ತಮಿಳುನಾಡು ವಿಧಾನಸಭೆಯಲ್ಲಿ ಸಾಮಾಜಿಕ ನ್ಯಾಯ, ಜಾತಿ ಪ್ರಾತಿನಿಧ್ಯ, ಜಾತಿ ಗಣತಿ ಹಾಗೂ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಸಂಬಂಧಿಸಿದ ವಿಚಾರಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಆಗಸ್ಟ್ 26 ಮತ್ತು 27ರಂದು ನಡೆದ ವಿಧಾನಸಭೆ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಈ ವಿಷಯಗಳ ಕುರಿತು ಭಾರೀ ವಾಗ್ವಾದಗಳು ನಡೆದಿವೆ.
ಸಾಮಾಜಿಕ ನ್ಯಾಯ ಇಲಾಖೆಯ ಅನುದಾನ ಬೇಡಿಕೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿದುತಲೈ ಚಿರುತೈಗಲ್ ಕಚ್ಚಿ (VCK) ಶಾಸಕ ವನ್ನಿ ಅರಸು ಅವರು ದಲಿತರು ಮತ್ತು ಇತರ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ನ್ಯಾಯವೆಂದರೆ ಕೇವಲ ಕಲ್ಯಾಣ ಯೋಜನೆಗಳನ್ನು ಘೋಷಿಸುವುದಲ್ಲ; ಆಡಳಿತ ಮತ್ತು ಅಧಿಕಾರದಲ್ಲಿಯೂ ಹಂಚಿಕೆ ಇರಬೇಕು ಎಂದು ಅವರು ಒತ್ತಿ ಹೇಳಿದರು.
ಇದೇ ವೇಳೆ ಸಾರ್ವಜನಿಕ ಕಾಮಗಾರಿ ಮತ್ತು ಕ್ರೀಡಾಭಿವೃದ್ಧಿ ಸಚಿವ ಆಧವ್ ಅರ್ಜುನ ಅವರು ಹಿಂದಿನ ಡಿಎಂಕೆ ಸರ್ಕಾರದ ಸಾಮಾಜಿಕ ನ್ಯಾಯದ ನಿಲುವನ್ನು ಪ್ರಶ್ನಿಸಿದರು. ಜಾತಿ ಗಣತಿ ಮತ್ತು ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಸರ್ಕಾರದ ಕಾರ್ಯವೈಖರಿಯನ್ನೂ ಈಗ ಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಜಾತಿ ಸಮೀಕ್ಷೆ ನಡೆಸಿರುವುದನ್ನು ಉಲ್ಲೇಖಿಸಿದ ಅರ್ಜುನ್, “ತಮಿಳುನಾಡಿನ ಹಿಂದಿನ ಡಿಎಂಕೆ ಸರ್ಕಾರ ಏಕೆ ಅದೇ ರೀತಿಯ ಜಾತಿ ಸಮೀಕ್ಷೆ ಕೈಗೊಂಡಿಲ್ಲ. ರಾಜ್ಯ ಸರ್ಕಾರಗಳಿಗೂ ಜಾತಿ ಸಮೀಕ್ಷೆ ನಡೆಸುವ ಅಧಿಕಾರವಿದೆ; ಎಲ್ಲ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರದ ಮೇಲೆ ಹಾಕಿ ತಪ್ಪಿಸಿಕೊಳ್ಳುವುದು ಸರಿಯಲ್ಲ” ಎಂದರು.
ಆಧವ್ ಅರ್ಜುನ ಅವರ ಟೀಕೆಗೆ ಪ್ರತಿಕ್ರಿಯಿಸಿದ ಡಿಎಂಕೆ ಶಾಸಕ, ಮಾಜಿ ಸಚಿವ ಗೋವಿ ಚೆಝಿಯನ್, “ಪ್ರತಿಪಕ್ಷ ಸದಸ್ಯರಿಗೆ ಪ್ರಶ್ನೆ ಕೇಳುವ ಮತ್ತು ಬೇಡಿಕೆ ಮುಂದಿಡುವ ಸಂಪೂರ್ಣ ಹಕ್ಕಿದೆ. ಆದರೆ, ಸರ್ಕಾರದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಕೇವಲ ಘೋಷಣೆಗಳ ಆಧಾರದಲ್ಲಿ ಅಳೆಯಬಾರದು” ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಮಾತನ್ನು ನೆನಪಿಸಿದ ಚೆಝಿಯನ್, “ಪ್ರತಿಪಕ್ಷದವರು ಖಾಲಿ ಸೌಟು ಹಿಡಿದು ಬರಬಹುದು; ಆದರೆ ಆಡಳಿತದಲ್ಲಿರುವ ಸಚಿವರು ಎಣ್ಣೆ ತುಂಬಿದ ಸೌಟಿನೊಂದಿಗೆ ಬರಬೇಕು” ಎಂಬ ಅರ್ಥದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷದ ಹೊಣೆಗಾರಿಕೆಯನ್ನು ವಿವರಿಸಿದರು.
