿನ ಬದುಕುವ ಹಕ್ಕಿನ ಮೇಲೆ ನೇರ ದಾಳಿ ಮಾಡುತ್ತದೆ. ಮರ್ಯಾದೆಗೇಡು ಹತ್ಯೆಗಳು ಸಾಮಾನ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಠಿಣ ಕಾನೂನಿನ ಅಗತ್ಯವಿದೆ ಎಂದು ಪ್ರಗತಿಪರರು ಸರ್ಕಾರಗಳನ್ನು ಒತ್ತಾಯಿಸುತ್ತಿದ್ದಾರೆ. ಸರ್ಕಾರಗಳು ಈ ಬಗ್ಗೆ ಗಂಭೀರ ಹೆಜ್ಜೆ ಇಡಬೇಕಿದೆ.