ಡಿಎಂಕೆ ಸರ್ಕಾರದ ಸಾಮಾಜಿಕ ನ್ಯಾಯದ ಸಾಧನೆಗಳನ್ನು ಸಮರ್ಥಿಸಿಕೊಂಡ ಚೆಝಿಯನ್, “ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14ನ್ನು ‘ಸಮತ್ವ ಉರುದಿ ಮೊಳಿ ನಾಳ್’ (ಸಮಾನತೆಯ ಪ್ರತಿಜ್ಞಾ ದಿನ)ವಾಗಿ ಆಚರಿಸಲು ತಮ್ಮ ಸರ್ಕಾರ ನಿರ್ಧರಿಸಿ ಜಾರಿಗೊಳಿಸಿತ್ತು. ವಿವಿಧ ಸಮುದಾಯಗಳ ಜನರನ್ನು ಒಟ್ಟಿಗೆ ಸೇರಿಸಿ ಸಮಾನತೆಯ ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮಗಳನ್ನು ಸರ್ಕಾರ ನಡೆಸಿದೆ” ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ತಮಿಳುನಾಡು ಸರ್ಕಾರ ಘೋಷಿಸಿರುವ ಸುಮಾರು 25 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳ ಕುರಿತೂ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ಹಣ ಯಾವ ಯೋಜನೆಗಳಿಗೆ ಖರ್ಚಾಗುತ್ತಿದೆ ಎಂಬುದರ ಕುರಿತು ಸ್ಪಷ್ಟವಾದ ನೀತಿ ಟಿಪ್ಪಣಿ ಅಥವಾ ಯೋಜನಾ ವಿವರಗಳನ್ನು ಪರಿಶೀಲಿಸಬೇಕು ಎಂದು ಚೆಝಿಯನ್ ಒತ್ತಾಯಿಸಿದರು.
“ಡಿಎಂಕೆಯ ಸಾಮಾಜಿಕ ನ್ಯಾಯದ ಕ್ರಮಗಳು ಕೇವಲ ಕಾಗದದ ಮೇಲಿನ ಘೋಷಣೆಗಳಲ್ಲ. ಅಂಚಿನಲ್ಲಿರುವ ಸಮುದಾಯಗಳ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ತಮಿಳುನಾಡು ಸ್ಲಂ ಕ್ಲಿಯರೆನ್ಸ್ ಬೋರ್ಡ್ಅನ್ನು ಡಿಎಂಕೆ ಸರ್ಕಾರ ರಚಿಸಿದೆ” ಎಂಬುದನ್ನು ಅವರು ನೆನಪಿಸಿದರು.
ಜಾತಿ ಗಣತಿ ವಿಚಾರದ ಚರ್ಚೆಯಲ್ಲಿ; “ರಾಷ್ಟ್ರಮಟ್ಟದ ಜಾತಿ ಜನಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂಬುದು ಹಿಂದಿನ ಡಿಎಂಕೆ ಸರ್ಕಾರದ ನಿಲುವಾಗಿತ್ತು. ಬಿಹಾರದಲ್ಲಿ ರಾಜ್ಯ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯು ನಂತರದಲ್ಲಿ ನ್ಯಾಯಾಲಯದ ಸವಾಲುಗಳನ್ನು ಎದುರಿಸಿತು. ರಾಜ್ಯದ ಅಧಿಕಾರದ ವ್ಯಾಪ್ತಿಯೊಳಗೆ ನಡೆದುಕೊಳ್ಳುವುದೇ ಡಿಎಂಕೆಯ ನಿಲುವಾಗಿತ್ತು, ಜಾತಿ ಆಧಾರಿತ ಗಣತಿಗೆ ವಿರೋಧಿಸುವುದು ನಮ್ಮ ನಿಲುವಲ್ಲ” ಎಂದು ಚೆಝಿಯನ್ ಹೇಳಿದರು.
ಈ ಲೇಖನ ಓದಿದ್ದೀರಾ?: ನಾಗೇಂದ್ರ ಪ್ರಕರಣ | ಬಿಜೆಪಿ-ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರವೇನು? ಒಂದೇ ಏಟಿಗೆ ಎರಡು ಹಕ್ಕಿ ಹೊಡೆವುದೇ
ಇದಕ್ಕೂ ಮುನ್ನ ಮಾತನಾಡಿದ್ದ ವಿಸಿಕೆ ಶಾಸಕ ವನ್ನಿ ಅರಸು, “ರಾಜಕೀಯ ಅಧಿಕಾರ ಹಂಚಿಕೆಯನ್ನು ಕರುಣೆ ಅಥವಾ ಅನುಕಂಪದ ರೂಪದಲ್ಲಿ ನೋಡಬಾರದು. ಅಧಿಕಾರದಲ್ಲಿ ಪಾಲು ನೀಡುವುದು ಸಾಮಾಜಿಕ ನ್ಯಾಯದ ಮೂಲಭೂತ ತತ್ವವಾಗಬೇಕು” ಎಂದು ಅಭಿಪ್ರಾಯಪಟ್ಟರು.
“ಹಿಂದಿನ ಡಿಎಂಕೆ ನೇತೃತ್ವದ ವಿಧಾನಸಭೆಯಲ್ಲಿ ವಿಸಿಕೆ ನಾಲ್ಕು ಶಾಸಕರನ್ನು ಹೊಂದಿದ್ದರೂ ಪಕ್ಷಕ್ಕೆ ಸಚಿವ ಸ್ಥಾನ ನೀಡಲಾಗಿರಲಿಲ್ಲ. ಪ್ರಸ್ತುತ ಪಕ್ಷಕ್ಕೆ ಇಬ್ಬರು ಶಾಸಕರಿದ್ದು, ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಸರ್ಕಾರ ಮತ್ತು ಅಧಿಕಾರದಲ್ಲಿ ಪಾಲುದಾರಿಕೆ ಎಂಬುದೇ ರಾಜಕಾರಣದ ತತ್ವವಾಗಬೇಕು” ಎಂದು ಹೇಳಿದರು.
ಮತ್ತೊಬ್ಬ ವಿಸಿಕೆ ಶಾಸಕ ರಾಜಮೋಹನ್, “ಶೋಷಿತ ಸಮುದಾಯಗಳಿಗೆ ಸಿಗುವ ಅವಕಾಶ ಮತ್ತು ಪ್ರಾತಿನಿಧ್ಯವನ್ನು ದಾನ ಅಥವಾ ಭಿಕ್ಷೆಯಂತೆ ಪರಿಗಣಿಸಬಾರದು. ಯಾರೂ ಯಾರಿಗೂ ಭಿಕ್ಷೆ ಕೊಡಬೇಕಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ನಮಗೆ ನೀಡಿರುವ ಹಕ್ಕುಗಳ ಮೇಲೆ ನಾವು ಬದುಕುತ್ತಿದ್ದೇವೆ” ಎಂದು ಪ್ರತಿಪಾದಿಸಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೇವಲ ಮೀಸಲಾತಿ ಅಥವಾ ಕಲ್ಯಾಣ ಯೋಜನೆಗಳಿಗಷ್ಟೇ ಸೀಮಿತವಾಗಬೇಕೇ, ಅಥವಾ ಆಡಳಿತ ಮತ್ತು ರಾಜಕೀಯ ಅಧಿಕಾರದಲ್ಲಿಯೂ ಸಮಾನ ಪಾಲುದಾರಿಕೆ ಇರಬೇಕೇ ಎಂಬ ಪ್ರಶ್ನೆ ಈ ಚರ್ಚೆಯ ಕೇಂದ್ರವಾಗಿತ್ತು. ಜಾತಿ ಗಣತಿ ನಡೆಸುವ ಜವಾಬ್ದಾರಿ ಕೇಂದ್ರಕ್ಕೇ ಸೀಮಿತವೇ ಅಥವಾ ರಾಜ್ಯಗಳೂ ಮುಂದಾಗಬೇಕೇ ಎಂಬ ವಿಚಾರವೂ ತೀವ್ರ ವಾಗ್ವಾದಕ್ಕೆ ಕಾರಣವಾಯಿತು..



